ಬುಧವಾರ, ಜನವರಿ 22, 2020
16 °C

ರಣಜಿ ಟ್ರೋಫಿ 2020

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

2020... ಇನ್ನು ಮೂರು ವಾರಗಳು ಕಳೆದರೆ ಈ ಹೊಸ ಕನಸಿನ ರಥದಲ್ಲಿ ಪ್ರಯಾಣ ಆರಂಭಿಸಲಿದ್ದೇವೆ. ಈ ಶತಮಾನದ ಎರಡನೇ ದಶಕವನ್ನು ದಾಟುವತ್ತ ಕ್ರಮಿಸಲಿದ್ದೇವೆ. ಈ ಎರಡು ದಶಕಗಳ ಅವಧಿಯಲ್ಲಿ ಕ್ರಿಕೆಟ್‌ ಕ್ಷೇತ್ರ ಮಗ್ಗಲು ಬದಲಿಸಿದೆ. ಹತ್ತಾರು ಮಹತ್ವದ ಬದಲಾವಣೆಗಳು, ಹೊಸತನಗಳು, ತುಮುಲಗಳನ್ನು ಕಂಡಿವೆ. ಆದರೂ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ತನ್ನ ‘ರಾಜ ಗಾಂಭೀರ್ಯ’ವನ್ನು ಉಳಿಸಿಕೊಂಡಿದೆ.

ಇದೀಗ ಮತ್ತೊಂದು ರಣಜಿ ಋತುವಿಗೆ ಕ್ರಿಕೆಟ್ ಲೋಕ ಸಜ್ಜಾಗಿದೆ. ನಾಲ್ಕು ಗುಂಪುಗಳಲ್ಲಿ ಹಂಚಿಹೋಗಿರುವ 38 ತಂಡಗಳು ಕಣಕ್ಕಿಳಿಯುತ್ತಿವೆ. ಅದರಲ್ಲಿ ಅರ್ಧದಷ್ಟು ತಂಡಗಳಿಗೆ ರಣಜಿ ಟ್ರೋಫಿ ಗೆಲ್ಲುವ ಸಾಮರ್ಥ್ಯ ಖಂಡಿತವಾಗಿಯೂ ಇದೆ. ಇಂತಹ ಕಠಿಣ ಪೈಪೋಟಿಯಲ್ಲಿಯೂ ಕರ್ನಾಟಕ ತನ್ನ ಅಸ್ತಿತ್ವವನ್ನು ಮರಳಿ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

2000ನೇ ಇಸವಿಗಿಂತ ಮೊದಲು ರಣಜಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳೆಂದರೆ ಮುಂಬೈ, ಕರ್ನಾಟಕ, ದೆಹಲಿ ಎಂಬ ಮಾತಿತ್ತು. ಅದರಲ್ಲೂ 41 ಟ್ರೋಫಿ ಗೆದ್ದ ಹೆಗ್ಗಳಿಕೆ ಮುಂಬೈನದ್ದು. ನಂತರದ ಸ್ಥಾನ ಕರ್ನಾಟಕದ್ದು.

ಆದರೆ, ಈ ದಿಗ್ಗಜ ತಂಡಗಳನ್ನು ಹೊರತುಪಡಿಸಿ ಬೇರೆ ತಂಡಗಳೂ ಪ್ರಶಸ್ತಿ ಜಯಿಸಲು ಅರಂಭಿಸಿದ್ದು ಈ ಎರಡು ದಶಕಗಳ ಅವಧಿಯಲ್ಲಿಯೇ. 2001ರಲ್ಲಿ ಬರೋಡಾ, 2002ರಲ್ಲಿ ರೈಲ್ವೆಸ್, 2004ರಲ್ಲಿ ರೈಲ್ವೆಸ್, 2005ರಲ್ಲಿ ಉತ್ತರಪ್ರದೇಶ, 2010–11 ಮತ್ತು 2011–12ರಲ್ಲಿ ಸತತವಾಗಿ ರಾಜಸ್ಥಾನ ತಂಡಗಳು ಪ್ರಶಸ್ತಿ ಗೆದ್ದವು. ಇದರಿಂದಾಗಿ ಟೂರ್ನಿಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಕಠಿಣವಾಯಿತು.

ಆದರೆ ಈ ನಡುವೆ ಕರ್ನಾಟಕ ತಂಡವು ಹಂತಹಂತವಾಗಿ ಹರಸಾಹಸ ಪಟ್ಟು ಮತ್ತೆ ಹಳಿಗೆ ಬಂದಿದ್ದು ರೋಚಕ ಕಥೆ. 2007ರಲ್ಲಿ ನಾಕೌಟ್ ಹಂತಕ್ಕೂ ಕರ್ನಾಟಕ ತಲುಪಿರಲಿಲ್ಲ. 1998ರ ನಂತರ ರಾಜ್ಯ ತಂಡಕ್ಕೆ ರಣಜಿ ಟ್ರೋಫಿ ಒಲಿದಿರಲಿಲ್ಲ. ಮುಂಬೈ ತಂಡವು 2002, 2003, 2006, 2008, 2009, 2012ರಲ್ಲಿ ಪ್ರಶಸ್ತಿ ಗೆದ್ದು ತನ್ನ ಪರಾಕ್ರಮ ಮೆರೆದಿತ್ತು. 2009ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಕರ್ನಾಟಕ ವಿರೋಚಿತ ಸೋಲು ಅನುಭವಿಸಿತ್ತು. ಅದರ ನಂತರದ ಋತುಗಳಲ್ಲಿ ನಾಕೌಟ್ ಹಂತದಲ್ಲಿ ಎಡವಿತ್ತು. ಆದರೆ 2013ರಲ್ಲಿ ಕರ್ನಾಟಕ ತಂಡವು ಪುಟಿದೆದ್ದ ರೀತಿ ಅಮೋಘವಾದದ್ದು.

ಆ ವರ್ಷ ಆರ್.ವಿನಯಕುಮಾರ್ ಬಳಗವು ರಣಜಿ ಟ್ರೋಫಿ ಗೆದ್ದು 15 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿತ್ತು. ಅಷ್ಟೇ ಅಲ್ಲ; ಆ ವರ್ಷ ವಿಜಯ್ ಹಜಾರೆ ಟ್ರೋಫಿ, ಇರಾನಿ ಟ್ರೋಫಿಗಳನ್ನು ಜಯಿಸಿತ್ತು. ಅದರ ನಂತರದ ವರ್ಷದಲ್ಲಿಯೂ ವಿನಯ್ ಬಳಗವು ಈ ಹ್ಯಾಟ್ರಿಕ್ ವಿಜಯ ಸಾಧನೆಯನ್ನು ಮರಳಿ ಮಾಡಿತ್ತು.

ನಂತರದ ಋತುವಿನಲ್ಲಿ ಮತ್ತೊಮ್ಮೆ ರಣಜಿ ಟ್ರೋಫಿ ಜಯಿಸುವಲ್ಲಿ ಕರ್ನಾಟಕ ಸಫಲವಾಗಲಿಲ್ಲ. ಆ ವರ್ಷ ಮುಂಬೈ ಚಾಂಪಿಯನ್ ಆಯಿತು. ಆದರೆ, 2016–17ರ  ಋತುವಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಯಿತು. ಗುಜರಾತ್ ತಂಡ ಮೊಟ್ಟಮೊದಲ ಬಾರಿಗೆ ರಣಜಿ ಚಾಂಪಿಯನ್ ಆಯಿತು. ಅದೂ ಫೈನಲ್‌ನಲ್ಲಿ ಅನುಭವಿ ಮುಂಬೈಗೆ ಸೋಲುಣಿಸುವ ಮೂಲಕ!

ಆದರೆ, ಗುಜರಾತ್ ತಂಡಕ್ಕೂ ನಿರಂತರ ಜಯದ ಓಟ ಓಡಲು ಸಾಧ್ಯವಾಗಲಿಲ್ಲ. 2017–18ರಲ್ಲಿ ವಿದರ್ಭ ತಂಡದ ಅಮೋಘ ಆಟ ದೇಶದ ಗಮನ ಸೆಳೆಯಿತು. ಫೈಜ್ ಫಜಲ್ ಎಂಬ ಯುವ ನಾಯಕನ ಬಳಗ ಜಯಭೇರಿ ಬಾರಿಸಿತು. ಮುಂಬೈನಲ್ಲಿ ಆಡಿದ್ದ ‘ಹಿರಿಯಣ್ಣ’ ವಸೀಂ ಜಾಫರ್, ಕನ್ನಡಿಗ ಗಣೇಶ್ ಸತೀಶ್ ಮತ್ತು ಯುವ ವೇಗದ ಬೌಲರ್‌ ರಜನೀಶ್ ಗುರುಬಾನಿ ಅವರು ವಿದರ್ಭ ಜಯದ ರೂವಾರಿಗಳಾಗಿದ್ದರು. ದೆಹಲಿ ರನ್ನರ್ಸ್ ಅಪ್ ಆಯಿತು. ರಣಜಿ ಟ್ರೋಫಿ ಗೆಲ್ಲುವ ಗೌತಮ್ ಗಂಭೀರ್ ಕನಸು ನನಸಾಗಲಿಲ್ಲ.

ಹೋದ ವರ್ಷವೂ ವಿದರ್ಭ ತನ್ನ ಪ್ರಾಬಲ್ಯ ಮುಂದುವರಿಸಿತು. ಕೋಚ್ ಚಂದ್ರಕಾಂತ್ ಪಂಡಿತ್ ಅವರ ತಂತ್ರಗಾರಿಕೆ ವಿದರ್ಭ ಯಶಸ್ಸಿನ ಹಿಂದಿನ ಗುಟ್ಟು. ಚೇತೇಶ್ವರ್ ಪೂಜಾರ, ಜೈದೇವ್ ಉನದ್ಕತ್ ಅವರ ಸೌರಾಷ್ಟ್ರ ತಂಡವು ರನ್ನರ್ಸ್ ಅಪ್ ಆಯಿತು.

ಅದೇ ಟೂರ್ನಿಯ ಸೆಮಿಫೈನಲ್ ಬೆಂಗಳೂರಿನಲ್ಲಿ ನಡೆದಿತ್ತು. ಆ ದಿನ ಅಂಪೈರ್ ಕೊಟ್ಟ ತಪ್ಪು ನಿರ್ಣಯ ಚೇತೇಶ್ವರ್ ಪೂಜಾರಗೆ ವರದಾನವಾಗಿತ್ತು. ಕರ್ನಾಟಕಕ್ಕೆ ಮುಳುವಾಗಿತ್ತು. ಇಲ್ಲದಿದ್ದರೆ ಫೈನಲ್‌ನಲ್ಲಿ ಕರ್ನಾಟಕ ಇರುತ್ತಿತ್ತು.

ಏಳು ವರ್ಷದಲ್ಲಿ ದಶ ಸಾಧನೆ

ಕರ್ನಾಟಕ ತಂಡಕ್ಕೆ ಪುಟಿದೇಳುವ ಗುಣ ಹಳೆಯದು. ಇಲ್ಲಿಯ ಕ್ರಿಕೆಟ್ ಸೆಲೆಯಿಂದ ಉಕ್ಕಿಬರುವ ಪ್ರತಿಭೆಗಳು ರಾಜ್ಯದ ಕೀರ್ತಿಪತಾಕೆಯನ್ನು ಸದಾ ಉತ್ತುಂಗಕ್ಕೆ ಹಾರಿಸುವತ್ತ ಪ್ರಯತ್ನಿಸುತ್ತವೆ. ಅದರ ಫಲವಾಗಿ ಕರ್ನಾಟಕ ಇವತ್ತು ದೇಶದ ಕ್ರಿಕೆಟ್‌ನ ‘ಶಕ್ತಿಕೇಂದ್ರ’ವಾಗಿ ಬೆಳೆದಿದೆ.

ಕಳೆದ ಏಳು ವರ್ಷಗಳ ಸಾಧನೆಯ ಪುಟಗಳನ್ನು ಒಮ್ಮೆ ತಿರುವಿಹಾಕಿ ನೋಡಿ. ದೇಶಿ ಕ್ರಿಕೆಟ್‌ನ ಮಹತ್ವದ ಟೂರ್ನಿಗಳಲ್ಲಿ ಒಟ್ಟು ಹತ್ತು ಫೈನಲ್‌ಗಳಿಗೆ ತಂಡ ಲಗ್ಗೆ ಇಟ್ಟಿದೆ. ಒಂದರಲ್ಲೂ ಸೋತಿಲ್ಲ. ಎರಡು ರಣಜಿ, ನಾಲ್ಕು ವಿಜಯ್ ಹಜಾರೆ, ಎರಡು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಎರಡು ಇರಾನಿ ಟ್ರೋಫಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಷೋಕೇಸ್‌ ಅಲಂಕರಿಸಿವೆ.

ಇದೇ ಅವಧಿಯಲ್ಲಿ ರಾಜ್ಯದ ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಮನೀಷ್ ಪಾಂಡೆ ಅವರು ಭಾರತ ತಂಡದಲ್ಲಿ ಮಿಂಚಿದ್ದಾರೆ. ಈ ಬಾರಿ ರಣಜಿ ಋತುವಿನ ಆರಂಭವೂ ಕೂಡ ಕರ್ನಾಟಕಕ್ಕೆ ವಿಭಿನ್ನ ಸವಾಲಿನದ್ದೇ ಆಗಿದೆ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಆಡಲು ತೆರಳಿರುವ ರಾಹುಲ್ ಮತ್ತು ಮನೀಷ್ ಪಾಂಡೆ ತಂಡದಲ್ಲಿಲ್ಲ. ಮನೀಷ್ ಬದಲಿಗೆ ಕರುಣ್ ನಾಯರ್ ನಾಯಕತ್ವ ವಹಿಸಿದ್ದಾರೆ. ಮಯಂಕ್ ಅಗರವಾಲ್ ಇದ್ದಾರೆಂಬ ಧೈರ್ಯ ಇದೆ.  ದೇಶಿ ಕ್ರಿಕೆಟ್‌ನಲ್ಲಿ ‘ರನ್‌ ಯಂತ್ರ’ವಾಗಿ ರೂಪುಗೊಳ್ಳುತ್ತಿರುವ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್, ಪುದುಚೇರಿ ತಂಡಕ್ಕೆ ವಲಸೆ ಹೋದ ಆರ್.ವಿನಯಕುಮಾರ್ ಜಾಗ ತುಂಬುವ ಪ್ರಯತ್ನದಲ್ಲಿರುವ ಕೌಶಿಕ್ ವಾಸುಕಿ, ರೋನಿತ್ ಮೋರೆ, ವಿಕೆಟ್‌ಕೀಪಿಂಗ್‌ನಲ್ಲಿ ಗಟ್ಟಿ ಹೆಜ್ಜೆ ಊರುವತ್ತ ಶತಪ್ರಯತ್ನ ನಡೆಸುತ್ತಿರುವ ಬಿ.ಆರ್. ಶರತ್ ಮತ್ತು ಶರತ್ ಶ್ರೀನಿವಾಸ್ ಪೈಪೋಟಿಯು ತಂಡಕ್ಕೆ ಲಾಭ ತಂದು
ಕೊಡುವ ನಿರೀಕ್ಷೆ ಇದೆ.

ಎರಡು ವರ್ಷಗಳ ನಂತರ ಕರ್ನಾಟಕ ತಂಡಕ್ಕೆ ಮರಳಿರುವ ಮಧ್ಯಮವೇಗಿ ಡೇವಿಡ್ ಮಥಾಯಿಸ್,  ಪದಾರ್ಪಣೆ ಮಾಡಲು ಸಿದ್ಧವಾಗಿರುವ ಕೆ.ಎಸ್. ದೇವಯ್ಯ ತಮ್ಮ ಛಾಪು ಮೂಡಿಸುವಂತೆ ಆಟವಾಡುವ ಭರವಸೆಯೂ ಇದೆ. ಸದ್ಯ ರಾಜ್ಯ ತಂಡದ ಬೆಂಚ್ ವಿಭಾಗ ಕೂಡ ಬಲಿಷ್ಠವಾಗಿರುವುದರಿಂದ ಕೋಚ್ ಯರೇಗೌಡ ಮತ್ತು ಬೌಲಿಂಗ್ ಕೋಚ್ ಎಸ್. ಅರವಿಂದ್ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. 

ಹೋದ ಋತುವಿನಲ್ಲಿ 11 ಜನ ಪದಾರ್ಪಣೆ ಮಾಡಿದ ದಾಖಲೆ ಇದೆ. ಈ ದಾಖಲೆ ಮುರಿಯಬಹುದೇ ಎಂಬ ಕುತೂಹಲವೂ ಇದೆ. ಡಿಸೆಂಬರ್ 9ರಿಂದ ಮಾರ್ಚ್ ಎರಡನೇ ವಾರದವರೆಗೆ ನಡೆಯುವ ರಣಜಿ ಟ್ರೋಫಿಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.⇒

ಬೇರೆ ತಂಡಗಳಲ್ಲಿ ಕರ್ನಾಟಕದವರು

ಆರ್. ವಿನಯಕುಮಾರ್ (ಪುದುಚೇರಿ)
ಸ್ಟುವರ್ಟ್ ಬಿನ್ನಿ (ನಾಗಾಲ್ಯಾಂಡ್)
ಕೆ.ಬಿ. ಪವನ್ (ಮಿಜೋರಾಂ)
ರಾಬಿನ್ ಉತ್ತಪ್ಪ (ಕೇರಳ)
ಅಮಿತ್ ವರ್ಮಾ (ಗೋವಾ)
ಗಣೇಶ್ ಸತೀಶ್ (ವಿದರ್ಭ).

ದೇಶಿ ಕ್ರಿಕೆಟ್ ಉತ್ಸವ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯೆಂದರೆ ಅದೊಂದು ದೇಶಿ ಕ್ರಿಕೆಟ್ ಉತ್ಸವ. ಕ್ರಿಕೆಟ್ ನಲ್ಲಿ ಆದ ಬದಲಾವಣೆಗಳನ್ನು ಒಳಗೊಳ್ಳುತ್ತ ಬೆಳೆದಿದೆ. ಆಟಗಾರರ ಕೌಶಲ್ಯ, ಸಾಮರ್ಥ್ಯಗಳ ನಿಜವಾದ ಪರೀಕ್ಷೆ ಆಗುವುದು ಇಲ್ಲಿಯೇ. ಹಿರಿಯ, ಅನುಭವಿ ಮತ್ತು ಹೊಸ ಆಟಗಾರರೆಲ್ಲರಿಗೂ ಸಮಾನ ವೇದಿಕೆ ಕಲ್ಪಿಸುವ ಟೂರ್ನಿ ಇದು. ಇದಕ್ಕೆ ಹೊಂದಿಕೊಂಡು ಆಡುವುದೇ ಸವಾಲು ಎನ್ನುತ್ತಾರೆ ಕರ್ನಾಟಕ ತಂಡದ ಕೋಚ್ ಯರೇಗೌಡ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು