ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯ: ಸುಚಿತ್, ಪವನ್‌ ಕೈಚಳಕ

ಸೌರಾಷ್ಟ್ರಕ್ಕೆ ಆಸರೆಯಾದ ನಾಯಕ ಜಯದೇವ್‌ ಶಾ
Last Updated 6 ಡಿಸೆಂಬರ್ 2018, 18:15 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಸ್ಪಿನ್ನರ್‌ಗಳಾದ ಜೆ.ಸುಚಿತ್‌ (104ಕ್ಕೆ5) ಮತ್ತು ಪವನ್‌ ದೇಶಪಾಂಡೆ (78ಕ್ಕೆ3) ಅವರು ಗುರುವಾರ ಸೌರಾಷ್ಟ್ರ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದರು.

ಇವರ ಕೈಚಳಕದ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಎಲೀಟ್‌ ‘ಎ’ ಗುಂ‍ಪಿನ ಪಂದ್ಯದಲ್ಲಿ ಜಯದೇವ್‌ ಶಾ ಪಡೆಯನ್ನು 300ರ ಗಡಿಯೊಳಗೆ ನಿಯಂತ್ರಿಸಿದೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 9 ವಿಕೆಟ್‌ಗೆ 288ರನ್‌ ದಾಖಲಿಸಿದೆ.

ಸುಚಿತ್‌ ಮೋಡಿ: ಬ್ಯಾಟಿಂಗ್‌ ಆರಂಭಿಸಿದ ಸೌರಾಷ್ಟ್ರ ತಂಡ ದಿನದ ಎಂಟನೇ ಓವರ್‌ನಲ್ಲಿ ಆಘಾತ ಕಂಡಿತು. 25 ಎಸೆತಗಳಲ್ಲಿ 4 ಬೌಂಡರಿ ಸಹಿತ 22 ರನ್‌ ದಾಖಲಿಸಿದ್ದ ಸ್ನೆಲ್‌ ಪಟೇಲ್‌, ಸುಚಿತ್‌ಗೆ ವಿಕೆಟ್‌ ಒಪ್ಪಿಸಿದರು. 10ನೇ ಓವರ್‌ನಲ್ಲಿ ಸುಚಿತ್‌ ಮತ್ತೊಮ್ಮೆ ಕೈಚಳಕ ತೋರಿದರು. ನಾಲ್ಕನೇ ಎಸೆತದಲ್ಲಿ ಅವಿ ಬರೋತ್‌ (0) ವಿಕೆಟ್‌ ಉರುಳಿಸಿ ಕರ್ನಾಟಕ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ನಂತರವೂ ಮೈಸೂರಿನ ಸ್ಪಿನ್ನರ್‌, ಸುಚಿತ್‌ ಮೋಡಿ ಮುಂದುವರಿಯಿತು. 18ನೇ ಓವರ್‌ನಲ್ಲಿ ಹಾರ್ವಿಕ್‌ ದೇಸಾಯಿ (26;50ಎ, 5ಬೌಂ) ಮತ್ತು 24ನೇ ಓವರ್‌ನಲ್ಲಿ ಶೆಲ್ಡನ್‌ ಜಾಕ್ಸನ್‌ಗೆ (4;11ಎ) ಪೆವಿಲಿಯನ್‌ ಹಾದಿ ತೋರಿಸಿದ ಅವರು ಸೌರಾಷ್ಟ್ರ ತಂಡದ ಸಂಕಷ್ಟ ಹೆಚ್ಚಿಸಿದರು.

ಈ ಹಂತದಲ್ಲಿ ಆತಿಥೇಯ ತಂಡದ ನಾಯಕ ಜಯದೇವ್‌ (97; 159ಎ, 9ಬೌಂ, 3ಸಿ) ಮತ್ತು ಅರ್ಪಿತ್‌ ವಾಸವಾಡ (38; 95ಎ, 6ಬೌಂ) ದಿಟ್ಟ ಆಟ ಆಡಿದರು. ಇವರು ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 30ರನ್‌ ಸೇರಿಸಿ ತಂಡವನ್ನು ಶತಕದ ಗಡಿ ದಾಟಿಸಿದರು.

ಕರ್ನಾಟಕ ತಂಡದ ನಾಯಕ ಆರ್‌.ವಿನಯ್‌ ಕುಮಾರ್‌ 39ನೇ ಓವರ್‌ ಬೌಲ್‌ ಮಾಡಲು ಪವನ್‌ ದೇಶಪಾಂಡೆ ಕೈಗೆ ಚೆಂಡು ಕೊಟ್ಟಿದ್ದು ಫಲ ನೀಡಿತು. ಮೂರನೇ ಎಸೆತದಲ್ಲಿ ಅರ್ಪಿತ್‌ ವಿಕೆಟ್‌ ಉರುಳಿಸಿದ ಪವನ್‌, ನಾಯಕನ ನಂಬಿಕೆ ಉಳಿಸಿಕೊಂಡರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಜಯದೇವ್‌ ಎದೆಗುಂದಲಿಲ್ಲ. ಪ್ರೇರಕ್‌ ಮಂಕಡ್‌ (37; 57ಎ, 7ಬೌಂ) ಮತ್ತು ಚಿರಾಗ್‌ ಜಾನಿ (13; 22ಎ, 1ಬೌಂ) ಅವರ ಜೊತೆಗೂಡಿ ಉತ್ತಮ ಇನಿಂಗ್ಸ್‌ ಕಟ್ಟಿದ ಅವರು ಆತಿಥೇಯರ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿದರು.

ಪ್ರೇರಕ್‌ ಮತ್ತು ಚಿರಾಗ್‌ ಕ್ರಮವಾಗಿ ಸುಚಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅವರಿಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ಜಯದೇವ್‌ ಕೂಡಾ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. ಶತಕದತ್ತ ದಾಪುಗಾಲಿಟ್ಟಿದ್ದ ಅವರು ಪವನ್‌ ದೇಶಪಾಂಡೆ ಬೌಲ್‌ ಮಾಡಿದ 77ನೇ ಓವರ್‌ನ ಕೊನೆಯ ಎಸೆತದಲ್ಲಿ ಆರ್‌.ಸಮರ್ಥ್‌ಗೆ ಕ್ಯಾಚ್‌ ನೀಡಿದರು.

ಕೊನೆಯ ಅವಧಿಯಲ್ಲಿ ಪ್ರವಾಸಿ ಬೌಲರ್‌ಗಳನ್ನು ಕಾಡಿದ ಕಮಲೇಶ್‌ ಮಕವಾನ (ಬ್ಯಾಟಿಂಗ್‌ 31; 76ಎ, 3ಬೌಂ) ಸೌರಾಷ್ಟ್ರ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ಅವರಿಗೆ ಯುವರಾಜ್‌ ಚೂಡಸಾಮ (ಬ್ಯಾಟಿಂಗ್‌ 9; 12ಎ, 2ಬೌಂ) ಉತ್ತಮ ಬೆಂಬಲ ನೀಡಿದರು. ಹೀಗಾಗಿ ಮೊದಲ ದಿನವೇ ಆತಿಥೇಯರನ್ನು ಆಲೌಟ್‌ ಮಾಡುವ ಕರ್ನಾಟಕ ತಂಡದ ಕನಸು ಕೈಗೂಡಲಿಲ್ಲ.

ವಿದಾಯದ ಪಂದ್ಯದಲ್ಲಿ ಶಾ ಮಿಂಚು

ಕ್ರಿಕೆಟ್‌ ಬದುಕಿನ ಕೊನೆಯ ಪಂದ್ಯ ಆಡುತ್ತಿರುವ ಸೌರಾಷ್ಟ್ರ ತಂಡದ ನಾಯಕ ಜಯದೇವ್‌ ಶಾ, ಗುರುವಾರ ಮೋಡಿ ಮಾಡಿದರು.

ಕರ್ನಾಟಕದ ಬೌಲರ್‌ಗಳನ್ನು ಕಾಡಿದ ಅವರು ಆತಿಥೇಯರನ್ನು ಸಂಕಷ್ಟದಿಂದ ಪಾರು ಮಾಡಿದರು.

ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ನಿರಂಜನ್ ಶಾ ಅವರ ಮಗ ಜಯದೇವ್‌, 112ನೇ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸುತ್ತಿದ್ದಾರೆ. 2002–03ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಇದುವರೆಗೂ 120 ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT