ಗುರುವಾರ , ಅಕ್ಟೋಬರ್ 17, 2019
24 °C
ಕರ್ನಾಟಕ ತಂಡದ ಮೊದಲ ಎದುರಾಳಿ ತಮಿಳುನಾಡು

ಡಿಸೆಂಬರ್ 9ರಂದು ರಣಜಿ ಟ್ರೋಫಿ ಟೂರ್ನಿ ಆರಂಭ

Published:
Updated:

ಹುಬ್ಬಳ್ಳಿ: ದೇಶಿ ಕ್ರಿಕೆಟ್‌ನಲ್ಲಿ ಮಹತ್ವದ ಟೂರ್ನಿಯಾಗಿರುವ ರಣಜಿ ಟ್ರೋಫಿ ಡಿ. 9ರಿಂದ ಆರಂಭವಾಗಲಿದ್ದು, ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ತಮಿಳು ನಾಡು ತಂಡದ ಸವಾಲು ಎದುರಿಸಲಿದೆ.

ರಾಜ್ಯ ತಂಡ ತನ್ನ ಎರಡನೇ ಪಂದ್ಯದಲ್ಲಿ ಉತ್ತರ ಪ್ರದೇಶ (ಡಿ. 17ರಿಂದ), ಹಿಮಾಚಲ ಪ್ರದೇಶ (ಡಿ. 25ರಿಂದ), ಮುಂಬೈ (ಜ. 3ರಿಂದ), ಸೌರಾಷ್ಟ್ರ (ಜ. 11ರಿಂದ), ರೈಲ್ವೇಸ್‌ (ಜ. 27ರಿಂದ), ಮಧ್ಯಪ್ರದೇಶ (ಫೆ. 4ರಿಂದ) ಮತ್ತು ಬರೋಡಾ (ಫೆ. 12ರಿಂದ) ಎದುರು ಪಂದ್ಯಗಳನ್ನಾಡಲಿದೆ. ಒಟ್ಟು ಎಂಟು ಲೀಗ್‌ ಪಂದ್ಯಗಳಲ್ಲಿ ಕರ್ನಾಟಕ ತವರಿನಲ್ಲಿ ನಾಲ್ಕು ಮತ್ತು ಹೊರಗಡೆ ನಾಲ್ಕು ಪಂದ್ಯಗಳನ್ನು ಆಡಲಿದೆ. ತವರಿನ ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕೆಂಬುದನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿಲ್ಲ.

‘ಈ ಬಾರಿಯ ತವರಿನ ಪಂದ್ಯಗಳನ್ನು ಬೆಂಗಳೂರು ಹೊರಗಡೆ ಆಯೋಜಿಸಲು ಆದ್ಯತೆ ನೀಡಲಾಗುವುದು. ಪ್ರತಿಷ್ಠಿತ ದೇಶಿ ಟೂರ್ನಿಯ ಪಂದ್ಯಗಳನ್ನು ಎಲ್ಲ ಭಾಗಗಳ ಜನ ನೋಡುವಂತಾಗಬೇಕು ಎನ್ನುವ ಉದ್ದೇಶ ನಮ್ಮದು. ವಿಜಯ ಹಜಾರೆ ಟೂರ್ನಿ ಮುಗಿದ ಬಳಿಕ ಆಟಗಾರರು ಹಾಗೂ ಕೋಚ್‌ಗಳ ಜೊತೆ ಚರ್ಚಿಸಿ ಸ್ಥಳ ನಿಗದಿ ಪಡಿಸಲಾಗುವುದು’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

38 ತಂಡಗಳು ಭಾಗಿ: ಮೂರು ತಿಂಗಳು ನಡೆಯುವ ಟೂರ್ನಿಯಲ್ಲಿ ಒಟ್ಟು 38 ತಂಡಗಳು ಪಾಲ್ಗೊಳ್ಳಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ಎರಡು ಗುಂಪುಗಳಲ್ಲಿ ತಲಾ ಒಂಬತ್ತು ತಂಡಗಳಿವೆ. ‘ಸಿ’ ಗುಂಪಿನಲ್ಲಿ ಹತ್ತು ತಂಡಗಳಿವೆ. ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬರೋಡಾ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮುಂಬೈ, ರೈಲ್ವೇಸ್‌, ಸೌರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶ ತಂಡಗಳು ಕೂಡ ಇದೇ ಗುಂಪಿನಲ್ಲಿವೆ.

ಅರುಣಾಚಲ ಪ್ರದೇಶ, ಬಿಹಾರ, ಚಂಡೀಗಡ, ಗೋವಾ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಪುದುಚೇರಿ ಮತ್ತು ಸಿಕ್ಕಿಂ ತಂಡಗಳು ‘ಪ್ಲೇಟ್‌’ ಗುಂಪಿನಲ್ಲಿವೆ. ಚಂಡೀಗಡ ತಂಡ ಮೊದಲ ಬಾರಿಗೆ ರಣಜಿ ಟೂರ್ನಿಯಲ್ಲಿ ಅವಕಾಶ ಪಡೆದಿದೆ. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಉತ್ತಮ ಪ್ರದರ್ಶನ ನೀಡುವ ಐದು ತಂಡಗಳು, ‘ಸಿ’ ಗುಂಪಿನ ಅಗ್ರ ಎರಡು ತಂಡಗಳು ಮತ್ತು ಪ್ಲೇಟ್‌ ಗುಂಪಿನ ಅಗ್ರತಂಡ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿವೆ. ದೇಶಿ ಟೂರ್ನಿಯಲ್ಲಿ ಮೊದಲ ಬಾರಿಗೆ ಅಂಪೈರ್‌ ತೀರ್ಪು ಪರಿಶೀಲನಾ ನಿಯಮ (ಡಿಆರ್‌ಎಸ್‌) ಅಳವಡಿಸಲಾಗಿದೆ. ಆದರೆ, ಹಾಕ್‌ ಐ ಮತ್ತು ಅಲ್ಟ್ರಾ ಎಜ್‌ ತಂತ್ರಜ್ಞಾನ ಬಳಕೆ ಇರುವುದಿಲ್ಲ.

Post Comments (+)