ರಣಜಿ ಕ್ರಿಕೆಟ್: ಮಿಥುನ್, ಗೌತಮ್ ದಾಳಿ; ರಾಜಸ್ಥಾನ ಸಾಧಾರಣ ಮೊತ್ತ

7
ಆತಿಥೇಯರಿಗೆ ಮೊದಲ ದಿನದ ಗೌರವ; ಬಿಷ್ಣೊಯಿ ಅರ್ಧಶತಕ

ರಣಜಿ ಕ್ರಿಕೆಟ್: ಮಿಥುನ್, ಗೌತಮ್ ದಾಳಿ; ರಾಜಸ್ಥಾನ ಸಾಧಾರಣ ಮೊತ್ತ

Published:
Updated:

ಬೆಂಗಳೂರು: ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಭಿಮನ್ಯು ಮಿಥುನ್ ಮತ್ತು ಕೆ. ಗೌತಮ್ ಶಿಸ್ತಿನ ದಾಳಿಯ ಬಲದಿಂದ ರಾಜಸ್ಥಾನ ತಂಡವನ್ನು 224 ರನ್‌ಗಳಿಗೆ ನಿಯಂತ್ರಿಸುವಲ್ಲಿ ಕರ್ನಾಟಕ ಸಫಲವಾಯಿತು.  

ನಾಯಕ ಮಹಿಪಾಲ್ ಲೊಮ್ರೊರ್ (50; 133 ಎಸೆತ, 7 ಬೌಂಡರಿ) ಮತ್ತು  ರಾಜೇಶ್ ಬಿಷ್ಣೋಯಿ (79; 119 ಎಸೆತ, 10ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕಗಳಿಂದಾಗಿ ರಾಜಸ್ಥಾನ ತಂಡವು ಈ ಮೊತ್ತ ಗಳಿಸಲು ಸಾಧ್ಯವಾಯಿತು. ದಿನದ ಮೊದಲ ಅವಧಿಯಲ್ಲಿಯೇ ನಾಲ್ಕು ವಿಕೆಟ್‌ ಕಳೆದುಕೊಂಡಿದ್ದ ತಂಡವು 200 ರನ್‌ಗಳ ಗಡಿ ದಾಟುವುದು ಕಷ್ಟವಿತ್ತು. 33ನೇ ಓವರ್‌ನಲ್ಲಿ  ವಿಕೆಟ್‌ಕೀಪರ್ ಬಿ.ಆರ್. ಶರತ್ ಅವರು ರಾಜೇಶ್ ಕ್ಯಾಚ್ ಕೈಚೆಲ್ಲಿದ್ದು ಕೂಡ ರಾಜಸ್ಥಾನಕ್ಕೆ ಅನುಕೂಲವಾಯಿತು. ಆಗಿನ್ನೂ ಅವರು ಖಾತೆ ತೆರೆದಿರಲಿಲ್ಲ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮನೀಷ್ ಪಾಂಡೆ ನಿರ್ಧಾರವನ್ನು ಮಧ್ಯಮವೇಗಿ ವಿನಯಕುಮಾರ್ ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಮರ್ಥಿಸಿಕೊಂಡರು. ಊಟದ ವಿರಾಮಕ್ಕೆ ಮುನ್ನವೇ ಇಬ್ಬರೂ ತಲಾ ಎರಡು ವಿಕೆಟ್ ಕಬಳಿಸಿದರು. 

ವಿನಯ್ ಬೌಲಿಂಗ್ ಮಾಡಿದ್ದ ಇನಿಂಗ್ಸ್‌ನ ಮೊದಲ ಓವರ್‌ನ ಎರಡನೇ ಎಸೆತವನ್ನು ಬೌಂಡರಿಗೆ ಕಳಿಸಿದ್ದ ಅಮಿತ್ ಗೌತಮ್ ಆತ್ಮವಿಶ್ವಾಸದಿಂದ ಆಡಿದರು.  ಏಳನೇ ಓವರ್‌ನಲ್ಲಿ ವಿನಯ್  ತಮ್ಮ ನೇರ ಎಸೆತದ ಮೂಲಕ ಅಮಿತ್ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಸಂಭ್ರಮಿಸಿದರು.

ಕ್ರೀಸ್‌ಗೆ ಬಂದ ಮಹಿಪಾಲ್ ಅವರು ಚೇತನ್ ಬಿಷ್ಠ್ ಅವರೊಂದಿಗೆ ಸೇರಿಕೊಂಡು ತಾಳ್ಮೆಯ ಆಟಕ್ಕೆ ಒತ್ತು ನೀಡಿದರು. ಎರಡನೇ ವಿಕೆಟ್‌ಗೆ 46 ರನ್‌ ಸೇರಿಸಿದರು.  22ನೇ ಓವರ್‌ನಲ್ಲಿ ದಾಳಿ ಮಾಡಿದ ಶ್ರೇಯಸ್ ಎಸೆತದ ಪುಟಿತವನ್ನು ಅಂದಾಜಿಸುವಲ್ಲಿ ವಿಫಲರಾದ ಚೇತನ್ ಬೀಷ್ಠ್ (39; 72ಎಸೆತ, 6ಬೌಂಡರಿ, 1 ಸಿಕ್ಸರ್) ದಂಡ ತೆತ್ತರು. ಅವರ ಸಹೋದರ ರಾಬಿನ್ ಬಿಷ್ಠ್ (13 ರನ್) ಅವರು ಹೆಚ್ಚು ಹೊತ್ತು ಕಾಲೂರಲು ವಿನಯ್ ಬಿಡಲಿಲ್ಲ. ಅನುಭವಿ ಆಟಗಾರ ಅಶೋಕ್ ಮನೇರಿಯಾ ಅವರಿಗೆ ಖಾತೆ ತೆರೆಯಲು ಶ್ರೇಯಸ್ ಅವಕಾಶ ಕೊಡಲಿಲ್ಲ. ಇದರಿಂದಾಗಿ ವಿರಾಮದ ವೇಳೆಗೆ ತಂಡವು 31 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 86 ರನ್ ಗಳಿಸಿತ್ತು.

ನಂತರದ ಆಟದಲ್ಲಿ ‘ಪೀಣ್ಯ ಎಕ್ಸ್‌ಪ್ರೆಸ್’ ಮಿಥುನ್  ಬೌಲಿಂಗ್  ರಂಗೇರಿತು. ಬಿಸಿಲು ಹೆಚ್ಚಿದಂತೆ ಬ್ಯಾಟಿಂಗ್ ಮಾಡಲು ಸುಲಭವಾದ ಪಿಚ್‌ನಲ್ಲಿ ಮಹಿಪಾಲ್   ಬೌಲರ್‌ಗಳಿಗೆ ಸವಾಲೊಡ್ಡಿದರು. 

39ನೇ ಓವರ್‌ನಲ್ಲಿ ಮಿಥುನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಸಲ್ಮಾನ್ ಖಾನ್ ರೋನಿತ್ ಮೋರೆಗೆ ಕ್ಯಾಚಿತ್ತರು.  ಮಹಿಪಾಲ್ ಜೊತೆಗೂಡಿದ ರಾಜೇಶ್ ಆರನೇ ವಿಕೆಟ್‌ಗೆ 24 ರನ್ ಸೇರಿಸಿದರು. ಆದರೆ ಿದಕ್ಕಾಗಿ ಅವರು ತೆಗೆದುಕೊಂಡಿದ್ದು 91 ಎಸೆತಗಳನ್ನು. ಇವರ ನಿಧಾನಗತಿಯ ಜೊತೆಯಾಟವನ್ನು ಮಿಥುನ್ ಮುರಿದರು.  ರಾಜೇಶ್ ಜೊತೆಗೆ ಸೇರಿದ ದೀಪಕ್ ಚಾಹರ್ (22 ರನ್) ಏಳನೇ ವಿಕೆಟ್ ಜೊತೆಯಾಟದಲ್ಲಿ 85 ರನ್‌ ಸೇರಿಸಿದರು. ಇದರಲ್ಲಿ ರಾಜೇಶ್ ಅವರದ್ದು ಸಿಂಹಪಾಲು. ಈ ಆಟಕ್ಕೆ ಗೌತಮ್ ತಡೆಯೊಡ್ಡಿದರು. ದೀಪಕ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನಲ್ಲಿ ರಾಹುಲ್ ಚಾಹರ್ ಕೂಡ ಮರಳಿದರು.  ಚೌಧರಿ ಮತ್ತು ಬಿಷ್ಣೊಯಿ ವಿಕೆಟ್‌ಗಳನ್ನು ಮಿಥುನ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ದಿನದಾಟದ ಕೊನೆಯಲ್ಲಿ 23 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ  ಆತಿಥೇಯ ತಂಡವು ವಿಕೆಟ್‌ ನಷ್ಟವಿಲ್ಲದೇ 12 ರನ್‌ ಗಳಿಸಿದೆ. ಫಾರ್ಮ್‌ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಆರ್. ಸಮರ್ಥ್  ಮತ್ತು ಡಿ. ನಿಶ್ಚಲ್ ಕ್ರೀಸ್‌ನಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !