ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣ್ ಬಳಗಕ್ಕೆ ಗೌತಮ್ ಬಲ

ಕರ್ನಾಟಕ–ರೈಲ್ವೇಸ್‌ ತಂಡಗಳ ನಡುವಣ ರಣಜಿ ಟ್ರೋಫಿ ಪಂದ್ಯ ಇಂದಿನಿಂದ
Last Updated 26 ಜನವರಿ 2020, 19:48 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಈ ಸಲದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು ಮಣಿಸಿದ ರೋಚಕ ಕದನವನ್ನು ದೇಶಿ ಕ್ರಿಕೆಟ್‌ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಅಂದು ಜಯದ ರೂವಾರಿಯಾಗಿದ್ದ ಕೃಷ್ಣಪ್ಪ ಗೌತಮ್ ಅವರ ಆಟ ಕೂಡ ಅಷ್ಟೇ ಅವಿಸ್ಮರಣೀಯ.

ಆ ‍‍ಪಂದ್ಯದಲ್ಲಿ 14 ವಿಕೆಟ್ ಗಳಿಸಿ ಮಿಂಚಿದ್ದ ಗೌತಮ್ ಗಾಯಗೊಂಡಿದ್ದರು. ಆಮೇಲೆ ಅವರು ಕಣಕ್ಕಿಳಿದಿರಲಿಲ್ಲ. ಇದೀಗ ಅವರು ಮತ್ತೆ ಮರಳಿದ್ದಾರೆ. ಇದರಿಂದಾಗಿ ಕರ್ನಾಟಕ ತಂಡದಲ್ಲಿ ಹೊಸ ಉತ್ಸಾಹ ಪುಟಿದೆದ್ದಿದೆ. ದೇಶದ ರಾಜಧಾನಿಯ ಕರ್ನೈಲ್ ಸಿಂಗ್ ಮೈದಾನದಲ್ಲಿ ಸೋಮವಾರ ಆರಂಭವಾಗಲಿರುವ ರೈಲ್ವೇಸ್‌ ಎದುರಿನ ಪಂದ್ಯದಲ್ಲಿ ಆ‍ಫ್‌ಸ್ಪಿನ್ –ಆಲ್‌ರೌಂಡರ್ ಗೌತಮ್ ಕಣಕ್ಕಿಳಿಯಲಿದ್ದಾರೆ. ‘ಮದುವೆ ರಜೆ‘ ಪಡೆದಿದ್ದ ಕರುಣ್ ಹೋದ ವಾರ ನಡೆದಿದ್ದ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ಅವರೂ ಈಗ ತಂಡಕ್ಕೆ ಮರಳಿದ್ದಾರೆ.

ಸುಮಾರು 12 ದಿನಗಳ ವಿಶ್ರಾಂತಿಯ ನಂತರ ಕಣಕ್ಕಿಳಿಯುತ್ತಿರುವ ತಂಡದ ಉಳಿದ ಆಟಗಾರರೂ ಕೂಡ ಹೊಸ ಉತ್ಸಾಹದಿಂದ ಆಡುವ ವಿಶ್ವಾಸದಲ್ಲಿದ್ದಾರೆ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ ಮತ್ತು ಪ್ರಸಿದ್ಧ ಕೃಷ್ಣ ಅವರ ಅನುಪಸ್ಥಿತಿಯಲ್ಲಿಯೂ ಕರ್ನಾಟಕ ತಂಡವು ಇದುವರೆಗೆ ‘ಎ–ಬಿ’ ಗುಂಪಿನಲ್ಲಿ ಒಂದೂ ಸೋಲು ಅನುಭವಿಸಿಲ್ಲ.ತಮಿಳುನಾಡು ಮತ್ತು ಮುಂಬೈನಂತಹ ಘಟಾನುಘಟಿ ತಂಡಗಳನ್ನು ಸೋಲಿಸಿದೆ. ಆದರೆ, ಹಿಮಾಚಲ ಪ್ರದೇಶ ಮತ್ತು ಸೌರಾಷ್ಟ್ರ ಎದುರಿನ ಪಂದ್ಯಗಳಲ್ಲಿ ಸೋಲಿನಿಂದ ತಪ್ಪಿಸಿಕೊಂಡು ಮೊದಲ ಇನಿಂಗ್ಸ್‌ ಹಿನ್ನಡೆ ಅನುಭವಿಸಿತ್ತು. ಇದರಿಂದಾಗಿ 17 ಪಾಯಿಂಟ್ಸ್‌ನೊಂದಿಗೆ ಏಳನೇ ಸ್ಥಾನದಲ್ಲಿದೆ. ಅಗ್ರ ಐದರಲ್ಲಿ ಬರಬೇಕಾದರೆ ಈಗ ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡರಲ್ಲಿ ಗೆದ್ದು, ಒಂದರಲ್ಲಿ ಮುನ್ನಡೆ ಸಾಧಿಸಬೇಕು. ಇಲ್ಲದಿದ್ದರೆ ಕ್ವಾರ್ಟರ್‌ಫೈನಲ್ ಹಾದಿ ಕಠಿಣವಾಗುತ್ತದೆ. ‌‌

ಆರ್.ಸಮರ್ಥ್, ಎಲ್ಲ ಪಂದ್ಯಗಳಲ್ಲಿಯೂ ಅರ್ಧಶತಕಗಳನ್ನು ಗಳಿಸಿರುವ ದೇವದತ್ತ ಪಡಿಕ್ಕಲ್, ರೋಹನ್ ಕದಂ ಉತ್ತಮ ಲಯದಲ್ಲಿದ್ದಾರೆ. ಪವನ್ ದೇಶಪಾಂಡೆ ಮತ್ತು ಕೆ.ವಿ. ಸಿದ್ಧಾರ್ಥ್ ಇನ್ನೂ ತಮ್ಮ ಸಂಪೂರ್ಣ ಸಾಮರ್ಥ್ಯ ಮೆರೆದಿಲ್ಲ. ಅವರು ತಮ್ಮ ಲಯಕ್ಕೆ ಮರಳಿದರೆ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗುತ್ತದೆ. ರಾಜ್‌ಕೋಟ್ ಪಂದ್ಯದಲ್ಲಿ ಅನುಭವಿ ಮಿಥುನ್ ಮತ್ತು ವಿ. ಕೌಶಿಕ್ ಅವರಿಗೆ ವಿಶ್ರಾಂತಿ ಕೊಟ್ಟು ಕಣಕ್ಕಿಳಿದಿದ್ದ ಕರ್ನಾಟಕ ತಂಡವು ಪಶ್ಚಾತ್ತಾಪ ಪಟ್ಟಿತ್ತು. ಮೊದಲ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಅವರನ್ನು ಕಟ್ಟಿಹಾಕಲು ಪರದಾಡಿತ್ತು. ಈ ಬಾರಿ ಅಂತಹ ತಪ್ಪು ಮಾಡಲಿಕ್ಕಿಲ್ಲ. ಇವರಿಬ್ಬರ ಜೊತೆಗೆ ರೋನಿತ್ ಮೋರೆ ಅಥವಾ ಎಡಗೈ ಮಧ್ಯಮವೇಗಿ ಪ್ರತೀಕ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಸ್ಪಿನ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್‌ ಮತ್ತು ಗೌತಮ್ ಇದ್ದಾರೆ. ಆದ್ದರಿಂದ ಪ್ರವೀಣ್ ದುಬೆ ಬೆಂಚ್ ಕಾಯಬೇಕಾಗಬಹುದು.

ಆತಿಥೇಯ ತಂಡದಲ್ಲಿಯೂ ಇಬ್ಬರು ಕನ್ನಡಿಗರಿದ್ದಾರೆ. ಮಧ್ಯಮವೇಗಿ ಟಿ. ಪ್ರದೀಪ್ ಮತ್ತು ವಿಕೆಟ್‌ಕೀಪರ್ ನಿತಿನ್ ಭಿಲ್ಲೆ ಕರ್ನಾಟಕ ತಂಡಕ್ಕೆ ಸವಾಲೊಡ್ಡಬಲ್ಲರು. ಈ ಋತುವಿನಲ್ಲಿ ಮುಂಬೈ ವಿರುದ್ಧ ಜಯಿಸಿದ್ದು ರೈಲ್ವೆ ತಂಡದ ಪ್ರಮುಖ ಸಾಧನೆ. ಇನ್ನು ಮೂರು ಪಂದ್ಯಗಳಲ್ಲಿ ಸೋತು, ಎರಡರಲ್ಲಿ ಡ್ರಾ ಸಾಧಿಸಿದೆ. 13 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT