ಅಹಮದಾಬಾದ್: ಯುವತಾರೆ ಶುಭಮನ್ ಗಿಲ್ ಚೆಂದದ ಬ್ಯಾಟಿಂಗ್, ರಶೀದ್ ಖಾನ್ ಸ್ಪಿನ್ ಮೋಡಿ ಹಾಗೂ ಮಹೇಂದ್ರಸಿಂಗ್ ಧೋನಿಯ ಚಾಣಾಕ್ಷ ನಡೆಗಳನ್ನು ಕಣ್ತುಂಬಿಕೊಳ್ಳಲು ಕಾತರಿಸಿದ್ದ ಕ್ರಿಕೆಟ್‌ಪ್ರೇಮಿಗಳ ಆಸೆಗೆ ’ಮಳೆರಾಯ‘ ತಣ್ಣೀರೆರಚಿದ!
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಬೇಕಿದ್ದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಣ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ಪಂದ್ಯಕ್ಕೆ ಟಾಸ್ ಹಾಕುವ ಅರ್ಧಗಂಟೆಗೂ ಮುನ್ನ ರಭಸವಾಗಿ ಮಳೆ ಸುರಿಯಲಾರಂಭಿಸಿತು.
ಮೈದಾನ ಸಿಬ್ಬಂದಿಯು ಲಗುಬಗೆಯಲ್ಲಿ ಪಿಚ್‌ಗಳಿಗೆ ಹೊದಿಕೆ ಹಾಕಿದರು. ವೇಗದ ಬೌಲರ್‌ಗಳ ರನ್ ಅಪ್ ಏರಿಯಾಗಳಿಗೂ ಟಾರ್ಪಾಲಿನ್‌ಗಳನ್ನು ಹೊದಿಸಿದರು.
ಆದರೆ ಗುಡುಗು ಮತ್ತು ಮಿಂಚು ಸಹಿತ ಮಳೆಯ ಆರ್ಭಟ ಹೆಚ್ಚಿದ್ದರಿಂದ ಕ್ರೀಡಾಂಗಣದಲ್ಲಿ ನೀರು ಹರಿಯಿತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಆಸರೆ ಹುಡುಕಿ ಓಡಿದರು.
8.30ರ ಸುಮಾರಿಗೆ ಮಳೆ ನಿಂತ ನಂತರ ಅಂಪೈರ್‌ಗಳು ಮೈದಾನ ಪರಿಶೀಲಿಸಿದರು. ಟಾಸ್ ಮಾಡಲು ಸಿದ್ಧತೆಗಳೂ ನಡೆದವು. ಆದರೆ ಇದೇ ಸಂದರ್ಭದಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ಮತ್ತೆ ಪಿಚ್‌ಗಳಿಗೆ ಹೊದಿಕೆ ಹಾಕಲಾಯಿತು. ರಾತ್ರಿ 10 ಗಂಟೆ ದಾಟಿದರೂ ಮಳೆ ನಿಲ್ಲಲಿಲ್ಲ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡವು ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವ ಛಲದಲ್ಲಿದೆ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಐದನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಮೇ 3ರಂದು ಲಖನೌನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವಣ ಲೀಗ್ ಪಂದ್ಯವು ಮಳೆಯಿಂದ ರದ್ದಾಗಿತ್ತು. ಆಗ ಉಭಯ ತಂಡಗಳಿಗೂ ತಲಾ ಒಂದು ಅಂಕ ಹಂಚಲಾಗಿತ್ತು. ಮೇ 21ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದ ದಿನ ಸಂಜೆ ರಭಸದ ಮಳೆ ಸುರಿದಿತ್ತು.
ಆದರೆ ರಾತ್ರಿ ಏಳು ಗಂಟೆ ಸುಮಾರಿಗೆ ಮಳೆ ಸ್ಥಗಿತವಾಗಿತ್ತು. ಪಂದ್ಯವು ಅರ್ಧ ಗಂಟೆ ವಿಳಂಬವಾಗಿ ಆರಂಭವಾಗಿತ್ತು. ಗುಜರಾತ್ ತಂಡ ಜಯಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.