ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌–ಪಾಕಿಸ್ತಾನ ಟೆಸ್ಟ್‌ ಡ್ರಾದಲ್ಲಿ ಮುಕ್ತಾಯ

Last Updated 18 ಆಗಸ್ಟ್ 2020, 7:42 IST
ಅಕ್ಷರ ಗಾತ್ರ

ಸೌತಾಂಪ್ಟನ್: ಪಾಕಿಸ್ತಾನ ಮತ್ತು ಆತಿಥೇಯ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್ ಪಂದ್ಯ ನಿರೀಕ್ಷೆಯಂತೆ ಡ್ರಾದಲ್ಲಿ ಮುಕ್ತಾಯಗೊಂಡಿತು. ಎಲ್ಲ ಐದೂ ದಿನ ಪಂದ್ಯಕ್ಕೆ ಮಳೆ ಮತ್ತು ಮಂದಬೆಳಕು ಕಾಡಿತ್ತು. ಮೂರನೇ ದಿನ ಸಂಪೂರ್ಣ ಮಳೆಯಿಂದಾಗಿ ರದ್ದಾಗಿತ್ತು. ನಾಲ್ಕನೇ ದಿನ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು ಏಳು ರನ್ ಗಳಿಸಿದ್ದ ಇಂಗ್ಲೆಂಡ್ ಕೊನೆಯ ದಿನವಾದ ಸೋಮವಾರ ನಾಲ್ಕು ವಿಕೆಟ್‌ಗಳಿಗೆ 110 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆಗ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾಗೊಳಿಸಲು ಒಪ್ಪಿಕೊಂಡರು.

ಭಾನುವಾರ ಶೂನ್ಯಕ್ಕೆ ಮೊದಲ ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ಗೆ ಡಾಮ್ ಸಿಬ್ಲಿ ಮತ್ತು ಜಾಕ್ ಕ್ರಾಲಿ ಆಸರೆಯಾದರು. ಸೋಮವಾರ ಇವರಿಬ್ಬರು ಎರಡನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ಆಡಿದರು. ಕ್ರಾಲಿ (53; 99 ಎಸೆತ, 7 ಬೌಂಡರಿ) ಮತ್ತು ಸಿಬ್ಲಿ (32; 95 ಎ, 3 ಬೌಂ) ಒಂದು ರನ್ ಅಂತರದಲ್ಲಿ ಔಟಾದರು. ಓಲಿ ಪಾಪ್ ಒಂಬತ್ತು ರನ್‌ ಗಳಿಸಿ ಮರಳಿದರು. ನಾಯಕ ಜೋ ರೂಟ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ಔಟಾಗದೇ ಉಳಿದರು.

ಕೊನೆಯ ದಿನ ಬೆಳಿಗ್ಗೆಯಿಂದಲೇ ಮೈದಾನ ಒದ್ದೆಯಾಗಿದ್ದ ಕಾರಣ 11 ಗಂಟೆಗೆ ಪರಿಶೀಲನೆ ಮಾಡಲಾಯಿತು. ಆದರೆ ಪಂದ್ಯ ಆರಂಭಿಸುವುದಕ್ಕೆ ಅನುಕೂಲಕರ ವಾತಾವರಣ ಇರಲಿಲ್ಲ. ಭೋಜನ ವಿರಾಮದ ನಂತರವೂ ಆಟ ಆರಂಭಿಸಲು ಆಗಲಿಲ್ಲ. ಚಹಾ ವಿರಾಮದ ನಂತರ ಮತ್ತೊಮ್ಮ ಪರಿಶೀಲನೆ ನಡೆಸಿ ಆಟ ಆರಂಭಿಸಲು ನಿರ್ಧರಿಸಲಾಯಿತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌, ಪಾಕಿಸ್ತಾನ: 236; ಇಂಗ್ಲೆಂಡ್‌ (ಭಾನುವಾರದ ಅಂತ್ಯಕ್ಕೆ 5 ಓವರ್‌ಗಳಲ್ಲಿ 1ಕ್ಕೆ7): 43.1 ಓವರ್‌ಗಳಲ್ಲಿ 4ಕ್ಕೆ 110 ಡಿಕ್ಲೇರ್‌ (ಡಾಮ್ ಸಿಬ್ಲಿ 32, ಜಾಕ್ ಕ್ರಾಲಿ 53, ಜೋ ರೂಟ್ ಔಟಾಗದೆ 9; ಶಾಹೀನ್ ಶಾ ಅಫ್ರಿದಿ 25ಕ್ಕೆ1, ಮೊಹಮ್ಮದ್ ಅಬ್ಬಾಸ್ 28ಕ್ಕೆ2, ಯಾಸೀರ್ ಶಾ 30ಕ್ಕೆ1). ಫಲಿತಾಂಶ: ಪಂದ್ಯ ಡ್ರಾ; ಸರಣಿಯಲ್ಲಿ ಇಂಗ್ಲೆಂಡ್‌ಗೆ 1–0 ಮುನ್ನಡೆ. ಮುಂದಿನ ಪಂದ್ಯ ಆಗಸ್ಟ್‌ 21ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT