ರಣಜಿ ಕ್ರಿಕೆಟ್ ಕ್ವಾರ್ಟರ್‌ಫೈನಲ್: ವಿನಯ್ ಆಟಕ್ಕೆ ರೋನಿತ್‌ ಜೊತೆಯಾಟ

7
ಕರ್ನಾಟಕ ತಂಡಕ್ಕೆ 39 ರನ್‌ಗಳ ಮುನ್ನಡೆ; ರಾಹುಲ್ ಚಾಹರ್‌ಗೆ ಐದು ವಿಕೆಟ್

ರಣಜಿ ಕ್ರಿಕೆಟ್ ಕ್ವಾರ್ಟರ್‌ಫೈನಲ್: ವಿನಯ್ ಆಟಕ್ಕೆ ರೋನಿತ್‌ ಜೊತೆಯಾಟ

Published:
Updated:
Prajavani

ಬೆಂಗಳೂರು: ಬುಧವಾರ ಮಧ್ಯಾಹ್ನದ ಎರಡೂವರೆ ತಾಸು ದೇಶಿ ಕ್ರಿಕೆಟ್‌ಪ್ರೇಮಿಗಳಿಗೆ ರೋಚಕ ರಸದೌತಣ ಉಂಡ ಅನುಭವ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್. ವಿನಯಕುಮಾರ್ ಮತ್ತು ರೋನಿತ್ ಮೋರೆ ಅವರ ಆಟ ತಂತಿಯ ಮೇಲೆ ನಡೆದಂತಹ ಹರಸಾಹಸ ನೋಡುಗರನ್ನು ಕಟ್ಟಿಹಾಕಿತು.

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಂಟರ ಘಟ್ಟದ ಪಂದ್ಯದಲ್ಲಿ ಇನ್ನೇನು ಕರ್ನಾಟಕದ ಇನಿಂಗ್ಸ್‌ ಮುಗಿದೇ ಹೋಯಿತು. ದೊಡ್ಡ ಮುನ್ನಡೆ ಲಭಿಸಿಯೇಬಿಟ್ಟಿತು ಎಂದು ಕನಸು ಕಾಣುತ್ತಿದ್ದ ರಾಜಸ್ಥಾನದ ಬೌಲರ್‌ಗಳ ಬೆವರಿಳಿಸಿದ ವಿನಯಕುಮಾರ್ ಮತ್ತು ರೋನಿತ್ 39 ರನ್‌ಗಳ  ಮೊದಲ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿಸಿದ 97 ರನ್‌ಗಳಿಂದ ತಂಡವು 87.4 ಓವರ್‌ಗಳಲ್ಲಿ 263 ರನ್‌ ಗಳಿಸಿತು. ರಾಜಸ್ಥಾನ ಗಳಿಸಿದ್ದ 224 ರನ್‌ಗಳಿಗೆ ದಿಟ್ಟ ಉತ್ತರ ಕೊಟ್ಟಿತು. ಎರಡನೇ ಇನಿಂಗ್ಸ್‌ ಆರಂಭಿಸಿರುವ ಪ್ರವಾಸಿ ಬಳಗವು (3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 11) ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸುತ್ತದೆ. ಆದ್ದರಿಂದ ಆತಿಥೇಯರಿಗೆ ದೊಡ್ಡ ಗುರಿ ನೀಡುವ ಒತ್ತಡದಲ್ಲಿದೆ.

ತಂತಿಯ ಮೇಲಿನ ನಡಿಗೆ: ವಿನಯ್ ಮತ್ತು ರೋನಿತ್ ಕ್ರೀಸ್‌ನಲ್ಲಿ ಜೊತೆಗೂಡಿದಾಗ ತಂಡವು 166 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಾಜಸ್ಥಾನದ ಸ್ಪಿನ್ನರ್ ರಾಹುಲ್ ಚಾಹರ್ (93ಕ್ಕೆ5) ಮತ್ತು ಮಧ್ಯಮವೇಗಿ ತನ್ವಿರ್ ಉಲ್ ಹಕ್ (50ಕ್ಕೆ3 ) ಅವರ ಎಸೆತಗಳು ಸ್ಟಂಪ್‌ಗಳ ಕೂದಲೆಳೆಯ ಅಂತರದಲ್ಲಿ ಹಾದು ಹೋಗುತ್ತಿದ್ದವು. ಹಿಂದಡಿ ಇಟ್ಟು ಆಡುವ ಪ್ರಯತ್ನ ಮಾಡುವ ಬ್ಯಾಟ್ಸ್‌ಮನ್‌ಗಳನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಂತಿದ್ದವು. ಫೀಲ್ಡರ್‌ಗಳ ಮನವಿಗಳು ಮುಗಿಲುಮುಟ್ಟಿದ್ದವು. ನಾಯಕ ಮಹಿಪಾಲ್ ಲೊಮ್ರೊರ್ ಅವರು ಫೀಲ್ಡಿಂಗ್‌ನ ಭದ್ರಕೋಟೆಯನ್ನು ನಿರ್ಮಿಸಿದ್ದರು. ಆದರೆ, ಅನುಭವಿ ಆಲ್‌ರೌಂಡರ್ ವಿನಯ್ (ಔಟಾಗದೆ 83; 162 ನಿಮಿಷ, 144ಎಸೆತ, 10ಬೌಂಡರಿ, 2 ಸಿಕ್ಸರ್) ಚಾಣಾಕ್ಷತೆ ಮತ್ತು ತಾಳ್ಮೆಯ ಆಟ ಮೇಲುಗೈ ಸಾಧಿಸಿತು. ಅವರಿಗೆ  ಉತ್ತಮ ಜೊತೆ ನೀಡಿದ ರೋನಿತ್ ಮೋರೆ (10; 136 ನಿಮಿಷ, 59ಎಸೆತ,1ಬೌಂಡರಿ) ಅಳಿಲು ಸೇವೆ ಸಲ್ಲಿಸಿದರು.

ಆಗಾಗ ಸಡಿಲು ಎಸೆತಗಳಿಗೆ ಬೌಂಡರಿ ದಾರಿ ತೋರಿಸುತ್ತಿದ್ದ ವಿನಯ್, ಪ್ರತಿ ಓವರ್‌ನ ಕೊನೆಯ ಎಸೆತದಲ್ಲಿ ಮಾತ್ರ ಒಂದು ರನ್‌ ಗಳಿಸಿ ಬ್ಯಾಟಿಂಗ್‌ ಉಳಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಬೌಲರ್‌ಗಳ ಒತ್ತಡ ಹೆಚ್ಚುತ್ತಿತ್ತು. ಇದರಿಂದಾಗಿ ಚಹಾ ವಿರಾಮದ ವೇಳೆಗೆ ತಂಡದ ಮೊತ್ತವು 72 ಓವರ್‌ಗಳಲ್ಲಿ 213 ರನ್‌ಗಳಾಗಿದ್ದವು. ಮುನ್ನಡೆಗೆ 12 ರನ್‌ಗಳ ಅವಶ್ಯಕತೆ ಮಾತ್ರ ಇತ್ತು. ವಿರಾಮದ ನಂತರ ವಿನಯ್ ಅದನ್ನೂ ಪೂರೈಸಿದರು. ರಾಹುಲ್ ಚಾಹರ್ ಬೌಲಿಂಗ್ ಮಾಡಿದ 79ನೇ ಓವರ್‌ನ ಎರಡನೇ ಎಸೆತವನ್ನು ಮಿಡ್ ವಿಕೆಟ್‌ಗೆ ಹೊಡೆದ ವಿನಯ್ ಎರಡು ರನ್‌ಗಳನ್ನು ಶರವೇಗದಲ್ಲಿ ಗಳಿಸಿದರು. ಅದರೊಂದಿಗೆ ತಂಡವು ಮುನ್ನಡೆಯ ಹೆಜ್ಜೆ ಇಟ್ಟಿತು.  56 ರನ್‌ ಗಳಿಸಿದ್ದಾಗ ಒಂದು ಜೀವದಾನ ಲಭಿಸಿತು. ಅದರ ಲಾಭ ಪಡೆದ ಅವರು ರನ್‌ ಗಳಿಕೆಗೆ ವೇಗ ನೀಡಿದರು.

ಸಿದ್ಧಾರ್ಥ್ 52: ಊಟದ ವಿರಾಮಕ್ಕೆ ಮುನ್ನ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್ (32 ರನ್), ಕರುಣ್ ನಾಯರ್ (4 ರನ್) ಮತ್ತು ನಾಯಕ ಮನೀಷ್ ಪಾಂಡೆ (7 ರನ್) ಬೇಗನೆ ಔಟಾದರು. ಆದರೆ ಯುವ ಆಟಗಾರ ಸಿದ್ಧಾರ್ಥ್ ತಮಗೆ ಲಭಿಸಿದ ಎರಡು ಜೀವದಾನಗಳ (30.2 ಮತ್ತು 36.5 ಓವರ್‌) ಬಲದಿಂದ ಅರ್ಧಶತಕ ಗಳಿಸಿದರು. ಆತ್ಮವಿಶ್ವಾಸದಿಂದ ಆಡಿದ ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಜೊತೆ ಲಭಿಸಲಿಲ್ಲ. ಇದರಿಂದಾಗಿ ವಿರಾಮದ ನಂತರ ಕೇವಲ 51 ರನ್‌ಗಳು ಸೇರುವಷ್ಟರಲ್ಲಿ ಐದು ವಿಕೆಟ್‌ಗಳು ಪತನವಾದವು!

ಜೊತೆಯಾಟದ ದಾಖಲೆ

ರಾಜಸ್ಥಾನದ ಎದುರು ಹತ್ತನೇ ವಿಕೆಟ್ ಜೊತೆಯಾಟದಲ್ಲಿ ವಿನಯ್ ಮತ್ತು ರೋಹಿತ್ ಅವರು ಗಳಿಸಿದ 97 ರನ್‌ಗಳು ಎರಡನೇ ಶ್ರೇಷ್ಠ ಆಟವಾಗಿದೆ. 2007–08ರಲ್ಲಿ ಎನ್‌.ಸಿ. ಅಯ್ಯಪ್ಪ ಮತ್ತು ಯರೇಗೌಡ ಅವರು 121 ರನ್‌ಗಳ ಜೊತೆಯಾಟವಾಡಿದ್ದರು. ಯರೇಗೌಡ ಈಗ ತಂಡದ ಕೋಚ್ ಆಗಿದ್ದಾರೆ.

ಮಿಥುನ್–ದೀಪಕ್ ಜಟಾಪಟಿ

ಕರ್ನಾಟಕದ ಅಭಿಮನ್ಯು ಮಿಥುನ್ ಮತ್ತು ರಾಜಸ್ಥಾನದ ಬೌಲರ್ ದೀಪಕ್ ಚಹಾರ್ ನಡುವೆ ಮಾತಿನ ಚಕಮಕಿ ನಡೆಯಿತು. 57ನೇ ಓವರ್‌ನಲ್ಲಿ ದೀಪಕ್ ಎಸೆತದಲ್ಲಿ ಮಿಥುನ್ ಬೌಲ್ಡ್‌ ಆದರು. ಆಫ್‌ಸ್ಟಂಪ್ ಮೂರ್ನಾಲ್ಕು ಅಡಿ ದೂರ ಹಾರಿ ಬಿದ್ದಿತು. ಆಗ ದೀಪಕ್  ಆವೇಶದಿಂದ ವರ್ತಿಸಿದರು. ಅವರನ್ನು ನೋಡುತ್ತ ಪೆವಿಲಿಯನ್‌ನತ್ತ ಹೊರಟಿದ್ದ ಮಿಥುನ್‌ಗೆ ಬಿದ್ದ ಸ್ಟಂಪ್ ತೋರಿಸಿದ ದೀಪಕ್ ಕಿಚಾಯಿಸಿದರು. ಆಗ ಮಿಥುನ್ ಕೂಡ ಸಿಟ್ಟಿಗೆದ್ದರು. ಈ ಸಂದರ್ಭದಲ್ಲಿ ರಾಜಸ್ಥಾನದ  ಕೆಲವು ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.

ಸ್ಕೋರ್

ಮೊದಲ ಇನಿಂಗ್ಸ್

ರಾಜಸ್ಥಾನ 224 (77.1 ಓವರ್‌ಗಳಲ್ಲಿ)

ಕರ್ನಾಟಕ ; 263 (87.4 ಓವರ್‌ಗಳಲ್ಲಿ)

ಆರ್. ಸಮರ್ಥ್ ಎಲ್‌ಬಿಡಬ್ಲ್ಯು ಬಿ ರಾಹುಲ್ ಚಾಹರ್ 32

ಡೇಗಾ ನಿಶ್ಚಲ್ ಸಿ ಚೇತನ್ ಬಿಷ್ಠ್ ಬಿ ದೀಪಕ್ ಚಾಹರ್ 06

ಕೆ.ವಿ. ಸಿದ್ಧಾರ್ಥ್ ಬಿ ತನ್ವೀರ್ ಉಲ್ ಹಕ್  50

ಕರುಣ್ ನಾಯರ್ ಸಿ ಮತ್ತು ಬಿ ತನ್ವೀರ್ ಉಲ್ ಹಕ್ 04

ಮನೀಷ್ ಪಾಂಡೆ ಬಿ ತನ್ವೀರ್ ಉಲ್ ಹಕ್ 07

ಶ್ರೇಯಸ್ ಗೋಪಾಲ್ ಎಲ್‌ಬಿಡಬ್ಲ್ಯು ಬಿ ದೀಪಕ್ ಚಾಹರ್  14

ಬಿ.ಆರ್. ಶರತ್ ಸಿ ಮಹಿಪಾಲ್ ಲೊಮ್ರೊರ್ ಬಿ ರಾಹುಲ್ ಚಾಹರ್ 04

ಕೃಷ್ಣಪ್ಪ ಗೌತಮ್ ಬಿ ರಾಹುಲ್ ಚಾಹರ್ 19

ಆರ್. ವಿನಯಕುಮಾರ್ ಔಟಾಗದೆ 83

ಅಭಿಮನ್ಯು ಮಿಥುನ್ ಬಿ ದೀಪಕ್ ಚಾಹರ್ 08

ರೋನಿತ್ ಮೋರೆ ಎಲ್‌ಬಿಡಬ್ಲ್ಯು ಬಿ ರಾಹುಲ್ ಚಾಹರ್ 10

 ಇತರೆ: 13 (ಬೈ 8, ಲೆಗ್‌ಬೈ 5)

ವಿಕೆಟ್ ಪತನ: 1–17 (ನಿಶ್ಚಲ್ ; 8.3), 2–61 (ಸಮರ್ಥ್; 21.5), 3–76 (ಕರುಣ್; 26.6), 4–90 (ಮನೀಷ್; 28.5), 5–119 (ಸಿದ್ಧಾರ್ಥ್; 40.1) , 6–124 (ಶರತ್; 41.2), 7–152 (ಗೌತಮ್; 51.1), 8–155 (ಶ್ರೇಯಸ್;  51.5), 9–166 (ಮಿಥುನ್; 56.3), 10–263 (ರೋನಿತ್; 87.4)

ಬೌಲಿಂಗ್

ದೀಪಕ್ ಚಾಹರ್ 16–2–62–2, ಅನಿಕೇತ್ ಚೌಧರಿ 20–5–37–0,  ರಾಹುಲ್ ಚಾಹರ್ 26.1–4–93–5, ತನ್ವೀರ್ ಉಲ್ ಹಕ್ 20–3–50–3, ಮಹಿಪಾಲ್ ಲೊಮ್ರೊರ್ 5–1–8–0.

ಎರಡನೇ ಇನಿಂಗ್ಸ್

ರಾಜಸ್ಥಾನ

ವಿಕೆಟ್ ನಷ್ಟವಿಲ್ಲದೇ 11 (3 ಓವರ್‌ಗಳಲ್ಲಿ)

ಅಮಿತ್ ಗೌತಮ್ ಔಟಾಗದೆ 11

ಚೇತನ್ ಬಿಷ್ಠ್  ಔಟಾಗದೆ 00

ಬೌಲಿಂಗ್

ಕೆ. ಗೌತಮ್ 2–0–6–0,  ಅಭಿಮನ್ಯು ಮಿಥುನ್ 1–0–5–0

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !