ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಬಿದ್ದ ಅಂಗಣದಲ್ಲೇ ಗೆದ್ದ ಕೋಚ್ ಚಂದ್ರಕಾಂತ್‌ ಪಂಡಿತ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಪ್ರದೇಶ ಕೋಚ್ ಚಂದ್ರಕಾಂತ್‌ ಸಂಭ್ರಮ
Last Updated 26 ಜೂನ್ 2022, 21:09 IST
ಅಕ್ಷರ ಗಾತ್ರ

ಬೆಂಗಳೂರು: ಭಾನುವಾರ ಮಧ್ಯಾಹ್ನ ಚಿನ್ನಸ್ವಾಮಿ ಕ್ರೀಡಾಂಗಣದ ಡಗ್‌ಔಟ್‌ನಲ್ಲಿದ್ದ ಮಧ್ಯಪ್ರದೇಶ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಕಂಗಳಿಂದ ಆನಂದಭಾಷ್ಪ ಧಾರೆಯಾಗಿ ಹರಿದಿತ್ತು.

ಖಡಕ್ ಕೋಚ್ ಎಂದೇ ಕರೆಸಿಕೊಳ್ಳುವ ‘ಚಂದು ಸರ್’ ಭಾವುಕರಾಗಲು ಕಾರಣವೂ ಇದೆ. 23 ವರ್ಷಗಳ ಹಿಂದೆ ಮಧ್ಯಪ್ರದೇಶ ತಂಡದ ನಾಯಕರಾಗಿದ್ದ ಪಂಡಿತ್ ಇದೇ ಕ್ರೀಡಾಂಗಣದಲ್ಲಿ ಸುನೀಲ್ ಜೋಶಿ ನಾಯಕತ್ವದ ಕರ್ನಾಟಕದ ಎದುರು ಸೋಲುಂಡಿತ್ತು. ಅದಾದ ನಂತರ ರಣಜಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವು ಈಗಲೇ ಫೈನಲ್ ಪ್ರವೇಶಿಸಿದ್ದು.

ನಾಕೌಟ್‌ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ ಎಂದು ಗೊತ್ತಾದಗಿನಿಂದಲೇ ಪಂಡಿತ್ ಮನಸಲ್ಲಿ ಛಲ ಹರಳುಗಟ್ಟಿತ್ತು. ಬಿದ್ದ ಅಂಗಳದಲ್ಲಿ ಪುಟಿದೇಳುವ ಗಟ್ಟಿ ನಿರ್ಧಾರ ಅವರದ್ದಾಗಿತ್ತು. ಅದಕ್ಕೆ ತಕ್ಕಂತೆ ಆದಿತ್ಯ ಶ್ರೀವಾಸ್ತವ ನಾಯಕತ್ವದ ಬಳಗವೂ ಅಮೋಘ ಆಟ ಆಡಿತು.

ಫೈನಲ್‌ನಲ್ಲಿ 41 ಬಾರಿಯ ಚಾಂಪಿಯನ್ ಮುಂಬೈನ ಬಲಾಢ್ಯ ಸವಾಲನ್ನು ಕೂಡ ತಾಳ್ಮೆ ಮತ್ತು ಯೋಜನಾಬದ್ಧ ಆಟದಿಂದ ಮೆಟ್ಟಿನಿಂತು ಗೆದ್ದಿತು. ಮೂಲತಃ ಮುಂಬೈನ ಪಂಡಿತ್‌ ಅವರ ಯೋಜನೆ ಮತ್ತು ಬಹುವರ್ಷಗಳ ಆಸೆ ಈಡೇರಿತು. 1998–99ರಲ್ಲಿ ಇಲ್ಲಿ ನಡೆದಿದ್ದ ಫೈನಲ್‌ನಲ್ಲಿ 247 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮಧ್ಯಪ್ರದೇಶಕ್ಕೆ ಕರ್ನಾಟಕದ ಸಾಂದರ್ಭಿಕ ಬೌಲರ್ ವಿಜಯ್ ಭಾರದ್ವಾಜ್ (24ಕ್ಕೆ6) ಅಡ್ಡಗೋಡೆಯಾಗಿ ನಿಂತರು. ಅಮೋಘ ಬೌಲಿಂಗ್ ಮೂಲಕ ಕರ್ನಾಟಕಕ್ಕೆ ಜಯ ತಂದುಕೊಟ್ಟರು.ಮೊದಲ ಇನಿಂಗ್ಸ್‌ನಲ್ಲಿ ವೇಗಿ ದೊಡ್ಡಗಣೇಶ್ ಕೂಡ ಐದು ವಿಕೆಟ್ ಗೊಂಚಲು ಗಳಿಸಿದ್ದರು.

‘ಅಂದು ಇಲ್ಲಿಯೇ ನನ್ನ ತಂಡ ಸೋತಿತ್ತು. ಆಗಿನಿಂದಲೂ ಮಧ್ಯಪ್ರದೇಶ ತಂಡಕ್ಕೆ ಕಾಣಿಕೆ ಕೊಡುವ ಛಲ ಇತ್ತು. ಇವತ್ತು ಕಾಲ ಕೂಡಿಬಂತು. ಅದೃಷ್ಟ, ಶ್ರಮ ಮತ್ತು ತಂಡದ ಆಟಗಾರರ ಪರಿಪೂರ್ಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ’ ಎಂದು 60 ವರ್ಷದ ಪಂಡಿತ್ ಸಂತಸ ಹಂಚಿಕೊಂಡರು.

ವಿಶೇಷವೆಂದರೆ; ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಾಗಿರುವ ಸುನೀಲ್ ಜೋಶಿ ಈ ಪಂದ್ಯ ವೀಕ್ಷಿಸಿದರು. ಪಂದ್ಯದ ನಂತರ ಪಂಡಿತ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಭಾರತ ತಂಡದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ಪಂಡಿತ್, ಮುಂಬೈ ಮತ್ತು ಮಧ್ಯಪ್ರದೇಶ ತಂಡಗಳನ್ನು ದೇಶಿ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದಾರೆ. ಕೋಚ್ ಆಗಿಯೇ ಅವರು ಹೆಚ್ಚು ಯಶಸ್ವಿಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂಬೈ ಮೂರು ಸಲ, ವಿದರ್ಭ ಎರಡು ಬಾರಿ ಮತ್ತು ಈಗ ಮಧ್ಯಪ್ರದೇಶ ಮೊದಲ ಬಾರಿ ಚಾಂಪಿಯನ್ ಆಗಿದೆ.

ಅವರ ಯಶಸ್ಸಿನ ಹಿಂದಿರುವ ಗುಟ್ಟಿನ ಬಗ್ಗೆ ಕೇಳಿದಾಗ, ‘ಈ ರಹಸ್ಯ ನನಗೆ ನಿಜಕ್ಕೂ ಗೊತ್ತಿಲ್ಲ. ದೇವರನ್ನು ಅಪಾರವಾಗಿ ನಂಬುತ್ತೇನೆ. ಆಟದ ಬಗ್ಗೆ ಪ್ರೀತಿಯಿದೆ. ಎಂದಿಗೂ ಕ್ರಿಕೆಟ್‌ಗಿಂತ ದೊಡ್ಡವನೆಂದು ಭಾವಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT