ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕದ ‘ವೇಗದ ಶಕ್ತಿ’ ವಿಜೃಂಭಣೆ

ಕೌಶಿಕ್, ಪ್ರತೀಕ್, ಮಿಥುನ್, ಮೋರೆ ಮಿಂಚು; ಕಡಿಮೆ ಮೊತ್ತಕ್ಕೆ ಕುಸಿದ ಮುಂಬೈ
Last Updated 3 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ಶುಕ್ರವಾರ ಬೆಳಿಗ್ಗೆ ಕರ್ನಾಟಕದ ಮಧ್ಯಮವೇಗಿಗಳು ನಾಯಕ ಕರುಣ್ ನಾಯರ್ ಅವರ ನಿರ್ಧಾರವನ್ನು ಬೆಂಬಲಿಸುವ ಕೆಲಸ ಮಾಡಿದರು. ಸಂಜೆ ವೇಳಿಗೆ ಮುಂಬೈ ಸ್ಪಿನ್ನರ್‌ಗಳು ತಮ್ಮ ನಾಯಕ ಸೂರ್ಯಕುಮಾರ್ ಯಾದವ್ ಆಟದ ಮೌಲ್ಯ ಹೆಚ್ಚಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದರು.

ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಪಂದ್ಯದ ಮೊದಲ ದಿನವು ಇಂತಹ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಯಿತು ಇದರಿಂದಾಗಿ ಮೊದಲ ಇನಿಂಗ್ಸ್‌ ಮುನ್ನಡೆ ಯಾರಿಗೆಂಬ ಕುತೂಹಲಕ್ಕೂ ಕಾರಣವಾಗಿದೆ. ಇದೆಲ್ಲಕ್ಕೂ ಮೂಲ ಕಾರಣ ಬೆಳಿಗ್ಗೆ ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು. ತಂಡದ ಅಭಿಮನ್ಯು ಮಿಥುನ್ (48ಕ್ಕೆ2), ವಿ. ಕೌಶಿಕ್ (45ಕ್ಕೆ3), ರೋನಿತ್ ಮೋರೆ (47ಕ್ಕೆ2) ಮತ್ತು ಎಡಗೈ ಮಧ್ಯಮವೇಗಿ ಪ್ರತೀಕ್ ಜೈನ್ (20ಕ್ಕೆ2) ಅವರ ದಾಳಿಯು ರಂಗೇರಿತು. ಕೇವಲ 60 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡ ಮುಂಬೈ ಮಂಕಾಯಿತು. ಪೃಥ್ವಿ ಶಾ, ಆದಿತ್ಯ ತಾರೆ, ಅಜಿಂಕ್ಯ ರಹಾನೆ ಮತ್ತು ಸಿದ್ಧೇಶ್ ಲಾಡ್ ಅವರಂತಹ ಉತ್ತಮ ಬ್ಯಾಟಿಂಗ್ ಪಡೆಯನ್ನು ಬೌಲರ್‌ಗಳು ಕಟ್ಟಿಹಾಕಿದರು. ಈ ಹಂತದಲ್ಲಿ ನಾಯಕ ಸೂರ್ಯಕುಮಾರ್ (77; 94ಎ, 10ಬೌಂ, 2ಸಿ) ದಿಟ್ಟ ಹೋರಾಟ ತಂಡಕ್ಕೆ ತುಸು ಬಲ ತುಂಬಿತು. ತಂಡವು 194 ರನ್‌ಗಳಿಗೆ ಆಲೌಟ್ ಆಯಿತು. ಒಂದು ವಿಕೆಟ್ ಮಾತ್ರ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಪಾಲಾಯಿತು.

ತಮ್ಮ ಕ್ರಿಕೆಟ್ ಭವಿಷ್ಯದ ‘ಅಗ್ನಿಪರೀಕ್ಷೆ’ ಎದುರಿಸುತ್ತಿರುವ ಆರ್. ಸಮರ್ಥ್ (ಬ್ಯಾಟಿಂಗ್ 40) ಮತ್ತು ದೇವದತ್ತ ಪಡಿಕ್ಕಲ್ (32 ರನ್) ಉತ್ತಮ ಆರಂಭ ನೀಡಿದರು. ಇಬ್ಬರ ಆಟದ ಮುಂದೆ ಮುಂಬೈನ ದಾಳಿಯು ತುಸು ಮಂಕಾದಂತೆ ಕಂಡಿತು. ಆದರೆ, ದಿನದಾಟದ ಕೊನೆಗೆ ಕೆಲವು ನಿಮಿಷಗಳು ಬಾಕಿಯಿದ್ದಾಗ ದಾಳಿಗಿಳಿದ ಎಡಗೈ ಸ್ಪಿನ್ನರ್ ಶಮ್ಸ್ ಮಲಾನಿ ಕೇವಲ ಮೂರು ಎಸೆತಗಳ ಅಂತರದಲ್ಲಿ ಎರಡು ವಿಕೆಟ್ ಗಳಿಸಿದರು. ಲಯದಲ್ಲಿರುವ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮತ್ತು ಡೇಗಾ ನಿಶ್ಚಲ್ ಬದಲಿಗೆ ಸ್ಥಾನ ಪಡೆದಿದ್ದ ಅಭಿಷೇಕ್ ರೆಡ್ಡಿ ಅವರ ವಿಕೆಟ್‌ಗಳನ್ನು ಮಲಾನಿ ಕಬಳಿಸಿದರು. ಮತ್ತೆ ಮುಂಬೈ ಪುಟಿದೆದ್ದಿತು. ಪದಾರ್ಪಣೆ ಮಾಡಿದ ರೋಹನ್ ಕದಂ ಕೇವಲ ಒಂದು ಬೌಂಡರಿ ಹೊಡೆದು, ಸ್ಪಿನ್ನರ್ ಶಶಾಂಕ್‌ಗೆ ವಿಕೆಟ್ ಒಪ್ಪಿಸಿದರು. ದಿನದಾಟದ ಕೊನೆಗೆ ಕರ್ನಾಟಕವು ಮೂರು ವಿಕೆಟ್‌ಗಳಿಗೆ 70 ರನ್‌ ಗಳಿಸಿತು.

ಕ್ರೀಸ್‌ನಲ್ಲಿರುವ ಸಮರ್ಥ್ ಮತ್ತು ಖಾತೆ ತೆರಯದ ನಾಯಕ ಕರುಣ್ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ಮೇಲೆ ಈಗ ದೊಡ್ಡ ಹೊಣೆ ಇದೆ. ಹೋದ ಪಂದ್ಯದಲ್ಲಿ ಕರುಣ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ್ದರು.

41 ಬಾರಿಯ ಚಾಂಪಿಯನ್ ಮುಂಬೈ ತಂಡವು ಈ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ. ಎರಡನೇಯದ್ದರಲ್ಲಿ ರೈಲ್ವೆಸ್ ಎದುರು 10 ವಿಕೆಟ್‌ಗಳಿಂದ ಸೋತಿದೆ. ಕರ್ನಾಟಕ ತಂಡವು ಮೊದಲಿಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿತ್ತು. ಇನ್ನುಳಿದ ಎರಡರಲ್ಲಿ ಡ್ರಾ ಮಾಡಿಕೊಂಡಿತ್ತು. ಅದರಲ್ಲೂ ಮೈಸೂರಿನಲ್ಲಿ ಹಿಮಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿತ್ತು. ಕೊನೆಗೂ ಡ್ರಾ ಸಾಧಿಸಿ ಒಂದು ಪಾಯಿಂಟ್ ಗಳಿಸಲಷ್ಟೇ ಶಕ್ತವಾಗಿತ್ತು.

*
ಮೊದಲ ದಿನವೇ ಚೆಂಡು ಇಷ್ಟು ಪ್ರಮಾಣದಲ್ಲಿ ತಿರುವು ಪಡೆಯುತ್ತದೆ ಅಂದುಕೊಂಡಿರಲಿಲ್ಲ. ಚಾಣಾಕ್ಷತೆಯಿಂದ ಆಡಿದರೆ ಮಾತ್ರ ಯಶಸ್ಸು ಸಾಧ್ಯ.
-ಸೂರ್ಯಕುಮಾರ್ ಯಾದವ್, ಮುಂಬೈ ತಂಡದ ನಾಯಕ

**

ಇತರ ಪಂದ್ಯಗಳ ಸಂಕ್ಷಿಪ್ತ ಸ್ಕೋರು
ನವದೆಹಲಿ, ಪಾಲಂ ಕ್ರೀಡಾಂಗಣ: ಮಹಾರಾಷ್ಟ್ರ: 30.2 ಓವರ್‌ಗಳಲ್ಲಿ 44 (ಚಿರಾಗ್ ಖುರಾನಾ 14; ಸಚ್ಚಿದಾನಂದ ಪಾಂಡೆ 18ಕ್ಕೆ3, ಪೂನಮ್ ಪೂನಿಯಾ 11ಕ್ಕೆ5), ಸರ್ವಿಸಸ್: 51 ಓವರ್‌ಗಳಲ್ಲಿ 4ಕ್ಕೆ141 (ರವಿ ಚೌಹಾಣ್ ಬ್ಯಾಟಿಂಗ್ 49, ರಜತ್ ಪಲೀವಾಲ 42, ಗೆಹ್ಲಾಟ್ ರಾಹುಲ್ ಸಿಂಗ್ ಬ್ಯಾಟಿಂಗ್ 22, ಅನುಪಮ್ ಸಂಕ್ಲೇಚಾ 37ಕ್ಕೆ2); ಡೆಹ್ರಾಡೂನ್: ಅಸ್ಸಾಂ: 92 ಓವರ್‌ಗಳಲ್ಲಿ 5ಕ್ಕೆ237 (ಗೋಕುಲ್ ಶರ್ಮಾ 47, ರಿಯಾನ್ ಪರಾಗ್ ಬ್ಯಾಟಿಂಗ್ 104 , ಕುನಾಲ್ ಸೈಕಿಯಾ ಬ್ಯಾಟಿಂಗ್ 34, ಸನ್ನಿ ರಾಣಾ 19ಕ್ಕೆ2, ಮಯಂಕ್ ಮಿಶ್ರಾ 54ಕ್ಕೆ2) ಉತ್ತರಾಖಂಡದ ವಿರುದ್ಧ; ಮಣಿಪುರ: 32.1 ಓವರ್‌ಗಳಲ್ಲಿ 106 (ಅಲ್ ರಶೀದ್ ಮೊಹಮ್ಮದ್ 43, ರೆಕ್ಸ್ ಸಿಂಗ್ 21, ವಿಜೇಶ್ ಪ್ರಭುದೇಸಾಯಿ 14ಕ್ಕೆ6), ಗೋವಾ: 57 ಓವರ್‌ಗಳಲ್ಲಿ 2ಕ್ಕೆ225 (ಸುಮೀರನ್ ಅಮೋಣಕರ್ 115, ಆದಿತ್ಯ ಕೌಶಿಕ್ 34, ವೈಭವ್ ಗೋವೆಕರ್ 64); ಹೈದರಾಬಾದ್: ಕೇರಳ: 41 ಓವರ್‌ಗಳಲ್ಲಿ 7ಕ್ಕೆ126 (ಸಚಿನ್ ಬೇಬಿ 29, ಸಲ್ಮಾನ್ ನೈಜರ್ 37, ಮೊಹಮ್ಮದ್ ಸಿರಾಜ್ 36ಕ್ಕೆ2, ರವಿಕಿರಣ್ 24ಕ್ಕೆ3) ವಿರುದ್ಧ: ಹೈದರಾಬಾದ್; ಮೊಹಾಲಿ: ಪಂಜಾಬ್: 82 ಓವರ್‌ಗಳಲ್ಲಿ 8ಕ್ಕೆ266 (ಗುರು ಕೀರತ್ ಸಿಂಗ್ ಮಾನ್ 65, ಮನದೀಪ್ ಸಿಂಗ್ 81, ಅನ್ಮೋಲ್‌ಪ್ರೀತ್ ಸಿಂಗ್ 45, ಕನ್ವರ್ ಬಿಧುರಿ 62ಕ್ಕೆ3, ತೇಜಸ್ ಬರೂಕಾ 34ಕ್ಕೆ2) ದೆಹಲಿ ವಿರುದ್ಧ. ಜೈಪುರ: ರಾಜಸ್ಥಾನ: 49.5 ಓವರ್‌ಗಳಲ್ಲಿ 151(ಅಶೋಕ್ ಮನೇರಿಯಾ 74, ಚೀಪುರಪಳ್ಳಿ ಸ್ಟೀಫನ್ 67ಕ್ಕೆ4, ಕೆ.ವಿ. ಶಶಿಕಾಂತ್ 50ಕ್ಕೆ4) ವಿರುದ್ಧ ಆಂಧ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT