ಗುರುವಾರ , ಫೆಬ್ರವರಿ 2, 2023
26 °C
ರಣಜಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ 7 ವಿಕೆಟ್ ಜಯ, ಮಿಂಚಿದ ನಿಕಿನ್ ಜೋಸ್–ಮನೀಷ್

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ವಿಜಯದ ಕಾಣಿಕೆ ನೀಡಿದ ವೈಶಾಖ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಿಸ್ತುಬದ್ಧ ದಾಳಿ ಮಾಡಿದ ವೈಶಾಖ ವಿಜಯಕುಮಾರ್ ಶುಕ್ರವಾರ ಕರ್ನಾಟಕ ತಂಡದ ಜಯದ ರೂವಾರಿಯಾದರು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಛತ್ತೀಸಗಢ ತಂಡದ ಎದುರು ಕರ್ನಾಟಕ 7 ವಿಕೆಟ್‌ಗಳಿಂದ ಜಯಿಸಿತು. 122 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕರ್ನಾಟಕ ತಂಡವು ನಿಕಿನ್ ಜೋಸ್ (ಔಟಾಗದೆ 44) ಮತ್ತು ಮನೀಷ್ ಪಾಂಡೆ (27; 24ಎ) ಅವರ ಬ್ಯಾಟಿಂಗ್ ಬಲದಿಂದ 23.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 128 ರನ್‌ ಗಳಿಸಿ ಗೆದ್ದಿತು. 

ಕೊನೆಯ ದಿನದಾಟದ ಚಹಾ ವಿರಾಮಕ್ಕೆ ಸುಮಾರು 20 ನಿಮಿಷಗಳ ಮೊದಲಷ್ಟೇ ಛತ್ತೀಸಗಢ ತಂಡವು 77.5 ಓವರ್‌ಗಳಲ್ಲಿ 177 ರನ್‌ ಗಳಿಸಿ ಎರಡನೇ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು.

ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗಳ ಹಿನ್ನಡೆ ಅನುಭವಿಸಿದ್ದ ಪ್ರವಾಸಿ ಬಳಗದ ಬ್ಯಾಟರ್‌ಗಳು  ಡ್ರಾದತ್ತ ಸಾಗುವ ಯೋಜನೆಯೊಂದಿಗೆ ಅಡಿದರು. ಆದರೆ ಈ ಸವಾಲನ್ನು ಆತಿಥೇಯ ಬೌಲಿಂಗ್ ಪಡೆ ಮೀರಿ ನಿಂತಿತು. ಅದರಲ್ಲಿಯೂ ವೈಶಾಖ ತಾಳ್ಮೆ ಮತ್ತು ಚಾಣಾಕ್ಷತನ ಮೇಳೈಸಿದ ಬೌಲಿಂಗ್ ಮಾಡಿದರು. 

ಇನ್ನೊಂದು ಬದಿಯಿಂದ ವಿದ್ವತ್,  ಕೌಶಿಕ್ ಉತ್ತಮ ಬೆಂಬಲ ನೀಡಿದರು. ಗುರುವಾರದ ದಿನದಾಟದ ಅಂತ್ಯಕ್ಕೆ ಛತ್ತೀಸಗಢ ತಂಡವು 2 ವಿಕೆಟ್‌ಗಳಿಗೆ 35 ರನ್‌ ಗಳಿಸಿತ್ತು. ಕೊನೆಯ ದಿನ ಬೆಳಿಗ್ಗೆ  ಆಶುತೋಷ್ ವಿಕೆಟ್ ಗಳಿಸುವಲ್ಲಿ ವೈಶಾಖ ಯಶಸ್ವಿಯಾದರು. ಸ್ಪಿನ್ನರ್ ಗೌತಮ್ ಬೌಲಿಂಗ್‌ನಲ್ಲಿ ಹರಪ್ರೀತ್ ಸಿಂಗ್ ಔಟಾದರು.  ಆದರೆ ಅಮನದೀಪ್ (50;111ಎ) ಮತ್ತು ಮಯಂಕ್ ವರ್ಮಾ (46; 128ಎ) ಪ್ರತಿರೋಧವೊಡ್ಡಿದರು.  

ನಿಕಿನ್ ಆಟ, ಪಾಂಡೆ ಬೀಸಾಟ: ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆತಿಥೇಯರಿಗೆ ಛತ್ತೀಸಗಢ ತಂಡವು ಕಠಿಣ ಪ್ರತಿರೋಧವೊಡ್ಡಿತು. ಸಾಧ್ಯವಾದಷ್ಟು ಸಮಯ ವ್ಯರ್ಥ ಮಾಡುವುದು ಮತ್ತು ಕರ್ನಾಟಕ ಬ್ಯಾಟರ್‌ಗಳು ರನ್‌ ಗಳಿಸದಂತೆ ನೋಡಿಕೊಳ್ಳಲು ಎದುರಾಳಿಗಳು ಬಲೆ ಹೆಣೆದಿದ್ದರು.

32 ಓವರ್‌ಗಳನ್ನು ಕಡ್ಡಾಯವಾಗಿ ಹಾಕಲೇಬೇಕಿದ್ದರಿಂದ  ಎರಡೂ ಬದಿಯಿಂದ  ಎಡಗೈ ಸ್ಪಿನ್ನರ್‌ಗಳು ದಾಳಿ ಆರಂಭಿಸಿದರು. ಅದಕ್ಕೆ ತಕ್ಕಂತೆ ಮಯಂಕ್ ಮತ್ತು ಸಮರ್ಥ್ ಉತ್ತಮ ಆರಂಭ ಒದಗಿಸಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಮಯಂಕ್  ಔಟಾದರು.  ಸಮರ್ಥ್  ಜೊತೆಗೂಡಿದ ಯುವಪ್ರತಿಭೆ ನಿಕಿನ್ ಜೋಸ್ ಒಂಟಿ ಮತ್ತು ಎರಡು ರನ್‌ಗಳನ್ನು ಪಡೆಯುತ್ತ ಮೊತ್ತ ಹೆಚ್ಚಿಸಿದರು. ಬೌಲರ್‌ಗಳು ಲೆಗ್‌ಸ್ಟಂಪ್‌ನಿಂದ ಹೊರಗೇ ಎಸೆತಗಳನ್ನು ಬೌಲರ್‌ಗಳು ಪ್ರಯೋಗಿಸುತ್ತಿದ್ದರು. ಅದಕ್ಕೆ ತಕ್ಕಂತೆ ಫೀಲ್ಡಿಂಗ್ ನಿಯೋಜನೆಗೊಂಡಿತ್ತು. ಇದರಿಂದಾಗಿ ಬ್ಯಾಟರ್‌ಗಳು ಸ್ವೀಪ್ ಮತ್ತು ರಿವರ್ಸ್‌ ಸ್ವೀಪ್‌ಗಳಿಗೆ ಮೊರೆಹೋದರು. 

14ನೇ ಓವರ್‌ನಲ್ಲಿ ಸಮರ್ಥ್ ಆಡಿದ ಎಸೆತದಲ್ಲಿ  ಎರಡನೇ ರನ್‌ ಓಡಲು ನಿಕಿನ್ ಸ್ಪಂದಿಸಲಿಲ್ಲ. ಇದರಿಂದಾಗಿ ಕ್ರೀಸ್‌ಗೆ ಮರಳುವ ಹಾದಿಯಲ್ಲಿ ಸಮರ್ಥ್ ರನೌಟ್ ಆದರು. ಅಸಮಾಧಾನದಿಂದ ಪೆವಿಲಿಯನ್‌ಗೆ ಮರಳಿದರು. 

ಆಗ ಕ್ರೀಸ್‌ಗೆ ಬಂದ ಮನೀಷ್ ಪಾಂಡೆ ಕ್ರೀಡಾಂಗಣದ ಒಂದು ಗ್ಯಾಲರಿಯಲ್ಲಿದ್ದ ಕೆಲವು ಅಭಿಮಾನಿಗಳನ್ನು ರಂಜಿಸಿದರು.  ತಂಡದ ಮೊತ್ತ 100ರ ಗಡಿ ಮುಟ್ಟಿದಾಗ ಮನೀಷ್ ಔಟಾದರು. ನಂತರ ಜವಾಬ್ದಾರಿಯುತ ಆಟವಾಡಿದ ನಿಕಿನ್  ಸಿಕ್ಸರ್‌ ಬಾರಿಸಿ ವಿಜಯದ ರನ್ ಗಳಿಸಿದರು.

ಬಿ.ಆರ್. ಶರತ್‌ಗೆ ಗಾಯ

ಕರ್ನಾಟಕ ತಂಡದ ವಿಕೆಟ್‌ಕೀಪರ್ ಬಿ.ಆರ್. ಶರತ್ ಅವರು ಗಾಯಗೊಂಡರು. ಗೌತಮ್ ಬೌಲಿಂಗ್‌ನಲ್ಲಿ ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಅವರಿಗೆ ಪೆಟ್ಟುಬಿತ್ತು. ಪ್ರಥಮ ಚಿಕಿತ್ಸೆ ನೀಡಿದ ಫಿಸಿಯೊ ಜೊತೆಗೆ ಶರತ್ ಕುಂಟುತ್ತಲೆ ಪೆವಿಲಿಯನ್ ಸೇರಿದರು. ಅವರ ಬದಲಿಗೆ ಶರತ್ ಶ್ರೀನಿವಾಸ್ ವಿಕೆಟ್‌ಕೀಪಿಂಗ್ ನಿರ್ವಹಿಸಿದರು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಛತ್ತೀಸಗಢ 311 (109.3 ಓವರ್‌ಗಳಲ್ಲಿ)

ಕರ್ನಾಟಕ: 366 (121.4 ಓವರ್‌ಗಳಲ್ಲಿ)

ಎರಡನೇ ಇನಿಂಗ್ಸ್: ಛತ್ತೀಸಗಢ 177 (77.5 ಓವರ್‌ಗಳಲ್ಲಿ)

ಆಶುತೋಷ್ ಸಿ ಸಮರ್ಥ್ ಬಿ ವೈಶಾಖ 18 (78ಎ, 4X1), ಅಮನದೀಪ್ ಬಿ ವೈಶಾಖ 50 (111ಎ, 4X6), ಹರಪ್ರೀತ್ ಸಿಂಗ್ ಬಿ ಗೌತಮ್ 8 (18, 4X1), ವರ್ಮಾ ಎಲ್‌ಬಿಡಬ್ಲ್ಯು ಶ್ರೇಯಸ್ 46 (128ಎ, 4X5), ಶಶಾಂಕ್ ಸಿ ಶರತ್ ಶ್ರೀನಿವಾಸ್ (ಬದಲೀ) ಬಿ ವೈಶಾಖ 12 (40ಎ, 4X1, 6X1), ಅಜಯ್ ಬಿ ವೈಶಾಖ 13 (18ಎ, 4X2), ಸುಮಿತ್ ಸಿ ಮನೀಷ್ ಬಿ ಗೌತಮ್ 18 (48ಎ, 4X4), ರವಿಕಿರಣ ಔಟಾಗದೆ 1 (3ಎ), ಸೌರಭ್ ಬಿ ವೈಶಾಖ 6 (7ಎ, 6X1)

ಇತರೆ: 5 (ಬೈ 4, ವೈಡ್ 1)

ವಿಕೆಟ್ ಪತನ: 3–60 (ಅಶುತೋಷ್; 29.2), 4–75 (ಹರಪ್ರೀತ್; 34.1), 5–91 (ಅಮನದೀಪ್; 41.6), 6–121 ( ಶಶಾಂಕ್; 55.6), 7–141 (ಅಜಯ್ ಮಂಡಲ್; 61.4), 8–170 (ಮಯಂಕ್ ವರ್ಮಾ; 75.4), 9–170 (ಸುಮಿತ್ ರುಯ್ಕರ್;76.3), 10–177 (ಸೌರಭ್ ಮಜುಂದಾರ್; 77.5)

ಬೌಲಿಂಗ್‌: ವಿದ್ವತ್ ಕಾವೇರಪ್ಪ 16–5–27–1, ವಿ. ಕೌಶಿಕ್ 12–4–24–1, ವಿಜಯಕುಮಾರ್ ವೈಶಾಖ 18.5–4–59–5, ಕೆ. ಗೌತಮ್ 17–5–41–2, ಶ್ರೇಯಸ್ ಗೋಪಾಲ್ 13–3–21–1, ಆರ್. ಸಮರ್ಥ್ 1–0–1–0

ಕರ್ನಾಟಕ 3ಕ್ಕೆ128 (23.2 ಓವರ್‌ಗಳಲ್ಲಿ)

ಸಮರ್ಥ್ ರನ್‌ಔಟ್ (ಹರಪ್ರೀತ್) 24 (40ಎ), ಮಯಂಕ್ ಸಿ ರವಿಕಿರಣ ಬಿ ಸುಮಿತ್ 14 (12ಎ, 4X2), ನಿಕಿನ್ ಅಜೇಯ 44 (59ಎ, 4X1, 6X2)

ಮನೀಷ್ ಸಿ ಅಜಯ್ ಬಿ ಸುಮಿತ್ 27 (24ಎ, 4X2, 6X2), ಗೌತಮ್ ಅಜೇಯ 2 (5ಎ)‌

ಇತರೆ: 17 (ಬೈ 11, ಲೆಗ್‌ಬೈ 6)

ವಿಕೆಟ್ ಪತನ: 1–20 (ಮಯಂಕ್ ಅಗರವಾಲ್; 3.5), 2–62 (ಆರ್.ಸಮರ್ಥ್; 13.4), 3–100 (ಮನೀಷ್ ಪಾಂಡೆ; 20.3)

ಬೌಲಿಂಗ್‌: ಅಜಯ್ ಮಂಡಲ್ 11.2–0–70–0, ಸುಮಿತ್ ರುಯ್ಕರ್ 11–0–35–2, ರವಿಕಿರಣ್
1–0–6–0

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು