ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ಪ್ರಿಯರ ಮನ ಗೆಲ್ಲದ ಪೂಜಾರ ಶತಕ

ರಣಜಿ ಟ್ರೋಫಿ ಸೆಮಿಫೈನಲ್: ಸೋಲಿನ ಸನಿಹ ಕರ್ನಾಟಕ; ಸೌರಾಷ್ಟ್ರ ಗೆಲುವಿಗೆ ಬೇಕು 55 ರನ್ ಮಾತ್ರ
Last Updated 27 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಚೇತೇಶ್ವರ್ ಪೂಜಾರ ಮತ್ತು ಬೆಂಗಳೂರಿಗೆ ಹಳೆಯ ನಂಟಿದೆ. ಒಂಬತ್ತು ವರ್ಷಗಳ ಹಿಂದೆ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ಇಲ್ಲಿಗೆ ಯಾವಾಗ ಬಂದರೂ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ಆದರೆ ಭಾನುವಾರ ಅವರು ಇಲ್ಲಿಯ ಕ್ರಿಕೆಟ್‌ಪ್ರಿಯರಿಗೆ ‘ಖಳನಾಯಕ’ನಾಗಿಬಿಟ್ಟರು.

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಂಪೈರ್ ಖಾಲೀದ್ ಹುಸೇನ್ ಸೈಯ್ಯದ್ ನೀಡಿದ ‘ಅನುಮಾನಾಸ್ಪದ’ ತೀರ್ಪಿನಿಂದಾಗಿ ಪೂಜಾರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ತೀರ್ಪು ಕರ್ನಾಟಕದ ಗೆಲುವಿನ ಅವಕಾಶವನ್ನು ಬಹುತೇಕ ಕಿತ್ತುಕೊಂಡಿದ್ದು ಆಕ್ರೋಶವನ್ನು ಹೆಚ್ಚಿಸಿದೆ. ‘ಚೀಟರ್‌..ಚೀಟರ್‌’ ಎಂದು ಅಭಿಮಾನಿಗಳು ಕೂಗಾಡಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾಲ್ಕನೇ ದಿನ ಗೆಲುವಿಗಾಗಿ 279 ರನ್‌ಗಳ ಬೆನ್ನಟ್ಟಿದ ಸೌರಾಷ್ಟ್ರ ತಂಡಕ್ಕೆ ಆರಂಭದಲ್ಲಿಯೇ ಆರ್. ವಿನಯ ಕುಮಾರ್ (48ಕ್ಕೆ2) ಮತ್ತು ಅಭಿಮನ್ಯು ಮಿಥುನ್ (35ಕ್ಕೆ1) ಪೆಟ್ಟು ನೀಡಿದರು. ಇದರಿಂದಾಗಿ ಸೌರಾಷ್ಟ್ರ ತಂಡವು 23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಫೂಜಾರ ಮತ್ತು ಶೆಲ್ಡನ್ ಜ್ಯಾಕ್ಸನ್‌ ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದ್ದರು. ಊಟದ ವಿರಾಮದ ನಂತರದ ಮೂರನೇ ಓವರ್‌ನಲ್ಲಿ ವಿನಯಕುಮಾರ್ ಎಸೆತವನ್ನು ಕಟ್ ಮಾಡಲು ಪೂಜಾರ ಯತ್ನಿಸಿದರು. ಆದರೆ ಚೆಂಡು ಹಿಂದೆ ನುಗ್ಗಿತು. ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಕ್ಯಾಚ್ ಮಾಡಿದರು. ಆತಿಥೇಯರು ಸಂಭ್ರಮದಲ್ಲಿ ಕುಣಿದಾಡಿದರು. ಆದರೆ ಅಂಪೈರ್ ಖಾಲೀದ್ ಔಟ್ ನೀಡಲಿಲ್ಲ. ಕರ್ನಾಟಕದ ಬಳಗ ಆಘಾತ ವ್ಯಕ್ತಪಡಿಸಿತು. ವಿನಯಕುಮಾರ್ ಮತ್ತು ಅಂಪೈರ್ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಹಂತದಲ್ಲಿ ಪೂಜಾರ ಅವರು ಕೇವಲ 34 ರನ್‌ ಗಳಿಸಿದ್ದರು. ದಿನದಾಟ ಮುಗಿಯುವ ಕೆಲಹೊತ್ತಿನ ಮುನ್ನ ಪೂಜಾರ ಶತಕ ಗಳಿಸಿದಾಗ (ಬ್ಯಾಟಿಂಗ್ 108; 358ನಿಮಿಷ, 216ಎಸೆತ, 14ಬೌಂಡರಿ) ಅವರ ತಂಡದ ಆಟಗಾರರು ಮತ್ತು ಕೆಲವರು ಚಪ್ಪಾಳೆ ತಟ್ಟಿದರು. ಪೂಜಾರ ಮತ್ತು ಶೆಲ್ಡನ್ ಜ್ಯಾಕ್ಸನ್ (ಬ್ಯಾಟಿಂಗ್ 90; 333 ನಿಮಿಷ, 205ಎಸೆತ, 13ಬೌಂಡರಿ) ಅವರು ಮುರಿಯದ ನಾಲ್ಕನೇ ವಿಕೆಟ್‌ನ ಜೊತೆಯಾಟದಲ್ಲಿ 201 ರನ್‌ ಸೇರಿಸಿದರು. ದಿನದ ಎರಡೂ ಅವಧಿಗಳಲ್ಲಿ ಆತಿಥೇಯ ಬೌಲರ್‌ಗಳ ಶ್ರಮಕ್ಕೆ ಯಶಸ್ಸು ಸಿಗಲಿಲ್ಲ.

ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಡೈವ್ ಮಾಡಿ ಸೊಂಟ ಉಳುಕಿಸಿಕೊಂಡ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಶುಕ್ರವಾರ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯ ಪಣಕ್ಕೊಡ್ಡಲು ಸಾಧ್ಯವಾಗಲಿಲ್ಲ. ಆಗಾಗ ಡಗ್‌ಔಟ್‌ಗೆ ಹೋಗಿ ಚಿಕಿತ್ಸೆ ಪಡೆದು ಬಂದು ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿದ್ದರು.

ಶನಿವಾರ ಶ್ರೇಯಸ್ (61 ರನ್) ಮತ್ತು ಅಭಿಮನ್ಯು ಮಿಥುನ್ ಅವರು ಒಂಬತ್ತನೇ ವಿಕೆಟ್‌ ಜೊತೆಯಾಟದಲ್ಲಿ 61 ರನ್‌ ಗಳಿಸಿದ್ದರು. ಭಾನುವಾರ ಬೆಳಿಗ್ಗೆ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕದ ಖಾತೆಗೆ ಸೇರಿದ್ದು ಮಿಥುನ್ (ಔಟಾಗದೆ 37) ಗಳಿಸಿದ ಎರಡು ರನ್‌ಗಳು ಮಾತ್ರ. ಶ್ರೇಯಸ್ ಮತ್ತು ರೋನಿತ್ ಮೋರೆ ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ 300 ರನ್‌ಗಳಿಗಿಂತ ಹೆಚ್ಚಿನ ಗುರಿ ನೀಡಲು ತಂಡಕ್ಕೆ ಸಾಧ್ಯವಾಗಲಿಲ್ಲ. ಆದರೆ, ಬೌಲಿಂಗ್‌ನಲ್ಲಿ ಮಿಂಚುವ ಭರವಸೆ ಪೂಜಾರ ಅವರಿಂದಾಗಿ ಹುಸಿಯಾಯಿತು. ಸೌರಾಷ್ಟ್ರಕ್ಕೆ ಗೆಲ್ಲಲು ಈಗ 55 ರನ್‌ಗಳ ಅವಶ್ಯಕತೆ ಇದೆ. ಕರ್ನಾಟಕವು ಅದಕ್ಕೂ ಮುನ್ನವೇ ಏಳು ವಿಕೆಟ್‌ಗಳನ್ನು ಕಬಳಿಸಿದರೆ ಫೈನಲ್‌ ಪ್ರವೇಶದ ಕನಸು ನನಸಾಗಬಹುದು.

‘ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೆ ಏನೂ ಹೇಳಲು ಸಾಧ್ಯವಿಲ್ಲ’ ಎಂಬ ಜನಪ್ರಿಯ ನುಡಿಗಟ್ಟು ಸೋಮವಾರ ಬೆಳಿಗ್ಗೆ ಯಾವ ರೀತಿ ಅನ್ವಯವಾಗುತ್ತದೆಯೆಂದು ನೋಡಬೇಕಷ್ಟೇ!

ಮೊದಲ ಇನಿಂಗ್ಸ್‌ನಲ್ಲಿಯೂ ಎಡವಿದ್ದ ಅಂಪೈರ್ ಖಾಲೀದ್
ಕ್ರೀಡಾಸ್ಫೂರ್ತಿ ಮೆರೆಯಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಚೇತೇಶ್ವರ್ ಪೂಜಾರ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿಯೂ ಇದೇ ರೀತಿಯ ‘ಜೀವದಾನ’ ಪಡೆದಿದ್ದರು. ಅವರಿಗೆ ಎರಡೂ ಇನಿಂಗ್ಸ್‌ಗಳಲ್ಲಿ ನಾಟೌಟ್ ನೀಡಿದ ಅಂಪೈರ್ ಖಾಲೀದ್ ಹುಸೇನ್ ಎ ಸೈಯದ್ ಅವರು ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಅಭಿಮನ್ಯು ಮಿಥುನ್ ಎಸೆತವನ್ನು ಕಟ್‌ ಮಾಡುವ ಪ್ರಯತ್ನದಲ್ಲಿ ಪೂಜಾರ ಬ್ಯಾಟ್ ಅಂಚಿಗೆ ಚೆಂಡು ತಗುಲಿ ವಿಕೆಟ್‌ಕೀಪರ್ ಕೈಸೇರಿತ್ತು. ಆದರೆ ಖಾಲೀದ್ ಔಟ್ ನೀಡಿರಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ವಿನಯ್ ಬೌಲಿಂಗ್‌ನಲ್ಲಿ ಅದೇ ರೀತಿಯ ಘಟನೆ ನಡೆಯಿತು. ಆದರೆ ಪೂಜಾರ ಅವರು ಮಾತ್ರ ಅಂಪೈರ್‌ ತೀರ್ಪನ್ನು ಗೌರವಿಸಿದರು!

43 ವರ್ಷದ ಖಾಲೀದ್ ಅವರು ಗೋವಾ ತಂಡದಲ್ಲಿ ಕ್ರಿಕೆಟ್ ಆಡಿದ್ದರು. ಎಡಗೈ ಸ್ಪಿನ್ನರ್ ಆಗಿದ್ದ ಅವರು 27 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು ಜನಿಸಿದ್ದು ಗುಜರಾತ್‌ನ ಬರೋಡಾದಲ್ಲಿ.

ಚೇತೇಶ್ವರ್ ಪೂಜಾರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ
ಚೇತೇಶ್ವರ್ ಪೂಜಾರ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT