ಹೈದರಾಬಾದ್ (ಪಿಟಿಐ): ಕಳೆದ ಬಾರಿಯ ರನ್ನರ್ ಅಪ್ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಯಲ್ಸ್ ಕಳೆದ ಆವೃತ್ತಿಯಲ್ಲಿ ತೋರಿದ್ದ ಉತ್ತಮ ಪ್ರದರ್ಶನವನ್ನು ಈ ಬಾರಿಯೂ ಮುಂದುವರಿಸುವ ವಿಶ್ವಾಸ ದಲ್ಲಿದೆ. 2022ರ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ (ಗರಿಷ್ಠ ವಿಕೆಟ್) ಮತ್ತು ಆರೆಂಜ್ ಕ್ಯಾಪ್‌ಅನ್ನು (ಗರಿಷ್ಠ ರನ್) ಕ್ರಮವಾಗಿ ಈ ತಂಡದ ಯಜುವೇಂದ್ರ ಚಾಹಲ್ ಹಾಗೂ ಜೋಸ್ ಬಟ್ಲರ್ ಅವರು ಪಡೆದುಕೊಂಡಿದ್ದರು.
ಚಾಹಲ್ ಅಲ್ಲದೆ ಆರ್.ಅಶ್ವಿನ್ ಮತ್ತು ಆ್ಯಡಮ್ ಜಂಪಾ ಅವರನ್ನು ಒಳಗೊಂಡಿರುವ ತಂಡದ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಕಳೆದ ಟೂರ್ನಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದ ಚಾಹಲ್, ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಒಬೇದ್ ಮೆಕಾಯ್ ಮತ್ತು ನವದೀಪ್ ಸೈನಿ ಇದ್ದಾರೆ. ರಾಯಲ್ಸ್ ತಂಡ ಬ್ಯಾಟಿಂಗ್‌ನಲ್ಲಿ ಸಂಜು, ಜೋ ರೂಟ್, ಶಿಮ್ರಾನ್ ಹೆಟ್ಮೆಯರ್ ಮತ್ತು ಜೇಸನ್ ಹೋಲ್ಡರ್ ಮೇಲೆ ಭರವಸೆ ಇಟ್ಟಿದೆ.
ಹೈದರಾಬಾದ್ ತಂಡದ ನಾಯಕ ಏಡನ್ ಮರ್ಕರಂ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ದಕ್ಷಿಣ ಆಫ್ರಿಕಾ– ನೆದರ್ಲೆಂಡ್ಸ್ ನಡುವಣ ಎರಡು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಬಳಿಕ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದ್ದರಿಂದ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.