ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಪಂದ್ಯ: ಕಾಡಿದ ಖಂಡೂರಿ,ರಿಷಿ

ರಣಜಿ ಟ್ರೋಫಿ ಪಂದ್ಯ: ಕರ್ನಾಟಕ ವಿರುದ್ಧ ಹಿಮಾಚಲ ಪ್ರದೇಶಕ್ಕೆ ಇನಿಂಗ್ಸ್‌ ಮುನ್ನಡೆ
Last Updated 27 ಡಿಸೆಂಬರ್ 2019, 12:07 IST
ಅಕ್ಷರ ಗಾತ್ರ

ಮೈಸೂರು: ಛಲದ ಹಾಗೂ ಎಚ್ಚರಿಕೆಯ ಆಟವಾಡಿದ ಹಿಮಾಚಲ ಪ್ರದೇಶ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದ ಎರಡನೇ ದಿನ ಆತಿಥೇಯ ಕರ್ನಾಟಕ ವಿರುದ್ಧ ಮಹತ್ವದ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 235 ರನ್‌ ಗಳಿಸಿ ದಿನದಾಟ ಪೂರೈಸಿತು. ಇದರೊಂದಿಗೆ 69 ರನ್‌ಗಳ ಮುನ್ನಡೆ ಸಾಧಿಸಿದೆ.

ಆತಿಥೇಯರ ವೇಗ ಮತ್ತು ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆರಂಭ ಆಟಗಾರ ಪ್ರಿಯಾಂಶು ಖಂಡೂರಿ (69, 240 ಎಸೆತ, 8 ಬೌಂ) ಹಾಗೂ ರಿಷಿ ಧವನ್‌ (ಬ್ಯಾಟಿಂಗ್‌ 72) ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಮೊದಲ ದಿನದಾಟದಲ್ಲಿ ಕರ್ನಾಟಕ ತಂಡವನ್ನು 166 ರನ್‌ಗಳಿಗೆ ಆಲೌಟ್‌ ಮಾಡಿದ್ದ ಪ್ರವಾಸಿ ತಂಡ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿತು. ಬುಧವಾರ 29 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ್ದರೂ, ದಿಟ್ಟ ಹೋರಾಟ ನಡೆಸಿತು.

ಸೂರ್ಯಗ್ರಹಣದ ಕಾರಣ ದಿನ ದಾಟ ತಡವಾಗಿ ಆರಂಭವಾದರೂ, ಕರ್ನಾಟಕಕ್ಕೆ ಬೇಗನೇ ಯಶಸ್ಸು ಲಭಿಸಿತು. ಅಭಿಮನ್ಯು ಮಿಥುನ್‌ ದಿನದ ನಾಲ್ಕನೇ ಓವರ್‌ನಲ್ಲಿ ಮಯಂಕ್‌ ಡಾಗರ್‌ ಅವರನ್ನು ಔಟ್‌ ಮಾಡಿದರು. ಅವರು ವಿಕೆಟ್‌ ಕೀಪರ್‌ ಶರತ್‌ಗೆ ಕ್ಯಾಚ್‌ ನೀಡಿದರು. ಅದರೆ ರಾಜ್ಯದ ಆಟಗಾರರ ಸಂತಸ ಬಹಳ ಹೊತ್ತು ಉಳಿಯಲಿಲ್ಲ.

ಉತ್ತಮ ಜತೆಯಾಟ: ಪ್ರಿಯಾಂಶು ಅವರನ್ನು ಕೂಡಿಕೊಂಡ ನಿಖಿಲ್‌ ಗಾಂಗ್ಟ (46, 103 ಎಸೆತ, 4 ಬೌಂ, 1 ಸಿ) ಇನಿಂಗ್ಸ್‌ಗೆ ಜೀವ ತುಂಬಿದರು. ಸಂಯಮದಿಂದ ಆಟವಾಡಿದ ಇಬ್ಬರೂ ನಿಧಾನವಾಗಿ ಪರಿಸ್ಥಿತಿಗೆ ಹೊಂದಿ ಕೊಂಡರು. ಒಂದು, ಎರಡು ರನ್‌ ಗಳಿಸುತ್ತಾ ಸ್ಕೋರಿಂಗ್‌ ಹೆಚ್ಚಿಸಿದರು.

ಮಿಥುನ್‌, ಪ್ರತೀಕ್‌ ಜೈನ್‌ ಮತ್ತು ವಿ.ಕೌಶಿಕ್‌ ಅವರ ವೇಗದ ದಾಳಿಯನ್ನು ಈ ಜೋಡಿ ನಿರಾಯಾಸವಾಗಿ ಎದುರಿಸಿತು. ವೇಗಿಗಳಿಗೆ ನಿರೀ‌ಕ್ಷಿತ ಯಶಸ್ಸು ಲಭಿಸದ್ದನ್ನು ಮನಗಂಡ ನಾಯಕ ಕರುಣ್‌ ನಾಯರ್‌ ಅವರು ಜೆ.ಸುಚಿತ್‌ ಮತ್ತು ಶ್ರೇಯಸ್‌ ಗೋಪಾಲ್‌ ಮೂಲಕ ಸ್ಪಿನ್‌ ದಾಳಿ ಶುರು ಮಾಡಿದರು.

ಆದರೆ ಪ್ರಿಯಾಂಶು– ನಿಖಿಲ್‌ ಜೋಡಿ ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿತು. ಇದರಿಂದ ಕೆಲವು ಬೌಂಡರಿಗಳು ಬಂದವು. ಶ್ರೇಯಸ್‌ ಎಂದಿನ ಲಯದಲ್ಲಿ ಬೌಲ್‌ ಮಾಡಲಿಲ್ಲ. ಪಿಚ್‌ ಕೂಡಾ ಸ್ಪಿನ್ನರ್‌ಗಳಿಗೆ ನೆರವು ನೀಡಲಿಲ್ಲ.

ತಮ್ಮ 10ನೇ ಓವರ್‌ನಲ್ಲಿ ಸುಚಿತ್‌ಗೆ ಯಶಸ್ಸು ದೊರೆಯಿತು. ಚಹಾ ವಿರಾಮಕ್ಕೆ ಸ್ವಲ್ಪ ಮುನ್ನ ಅವರು ನಿಖಿಲ್‌ ವಿಕೆಟ್‌ ಪಡೆದರು. ಈ ಜೋಡಿ ಐದನೇ ವಿಕೆಟ್‌ಗೆ 217 ಎಸೆತಗಳಲ್ಲಿ ಅತ್ಯುಪಯುಕ್ತ 90 ರನ್‌ಗಳನ್ನು ಸೇರಿಸಿತು.

ರಿಷಿ ಧವನ್‌ ಅಬ್ಬರ: ಖಂಡೂರಿ ಅವರು ಒಂದು ಬದಿಯಲ್ಲಿ ತಾಳ್ಮೆಯಿಂದ ಆಡಿದರೆ, ರಿಷಿ ಧವನ್‌ ವೇಗವಾಗಿ ರನ್‌ ಗಳಿಸಿದರು. ಶ್ರೇಯಸ್‌ ಬೌಲ್‌ ಮಾಡಿದ 67ನೇ ಓವರ್‌ನಲ್ಲಿ ಭರ್ಜರಿ ಸಿಕ್ಸರ್‌ ಬಾರಿಸಿ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು. ಈ ಜೋಡಿ ಆರನೇ ವಿಕೆಟ್‌ಗೆ 75 ರನ್‌ಗಳನ್ನು ಕಲೆಹಾಕಿತು.

ಖಂಡೂರಿ ಅವರು ಕೌಶಿಕ್‌ಗೆ ವಿಕೆಟ್‌ ಒಪ್ಪಿಸಿ ಮರಳಿದರೂ, ರಿಷಿ ಧವನ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡಿದ್ದಾರೆ. ಬಹುತೇಕ ನೀರಸವೆನಿಸಿದ್ದ ದಿನದಾಟಕ್ಕೆ ಧವನ್‌ ಅವರ ಬಿರುಸಿನ ಬ್ಯಾಟಿಂಗ್‌ ರಂಗು ತುಂಬಿತು. 96 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿ, ಮೂರು ಸಿಕ್ಸರ್‌ ಬಾರಿಸಿದರು. ದಿನವಿಡೀ ಬಸವಳಿದ ಕರ್ನಾಟಕದ ಬೌಲರ್‌ಗಳು ಕೊನೆಯಲ್ಲಿ ಕೆಲವೊಂದು ವಿಕೆಟ್‌ಗಳನ್ನು ಪಡೆದು ನಿಟ್ಟುಸಿರುಬಿಟ್ಟರು. ವಿ.ಕೌಶಿಕ್ (48ಕ್ಕೆ 3) ಯಶಸ್ವಿ ಬೌಲರ್‌ ಎನಿಸಿಕೊಂಡರು.

*
ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಕಷ್ಟ. ತಾಳ್ಮೆಯಿಂದ ಆಡಿದರಷ್ಟೇ ರನ್‌ ಬರುತ್ತದೆ. ಆದರಲ್ಲಿ ನಾನು ಯಶಸ್ವಿಯಾದೆ. ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಗುರಿ.
-ಪ್ರಿಯಾಂಶು ಖಂಡೂರಿ, ಹಿಮಾಚಲ ಪ್ರದೇಶ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT