ಕರುಣ್, ಮನೀಷ್ ಅಬ್ಬರ: ಸೆಮಿಫೈನಲ್‌ಗೆ ಕರ್ನಾಟಕ

7
ರಣಜಿ ಕ್ರಿಕೆಟ್

ಕರುಣ್, ಮನೀಷ್ ಅಬ್ಬರ: ಸೆಮಿಫೈನಲ್‌ಗೆ ಕರ್ನಾಟಕ

Published:
Updated:
Prajavani

ಬೆಂಗಳೂರು: ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅಬ್ಬರದ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ರಾಜಸ್ಥಾನ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ 6 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು.

ಪಂದ್ಯದ ನಾಲ್ಕನೇ ದಿನವಾದ ಶುಕ್ರವಾರ ಊಟದ ವಿರಾಮಕ್ಕೆ ಮುನ್ನವೇ ತಂಡವು ಜಯದ ಗಡಿ ದಾಟಿತು.

ರಾಜಸ್ಥಾನ ತಂಡವು ನೀಡಿದ್ದ 184 ರನ್‌ಗಳ ಗುರಿಯನ್ನು ಕರ್ನಾಟಕ ತಂಡವು 47.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 185 ರನ್‌ ಗಳಿಸಿತು. ಕರುಣ್ ನಾಯರ್ (ಔಟಾಗದೆ 61; 129ಎಸೆತ, 6 ಬೌಂಡರಿ) ಮತ್ತು ಮನೀಷ್ ಪಾಂಡೆ (ಔಟಾಗದೆ 87, 75ಎಸೆತ, 14ಬೌಂಡರಿ, 2ಸಿಕ್ಸರ್) ಐದನೇ ವಿಕೆಟ್‌ಗೆ 129 ರನ್‌ ಸೇರಿಸಿದರು.

ಗುರುವಾರ ಸಂಜೆ ಗುರಿ ಬೆನ್ನಟ್ಟಿದ್ದ ಕರ್ನಾಟಕವು 45 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತ್ತು. ಶುಕ್ರವಾರ ಬೆಳಿಗ್ಗೆ ಈ ಮೊತ್ತಕ್ಕೆ 11 ರನ್‌ಗಳು ಸೇರಿದ ನಂತರ ರೋನಿತ್ ಮೋರೆ ಔಟಾದರು.

ನಂತರ ಕ್ರೀಸ್‌ಗೆ ಬಂದ ಮನೀಷ್ ಬೌಲರ್‌ಗಳನ್ನು ನಿರ್ಭಿಡೆಯಿಂದ ದಂಡಿಸಿದರು. ಟ್ವೆಂಟಿ–20 ಕ್ರಿಕೆಟ್‌ ಮಾದರಿಯ ಬ್ಯಾಟಿಂಗ್ ಮಾಡಿದ ಮನೀಷ್ ಅವರು ಕರುಣ್ ಅವರಿಗಿಂತ ಮೊದಲೇ ಅರ್ಧಶತಕ ಗಳಿಸಿದರು. ತಮ್ಮನ್ನು ಏಕದಿನ ಸರಣಿಗೆ ಭಾರತ ತಂಡದಿಂದ ಬಿಟ್ಟಿದ್ದನ್ನು ಪ್ರಶ್ನಿಸಿದಂತಿತ್ತು ಅವರ ಆಟ.

ಇಡೀ ಋತುವಿನಲ್ಲಿ ವೈಫಲ್ಯ ಅನುಭವಿಸಿದ್ದ ಕರುಣ್ ಕೂಡ ಅರ್ಧಶತಕ ಹೊಡೆದು ಲಯಕ್ಕೆ ಮರಳಿದರು.

ಕರ್ನಾಟಕ ತಂಡವು ಹೋದ ವರ್ಷ ಸೆಮಿಫೈನಲ್‌ನಲ್ಲಿ ವಿದರ್ಭ ಎದುರು ಸೋತಿತ್ತು. ಈಗ ಸತತ ಎರಡನೇ ವರ್ಷ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ. ಲೀಗ್‌ನಲ್ಲಿ ಸಿ ಗುಂಪಿನಿಂದ ನಾಕೌಟ್‌ಗೆ ಅರ್ಹತೆ ಪಡೆದಿದ್ದ ರಾಜಸ್ಥಾನ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿದೆ.

ಲಖನೌನಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ನಡುವಣ ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದ ತಂಡವು ಕರ್ನಾಟಕವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಪಂದ್ಯ ನಡೆಯುವ ಸ್ಥಳವೂ ಇನ್ನೂ ನಿರ್ಧಾರವಾಗಿಲ್ಲ.

ಸ್ಕೋರ್ ವಿವರ

ಮೊದಲ ಇನಿಂಗ್ಸ್

ರಾಜಸ್ಥಾನ 224ರನ್‌, ಕರ್ನಾಟಕ 263ರನ್‌

ಎರಡನೇ ಇನಿಂಗ್ಸ್

ರಾಜಸ್ಥಾನ 222‌ರನ್‌, ಕರ್ನಾಟಕ 4ವಿಕೆಟ್‌ಗೆ 185ರನ್‌ (47.5 ಓವರ್‌ಗಳಲ್ಲಿ)

ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ಗಳಿಂದ ಜಯ

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !