ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಢ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ: ಮಯಂಕ್ ಮೋಹಕ ಶತಕ

ಛತ್ತೀಸಗಢಕ್ಕೆ ತಿರುಗೇಟು ನೀಡಿದ ಕರ್ನಾಟಕ; ವಿದ್ವತ್‌ಗೆ 5 ವಿಕೆಟ್; ಸಮರ್ಥ್ ಅರ್ಧಶತಕ
Last Updated 4 ಜನವರಿ 2023, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮಯಂಕ್ ಅಗರವಾಲ್ ಅವರು ಹೊಸ ವರ್ಷದಲ್ಲಿ ಆಡುತ್ತಿರುವ ತಮ್ಮ ‘ಮೊದಲ’ ರಣಜಿ ಪಂದ್ಯದಲ್ಲಿ ಚೆಂದದ ಶತಕ ದಾಖಲಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಛತ್ತೀಸಗಢ ಎದುರಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದ ಎರಡನೇ ದಿನ ಮಯಂಕ್ (ಬ್ಯಾಟಿಂಗ್ 102; 285ನಿಮಿಷ, 191ಎಸೆತ, 4x9, 6X5) ಆಟದಲ್ಲಿ ದೀರ್ಘ ಮಾದರಿ ಕ್ರಿಕೆಟ್‌ನ ತಾಳ್ಮೆ ಆಟವೂ ಇತ್ತು. ಆಗಾಗ ಟಿ20 ಕ್ರಿಕೆಟ್‌ನ ಬಿರುಸಿನ ಹೊಡೆತಗಳ ಮಿಂಚು ಕೂಡ ಹರಿಯಿತು. ಅಲ್ಲದೇ ಮಯಂಕ್ ಅವರು ಆರ್. ಸಮರ್ಥ್(81; 127ಎ, 4X11) ಜೊತೆಗೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ 163 ರನ್‌ ಸೇರಿಸುವ ಮೂಲಕ ಆತಿಥೇಯ ತಂಡದ ಹೋರಾಟಕ್ಕೆ ಬಲ ತುಂಬಿ ದರು. ಛತ್ತೀಸಗಢ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 311 ರನ್‌ ಗಳಿಗೆ ಉತ್ತರವಾಗಿ ಕರ್ನಾಟಕ 64 ಓವರ್‌ಗಳಲ್ಲಿ 1 ವಿಕೆಟ್‌ಗೆ 202 ರನ್ ಗಳಿಸಿದೆ. ಮಯಂಕ್ ಮತ್ತು ವಿಶಾಲ್ ಒಣತ್ (ಬ್ಯಾಟಿಂಗ್ 15) ಕ್ರೀಸ್‌ನಲ್ಲಿದ್ದಾರೆ.

ಭಾರತ ತಂಡಕ್ಕೆ ಮರಳುವ ಛಲದಲ್ಲಿರುವ ಮಯಂಕ್ ಅವರಿಗೆ ಇದು ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 13ನೇ ಶತಕವಾಗಿದೆ. 2021–22ರ ಸಾಲಿನಲ್ಲಿ ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು. ಅವರು ಒಟ್ಟು 85 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದಾರೆ.

‘ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮಯಂಕ್ ಅವರಿಗೆ 42ನೇ ಪಂದ್ಯ ಮತ್ತು ಏಳನೇ ಶತಕ. ಅವರು ಕಳೆದ 41 ಪಂದ್ಯಗಳಲ್ಲಿ 2855 ರನ್‌ಗಳನ್ನು ಕಲೆ ಹಾಕಿದ್ದಾರೆ’ ಎಂದು ದೇಶಿ ಕ್ರಿಕೆಟ್ ಅಂಕಿ ಸಂಖ್ಯೆ ಪರಿಣತ ಚನ್ನಗಿರಿ ಕೇಶವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ 3 ಪಂದ್ಯಗಳಲ್ಲಿ ಶತಕ ಗಳಿಸಿದ್ದ ಆರ್. ಸಮರ್ಥ್ ಮತ್ತು ಮೂರು ಅರ್ಧಶತಕ ಗಳಿಸಿದ್ದ ಮಯಂಕ್ ಛತ್ತೀಸಗಢದ ಎದುರೂ ಉಪಯುಕ್ತ ಆಟವಾಡಿದರು.

ಅದರಲ್ಲೂ ಇಡೀ ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಗಳಿಸಿದ ಬೌಲರ್ ಎಡಗೈ ಸ್ಪಿನ್ನರ್ ಅಜಯ್ ಜಾಧವ್ ಮಂಡಲ್ ಅವರನ್ನು ಹೆಚ್ಚು ದಂಡಿಸಿದರು. ಸಮರ್ಥ್ 69 ಎಸೆತಗಳಲ್ಲಿ ಮತ್ತು ಮಯಂಕ್ 90 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಇನಿಂಗ್ಸ್‌ನ 47ನೇ ಓವರ್‌ ನಲ್ಲಿ ಅಜಯ್ ಹಾಕಿದ ಎಸೆತವನ್ನು ನೇರವಾಗಿ ಹೊಡೆಯುವ ಯತ್ನದಲ್ಲಿ ಸಮರ್ಥ್ ಬೌಲರ್‌ಗೇ ಕ್ಯಾಚಿತ್ತರು. ಶತಕ ತಪ್ಪಿಸಿಕೊಂಡ ಬೇಸರದಲ್ಲಿ ಪೆವಿಲಿಯನ್‌ಗೆ ಹಿಂದಿರುಗಿದರು.

ಇದರ ನಂತರ ಮಯಂಕ್ ಆಟದ ವೇಗ ಹೆಚ್ಚಿತು. ಡ್ರೈವ್ ಮತ್ತು ಸ್ವೀಪ್‌ಗಳನ್ನು ಆಡಿದರು. ಕ್ರೀಸ್‌ನಿಂದ ಹೊರಗೆ ಬಂದು ಎಸೆತಗಳನ್ನು ಸಿಕ್ಸರ್‌ಗೆತ್ತಿದರು. ಶತಕದ ಸನಿಹ ಸಾಗಿದರು. 93 ರನ್‌ ಗಳಿಸಿದ್ದ ಸಂದರ್ಭದಲ್ಲಿ ಎರಡು ಎಸೆತಗಳಲ್ಲಿ ಕ್ರಮವಾಗಿ ಸಿಕ್ಸರ್ ಹಾಗೂ ಸಿಂಗಲ್ ಗಳಿಸಿ ಶತಕ ಪೂರೈಸಿದರು.

ವಿದ್ವತ್‌ಗೆ ಐದು ವಿಕೆಟ್: ಯುವ ಮಧ್ಯಮವೇಗಿ ವಿದ್ವತ್ ಕಾವೇರ‌ಪ್ಪ ಐದು ವಿಕೆಟ್ ಗೊಂಚಲು ಗಳಿಸಿದರು. ಮೊದಲ ದಿನ 3 ವಿಕೆಟ್ ಗಳಿಸಿದ್ದ ಅವರು 2ನೇ ದಿನದಾಟದಲ್ಲಿ ಒಂದೇ ಓವರ್‌ನಲ್ಲಿ ಶಶಾಂಕ್ ಸಿಂಗ್ ಮತ್ತು ಅಜಯ್ ಮಂಡಲ್ ವಿಕೆಟ್ ಕಬಳಿಸಿದರು. ಹ್ಯಾಟ್ರಿಕ್ ಆಸೆ ಮಾತ್ರ ಈಡೇರಲಿಲ್ಲ. ಮಂಗಳವಾರ ದಿನದಾಟದ ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ಆಶುತೋಷ್ ಸಿಂಗ್ ಸೇರಿದಂತೆ ಮೂರು ವಿಕೆಟ್‌ ಕಿತ್ತ ವಾಸುಕಿ ಕೌಶಿಕ್ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT