ಶನಿವಾರ, ಏಪ್ರಿಲ್ 1, 2023
32 °C
ರಣಜಿ ಕ್ರಿಕೆಟ್‌: ಮಯಂಕ್‌ ಬಳಗಕ್ಕೆ ಗೆಲುವಿನ ವಿಶ್ವಾಸ

ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ ಜಾರ್ಖಂಡ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮ್ಶೆಡ್‌ಪುರ: ನಾಕೌಟ್‌ ಹಂತದಲ್ಲಿ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿರುವ ಕರ್ನಾಟಕ ತಂಡ, ಮಂಗಳವಾರ ಇಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜಾರ್ಖಂಡ್‌ ತಂಡದ ಸವಾಲು ಎದುರಿಸಲಿದೆ.

ಕೀನನ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಮಯಂಕ್‌ ಅಗರವಾಲ್‌ ಬಳಗದ ಗುರಿ. ಕರ್ನಾಟಕ ತಂಡ ಆರು ಪಂದ್ಯಗಳಿಂದ 29 ಪಾಯಿಂಟ್ಸ್‌ ಗಳಿಸಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

23 ಪಾಯಿಂಟ್ಸ್‌ ಹೊಂದಿರುವ ಜಾರ್ಖಂಡ್‌ ಎರಡನೇ ಸ್ಥಾನದಲ್ಲಿದೆ. ಕೇರಳ ಮತ್ತು ರಾಜಸ್ತಾನ ತಲಾ 20 ಪಾಯಿಂಟ್ಸ್‌ ಹೊಂದಿವೆ. ಗೋವಾ ತಂಡ 18 ಅಂಕಗಳನ್ನು ಗಳಿಸಿದೆ. ಮಂಗಳವಾರ ಆರಂಭವಾಗುವ ‘ಸಿ’ ಗುಂ‍‍ಪಿನ ಇತರ ಪಂದ್ಯಗಳಲ್ಲಿ ಕೇರಳ– ಪುದುಚೇರಿ, ರಾಜಸ್ಥಾನ– ಸರ್ವಿಸಸ್‌ ಮತ್ತು ಗೋವಾ– ಛತ್ತೀಸ್‌ಗಢ ತಂಡಗಳು ಎದುರಾಗಲಿವೆ.

ಕರ್ನಾಟಕದ ಬಳಿಕ ಎರಡನೇ ಸ್ಥಾನ ಪಡೆದು ನಾಕೌಟ್‌ ಹಂತ ಪ್ರವೇಶಿಸಲು ನಾಲ್ಕು ತಂಡಗಳ ನಡುವೆ ಪೈಪೋಟಿ ಇದೆ. ಆದ್ದರಿಂದ ಎರಡನೇ ಸ್ಥಾನ ಉಳಿಸಿಕೊಳ್ಳಲು, ಕರ್ನಾಟಕದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸವಾಲು ಜಾರ್ಖಂಡ್‌ ಮುಂದಿದೆ.

ಆಟಗಾರರ ‘ಕಾರ್ಯಭಾರ ನಿರ್ವಹಣೆ’ ಭಾಗವಾಗಿ ಕರ್ನಾಟಕ ತಂಡದ ಆಡಳಿತವು ಕೆಲವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಕೇರಳ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್‌ ವಿದ್ವತ್‌ ಕಾವೇರಪ್ಪ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯದಲ್ಲಿ ಇನ್ನೊಬ್ಬ ವೇಗಿಗೆ ವಿಶ್ರಾಂತಿ ನೀಡಿ, ರೋನಿತ್‌ ಮೋರೆ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. 6 ಪಂದ್ಯಗಳಿಂದ 27 ವಿಕೆಟ್‌ ಪಡೆದಿರುವ ವೈಶಾಖ ವಿಜಯಕುಮಾರ್‌ ಅವರು ಈ ಋತುವಿನಲ್ಲಿ ಕರ್ನಾಟಕದ ಅತ್ಯಂತ ಯಶಸ್ವಿ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ. ಅವರಿಗೆ ವಿಶ್ರಾಂತಿ ನೀಡಿದರೆ ವಿ.ಕೌಶಿಕ್‌, ವಿದ್ವತ್‌ ಮತ್ತು ಮೋರೆ ಅವರು ಜಾರ್ಖಂಡ್‌ ವಿರುದ್ಧ ಆಡಲಿದ್ದಾರೆ.

ಕೆ.ಗೌತಮ್‌ ಸೇರಿದಂತೆ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲು ನಿರ್ಧರಿಸಿದರೆ, ಶುಭಾಂಗ್‌ ಹೆಗ್ಡೆ ಮತ್ತು ಶ್ರೇಯಸ್‌ ಗೋಪಾಲ್‌ ಅವರಲ್ಲೊಬ್ಬರು ಅಂತಿಮ ಇಲೆವೆನ್‌ನಿಂದ ಹೊರಬೀಳಲಿದ್ದಾರೆ.

ಜಾರ್ಖಂಡ್‌ ತಂಡ ಸ್ಪಿನ್ನರ್‌ಗಳಾದ ಶಹಬಾಜ್‌ ನದೀಮ್‌ ಮತ್ತು ಅನುಕೂಲ್‌ ರಾಯ್‌ ಅವರನ್ನು ನೆಚ್ಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು