ರಣಜಿ ಕ್ರಿಕೆಟ್ ಟೂರ್ನಿ: ರೋಚಕ ಪಂದ್ಯದಲ್ಲಿ ಬರೋಡಗೆ ಮಣಿದ ಕರ್ನಾಟಕ

7
ಬೌಲರ್‌ಗಳ ಸಮರ್ಥ ದಾಳಿಗೆ ಸಿಗದ ಫಲ; ಎರಡು ವಿಕೆಟ್‌ಗಳ ಸೋಲು

ರಣಜಿ ಕ್ರಿಕೆಟ್ ಟೂರ್ನಿ: ರೋಚಕ ಪಂದ್ಯದಲ್ಲಿ ಬರೋಡಗೆ ಮಣಿದ ಕರ್ನಾಟಕ

Published:
Updated:
Prajavani

ವಡೋದರ: ಅತ್ಯಂತ ರೋಮಾಂಚಕಾರಿ ಪಂದ್ಯದ ಕೊನೆಯಲ್ಲಿ ಕರ್ನಾಟಕದ ತಂಡ ಸೋಲಿಗೆ ಶರಣಾಯಿತು. ಇಲ್ಲಿನ ಮೋತಿಬಾಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್ ‘ಎ’ ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ ಬರೋಡ ತಂಡಕ್ಕೆ ಎರಡು ವಿಕೆಟ್‌ಗಳಿಂದ ಮಣಿಯಿತು.

ಮೊದಲ ಇನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಎರಡನೇ ಇನಿಂಗ್ಸ್‌ನಲ್ಲೂ ನಿರೀಕ್ಷೆಗೆ ತಕ್ಕ ಆಟ ಆಡಲಿಲ್ಲ. ಕೆ.ವಿ.ಸಿದ್ಧಾರ್ಥ್‌ ಮತ್ತು ನಾಯಕ ಮನೀಷ್ ಪಾಂಡೆ ಅವರ ಅರ್ಧಶತಕಗಳ ಬಲದಿಂದ 220 ರನ್‌ ಗಳಿಸಿದ್ದ ತಂಡ ಎದುರಾಳಿಗಳ ಜಯಕ್ಕೆ 110 ರನ್‌ಗಳ ಗುರಿ ನೀಡಿತ್ತು.

ಈ ಮೊತ್ತವನ್ನು ಗಳಿಸಲು ಬರೋಡ ಪರದಾಡಿತು. ಇದಕ್ಕೆ ಕಾರಣವಾದದ್ದು ಮಧ್ಯಮ ವೇಗಿಗಳಾದ ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ ಮತ್ತು ಲೆಗ್‌ ಸ್ಪಿನ್ನರ್‌ ಶ್ರೇಯಸ್ ಗೋಪಾಲ್‌ ಅವರ ದಾಳಿ. ಬ್ಯಾಟ್ಸ್‌ಮನ್‌ಗಳನ್ನು ಸತತವಾಗಿ ಕಾಡಿದ ಈ ಮೂವರು ದಿನದ ಕೊನೆಯ ಅವಧಿಯಲ್ಲಿ ಪಂದ್ಯಕ್ಕೆ ರೋಚಕ ತಿರುವು ತಂದುಕೊಟ್ಟರು.

10 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ ಬರೋಡ 17ನೇ ಓವರ್‌ನಲ್ಲಿ 73ಕ್ಕೆ ಐದು ವಿಕೆಟ್ ಕಳೆದುಕೊಂಡು ಸುಲಭ ಜಯದತ್ತ ಹೆಜ್ಜೆ ಹಾಕಿತ್ತು. ಆದರೆ 90 ರನ್‌ ಗಳಿಸುವಷ್ಟರಲ್ಲಿ ತಂಡದ ಎಂಟು ವಿಕೆಟ್‌ಗಳು ಉರುಳಿದವು. ಈ ಸಂದರ್ಭದಲ್ಲಿ ಮನೀಷ್ ಪಾಂಡೆ ಬಳಗದಲ್ಲೂ ಜಯದ ಆಸೆ ಚಿಗುರೊಡೆಯಿತು. ಆದರೆ ದಿಟ್ಟ ಆಟ ಆಡಿದ ಭಾರ್ಗವ್ ಭಟ್ ಮತ್ತು ಋಷಿ ಆರೋಟ್, ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯ ಎರಡೇ ದಿನದಲ್ಲಿ ಮುಕ್ತಾಯ ಕಂಡಿತು.

ಭಾರ್ಗವ್‌, ದೀಪಕ್ ದಾಳಿಗೆ ನಲುಗಿದ ಮನೀಷ್ ಪಡೆ: ಮೊದಲ ದಿನವಾದ ಸೋಮವಾರ ಒಟ್ಟು 22 ವಿಕೆಟ್‌ಗಳು ಉರುಳಿದ್ದವು. ಮೊದಲ ಇನಿಂಗ್ಸ್‌ನಲ್ಲಿ 111 ರನ್‌ಗಳ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 13 ರನ್‌ ಗಳಿಸಿತ್ತು. ಭಾರ್ಗವ್ ಭಟ್ ಮತ್ತು ದೀಪಕ್ ಹೂಡಾ ಅವರ ದಾಳಿಗೆ ಎದೆಯೊಡ್ಡಿ ನಿಲ್ಲಲಾಗದ ತಂಡ ಎರಡನೇ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು.

ಸೋಮವಾರದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದ ಕೆ.ವಿ.ಸಿದ್ಧಾರ್ಥ್‌ ಮತ್ತು ಕರುಣ್ ನಾಯರ್ ಮೇಲೆ ಇನಿಂಗ್ಸ್‌ ಕಟ್ಟುವ ಜವಾಬ್ದಾರಿ ಇತ್ತು. ಸಿದ್ಧಾರ್ಥ್‌ (64; 87 ಎಸೆತ, 2 ಸಿಕ್ಸರ್‌, 8 ಬೌಂಡರಿ) ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆದರೆ ಕರುಣ್ ನಾಯರ್‌ ಸೋಮವಾರದ ಮೊತ್ತಕ್ಕೆ ಕೇವಲ 10 ರನ್ ಸೇರಿಸಿ ಔಟಾದರು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ನಾಯಕ ಮನೀಷ್ ಪಾಂಡೆ (50; 75 ಎಸೆತ, 6 ಬೌಂಡರಿ) ಭರ್ಜರಿ ಬ್ಯಾಟಿಂಗ್ ಮಾಡಿದರು. ಸಿದ್ಧಾರ್ಥ್ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ 67 ರನ್ ಸೇರಿಸಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. 30ನೇ ಓವರ್‌ನಲ್ಲಿ ಸಿದ್ಧಾರ್ಥ್ ಔಟಾದ ನಂತರ ತಂಡ ಮತ್ತೆ ಪತನದ ಹಾದಿ ಹಿಡಿಯಿತು. ನಿಶ್ಚಲ್ ಮತ್ತು ಸುಚಿತ್ ಕಡಿಮೆ ಮೊತ್ತಕ್ಕೆ ಔಟಾದರು. ಶ್ರೇಯಸ್ ಗೋಪಾಲ್ ಮತ್ತು ವಿಕೆಟ್ ಕೀಪರ್ ಬಿ.ಆರ್.ಶರತ್‌ ಛಲದಿಂದ ಕಾದಾಡಿದ ಕಾರಣ ತಂಡ 200 ರನ್‌ಗಳ ಗಡಿ ದಾಟಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !