ಬುಧವಾರ, ಜನವರಿ 29, 2020
31 °C

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಇಂದಿನಿಂದ: ಕರ್ನಾಟಕ–ತಮಿಳುನಾಡು ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿಂಡಿಗಲ್ (ತಮಿಳುನಾಡು): ಮೂರು ತಿಂಗಳಲ್ಲಿ ಮೂರು ಸಲ ಮುಖಾಮುಖಿಯಾಗಿರುವ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮತ್ತೆ ಸೋಮವಾರ ಸೆಣಸಾಟಕ್ಕೆ ಇಳಿಯಲಿವೆ.

ದಿಂಡಿಗಲ್‌ನ ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ  ಅರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಆಡಲಿವೆ.  ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್, ಹೋದ ತಿಂಗಳು ಸೂರತ್‌ನಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಮತ್ತು ಫೈನಲ್ ಪಂದ್ಯಗಳಲ್ಲಿ ತಮಿಳುನಾಡು ತಂಡವು ಕರ್ನಾಟಕದ ಎದುರು ಆಡಿತ್ತು. ಈ ಎಲ್ಲ ಪಂದ್ಯಗಳಲ್ಲಿಯೂ ಸೋತಿತ್ತು.

ಇದೀಗ ದೀರ್ಘ ಮಾದರಿಯ ಟೂರ್ನಿಯ ಪಂದ್ಯವನ್ನು ತನ್ನ ತವರಿನಲ್ಲಿ ಆಡಲಿದೆ. ಈ ಹಿಂದಿನ ಎಲ್ಲ ಸೋಲುಗಳಿಗೂ ಮುಯ್ಯಿ ತೀರಿಸಿಕೊಳ್ಳಲು ಸಿದ್ಧವಾಗಿದೆ. ಆಲ್‌ರೌಂಡರ್ ವಿಜಯಶಂಕರ್ ಆತಿಥೇಯರ ಬಳಗಕ್ಕೆ ನಾಯಕತ್ವ ವಹಿಸಲಿದ್ದಾರೆ.

ಭಾರತ ತಂಡದಲ್ಲಿ ಆಡಲು ತೆರಳಿರುವ ಮನೀಷ್ ಪಾಂಡೆ ಬದಲಿಗೆ ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಅವರ ಮುಂದೆ ಎರಡು ಪ್ರಮುಖ ಸವಾಲುಗಳಿವೆ. ಮೊದಲನೇಯದ್ದು ತಮಿಳುನಾಡಿನ ವಿರುದ್ಧ ಜಯದ ಲಯವನ್ನು ಮುಂದುವರಿಸುವುದು. ಇನ್ನೊಂದು ತಮ್ಮ ವೈಯಕ್ತಿಕ ಫಾರ್ಮ್‌ ಕಂಡುಕೊಳ್ಳುವುದು.  ಕಳೆದ ಒಂದೆರಡು ವರ್ಷಗಳಿಂದ ಅವರ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಹರಿದಿಲ್ಲ. ಆದ್ದರಿಂದ ಭಾರತ ತಂಡದ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿಯೂ ವಿಫಲರಾಗಿದ್ಧಾರೆ. ಟೆಸ್ಟ್ ಕ್ರಿಕೆಟ್‌ ಮತ್ತು ರಣಜಿ ಕ್ರಿಕೆಟ್ ಎರಡರಲ್ಲೂ ತ್ರಿಶತಕ ಬಾರಿಸಿದರು  ಕರುಣ್ ಈ ಟೂರ್ನಿಯಲ್ಲಿ ತಮ್ಮ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಒಂದೊಮ್ಮೆ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡಿದರೆ ಕರ್ನಾಟಕದ ಮಧ್ಯಮ ಕ್ರಮಾಂಕಕ್ಕೆ ಆನೆ ಬಲ ಬರುವುದು ಖಚಿತ.

ದೇಶಿ ಏಕದಿನ ಮತ್ತು ಚುಟುಕು ಟೂರ್ನಿಗಳಲ್ಲಿ ಅತಿ ರನ್‌ಗಳನ್ನು ಹೊಡೆದು ಗಮನ ಸೆಳೆದಿರುವ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್  ಇಲ್ಲಿಯೂ ಇನಿಂಗ್ಸ್‌ ಆರಂಭಿಸುವುದು ಖಚಿತ. ಆದರೆ, ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ದೇವದತ್ತ ಜೊತೆಗೆ ಮಯಂಕ್ ಅಗರವಾಲ್ ಇನಿಂಗ್ಸ್ ಆರಂಭಿಸಬಹುದು. ಆರ್‌. ಸಮರ್ಥ್ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದರೆ, ಮಯಂಕ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಸಮರ್ಥ್‌ಗೆ ಅವಕಾಶ ಕೊಡದಿದ್ದರೆ, ತಾಳ್ಮೆಯ ಬ್ಯಾಟ್ಸ್‌ಮನ್ ಡೇಗಾ ನಿಶ್ಚಲ್ ಕಣಕ್ಕಿಳಿಯುವುದು ಖಚಿತ. ಹೋದ ವರ್ಷದ ’ಹೀರೊ’ ಕೆ.ವಿ. ಸಿದ್ಧಾರ್ಥ್ ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಸಮರ್ಥ್ ಮತ್ತು ನಿಶ್ಚಲ್ ಇಬ್ಬರೂ ಅವಕಾಶ ಗಿಟ್ಟಿಸಿದರೆ ಅಚ್ಚರಿಯೇನಿಲ್ಲ. 

ಮಧ್ಯ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್ ಬಿ.ಆರ್. ಶರತ್, ಪವನ್ ದೇಶಪಾಂಡೆ, ಆಲ್‌ರೌಂಡರ್ ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಅವರು ರನ್‌ಗಳನ್ನು ಹರಿಸುವ ಸಮರ್ಥರು. ಅನುಭವಿ ಅಭಿಮನ್ಯು ಮಿಥುನ್ ಮತ್ತು ಪ್ರಸಿದ್ಧಕೃಷ್ಣ ಅವರ ಅನುಪಸ್ಥಿತಿಯಲ್ಲಿ ರೋನಿತ್ ಮೋರೆ ಬೌಲಿಂಗ್ ಪಡೆಯ ಸಾರಥ್ಯ ವಹಿಸುವರು. ಕೌಶಿಕ್ ವಾಸುಕಿ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚು. ಇಲ್ಲಿಯ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಿದ ಉದಾಹರಣೆಗಳು ಹೆಚ್ಚಿವೆ. ಆದ್ದರಿಂದ ಶ್ರೇಯಸ್, ‘ನವವಿವಾಹಿತ’ ಗೌತಮ್ ಜೊತೆಗೆ ಎಡಗೈ ಸ್ಪಿನ್ನರ್ ಜೆ. ಸುಚಿತ್‌ಗೆ ಅವಕಾಶ ಸಿಗಬಹುದು.

ಆತಿಥೇಯ ತಂಡದ ಬ್ಯಾಟಿಂಗ್‌ನಲ್ಲಿ  ದಿನೇಶ್ ಕಾರ್ತಿಕ್, ಅಭಿನವ್ ಮುಕುಂ ದ್, ಬಾಬಾ ಅಪರಾಜಿತ್, ಮುರಳಿ ವಿಜಯ್ ಮತ್ತು ಶಾರೂಕ್ ಖಾನ್ ಅವರ ಪಾತ್ರವೇ ದೊಡ್ಡದು. ಆದರೆ, ಆಲ್‌ರೌಂಡರ್ ವಿಜಯಶಂಕರ್, ರವಿಚಂದ್ರನ್ ಅಶ್ವಿನ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಮಹತ್ವದ ಕಾಣಿಕೆ ನೀಡಬಲ್ಲರು. ಮುರುಗನ್ ಅಶ್ವಿನ್, ನಟರಾಜನ್ ಅವರು ಬೌಲಿಂಗ್‌ನಲ್ಲಿ ಬ್ಯಾಟಿಂಗ್‌ ಪಡೆಗೆ ಸವಾಲೊಡ್ಡಬಲ್ಲರು.

ತಂಡಗಳು

ಕರ್ನಾಟಕ: ಕರುಣ್ ನಾಯರ್ (ನಾಯಕ), ಮಯಂಕ್ ಅಗರವಾಲ್, ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ಡೇಗಾ ನಿಶ್ಚಲ್, ಪವನ್ ದೇಶಪಾಂಡೆ, ಕೃಷ್ಣಪ್ಪ ಗೌತಮ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಶರತ್ ಶ್ರೀನಿವಾಸ್, ರೋಹಿತ್ ಮೋರೆ, ಶ್ರೇಯಸ್ ಗೋಪಾಲ್, ಜೆ. ಸುಚಿತ್, ಡೇವಿಡ್ ಮಥಾಯಿಸ್, ವಿ. ಕೌಶಿಕ್, ದೇವಯ್ಯ.

ತಮಿಳುನಾಡು: ವಿಜಯಶಂಕರ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮುರಳಿ ವಿಜಯ್, ಅಭಿನವ್ ಮುಕುಂದ್, ಬಾಬಾ ಅಪರಾಜಿತ್, ಅಭಿಷೇಕ್ ತನ್ವರ್, ರವಿಶ್ರೀನಿವಾಸನ್ ಸಾಯಿಕಿಶೋರ್, ಕೃಷ್ಣಮೂರ್ತಿ ವಿಘ್ನೇಶ್, ಆರ್. ಅಶ್ವಿನ್, ಮುರುಗನ್ ಅಶ್ವಿನ್, ಟಿ. ನಟರಾಜನ್, ಶಾರೂಕ್ ಖಾನ್, ಎನ್. ಜಗದೀಶನ್, ಕೆ. ಮುಕುಂದ್, ಮಣಿಮಾರನ್ ಸಿದ್ಧಾರ್ಥ್.

ಪಂದ್ಯ ಆರಂಭ: ಬೆಳಿಗ್ಗೆ 9ರಿಂದ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು