ಶುಕ್ರವಾರ, ಡಿಸೆಂಬರ್ 6, 2019
17 °C
ರಣಜಿ ಟ್ರೋಫಿ ಟೂರ್ನಿಗಾಗಿ; ಕರ್ನಾಟಕ ತಂಡದ ಅಭ್ಯಾಸ ಇಂದಿನಿಂದ

’ಶ್ವೇತ’ ಒಲಿದಾಯಿತು; ಈಗ ‘ಕೆಂಪು; ಚೆಂಡಿನ ಸರದಿ!

Published:
Updated:
Prajavani

ಬೆಂಗಳೂರು: ಮೂರು ದಿನಗಳ ಹಿಂದೆ ಸೂರತ್ ಅಂಗಳದಲ್ಲಿ  ಸುಮಾರು ಇಪ್ಪತ್ತೈದು ಸಾವಿರ ಪ್ರೇಕ್ಷಕರ ನಡುವೆ ರೋಚಕ ಫೈನಲ್‌ ಗೆದ್ದು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ ಈಗ ಮತ್ತೊಂದು ಸವಾಲಿಗೆ ಸಿದ್ಧವಾಗುತ್ತಿದೆ.

ಇದೇ 9ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ಬುಧವಾರ ಕರ್ನಾಟಕ ಸಂಭವನೀಯರ ತಂಡವು ಅಭ್ಯಾಸ ಆರಂಭಿಸಲಿದೆ.

ಕರ್ನಾಟಕ ತಂಡವು ಹೋದ ಮೂರು ತಿಂಗಳಲ್ಲಿ  ದೇಶಿ ಕ್ರಿಕೆಟ್‌ನಲ್ಲಿ ಏಕದಿನ ಮತ್ತು ಟ್ವೆಂಟಿ –20 ಟ್ರೋಫಿಗಳನ್ನು ಗೆದ್ದುಕೊಂಡಿದೆ. ಸತತವಾಗಿ ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಆಡಿದ್ದರಿಂದ ಇದೀಗ ಕೆಂಪು ಚೆಂಡಿನ ಆಟಕ್ಕೆ ಕುದುರಿಕೊಳ್ಳುವ ಸವಾಲು ಎದುರಾಗಿದೆ. ಅದರಲ್ಲೂ ರಣಜಿ ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ಮನೀಷ್ ಪಾಂಡೆ ಮತ್ತು ಕೆ.ಎಲ್. ರಾಹುಲ್ ಅವರು ಲಭ್ಯರಾಗುತ್ತಿಲ್ಲ. ಡಿಸೆಂಬರ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ಕ್ರಿಕೆಟ್ ಸರಣಿಯಲ್ಲಿ ಅವರು ಆಡಲಿದ್ದಾರೆ. ವಿಂಡೀಸ್ ನಂತರ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತದಲ್ಲಿ ನಿಗದಿಯ ಓವರ್‌ಗಳ  ಸರಣಿ ಆಡಲು ಬರುತ್ತಿವೆ. ಇದರಿಂದಾಗಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿರುವುದು ಅನುಮಾನ. 

ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವು 1 ರನ್‌ ಅಂತರದಿಂದ ರೋಚಕ ಜಯ ಸಾಧಿಸಲು ಇವರಿಬ್ಬರ ಆಟವೂ ಮಹತ್ವದ ಪಾತ್ರ ವಹಿಸಿತ್ತು. ಮನೀಷ್ ಪಾಂಡೆ ಅರ್ಧಶತಕ ಗಳಿಸಿ ತಂಡವು ತಮಿಳುನಾಡಿಗೆ ಸವಾಲಿನ ಗುರಿ  (180 ರನ್) ನೀಡಲು ನೆರವಾಗಿದ್ದರು.  ರಾಹುಲ್ ಕೂಡ ಬ್ಯಾಟಿಂಗ್‌ ನಲ್ಲಿ ಮಿಂಚಿದ್ದರು. ಅಲ್ಲದೇ ವಿಕೆಟ್‌ಕೀಪಿಂಗ್‌ನಲ್ಲಿಯೂ ಮಿಂಚಿದ್ದರು. ತಮಿಳುನಾಡು ನಾಯಕ ದಿನೇಶ್ ಕಾರ್ತಿಕ್ ಅವರನ್ನು ಮಿಂಚಿನ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದರು. ಕೊನೆಯ ಓವರ್‌ನಲ್ಲಿ ಕೃಷ್ಣಪ್ಪ ಗೌತಮ್‌ ಬೌಲಿಂಗ್‌ನಲ್ಲಿ ಬೌಂಡರಿ ಹೊಡೆಯಲು ಯತ್ನಿಸಿದ್ದ ವಿಜಯಶಂಕರ್ ಅವರನ್ನು ರನ್‌ಔಟ್ ಮಾಡುವಲ್ಲಿ ಮನೀಷ್ ಥ್ರೋ ಮತ್ತು ರಾಹುಲ್ ಕೀಪಿಂಗ್ ಯಶಸ್ವಿಯಾಗಿತ್ತು.

ಆದರೆ, ರನ್‌ ಯಂತ್ರ ಮಯಂಕ್ ಅಗರವಾಲ್ ಅವರು ರಣಜಿ ಟೂರ್ನಿಯಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅವರೊಂದಿಗೆ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಕೂಡ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಅವರಾಗಿದ್ದಾರೆ. ಕರುಣ್ ನಾಯರ್ ಅವರಿಗೆ ನಾಯಕತ್ವದ ಹೊಣೆ ಲಭಿಸಬಹುದು. ಕೆಲವು ಯುವ ಆಟಗಾರರೂ ಅಂತಿಮ 16ರ ತಂಡದಲ್ಲಿ ಸ್ಥಾನ ಪಡೆಯಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು