ಮಂಗಳವಾರ, ಡಿಸೆಂಬರ್ 10, 2019
26 °C
ರಣಜಿ ಕ್ರಿಕೆಟ್: ದೇವದತ್ತ ಪಡಿಕ್ಕಲ್‌, ನಿಶ್ಚಲ್‌ ಅರ್ಧಶತಕ; ಆತಿಥೇಯರಿಗೆ ಮಣಿದ ಮಹಾರಾಷ್ಟ್ರ ತಂಡ

ವಿನಯ್‌ ಬಳಗಕ್ಕೆ ಗೆಲುವಿನ ಸಿಂಚನ

Published:
Updated:
Deccan Herald

ಮೈಸೂರು: ಅಂತಿಮ ದಿನದಾಟದಲ್ಲಿ ಯಾವುದೇ ಪವಾಡ ನಡೆಯಲಿಲ್ಲ. ಜವಾಬ್ದಾರಿಯುತ ಆಟವಾಡಿದ ಕರ್ನಾ ಟಕದ ಆರಂಭಿಕ ಬ್ಯಾಟ್ಸ್‌ಮನ್‌ಗಳು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಏಳು ವಿಕೆಟ್‌ಗಳ ಗೆಲುವು ತಂದಿತ್ತರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ನೀಡಿದ್ದ 184 ರನ್‌ಗಳ ಗುರಿಯನ್ನು ಕರ್ನಾಟಕ 70.2 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ತಲುಪಿತು. ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್ (77) ಮತ್ತು ಡಿ.ನಿಶ್ಚಲ್ (61) ಆಕರ್ಷಕ ಅರ್ಧಶತಕ ಗಳಿಸಿ ತಂಡದ ಜಯದ ಹಾದಿಯನ್ನು ಸುಗಮಗೊಳಿಸಿದರು.

ಆರ್‌.ವಿನಯ್‌ ಕುಮಾರ್‌ ಬಳಗ ಮೂರನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 54 ರನ್‌ ಗಳಿಸಿ ಗೆಲುವಿನತ್ತ ದಿಟ್ಟ ಹೆಜ್ಜೆಯಿಟ್ಟಿತ್ತು.

ಅಂತಿಮ ದಿನ ಶನಿವಾರ ಜಯಕ್ಕೆ 130 ರನ್‌ ಗಳಿಸುವ ಗುರಿ ಇತ್ತು. 50.2 ಓವರ್‌ಗಳನ್ನು ಆಡಿ ಈ ಗುರಿ ಸಾಧಿಸಿತು. ಭೋಜನ ವಿರಾಮದ ಬಳಿಕದ 45 ನಿಮಿಷಗಳಲ್ಲಿ ಆಟಕ್ಕೆ ತೆರೆಬಿತ್ತು.

ಶತಕದ ಜತೆಯಾಟ: ಕ್ರಮವಾಗಿ 33 ಮತ್ತು 21 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ ದೇವದತ್ತ ಹಾಗೂ ನಿಶ್ಚಲ್‌ ಜೋಡಿಯ ಜುಗಲ್‌ಬಂದಿ ಶನಿವಾರವೂ ಮುಂದುವರಿಯಿತು. ಬೆಳಿಗ್ಗೆ ಬೇಗನೇ ವಿಕೆಟ್‌ ಬಿಟ್ಟುಕೊಡದಿದ್ದರೆ ನಿರಾಯಾಸದಿಂದ ಗೆಲುವು ಪಡೆಯಬಹುದು ಎಂಬುದು ಕರ್ನಾಟಕಕ್ಕೆ ತಿಳಿದಿತ್ತು.

ಅತಿಯಾದ ರಕ್ಷಣೆಗೆ ಮುಂದಾದರೂ ವಿಕೆಟ್‌ ಕಳೆದುಕೊಳ್ಳುವ ಅಪಾಯವಿತ್ತು. ಆದ್ದರಿಂದ ಇಬ್ಬರೂ ತಕ್ಕ ಯೋಜನೆ ರೂಪಿಸಿ ಕ್ರೀಸ್‌ಗೆ ಬಂದಿದ್ದರು. ಎಡಗೈ ಬ್ಯಾಟ್ಸ್‌ಮನ್‌ ದೇವದತ್ತ ಆಕ್ರಮಣಕಾ ರಿಯಾಗಿ ಆಡಿದರೆ, ನಿಶ್ಚಲ್‌ ಸಾಥ್‌ ನೀಡುವ ಕೆಲಸ ಮಾಡಿದರು.

ದೇವದತ್ತ ಅವರು ಎದುರಾಳಿ ಸ್ಪಿನ್‌ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಆಗಿಂದಾಗ್ಗೆ ಬೌಂಡರಿ ಗಳನ್ನು ಗಳಿಸಿ ಒತ್ತಡ ಕಡಿಮೆಗೊಳಿಸಿದರು.

ಚೊಚ್ಚಲ ಪಂದ್ಯದಲ್ಲಿ ಶತಕ ದೆಡೆಗೆ ದಾಪುಗಾಲಿಟ್ಟಿದ್ದ ಅವರು ಅವಸರ ಮಾಡಿಕೊಂಡು ಔಟಾದರು. ಸತ್ಯಜೀತ್‌ ಬಚಾವ್‌ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಚಿರಾಗ್‌ ಖುರಾನ ಅವರಿಗೆ ಕ್ಯಾಚ್‌ ಕೊಟ್ಟರು.

128 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ, ಒಂದು ಸಿಕ್ಸರ್‌ ಗಳಿಸಿದರು. ಮೊದಲ ವಿಕೆಟ್‌ಗೆ 43.4 ಓವರ್‌ಗಳಲ್ಲಿ 121 ರನ್‌ಗಳ ಜತೆಯಾಟ ಮೂಡಿಬಂತು. ದೇವದತ್ತ ಔಟಾದ ಬೆನ್ನಲ್ಲೇ ಕೆ.ವಿ.ಸಿದ್ದಾರ್ಥ್‌ (4) ಕೂಡಾ ಮರಳಿದರು. ಈ ವೇಳೆ ಗೆಲುವಿಗೆ 53 ರನ್‌ಗಳು ಬೇಕಿದ್ದವು. ನಿಶ್ಚಲ್‌ ಮತ್ತು ಕೌನೇನ್‌ ಅಬ್ಬಾಸ್‌ (ಔಟಾಗದೆ 34, 62 ಎಸೆತ) ಮೂರನೇ ವಿಕೆಟ್‌ಗೆ 39 ರನ್‌ ಸೇರಿಸಿದರು. ಗೆಲುವಿಗೆ 14 ರನ್‌ಗಳು ಬೇಕಿದ್ದಾಗ ನಿಶ್ಚಲ್‌ ಔಟಾದರು. 212 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ ಗಳಿಸಿದರು. ಅಬ್ಬಾಸ್‌ ಮತ್ತು ಪವನ್‌ ದೇಶಪಾಂಡೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಚಿರಾಗ್‌ ಖುರಾನ ಬೌಲಿಂಗ್‌ನಲ್ಲಿ ಚೆಂಡನ್ನು ಡೀಪ್‌ ಸ್ವ್ಕೇರ್‌ಲೆಗ್‌ ಕಡೆ ತಳ್ಳಿ ಒಂದು ರನ್‌ ಗಳಿಸಿದ ಅಬ್ಬಾಸ್‌ ಗೆಲುವಿನ ವ್ಯವಹಾರ ಪೂರೈಸಿದರು. ಈ ಜಯದಿಂದ ಕರ್ನಾಟಕ ಆರು ಪಾಯಿಂಟ್‌ ಕಲೆಹಾಕಿತು. ‘ಎ’ ಗುಂಪಿನಲ್ಲಿರುವ ರಾಜ್ಯ ತಂಡ ಮೂರು ಪಂದ್ಯಗಳಿಂದ ಒಟ್ಟು 12 ಪಾಯಿಂಟ್‌ ಗಳಿಸಿದೆ.

ನಮಗೆ ಗೆಲುವು ಅಗತ್ಯವಾಗಿತ್ತು: ವಿನಯ್ ಕುಮಾರ್‌
ಮೈಸೂರು:
ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿತ್ತು. ಅದು ಸಾಧ್ಯವಾಗಿರುವುದು ಸಂತಸದ ವಿಷಯ ಎಂದು ಕರ್ನಾಟಕ ತಂಡದ ನಾಯಕ ಆರ್‌.ವಿನಯ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ‘ಮುಂದಿನ 2–3 ಪಂದ್ಯಗಳಲ್ಲಿ ಇದೇ ಪ್ರದರ್ಶನ ಮುಂದುವರಿಸಿದರೆ ನಮಗೆ ಯಾವುದೇ ಒತ್ತಡವಿಲ್ಲದೆ ನಾಕೌಟ್‌ ಹಂತ ಪ್ರವೇಶಿಸಬಹುದು’ ಎಂದು ಪಂದ್ಯದ ಬಳಿಕ ತಿಳಿಸಿದರು.

ಯುವ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ಅವರ ಬ್ಯಾಟಿಂಗ್‌ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಈ ಪಂದ್ಯದಲ್ಲಿ ಆಡಿದ ರೀತಿ ನೋಡಿದಾಗ ಅಚ್ಚರಿಯಾಯಿತು. ಅಪಾರ ಪ್ರತಿಭೆ ಹೊಂದಿರುವ ಅವರು ಸ್ಥಿರತೆ ಕಾಪಾಡಿಕೊಂಡರೆ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಲಿದ್ದಾರೆ’ ಎಂದರು.

‘ಪ್ರಥಮ ದರ್ಜೆ ಪಂದ್ಯದಲ್ಲಿ 450 ವಿಕೆಟ್‌ಗಳ ಸಾಧನೆಮಾಡಿರುವುದು ಸಂತಸ ಉಂಟುಮಾಡಿದೆ. ಎರಡು ವರ್ಷಗಳ ಹಿಂದೆ 400 ವಿಕೆಟ್‌ಗಳ ಸಾಧನೆ ಮಾಡಿದ್ದೆ. ಇಂತಹ ಮೈಲಿಗಲ್ಲು ಸ್ಥಾಪಿಸುವಾಗ ಖುಷಿಯಾಗುವುದು ಸಹಜ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ತಂಡಕ್ಕೆ ವಿಕೆಟ್‌ ಪಡೆದಾಗ ಅದಕ್ಕೂ ಹೆಚ್ಚಿನ ಖುಷಿಯಾಗುತ್ತದೆ’ ಎಂದು ಹೇಳಿದರು. ವಿನಯ್‌ ಅವರು ಶುಕ್ರವಾರದ ಆಟದ ವೇಳೆ 450 ವಿಕೆಟ್‌ಗಳ ಸಾಧನೆ ಮಾಡಿದ್ದರು.

ಒಂಬತ್ತನೇ ಗೆಲುವು
ರಣಜಿ ಟ್ರೋಫಿ ಇತಿಹಾಸದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ದೊರೆತ 9ನೇ ಗೆಲುವು ಇದು. ಉಭಯ ತಂಡಗಳು ಒಟ್ಟು 15 ಸಲ ಎದುರಾಗಿವೆ. ಮಹಾರಾಷ್ಟ್ರ ಮೂರು ಸಲ ಗೆದ್ದರೆ, ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಒಟ್ಟು 20 ಪಂದ್ಯಗಳನ್ನು ಆಡಿರುವ ಕರ್ನಾಟಕ ಎಂಟನೇ ಜಯ ಸಾಧಿಸಿದೆ. 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಎರಡರಲ್ಲಿ ಸೋಲು ಅನುಭವಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು