ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಹೋರಾಟವೇ ಕರ್ನಾಟಕದ ಬಲ

ಜಮ್ಮು ಮತ್ತು ಕಾಶ್ಮೀರ ವಿರುದ್ಧ ಕ್ವಾರ್ಟರ್‌ಫೈನಲ್‌ ಹಣಾಹಣಿ ಇಂದಿನಿಂದ
Last Updated 19 ಫೆಬ್ರುವರಿ 2020, 20:19 IST
ಅಕ್ಷರ ಗಾತ್ರ

ಜಮ್ಮು: ಕರ್ನಾಟಕ ತಂಡಈ ಬಾರಿಯ ರಣಜಿ ಟ್ರೋಫಿಋತುವಿನಲ್ಲಿ ಎಂಟರ ಘಟ್ಟ ತಲಪುವ ಹಾದಿಯಲ್ಲಿ ಅಮೋಘ ನಿರ್ವಹಣೆ ತೋರದಿದ್ದರೂ ಸ್ಫೂರ್ತಿಯುತ ಹೋರಾಟದಿಂದ ಗಮನ ಸೆಳೆದಿತ್ತು. ಈ ಸಕಾರಾತ್ಮಕ ಅಂಶ ದೊಡನೆ ಕರುಣ್‌ ನಾಯರ್‌ ಬಳಗ ಗುರುವಾರ ಆರಂಭವಾಗುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ.

ಕರ್ನಾಟಕ ಲೀಗ್‌ನಲ್ಲಿ ಅಜೇಯ ಸಾಧನೆ ಪ್ರದರ್ಶೀಸಿದೆ.ನಾಲ್ಕು ಗೆಲುವು, ನಾಲ್ಕು ಡ್ರಾ. ಎಲೈಟ್‌ ಗುಂಪಿನಲ್ಲಿ (ಎ ಮತ್ತು ಬಿ) ಮೂರನೇ ಸ್ಥಾನ. ಡ್ರಾ ಆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಎದುರಾಳಿಗೆ ಮುನ್ನಡೆ ಬಿಟ್ಟುಕೊಟ್ಟಿತ್ತು. ಆದರೆಪ್ರಬಲ ತಂಡಗಳಾದ ತಮಿಳುನಾಡು, ಮುಂಬೈ ವಿರುದ್ಧ ಹೋರಾಟ ಪ್ರದರ್ಶಿಸಿ ಗೆದ್ದ ರೀತಿ ಅಪ್ಯಾಯಮಾನವಾಗಿತ್ತು. ರೈಲ್ವೆ ವಿರುದ್ಧ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಹಿನ್ನಡೆಯ ಭೀತಿಯಲ್ಲಿದ್ದರೂ ಚೇತರಿಸಿ ಬೋನಸ್‌ ಪಾಯಿಂಟ್‌ ಸಹಿತ ಗೆಲುವು ಪಡೆದಿತ್ತು.

‌ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ನಿರ್ವಹಣೆ ಗಮನಿಸಿದರೆ, ಆರಂಭದ ಹಂತದಲ್ಲಿ ಅಮೋಘವಾಗಿ ಆಡಿ ನಿರ್ಣಾಯಕ ಸಂದರ್ಭಗಳಲ್ಲಿ ಎಡ ವಿರುವುದು ನಿಚ್ಚಳವಾಗಿದೆ. 2016–17ನೇ ಸಾಲಿನಲ್ಲಿ ಕ್ವಾರ್ಟರ್‌ಫೈನಲ್‌ ನಲ್ಲಿ ನಿರ್ಗಮಿಸಿತ್ತು. 2017–18ರಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಪರಾಭವಗೊಂಡಿತ್ತು. ಆದರೆ ಆ ಎರಡೂ ಸಾಲಿನಲ್ಲಿ ಲೀಗ್‌ ಹಂತದಲ್ಲಿ ಎದು ರಾಳಿಗಳ ಮೇಲೆ ಗೆಲುವಿನ ದಂಡಯಾತ್ರೆ ನಡೆಸಿತ್ತು.

ಈ ಬಾರಿ ಪ್ರಮುಖ ಆಟಗಾರರು ರಾಷ್ಟ್ರೀಯ ಸೇವೆಯಲ್ಲಿದ್ದರು. ಗಾಯಾ ಳುಗಳ ಸಮಸ್ಯೆಯೂ ಕರ್ನಾಟಕ ತಂಡ ವನ್ನು ಬಾಧಿಸಿತ್ತು. ಆದರೆ ಹೋರಾಟದ ಕೆಚ್ಚು ತಂಡದ ನೆರವಿಗೆ ಬಂದಿದೆ. ಪ್ರಸಿದ್ಧ ಕೃಷ್ಣ, ಕೆ.ಗೌತಮ್‌, ಅಭಿಮನ್ಯು ಮಿಥುನ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗ ಲಯ ಕಂಡುಕೊಂಡಂತೆ ಕಾಣುತ್ತಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರವಾದ ಪ್ರದರ್ಶನ ಕಂಡುಬಂದಿಲ್ಲ. ಎಡಗೈ ಆರಂಭ ಆಟಗಾರ ದೇವದತ್ತ ಪಡಿಕ್ಕಲ್‌ ಆರು ಅರ್ಧ ಶತಕಗಳಿರುವ 547 ರನ್‌ಗಳೊಡನೆ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಕೆಲವು ಪಂದ್ಯಗಳಿಂದ ಪರದಾಡುತ್ತಿದ್ದಾರೆ. ತಂಡವು ಆರ್‌.ಸಮರ್ಥ್‌ ಅವ ರಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ. ಬರೋಡಾ ವಿರುದ್ಧ ಪಂದ್ಯದಲ್ಲಿ ಫಾರ್ಮ್‌ ಕಂಡುಕೊಂಡ ಕರುಣ್‌ ನಾಯರ್‌ ಅವರಿಂದಲೂ ಉಪಯುಕ್ತ ಬ್ಯಾಟಿಂಗ್‌ ಬಯಸುತ್ತಿದೆ. ಮನೀಷ್‌ ಪಾಂಡೆ ತಂಡಕ್ಕೆ ಮರಳಿರುವುದು ಅಗತ್ಯವಿರುವ ಶಕ್ತಿ ನೀಡಬಲ್ಲದು.

ಗಾಂಧಿ ಮೆಮೋರಿಯಲ್‌ ಸೈನ್ಸ್‌ ಕಾಲೇಜು ಮೈದಾನದ ಪಿಚ್‌ ಬ್ಯಾಟಿಂಗ್‌ಗೆ ನೆರವಾಗಬಹುದೆಂಬ ವಿಶ್ವಾಸ ಕರುಣ್ ಅವರದು. ‘ಪಿಚ್‌ ವೀಕ್ಷಿಸಿದ್ದೇನೆ. ಮಾತನಾಡಿಸಿದ ಕೆಲವು ಸ್ಥಳೀಯರೂ ಬ್ಯಾಟಿಂಗ್‌ಗೆ ಸಹಕಾರಿ ಎಂದು ಹೇಳಿದರು’ ಎಂದು ಹೇಳಿದರು. ‘ಮನೀಷ್‌ ಸಕಾರಾತ್ಮಕ ಮನೋಭಾವದ ಆಟಗಾರ. ಅವರು ಮರಳಿದ್ದರಿಂದ ತಂಡಕ್ಕೆ ಶಕ್ತಿ ಬಂದಿದೆ’ ಎಂದರು.

ಪ್ರಬಲ ಕರ್ನಾಟಕಕ್ಕೆ ಹೋಲಿಸಿದರೆ ಜಮ್ಮು–ಕಾಶ್ಮೀರ ತಂಡ ದುರ್ಬಲ ತಂಡದಂತೆ ಕಾಣುತ್ತಿದೆ. ಆದರೆ ಈ ಬಾರಿ ಅಂಥ ಬಲಾಢ್ಯವಲ್ಲದ ಹಿಮಾಚಲ ಪ್ರದೇಶ, ಮಧ್ಯಪ್ರದೇಶ ತಂಡಗಳು ಕರ್ನಾಟಕಕ್ಕೆ ತಲೆನೋವು ತಂದಿದೆ ಎಂಬುದೂ ಗಮನಾರ್ಹ ಅಂಶ.

ಜಮ್ಮು ಕಾಶ್ಮೀರ ‘ಸಿ’ ಗುಂಪಿನಲ್ಲಿ39 ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಗಳಿಸಿ ಎಂಟರ ಘಟ್ಟ ತಲುಪಿದೆ. ತವರಿನಲ್ಲಿ ಪರ್ವೇಜ್‌ ರಸೂಲ್‌ ಅವರಸ್ಫೂರ್ತಿಯುತ ನಾಯಕತ್ವದಡಿ ತಂಡ ಇನ್ನಷ್ಟು ಉತ್ತಮ ಪ್ರದರ್ಶನಕ್ಕೆ ಯತ್ನಿಸುವುದು ಖಚಿತ. ಆದರೆ ಅನುಭವಿ ಆಟಗಾರರಿರುವ ಕರ್ನಾಟಕ ತಂಡ ಮೇಲ್ನೋಟಕ್ಕೆ ನೆಚ್ಚಿನ ತಂಡವಾಗಿ ಕಾಣಿಸುತ್ತಿದೆ.

ತಂಡಗಳು: ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್‌, ದೇವದತ್ತ ಪಡಿಕ್ಕಲ್‌, ಮನೀಷ್‌ ಪಾಂಡೆ, ಪವನ್‌ ದೇಶಪಾಂಡೆ, ಬಿ.ಆರ್.ಶರತ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಪ್ರಸಿದ್ಧ ಕೃಷ್ಣ, ಶರತ್‌ ಶ್ರೀನಿವಾಸ್‌, ಕೆ.ವಿ.ಸಿದ್ಧಾರ್ಥ್‌.

ಜಮ್ಮು ಮತ್ತು ಕಾಶ್ಮೀರ: ಪರ್ವೇಜ್ ರಸೂಲ್‌ (ನಾಯಕ), ಸೂರ್ಯಾಂಶ್‌ ರೈನಾ, ಜಿಯಾದ್‌ ಮಗ್ರೆ, ಶುಭಂ ಖಜೂರಿಯಾ, ಶುಭಂ ಪುಂದಿರ್‌, ಅಬ್ದುಲ್‌ ಸಮದ್‌, ಫಜಿಲ್‌ ರಶೀದ್‌ (ವಿಕೆಟ್‌ ಕೀಪರ್‌), ಅಕಿಬ್‌ ನಬಿ, ರಾಮ್‌ ದಯಾಳ್‌, ಅಬಿದ್‌ ಮುಷ್ತಾಕ್‌, ಉಮರ್‌ ನಜೀರ್‌ ಮೀರ್‌, ಮುಜ್ತಾಬ ಯೂಸುಫ್‌, ಮೊಹಮ್ಮದ್ ಮುದಾಸಿರ್‌, ಒವೈಸ್‌ ಅಮೀನ್‌ ಷಾ.

ಪಂದ್ಯ ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT