ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಮಳೆ ಒಂದು ಹ್ಯಾಟ್ರಿಕ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ‌– ರಾಜಸ್ಥಾನ ರಾಯಲ್ಸ್‌ ನಡುವಣ ಪಂದ್ಯ
Last Updated 1 ಮೇ 2019, 10:18 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಾತ್ರಿ ಮೂರು ಸಲ ಬಿಟ್ಟು ಬಿಟ್ಟು ಸುರಿದ ಮಳೆ. ಅದರ ನಡುವೆ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಮೋಡಿ. ವಿರಾಟ್ ಕೊಹ್ಲಿಯ ಸಿಡಿಲಬ್ಬರದ ಬ್ಯಾಟಿಂಗ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಸ್ಸಂಜೆಯಿಂದಲೇ ಸೇರಿಕೊಂಡಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಲಭಿಸಿದ್ದು ಇಷ್ಟು.ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್‌ ನಡುವಣ ಈ ಪಂದ್ಯ ಫಲಿತಾಂಶವಿಲ್ಲದೇ ಮುಕ್ತಾಯವಾಯಿತು. ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.

ರಾಜಸ್ಥಾನ್ ರಾಯಲ್ಸ್‌ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 7.57ಕ್ಕೆ ಧೋ.. ಎಂದು ಸುರಿದ ಮಳೆ ಸುರಿಯಲಾರಂಭಿಸಿತು. ಸುಮಾರು 8.25ಕ್ಕೆ ಮಳೆ ನಿಂತಿತು. ಆದರೆ ಮೈದಾನ ಹಸಿಯಾಗಿತ್ತು ಆದ್ದರಿಂದ ತುಸು ಹೊತ್ತು ಕಾಯುವತ್ತ ಅಂಪೈರ್‌ಗಳು ಚಿತ್ತ ನೆಟ್ಟರು. ಆದರೆ, 9.15ಕ್ಕೆ ಮತ್ತೊಂದು ಬಾರಿ ಮಳೆ ಆರಂಭವಾಯಿತು. 10 ಗಂಟೆ ಸುಮಾರಿಗೆ ನಿಂತಿತು. ಆಗ ಮತ್ತು 11.05ಕ್ಕೆ ಅಂಪೈರ್ ನಿಗೆಲ್ ಲಾಂಗ್, ಉಲ್ಲಾಸ್ ಗಂಧೆ ಮತ್ತು ರೆಫರಿ ನಾರಾಯಣ ಕುಟ್ಟಿ ಅವರು ಪಿಚ್ ಪರಿಸ್ಥಿತಿ ಪರಿಶೀಲಿಸಿದರು. ರಾತ್ರಿ 11.26 ರಿಂದ ಫೈವ್‌–5 ಓವರ್‌ಗಳ ಪಂದ್ಯ ನಡೆಸಲು ನಿರ್ಧರಿಸಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಆರ್‌ಸಿಬಿಯ ‘ಟ್ರಂಪ್‌ ಕಾರ್ಡ್’ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ‘ಹ್ಯಾಟ್ರಿಕ್’ ಸಾಧನೆ ಮಾಡಿದರು. ಈ ಟೂರ್ನಿಯಲ್ಲಿ ವಿರಾಟ್ ಮತ್ತು ಎಬಿಡಿ ಯವರ ವಿಕೆಟ್‌ಗಳನ್ನು ಎರಡು ಸಲ ಕಬಳಿಸಿದ ಸಾಧನೆಯನ್ನೂ ಶ್ರೇಯಸ್ ಮಾಡಿದರು.

ಇದರಿಂದಾಗಿ ಆರ್‌ಸಿಬಿಯ ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು. ಆತಿಥೇಯ ತಂಡವು 5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 62 ರನ್‌ ಗಳಿಸಿತು. ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡವು 3.2 ಓವರ್‌ಗಳಲ್ಲಿ 1 ವಿಕೆಟ್‌ಗೆ 41 ರನ್ ಗಳಿಸಿತು. ಆಗ ಮತ್ತೆ ಮಳೆರಾಯನ ಆಟ ಆರಂಭವಾಯಿತು. ಪಂದ್ಯ ಸ್ಥಗಿತವಾಯಿತು. ಆರ್‌ಸಿಬಿ ಈಗಾಗಲೇ ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿತ್ತು. ರಾಜಸ್ಥಾನ್ ರಾಯಲ್ಸ್‌ ಒಟ್ಟು 11 ಅಂಕ ಗಳಿಸಿ ಐದನೇ ಸ್ಥಾನಕ್ಕೇರಿದೆ.

ವಿರಾಟ್ ಅಬ್ಬರ: ವರುಣ್ ಆ್ಯರನ್ ಬೌಲಿಂಗ್ ಮಾಡಿದ ಮೊದಲ ಓವರ್‌ನ ಮೊದಲ ಎರಡೂ ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ ವಿರಾಟ್ ಕೊಹ್ಲಿ ಭರ್ಜರಿ ಆರಂಭ ಮಾಡಿದರು. ಅವರ ಹೊಡೆತಕ್ಕೆ ಚೆಂಡಿನ ಮೇಲಿನ ಪದರು ಕಿತ್ತುಹೋಯಿತು. ಮಳೆ, ಗಾಳಿಗೆ ಅಂಜದೆ ಕಾದಿದ್ದ ಪ್ರೇಕ್ಷಕರು ಬೊಬ್ಬಿರಿದರು. ಎಬಿಡಿ ಕೂಡ ತಮ್ಮ ಆಟ ತೋರಿಸಿದರು. ಇದರಿಂದಾಗಿ ಅದೊಂದೇ ಓವರ್‌ನಲ್ಲಿ 23 ರನ್‌ಗಳು ಸೇರಿದವು.ಎರಡನೇ ಓವರ್‌ ಬೌಲ್ ಮಾಡಲು ಶ್ರೇಯಸ್ ಕಣಕ್ಕಿಳಿದರು. ಅವರಿಗೂ ವಿರಾಟ್ ತಮ್ಮ ತೋಳ್ಬಲ ತೋರಿಸಿದರು. ಒಂದು ಬೌಂಡರಿ, ಒಂದು ಸಿಕ್ಸರ್ ಮತ್ತು ಡಬಲ್ ರನ್ ಹೊಡೆದರು. ಆದರೆ, ನಾಲ್ಕನೇ ಎಸೆತದಲ್ಲಿ ವಿರಾಟ್ ಆಟಕ್ಕೆ ಕಡಿವಾಣ ಬಿತ್ತು.

ಮಳೆಯ ಸಂಭ್ರಮ: ಸುರಿವ ಮಳೆ, ಬೀಸುವ ಗಾಳಿಯಲ್ಲಿಯೂ ಅಭಿಮಾನಿಗಳ ಉತ್ಸಾಹ ಕುಂದಲಿಲ್ಲ. ಅದಕ್ಕೆ ತಕ್ಕಂತೆ ಡಿಜೆ ಮತ್ತು ಡ್ರಮ್ಮರ್ ದೇವ ಅವರೂ ಜೊತೆಗೂಡಿದರು. ಇದರಿಂದಾಗಿ ಮೈದಾನದಲ್ಲಿ ಒಂದು ರೀತಿಯ ಸುಗ್ಗಿ ಹಬ್ಬದ ವಾತಾವರಣವಿತ್ತು. ಪ್ರೇಕ್ಷ
ಕರ ಕೈಗಳಲ್ಲಿದ್ದ ಮೊಬೈಲ್‌ ದೀಪಗಳು ಮಳೆಯಲ್ಲಿಯೂ ನಕ್ಷತ್ರಗಳಂತೆ ಮಿನುಗಿದವು.

ಮಳೆ ಹನಿ ಸಿಡಿದು ಶಾರ್ಟ್ ಸರ್ಕಿಟ್

ಕ್ರೀಡಾಂಗಣದ ಪೆವಿಲಿಯನ್ ಟೆರೆಸ್‌ ಗ್ಯಾಲರಿಯಲ್ಲಿ ಮಳೆ ಹನಿ ಸಿಡಿದು ವಿದ್ಯುತ್ ಶಾರ್ಟ್ ಸರ್ಕಿಟ್ ಆಯಿತು. ಭದ್ರತಾ ಸಿಬ್ಬಂದಿಯು ಕೂಡಲೇ ಅಗ್ನಿಶಾಮಕ ಸಾಧನದಿಂದ ಬೆಂಕಿ ನಂದಿಸಿದರು. ಯಾರಿಗೂ ಯಾವುದೇ ಅಪಾಯವಾಗಿಲ್ಲ.

ಮಾಧ್ಯಮ ಬಾಕ್ಸ್‌ನಲ್ಲಿ ಸೋರಿದ ನೀರು: ಕ್ರೀಡಾಂಗಣದ ಮೂರನೇ ಅಂತಸ್ತಿನಲ್ಲಿರುವ ಮಾಧ್ಯಮದವರ ಗ್ಯಾಲರಿಯಲ್ಲಿಯೂ ಮಳೆ ನೀರು ಸೋರಿತು. ‘ರಭಸದ ಮಳೆಯಿಂದಾಗಿ ಈ ರೀತಿಯಾಗಿದೆ. ವಿದ್ಯುತ್ ಶಾರ್ಟ್‌ ಸರ್ಕಿಟ್ ಮತ್ತು ಮಾಧ್ಯಮಬಾಕ್ಸ್‌ನಲ್ಲಿ ನೀರು ಸೋರಿದ್ದನ್ನು ನೋಡಿದ್ದೇವೆ. ಕೂಡಲೇ ಕ್ರಮ ಕೈಗೊಂಡಿದ್ದೇವೆ. ಮುಂದೆ ಹೀಗಾಗದಂತೆ ದುರಸ್ತಿ ಮಾಡುತ್ತೇವೆ’ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT