ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ದ್ರಾವಿಡ್ ನಂಬಿಕೆಯಿಂದ ಉತ್ತಮ ಪ್ರದರ್ಶನ ನೀಡಲು ಪ್ರೇರಣೆ: ದೀಪಕ್ ಚಾಹರ್

Last Updated 21 ಜುಲೈ 2021, 6:19 IST
ಅಕ್ಷರ ಗಾತ್ರ

ಕೊಲಂಬೊ: ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಬ್ಯಾಟಿಂಗ್ ಮೇಲೆ ಇಟ್ಟಿರುವ ನಂಬಿಕೆಯು ಪಂದ್ಯವನ್ನು ಗೆಲ್ಲಿಸಿಕೊಡಲು ಪ್ರೇರಣೆಯಾಯಿತು ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ದೀಪಕ್ ಚಾಹರ್ ತಿಳಿಸಿದ್ದಾರೆ.

ಬಲಗೈ ವೇಗದ ಬೌಲರ್ ಆಗಿ ತಂಡಕ್ಕೆ ಪ್ರವೇಶಿಸಿರುವ ಚಾಹರ್, ಚೊಚ್ಚಲ ಅರ್ಧಶತಕ ಬಾರಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಪರಿಣಾಮ ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲೂ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.

276 ರನ್ ಗುರಿ ಬೆನ್ನಟ್ಟಿದ ಭಾರತ, ಒಂದು ಹಂತದಲ್ಲಿ 160ಕ್ಕೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಚಾಹರ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ಚಾಹರ್, ಭುವನೇಶ್ವರ್ ಕುಮಾರ್ ಜೊತೆ ಮುರಿಯದ ಒಂಬತ್ತನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿ ಅಮೂಲ್ಯ ಗೆಲುವು ಒದಗಿಸಿಕೊಟ್ಟರು.

'ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸುವುದಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ. ರಾಹುಲ್ ಸರ್ ಕೊನೆಯವರೆಗೂ ಆಡುವಂತೆ ಸೂಚಿಸಿದರು. ಅವರು ಭಾರತ 'ಎ' ತಂಡದ ಕೋಚ್ ಆಗಿದ್ದಾಗ ಕೆಲವು ಇನ್ನಿಂಗ್ಸ್‌ಗಳನ್ನು ನಾನು ಆಡಿದ್ದೆ. ನನಗನಿಸುತ್ತದೆ ಅವರಿಗೆ ನನ್ನ ಮೇಲೆ ನಂಬಿಕೆಯಿತ್ತು' ಎಂದು ಚಾಹರ್ ವಿವರಿಸಿದರು.

'ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಾನು ಸಮರ್ಥನಾಗಿದ್ದೇನೆ ಎಂದವರು ಹೇಳಿದರು. ಅವರು ನನ್ನ ಮೇಲೆ ನಂಬಿಕೆಯನ್ನಿರಿಸಿದರು. ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಬೇಕಾದ ಸಂದರ್ಭ ಬರುವುದಿಲ್ಲ ಎಂದು ಆಶಿಸುತ್ತೇನೆ. ಗೆಲುವಿನ ಗುರಿ 50 ರನ್‌ಗಿಂತಲೂ ಕಡಿಮೆಯಾದಾಗ ಪಂದ್ಯ ಜಯಿಸುವ ಬಗ್ಗೆ ನಂಬಿಕೆ ಹುಟ್ಟಿಕೊಂಡಿತು. ಅಲ್ಲಿಯ ವರೆಗೆ ಒಂದೊಂದು ಬಾಲ್ ಗಮನಿಸುತ್ತಾ ಆಡಿದ್ದೆ. ಅದಾದ ಬಳಿಕ ದೊಡ್ಡ ಹೊಡೆತಕ್ಕೆ ಮುಂದಾದೆ' ಎಂದು ತಿಳಿಸಿದರು.

'ನನ್ನ ಮನಸ್ಸಿನಲ್ಲಿದ್ದ ಒಂದೇ ಒಂದು ವಿಷಯ ಏನೆಂದರೆ ಇಂತಹ ಇನ್ನಿಂಗ್ಸ್‌ಗಾಗಿ ನಾನು ಕನಸು ಕಂಡಿದ್ದೆ. ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸುವುದಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ' ಎಂದು ತಿಳಿಸಿದರು.

ಬೌಲಿಂಗ್‌ನಲ್ಲೂ ಮಿಂಚಿದ್ದ ದೀಪಕ್ ಚಾಹರ್, ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT