ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಹಾದಿಯಲ್ಲಿ ಕರ್ನಾಟಕ

ರಣಜಿ ಕ್ರಿಕೆಟ್: ಗೆಲುವಿಗೆ ಅಂತಿಮ ದಿನ 130 ರನ್‌ ಗಳಿಸುವ ಗುರಿ
Last Updated 30 ನವೆಂಬರ್ 2018, 20:01 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ರಣಜಿ ಕ್ರಿಕೆಟ್‌ ಋತುವಿನ ಮೊದಲ ಗೆಲುವು ಸಾಧಿಸಲು ಕರ್ನಾಟಕಕ್ಕೆ ಬೇಕಿರುವುದು 130 ರನ್‌. ಕೈಯಲ್ಲಿ ಎಲ್ಲ 10 ವಿಕೆಟ್‌ಗಳು ಇವೆ. ಅಂತಿಮ ದಿನದಾಟದಲ್ಲಿ ಯಾವುದೇ ಪವಾಡ ನಡೆಯದಿದ್ದರೆ, ಆರ್‌.ವಿನಯ್‌ ಕುಮಾರ್ ಬಳಗ ಗೆಲುವಿನ ಕೇಕೆ ಹಾಕುವುದು ಖಚಿತ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ನೀಡಿರುವ 184 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಕರ್ನಾಟಕ, ಮೂರನೇ ದಿನ ಶುಕ್ರವಾರದ ಆಟದ ಅಂತ್ಯಕ್ಕೆ 20 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 54 ರನ್ ಗಳಿಸಿದೆ.

ಆತಿಥೇಯ ತಂಡಕ್ಕೆ ದೇವದತ್ತ ಪಡಿಕ್ಕಲ್‌ (33, 58 ಎಸೆತ) ಮತ್ತು ಡಿ.ನಿಶ್ಚಲ್ (21, 62 ಎಸೆತ) ಭರ್ಜರಿ ಆರಂಭ ನೀಡಿದ್ದಾರೆ. ರಕ್ಷಣೆ ಮತ್ತು ಆಕ್ರಮಣವನ್ನು ಮೈಗೂಡಿಸಿಕೊಂಡು ಬ್ಯಾಟ್‌ ಬೀಸಿದ ಈ ಜೋಡಿ ಯಾವುದೇ ವಿಕೆಟ್‌ ನಷ್ಟವಾಗದಂತೆ ನೋಡಿಕೊಂಡಿತು.

ಮೊದಲ ಎರಡು ದಿನಗಳ ಆಟ ನೋಡಿದಾಗ ಈ ಪಂದ್ಯ ಮೂರು ದಿನಗಳಲ್ಲಿ ಕೊನೆಗೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಗ್ಲೇಡ್ಸ್‌ ಕ್ರೀಡಾಂಗಣದ ಪಿಚ್‌ ಶುಕ್ರವಾರ ತನ್ನ ‘ಗುಣ’ ಬದಲಿಸಿ ಬ್ಯಾಟಿಂಗ್‌ಗೆ ಯೋಗ್ಯವಾಗಿ ಪರಿಣಮಿಸಿತು. ೃತುರಾಜ್‌ ಗಾಯಕವಾಡ್‌ (89) ಮತ್ತು ನೌಶಾದ್‌ ಶೇಖ್‌ (73) ಅವರ ಕೆಚ್ಚೆದೆಯ ಬ್ಯಾಟಿಂಗ್‌ ಬಲದಿಂದ ಮಹಾರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ 256 ರನ್‌ ಕಲೆಹಾಕಿ ಕರ್ನಾಟಕಕ್ಕೆ ಸವಾಲಿನ ಗುರಿ ನೀಡಿತು.

ರುತುರಾಜ್, ನೌಶಾದ್ ಆಸರೆ: ಮಹಾರಾಷ್ಟ್ರ ತಂಡ ಮೂರು ವಿಕೆಟ್‌ ನಷ್ಟಕ್ಕೆ 48 ರನ್‌ಗಳಿಂದ ಆಟ ಮುಂದುವರಿಸಿತ್ತು. ರುತುರಾಜ್‌ ಮತ್ತು ಸತ್ಯಜೀತ್ ಬಚಾವ್ ಕ್ರಮವಾಗಿ 9 ಹಾಗೂ 4 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ್ದರು. ಬೆಳಿಗ್ಗೆ ಅತಿಯಾದ ಎಚ್ಚರಿಕೆಯಿಂದ ಆಡಿದ ಇವರು ನಾಲ್ಕನೇ ವಿಕೆಟ್‌ಗೆ 60 ರನ್‌ ಸೇರಿಸಿದರು.

ದಿನದ 21ನೇ ಓವರ್‌ನಲ್ಲಿ ಕರ್ನಾಟಕಕ್ಕೆ ಮೊದಲ ಯಶಸ್ಸು ಲಭಿಸಿತು. ಶ್ರೇಯಸ್‌ ಗೋಪಾಲ್‌ ಎಸೆತದಲ್ಲಿ ಬಚಾವ್ (28, 99 ಎಸೆತ) ಅವರು ಎಲ್‌ಬಿ ಬಲೆಯಲ್ಲಿ ಬಿದ್ದರು. ರೋಹಿತ್‌ ಮೋಟ್ವಾನಿ ಮತ್ತು ರಾಹುಲ್‌ ತ್ರಿಪಾಠಿ ಕೂಡಾ ಬೇಗನೇ ಮರಳಿದಾಗ ಮಹಾರಾಷ್ಟ್ರ ಅಲ್ಪ ಮೊತ್ತಕ್ಕೆ ಆಲೌಟ್‌ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಏಳನೇ ವಿಕೆಟ್‌ಗೆ ಜತೆಯಾದ ರುತುರಾಜ್ ಮತ್ತು ನೌಶಾದ್‌ ಆತಿಥೇಯರ ಯೋಜನೆಗಳನ್ನು ತಲೆಕೆಳಗಾಗಿಸಿದರು. ಈ ಜೋಡಿ 168 ಎಸೆತಗಳಲ್ಲಿ 106 ರನ್‌ ಕಲೆಹಾಕಿತು. ಕರ್ನಾಟಕದ ಮಧ್ಯಮವೇಗ ಮತ್ತು ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿತು.

ಇವರು ಭೋಜನ ವಿರಾಮದ ಬಳಿಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ವಿನಯ್‌ ಕುಮಾರ್‌ ಅವರು ಗಾಯಕವಾಡ್ ವಿಕೆಟ್‌ ಪಡೆದು ಈ ಜತೆಯಾಟ ಮುರಿದಾಗ ಕರ್ನಾಟಕ ನಿಟ್ಟುಸಿರುಬಿಟ್ಟಿತು. 161 ಎಸೆತಗಳನ್ನು ಎದುರಿಸಿದ ಗಾಯಕವಾಡ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ ಗಳಿಸಿದರು.

ಗಾಯಕವಾಡ್‌ ಔಟಾದ ಬಳಿಕ ನೌಶಾದ್‌ ಅವರು ಕೊನೆಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ತಂಡದ ಮುನ್ನಡೆ ಹಿಗ್ಗಿಸಿದರು. ಶ್ರೇಯಸ್ ಗೋಪಾಲ್ ನಾಲ್ಕು, ಆರ್.ವಿನಯ್ ಕುಮಾರ್ ಮೂರು ವಿಕೆಟ್‌ ಪಡೆದರು.

ದುಬಾರಿಯಾದ ಜೀವದಾನ: 14 ರನ್‌ ಗಳಿಸಿದ್ದ ವೇಳೆ ೃತುರಾಜ್‌ಗೆ ಜೀವದಾನ ಲಭಿಸಿತ್ತು. ವಿನಯ್‌ ಬೌಲಿಂಗ್‌ನಲ್ಲಿ ಕೌನೇನ್‌ ಅಬ್ಬಾಸ್‌ ಕ್ಯಾಚ್‌ ಕೈಚೆಲ್ಲಿದ್ದರು. ಈ ತಪ್ಪು ಕರ್ನಾಟಕಕ್ಕೆ ದುಬಾರಿಯಾಗಿ ಪರಿಣಮಿಸಿತು. ನೌಶಾದ್‌ ಅವರಿಗೆ 49 ರನ್‌ ಗಳಿಸಿದ್ದಾಗ ಜೀವದಾನ ಲಭಿಸಿತು.

ಮಿಥುನ್‌, ಸಿದ್ದಾರ್ಥ್‌ಗೆ ಗಾಯ
ಕರ್ನಾಟಕದ ಇಬ್ಬರು ಆಟಗಾರರು ಗಾಯಗೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಗುರುವಾರ ಬ್ಯಾಟಿಂಗ್‌ ವೇಳೆ ರನ್‌ ಗಳಿಸುವಾಗ ಕಾಲಿಗೆ ಗಾಯಮಾಡಿಕೊಂಡಿದ್ದ ಮಿಥುನ್‌ ಅವರು ಶುಕ್ರವಾರ ಕಣಕ್ಕಿಳಿಯಲಿಲ್ಲ. ಇದರಿಂದ ತಂಡಕ್ಕೆ ಒಬ್ಬ ಬೌಲರ್‌ನ ಕೊರತೆ ಎದುರಾಯಿತು.

ಬ್ಯಾಟ್ಸ್‌ಮನ್‌ ಕೆ.ವಿ.ಸಿದ್ದಾರ್ಥ್‌ ಅವರು ಫೀಲ್ಡಿಂಗ್‌ ವೇಳೆ ಕೈಬೆರಳಿಗೆ ಗಾಯಮಾಡಿಕೊಂಡು ಅಂಗಳದಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT