ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಡೇವಿಡ್, ದೇವಯ್ಯಗೆ ಅವಕಾಶ

ಕರ್ನಾಟಕ ತಂಡಕ್ಕೆ ಕರುಣ್ ಸಾರಥ್ಯ
Last Updated 4 ಡಿಸೆಂಬರ್ 2019, 19:25 IST
ಅಕ್ಷರ ಗಾತ್ರ

ಬೆಂಗಳೂರು: ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡವು ಡಿಸೆಂಬರ್ 9ರಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯ ಆಡಲಿದೆ.

ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಆಡಲು ಭಾರತ ತಂಡಕ್ಕೆ ಆಯ್ಕೆಯಾಗಿರುವ ಮನೀಷ್ ಪಾಂಡೆ ಅವರ ಬದಲಿಗೆ ಕರುಣ್ ತಂಡವನ್ನು ಮುನ್ನಡೆಸುವರು. ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಕೂಡ ಭಾರತ ತಂಡದಲ್ಲಿರು
ವದರಿಂದ ರಣಜಿ ಟೂರ್ನಿಯ ಮೊದಲ ಸುತ್ತಿನಲ್ಲಿ ಅಲಭ್ಯರಾಗಲಿದ್ದಾರೆ.

ಇದರಿಂದಾಗಿ ‘ರನ್‌ ಯಂತ್ರ’ ಮಯಂಕ್ ಅಗರವಾಲ್ ತಂಡದಲ್ಲಿದ್ದಾರೆ. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿರುವ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ದೀರ್ಘ ಮಾದರಿಯ ಪರಿಣತ ಬ್ಯಾಟ್ಸ್‌ಮನ್ ಡೇಗಾನಿಶ್ಚಲ್ ತಂಡಕ್ಕೆ ಮರಳಿದ್ದಾರೆ.

ಆದರೆ, ಅನುಭವಿ ಮಧ್ಯಮವೇಗಿ ಅಭಿಮನ್ಯು ಮಿಥುನ್ ಮತ್ತು ಪ್ರಸಿದ್ಧ ಕೃಷ್ಣ ತಂಡದಲ್ಲಿ ಇಲ್ಲ. ಅವರ ಬದಲಿಗೆ ಡೇವಿಡ್ ಮಥಾಯಿಸ್ ಮತ್ತು ಕೆ.ಎನ್. ದೇವಯ್ಯ ಸ್ಥಾನ ಗಳಿಸಿದ್ದಾರೆ.

‘ಅಭಿಮನ್ಯು ಮಿಥುನ್ ಅವರ ಕಾಲಿಗೆ ಗಾಯವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಸಿದ್ಧ ಕೃಷ್ಣ ಇನ್ನೂ ಚೇತರಿಸಿಕೊಂಡಿಲ್ಲ. ಬಲಗೈ ಮಧ್ಯಮವೇಗಿ ಕೆ.ಎನ್. ದೇವಯ್ಯ ಅವರು ಇದೇ ಮೊದಲ ಸಲ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ಪ್ರಸಿದ್ಧ ಗಾಯಗೊಂಡಿದ್ದರು. ಆದ್ದರಿಂದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೂ ಅವರು ಅಲಭ್ಯರಾಗಿದ್ದರು.

ಕರ್ನಾಟಕ ಈ ದೇಶಿ ಋತುವಿನಲ್ಲಿ ಏಕದಿನ ಮತ್ತು ಟಿ20 ಮಾದರಿಗಳ ಟ್ರೋಫಿಗಳನ್ನು ಗೆದ್ದುಕೊಂಡಿದೆ.

ರಣಜಿ ಟ್ರೋಫಿಯ ಮೊದಲ ಪಂದ್ಯವನ್ನು ಕರ್ನಾಟಕವು ದಿಂಡಿಗಲ್‌ನಲ್ಲಿ ತಮಿಳುನಾಡು ವಿರುದ್ಧ ಆಡಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಂತೋಷ್ ಮೆನನ್ ಪ್ರಕಟಿಸಿರುವ ತಂಡ:ಕರುಣ್‌ ನಾಯರ್‌ (ನಾಯಕ/ವಲ್ಚರ್ಸ್‌ ಕ್ರಿಕೆಟ್ ಕ್ಲಬ್), ಶ್ರೇಯಸ್‌ ಗೋಪಾಲ್‌ (ಉಪನಾಯಕ/ಸ್ವಸ್ತಿಕ್ ಯೂನಿಯನ್ ಸಿಸಿ) ಮಯಂಕ್‌ ಅಗರವಾಲ್‌ (ಜವಾನ್ಸ್‌ ಸಿಸಿ), ದೇವದತ್ತ ಪಡಿಕ್ಕಲ್‌ (ಜವಾನ್ಸ್‌ ಸಿಸಿ), ಡೇಗಾ ನಿಶ್ಚಲ್‌ (ಜವಾಹರ್ ಸ್ಪೋರ್ಟ್ಸ್‌ ಕ್ಲಬ್), ಆರ್‌. ಸಮರ್ಥ್‌ (ಸ್ವಸ್ತಿಕ್ ಯೂನಿಯನ್ ಸಿಸಿ), ಪವನ್‌ ದೇಶಪಾಂಡೆ (ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ/ವಲ್ಚರ್ಸ್‌ಸಿಸಿ), ಕೃಷ್ಣಪ್ಪ ಗೌತಮ್‌ (ಬ್ಯಾಂಕ್ ಆಫ್ ಬರೋಡಾ/ಸ್ವಸ್ತಿಕ್ ಯೂನಿಯನ್) ಜೆ. ಸುಚಿತ್‌ (ಮೈಸೂರು ವಲಯ/ವಲ್ಚರ್ಸ್ ಸಿಸಿ) , ಬಿ.ಆರ್. ಶರತ್‌ (ವಿಕೆಟ್‌ ಕೀಪರ್‌/ಆದಾಯ ತೆರಿಗೆ ಚೆನ್ನೈ/ಮೌಂಟ್‌ ಜಾಯ್ ಸಿಸಿ), ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌/ಬೆಂಗಳೂರು ಯುನೈಟೆಡ್ ಸಿಸಿ), ರೋನಿತ್‌ ಮೋರೆ (ವಲ್ಚರ್ಸ್‌ ಸಿಸಿ), ಡೇವಿಡ್‌ ಮಥಾಯಿಸ್‌ (ಜವಾನ್ಸ್‌ ಸಿಸಿ), ಕೌಶಿಕ್‌ ವಾಸುಕಿ (ಸೆಂಟ್ರಲ್ ಎಕ್ಸೈಸ್/ಸರ್ ಸೈಯದ್ ಕ್ರಿಕೆಟರ್ಸ್‌), ಕೆ.ಎಸ್‌.ದೇವಯ್ಯ (ಜವಾಹರ್ ಸ್ಪೋರ್ಟ್ಸ್‌ ಕ್ಲಬ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT