ರೋನಿತ್ ಖಾತೆಗೆ ಮತ್ತೆ ‘ಐದರ ಗುಚ್ಛ’

7
ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ಇನಿಂಗ್ಸ್ ಮುನ್ನಡೆ: ಮನೀಷ್ ಪಾಂಡೆ ಅರ್ಧಶತಕ; ಭಾಟಿಯಾ ಶತಕ

ರೋನಿತ್ ಖಾತೆಗೆ ಮತ್ತೆ ‘ಐದರ ಗುಚ್ಛ’

Published:
Updated:

ಬೆಂಗಳೂರು: ಕರ್ನಾಟಕ ರಣಜಿ ತಂಡದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಲು ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿರುವ ಬೆಳಗಾವಿಯ ರೋನಿತ್ ಮೋರೆ ಈ ಸಲ ಮಿಂಚಿನ ಸಂಚಲನ ಮೂಡಿಸುತ್ತಿದ್ದಾರೆ.

ಅಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ರಾಮಪ್ರಸಾದ್ ಓವಲ್ ಮೈದಾನದಲ್ಲಿ ಛತ್ತೀಸಗಡ ತಂಡದ ಎದುರು ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ  ಆತಿಥೇಯ ತಂಡವು 135 ರನ್‌ಗಳ ಮುನ್ನಡೆ ಸಾಧಿಸಿತು. ಇದಕ್ಕೆ ಮಹತ್ವದ ಕಾಣಿಕೆ ನೀಡಿದ್ದು ರೋನಿತ್. ಅನುಭವಿ ವೇಗಿ ಅಭಿಮನ್ಯು ಮಿಥುನ್ ( 64ಕ್ಕೆ4) ಹಾಕಿಕೊಟ್ಟ ಬುನಾದಿಯ ಮೇಲೆ ರೋನಿತ್ (48ಕ್ಕೆ5) ಕನಸಿನ ಸೌಧ ಕಟ್ಟಿದರು.

ಇದರಿಂದಾಗಿ ಛತ್ತೀಸಗಡ ತಂಡವು 283 ರನ್‌ಗಳಿಗೆ ಸರ್ವಪತನವಾಯಿತು. ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 418 ರನ್‌ಗಳ ಮೊತ್ತ ಚುಕ್ತಾ ಮಾಡುವಲ್ಲಿ ವಿಫಲವಾಯಿತು. ಆದರೆ, ಹರಪ್ರೀತ್ ಸಿಂಗ್ ಭಾಟಿಯಾ (120; 239ಎಸೆತ, 365 ನಿಮಿಷ, 17ಬೌಂಡರಿ) ಗಳಿಸಿದ ತಾಳ್ಮೆಯ ಶತಕದ ಬಲದಿಂದ ಫಾಲೋ ಆನ್ ತಪ್ಪಿಸಿಕೊಂಡಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕಕ್ಕೆ ಪಂಕಜ್ ರಾವ್ ಬಲವಾದ ಪೆಟ್ಟು ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಪಡೆದಿದ್ದ ಅವರು ಮತ್ತೆ ಮೂರು ವಿಕೆಟ್‌ ಕಬಳಿಸಿ ಸಂಭ್ರಮಿಸಿದರು. ನಂತರ ನಾಯಕ ಮನೀಷ್ ಪಾಂಡೆ (ಬ್ಯಾಟಿಂಗ್ 57) ಅವರ ಆಕರ್ಷಕ ಆಟದಿಂದಾಗಿ ತಂಡವು ದಿನದಾಟದ ಕೊನೆಗೆ 34 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 113 ರನ್‌ ಗಳಿಸಿದೆ. ಒಟ್ಟು 248 ರನ್‌ಗಳ ಮುನ್ನಡೆ ಸಾಧಿಸಿದೆ.

ರೋನಿತ್ ಬುಟ್ಟಿಯಲ್ಲಿ 23 ವಿಕೆಟ್: ಈ ಬಾರಿಯ ಟೂರ್ನಿಯಲ್ಲಿ ರೋನಿತ್ ಒಟ್ಟು 23 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ತುಂಬಿಕೊಂಡಿದ್ದಾರೆ. ಈ ಋತುವಿನಲ್ಲಿ ಐದನೇ ಪಂದ್ಯ ಆಡುತ್ತಿರುವ ಅವರು ಮೂರನೇ ಬಾರಿ ಐದು ವಿಕೆಟ್‌ಗಳ ಗುಚ್ಛವನ್ನು ಗಳಿಸಿದರು. ಬೆಳಗಾವಿಯಲ್ಲಿ ಮುಂಬೈ ಎದುರು ಮತ್ತು ಶಿವಮೊಗ್ಗದಲ್ಲಿ ರೈಲ್ವೆ ತಂಡದ ವಿರುದ್ಧ ಅವರು ಈ ಸಾಧನೆ  ಮಾಡಿದ್ದರು. ಮಂಗಳವಾರ ಬೌಲರ್‌ಗಳ ತಾಳ್ಮೆ ಪರೀಕ್ಷಿಸಿದ ಛತ್ತೀಸಗಡದ ಹರಪ್ರೀತ್ ಭಾಟಿಯಾ ಅವರ ವಿಕೆಟ್‌ ಸೇರಿದಂತೆ ಐದು ವಿಕೆಟ್‌ ಕಬಳಿಸಿದ ಅವರು ಚಹಾ ವಿರಾಮಕ್ಕೆ ಅರ್ಧ ಗಂಟೆ ಮೊದಲೇ ತಂಡಕ್ಕೆ ಮುನ್ನಡೆಯ ಅವಕಾಶ ಕೊಡಿಸಿದರು. ಪಿಚ್‌ನ ಮರ್ಮ ಅರಿತು  ಉತ್ತಮ ಲೈನ್ ಹಾಗೂ ಲೆಂಗ್ತ್‌ ಬೌಲಿಂಗ್ ಮಾಡಿದ ಅವರು ಯಶಸ್ವಿಯಾದರು. ಅವರು ಬೌಲಿಂಗ್ ಮಾಡಿದ 89ನೇ ಓವರ್‌ ಒಂದರಲ್ಲಿಯೇ ಮೂರು ವಿಕೆಟ್‌ಗಳನ್ನು ಗಳಿಸಿದರು. ಆದರೆ, ‘ಹ್ಯಾಟ್ರಿಕ್’ ಒಲಿಯಲಿಲ್ಲ!

ಜಯ ಅಥವಾ ಡ್ರಾ?: ಕೊನೆಯ ದಿನವಾದ ಬುಧವಾರ ಬೆಳಿಗ್ಗೆ ಮನೀಷ್ ಬಳಗವು 300 ರನ್‌ಗಳವರೆಗೆ ಮೊತ್ತವನ್ನು ಗಳಿಸಿ ಡಿಕ್ಲೆರ್‌ ಮಾಡಿಕೊಳ್ಳುವ ಸಾಧ್ಯತೆ ಇದೆ. ನಂತರ ಛತ್ತೀಸಗಡ ತಂಡದ ಹತ್ತು ವಿಕೆಟ್ ಕಬಳಿಸಿ ಜಯಿಸುವ ಕನಸು ಕಾಣುತ್ತಿದೆ. ಆದರೆ, ಪ್ರವಾಸಿ ಬಳಗದ  ಬ್ಯಾಟ್ಸ್‌ಮನ್‌ಗಳು ಜಿಗುಟುತನದ ಆಟವಾಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಬೆಳಿಗ್ಗೆ ಬೇಗನೇ ಕರ್ನಾಟಕಕ್ಕೆ ಹೆಚ್ಚು ರನ್ ಗಳಿಸುವ ಅವಕಾಶ ನೀಡದೇ ಉಳಿದ ಎಲ್ಲ ವಿಕೆಟ್‌ಗಳನ್ನು ಕಬಳಿಸಿ ತನ್ನ ಗೆಲುವಿಗೆ ಪ್ರಯತ್ನಿಸಲು ಛತ್ತೀಸಗಡಕ್ಕೂ ಅವಕಾಶ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !