ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ಉತ್ತರ ಪ್ರದೇಶಕ್ಕೆ 213 ರನ್‌ ಗೆಲುವಿನ ಗುರಿ ಒಡ್ಡಿದ ಕರ್ನಾಟಕ

Last Updated 8 ಜೂನ್ 2022, 5:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡವು ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಉತ್ತರಪ್ರದೇಶಕ್ಕೆ 213 ರನ್‌ಗಳ ಗೆಲುವಿನ ಗುರಿ ಒಡ್ಡಿದೆ.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 98 ರನ್‌ಗಳ ಮುನ್ನಡೆ ಗಳಿಸಿದ್ದ ಕರ್ನಾಟಕವು ಎರಡನೇ ಇನಿಂಗ್ಸ್‌ನಲ್ಲಿ 39 ಓವರ್‌ಗಳಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು. ಪಂದ್ಯದ ಎರಡನೇ ದಿನವಾದ ಮಂಗಳವಾರ ಈ ಪಿಚ್‌ನಲ್ಲಿ 21 ವಿಕೆಟ್‌ಗಳು ಪತನವಾಗಿದ್ದವು. ಅದರಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 253 ರನ್‌ಗಳಿಗೆ ಉತ್ತರವಾಗಿ ಉತ್ತರಪ್ರದೇಶಕ್ಕೆ 155 ರನ್ ಮಾತ್ರ ಗಳಿಸಲು ಸಾಧ್ಯವಾಗಿತ್ತು. ಕರ್ನಾಟಕದ ರೋನಿತ್ ಮೋರೆ, ವಿದ್ವತ್ ಕಾವೇರಪ್ಪ ಮತ್ತು ವೈಶಾಖ್ ವಿಜಯಕುಮಾರ್ ಅವರ ಬೌಲಿಂಗ್ ಮುಂದೆ ಕರಣ್ ಶರ್ಮಾ ಬಳಗವು ಕುಸಿದಿತ್ತು.

ನಂತರ ಎರಡನೇ ಇನಿಂಗ್ಸ್ ಆರಂಭಿಸಿದ್ದ ಕರ್ನಾಟಕವು ದಿನದಾಟದ ಅಂತ್ಯಕ್ಕೆ 8 ವಿಕೆಟ್‌ಗಳಿಗೆ 100 ರನ್‌ ಗಳಿಸಿತ್ತು. ಈ ಮೊತ್ತಕ್ಕೆ ಬುಧವಾರ ಬೆಳಿಗ್ಗೆ 14 ರನ್‌ ಸೇರಿಸಿದ ಕರ್ನಾಟಕ ತಂಡದ ಕೊನೆಯ ಎರಡು ವಿಕೆಟ್‌ಗಳು ಪತನವಾದವು.

ಪಂದ್ಯದಲ್ಲಿ ಬುಧವಾರವೂ ಸೇರಿದಂತೆ ಇನ್ನೂ ಮೂರು ದಿನಗಳು ಬಾಕಿಯಿವೆ. ಆದರೆ, ಬೌಲರ್‌ಗಳಿಗೆ ಹೆಚ್ಚು ನೆರವು ಸಿಗುತ್ತಿರುವ ಪಿಚ್‌ನಲ್ಲಿ ತಾಳ್ಮೆ ಮತ್ತು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಬ್ಯಾಟರ್‌ಗಳಿಗೆ ರನ್‌ ಗಳಿಸುವ ಅವಕಾಶವೂ ಇದೆ. ಕರ್ನಾಟಕದ ಪ್ರತಿಭಾವಂತ ಬೌಲಿಂಗ್ ಪಡೆಯನ್ನು ಉತ್ತರಪ್ರದೇಶದ ಬ್ಯಾಟಿಂಗ್ ಪಡೆಯು ಯಶಸ್ವಿಯಾಗಿ ಎದುರಿಸಿ ನಿಂತರೆ ಗೆಲುವು ಸಾಧ್ಯ. ಆದರೆ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಕರ್ನಾಟಕವೂ ದಿಟ್ಟ ಹೋರಾಟಕ್ಕೆ ಸಿದ್ಧವಾಗಿರುವುದರಿಂದ ಪಂದ್ಯವು ಕುತೂಹಲ ಹುಟ್ಟಿಸಿದೆ.

ಶರತ್‌ಗೆ ಗಾಯ; ಪಾಂಡೆ ಕೀಪಿಂಗ್

ಉತ್ತರಪ್ರದೇಶದ ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕದ ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಗೆ ಗಾಯವಾಯಿತು. ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಅವರ ಬೆರಳಿಗೆ ಚೆಂಡು ಬಡಿದು ಗಾಯವಾಯಿತು. ಇದರಿಂದಾಗಿ ಅವರು ಮೈದಾನ ತೊರೆದರು. ಅವರ ಬದಲಿಗೆ ನಾಯಕ ಮನೀಷ್ ಪಾಂಡೆ ಕೀಪಿಂಗ್ ಮಾಡಿದರು.

ಕಾಯ್ದಿಟ್ಟ ಕೀಪರ್ ಬಿ.ಅರ್. ಶರತ್ ಅವರು ಮೈದಾನಕ್ಕೆ ಗ್ಲೌಸ್ ಧರಿಸಿ ಬಂದರು. ಆದರೆ, 11ರ ಬಳಗದಲ್ಲಿರುವವರೇ ಬದಲೀ ಕೀಪರ್ ಆಗಬೇಕು ಎಂದು ಅಂಪೈರ್ ಸೂಚಿಸಿದ್ದರಿಂದ ಶರತ್ ಪೆವಿಲಿಯನ್‌ಗೆ ಮರಳಿದರು. ಪಾಂಡೆ ಕೀಪಿಂಗ್ ಮಾಡಿದರು.

ದೇವದತ್ತ ಪಡಿಕ್ಕಲ್ ಬದಲೀ ಫೀಲ್ಡರ್ ಆಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT