ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆಯಾಟದ ಬಲಕ್ಕೆ ಒಲಿದ ಮುನ್ನಡೆ

ರಣಜಿ: ಆರು ವಿಕೆಟ್‌ ಪಡೆದ ಸೌರಭ್‌; ಶ್ರೇಯಸ್ ಅರ್ಧಶತಕದ ತಾಳ್ಮೆಯ ಬ್ಯಾಟಿಂಗ್‌ಗೆ ಉತ್ತರ ಪ್ರದೇಶ ಸುಸ್ತು
Last Updated 19 ಡಿಸೆಂಬರ್ 2019, 19:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯಾರಿಗೆ ಇನಿಂಗ್ಸ್ ಮುನ್ನಡೆ? ಇದು ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಪಂದ್ಯದ ಗುರುವಾರದ ಆಟದಲ್ಲಿ ಕಾಡಿದ ಪ್ರಶ್ನೆ.

ಈ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದು ರಾಜ್ಯ ತಂಡದ ಭರವಸೆಯ ಬ್ಯಾಟ್ಸ್‌ ಮನ್‌ ಶ್ರೇಯಸ್ ಗೋಪಾಲ್‌. ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧದ ಪಂದ್ಯ ದಲ್ಲಿ 40 ರನ್‌ಗಳ ಮುನ್ನಡೆ ಗಳಿಸಿತು.

ರಾಜನಗರದ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಬೆಳಿಗ್ಗೆಯಿಂ ದಲೇ ಎರಡೂ ತಂಡದವರು ಇನಿಂಗ್ಸ್‌ ಮುನ್ನಡೆ ಪಡೆಯಲು ತೀವ್ರ ಪೈಪೋಟಿ ನಡೆಸಿದರು. ಏಕೆಂದರೆ, ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 281 ರನ್‌ ಗಳಿಸಿತ್ತು. ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ ಬುಧವಾರದ ಅಂತ್ಯಕ್ಕೆ 59 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 168 ರನ್ ಪೇರಿಸಿತ್ತು. ಮುನ್ನಡೆ ಪಡೆಯಲು 114 ರನ್ ಬೇಕಿತ್ತು.

ರಾಜ್ಯದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ದರಿಂದ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಡುವ ಜವಾಬ್ದಾರಿ ಉಪನಾಯಕ ಶ್ರೇಯಸ್ ಮೇಲಿತ್ತು. ಇದನ್ನು ಅವರು ಅತ್ಯಂತ ತಾಳ್ಮೆಯಿಂದ ನಿಭಾಯಿಸಿದರು.

ಬರೋಬ್ಬರಿ ಐದು ತಾಸು ಉತ್ತರ ಪ್ರದೇಶ ಬೌಲರ್‌ಗಳನ್ನು ಎದುರಿಸಿ 182 ಎಸೆತಗಳಲ್ಲಿ 58 ರನ್‌ ಗಳಿಸಿದರು. ಇದರಿಂದ ಕರ್ನಾಟಕಕ್ಕೆ 118ನೇ ಓವರ್‌ನಲ್ಲಿ ಮುನ್ನಡೆ ಲಭಿ ಸಿತು. ಒಟ್ಟು 135.5 ಓವರ್‌ಗಳಲ್ಲಿ 321 ರನ್ ಪೇರಿಸಿತು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಉತ್ತರ ಪ್ರದೇಶ ಗುರುವಾರದ ಅಂತ್ಯಕ್ಕೆ 11 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 29 ರನ್‌ ಗಳಿಸಿದೆ. ಶುಕ್ರವಾರ ಕೊನೆಯ ದಿನದಾಟವಾಗಿದೆ.

ಜೊತೆಯಾಟಗಳ ಗುಚ್ಛ: ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಯಾಗಿರುವ ಶ್ರೇಯಸ್ ನಾಲ್ವರು ಆಟಗಾರರ ಜೊತೆ ಆಡಿದ ಸೊಗಸಾದ ಜೊತೆಯಾಟಗಳು ಇನಿಂಗ್ಸ್‌ ಮುನ್ನಡೆಗೆ ಬಹುಮುಖ್ಯ ಕಾರಣವಾದವು.

ಶ್ರೇಯಸ್‌ ಐದನೇ ವಿಕೆಟ್‌ಗೆ ಅಭಿಷೇಕ್ ರೆಡ್ಡಿ ಜೊತೆ 37 ರನ್‌ (85 ನಿಮಿಷ), ಆರನೇ ವಿಕೆಟ್‌ಗೆ ಬಿ.ಆರ್‌. ಶರತ್‌ ಜೊತೆ 20 ರನ್‌ (32 ನಿಮಿಷ), ಏಳನೇ ವಿಕೆಟ್‌ಗೆ ಡೇವಿಡ್‌ ಮಥಾಯಸ್‌ ಜೊತೆ 20 ರನ್‌ (49 ನಿಮಿಷ) ಮತ್ತು ಎಂಟನೇ ವಿಕೆಟ್‌ಗೆ ಜಗದೀಶ ಸುಚಿತ್‌ 57 ರನ್‌ (128 ನಿ.) ಜೊತೆಯಾಟಗಳನ್ನು ಆಡಿದರು. ಹೀಗೆ ಸಣ್ಣ ಮೊತ್ತಗಳ ಜೊತೆ ಯಾಟವೇ ಇನಿಂಗ್ಸ್‌ ಮುನ್ನಡೆಗೆ ಹೂ ಗುಚ್ಛವಾಯಿತು.

ಶ್ರೇಯಸ್‌ ಮತ್ತು ಸುಚಿತ್‌ ನಡುವಿನ ಜೊತೆಯಾಟ ಮುರಿಯಲು ಉತ್ತರ ಪ್ರದೇಶ ಮಾಡಿದ ಪ್ರಯತ್ನಕ್ಕೆ
ಬೇಗನೆ ಫಲ ಸಿಗಲಿಲ್ಲ.

ಅಂತಿಮವಾಗಿ 118ನೇ ಓವರ್‌ನಲ್ಲಿ ಸೌರಭ್‌ ಬೌಲಿಂಗ್‌ನಲ್ಲಿ ಶ್ರೇಯಸ್‌ ಎಲ್‌ಬಿ ಬಲೆಯಲ್ಲಿ ಬಂದಿಯಾದರು. ಅಗ ಮುನ್ನಡೆಗೆ ಎರಡು ರನ್ ಮಾತ್ರ ಅಗತ್ಯವಿತ್ತು. ಅಭಿಮನ್ಯು ಮಿಥುನ್‌ (ಔಟಾಗದೆ 34, 48 ಎಸೆತ, 3 ಬೌಂಡರಿ, 1 ಸಿಕ್ಸರ್‌) 117.5ನೇ ಓವರ್‌ಗಳಲ್ಲಿ ಬೌಂಡರಿ ಹೊಡೆದು ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು.

ಕೊನೆಯ ವಿಕೆಟ್‌ಗೆ ರೋನಿತ್ ಹಾಗೂ ಮಿಥುನ್‌ 32 ರನ್ ಕಲೆಹಾಕಿದರು.

ಇನಿಂಗ್ಸ್‌ ಮುನ್ನಡೆ ಪಡೆ ಯುವುದು ಅತ್ಯಂತ ಮುಖ್ಯ ವಾಗಿತ್ತು. ಆದ್ದರಿಂದ ವಿಕೆಟ್‌ ಕಳೆದು ಕೊಳ್ಳದಂತೆ ಎಚ್ಚರಿಕೆ ವಹಿಸಿದ್ದೆವು. ಹೀಗಾಗಿ ವೇಗವಾಗಿ ರನ್‌ ಗಳಿಸಲು ಸಾಧ್ಯವಾಗಲಿಲ್ಲ.
-ಶ್ರೇಯಸ್‌,ಕರ್ನಾಟಕದ ಆಟಗಾರ

***

ಸ್ಕೋರ್ ವಿವರ

ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ 281 (111.2 ಓವರ್‌ಗಳು)

ಕರ್ನಾಟಕ ಪ್ರಥಮ ಇನಿಂಗ್ಸ್ 321 (135.5 ಓವರ್‌ಗಳು)

(ಬುಧವಾರದ ಅಂತ್ಯಕ್ಕೆ 59 ಓವರ್‌ಗಳಲ್ಲಿ 4 ವಿಕೆಟ್‌ಗೆ 168)

ಅಭಿಷೇಕ ರೆಡ್ಡಿ ಬ್ಯಾಟಿಂಗ್ ಸಿ. ರಿಂಕು ಸಿಂಗ್ ಬಿ. ಸೌರಭ್‌ ಕುಮಾರ 32

ಶ್ರೇಯಸ್‌ ಗೋಪಾಲ ಎಲ್‌ಬಿಡಬ್ಲ್ಯು ಬಿ. ಸೌರಭ್‌ ಕುಮಾರ 58

ಬಿ.ಆರ್‌. ಶರತ್‌ ಸಿ. ಅಂಕಿತ್‌ ರಜಪೂತ್‌ ಬಿ. ಸೌರಭ್‌ ಕುಮಾರ 16

ಡೇವಿಡ್‌ ಮಥಾಯಸ್‌ ಸ್ಟಂಪ್ಡ್‌ ಉಪೇಂದ್ರ ಯಾದವ್ ಬಿ. ಸೌರಭ್‌ ಕುಮಾರ 4

ಜಗದೀಶ ಸುಚಿತ್‌ ಸಿ. ಅಲ್ಮಾಸ್‌ ಶೌಕತ್‌ ಬಿ. ಸೌರಭ್‌ ಕುಮಾರ 28

ಅಭಿಮನ್ಯು ಮಿಥುನ್‌ ಔಟಾಗದೆ 34

ರೋನಿತ್‌ ಮೋರೆ ಬಿ. ಮೊಹಮ್ಮದ್‌ ಸೈಫ್‌ 7

ಇತರೆ: (ಲೆಗ್‌ ಬೈ–8) 8

ವಿಕೆಟ್‌ ಪತನ: 5–182 (ಅಭಿಷೇಕ; 69.4), 6–202 (ಶರತ್‌; 77.2), 7–222 (ಡೇವಿಡ್‌; 89.1), 8–279 (ಶ್ರೇಯಸ್‌; 117.3), 9–288 (ಸುಚಿತ್‌; 121.5), 10–321 (ರೋನಿತ್‌; 135.5).

ಬೌಲಿಂಗ್‌: ಅಂಕಿತ್‌ ರಜಪೂತ್‌ 9–2–18–0, ಶುಭಮ್‌ ಮಾವಿ 24–5–53–1, ಮೋಹಿತ್ ಜಾಂಗ್ರಾ 29–8–83–2, ಸೌರಭ್‌ ಕುಮಾರ 57–15–116–6, ಮೊಹಮ್ಮದ್ ಸೈಫ್‌ 6.5–0–23–1, ಅಕ್ಷದೀಪ್ ನಾಥ್‌ 8–3–15–0, ರಿಂಕು ಸಿಂಗ್‌ 2–0–5–0.


ಉತ್ತರ ಪ್ರದೇಶ ದ್ವಿತೀಯ ಇನಿಂಗ್ಸ್‌ 1 ವಿಕೆಟ್‌ಗೆ 29 (11 ಓವರ್‌ಗಳು)

ಅಲ್ಮಾಸ್‌ ಶೌಕತ್‌ ಬ್ಯಾಟಿಂಗ್‌ 6

ಆರ್ಯನ್‌ ಜುಯಾಲ್‌ ಸಿ. ಜಗದೀಶ ಸುಚಿತ್‌ ಬಿ. ರೋನಿತ್‌ ಮೋರೆ 0

ಮಾಧವ ಕೌಶಿಕ್‌ ಬ್ಯಾಟಿಂಗ್‌ 19

ಇತರೆ: (ಬೈ–4) 4

ವಿಕೆಟ್‌ ಪತನ: 1–0 (ಆರ್ಯನ್‌; 3.2)

ಬೌಲಿಂಗ್‌: ಅಭಿಮನ್ಯು ಮಿಥುನ್‌ 3–3–0–0, ರೋನಿತ್‌ ಮೋರೆ 3–1–16–1, ಡೇವಿಡ್ ಮಥಾಯಸ್‌ 3–3–0–0, ಜಗದೀಶ ಸುಚಿತ್‌ 2–0–9–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT