ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಮುನ್ನಡೆಯ ಕುತೂಹಲ

ರಣಜಿ: ವೇಗಿ ಮಿಥುನ್‌ ಮುಡಿಗೆ ಆರು ವಿಕೆಟ್‌, ಉತ್ತಮ ಆರಂಭ ತಂದು ಕೊಟ್ಟ ಪಡಿಕ್ಕಲ್‌
Last Updated 18 ಡಿಸೆಂಬರ್ 2019, 19:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ‘ಮಿಥುನ್‌... ಮಿಥುನ್‌...’ ಎಂದು ಕೂಗಿ ವ್ಯಕ್ತಪಡಿಸುತ್ತಿದ್ದ ಹರ್ಷೋದ್ಗಾರಕ್ಕೆ ‘ಪೀಣ್ಯ ಎಕ್ಸ್‌ಪ್ರೆಸ್‌’ ಖ್ಯಾತಿಯ ಅಭಿಮನ್ಯು ಮಿಥುನ್‌ ನಿರಾಸೆ ಮಾಡಲಿಲ್ಲ. ಅವರು ಪ್ರಮುಖ ಆರು ವಿಕೆಟ್‌ಗಳನ್ನು ಕಬಳಿಸಿ ಸೂರ್ಯನ ಬೆಳಕು ಪ್ರಖರವಾಗುವ ವೇಳೆಗೆ ಕರ್ನಾಟಕ ತಂಡದಲ್ಲಿ ಸಂಭ್ರಮ ತುಂಬಿದರು.

ರಾಜ್ಯ ತಂಡದ ಭರವಸೆಯ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ವೇಗವಾಗಿ ರನ್‌ ಗಳಿಸಿ ಅರ್ಧಶತಕ ದಾಖಲಿಸಿ ಉತ್ತಮ ಆರಂಭ ದೊರಕಿಸಿಕೊಟ್ಟರು. ಅಷ್ಟೇ ವೇಗದಲ್ಲಿ ಕರ್ನಾಟಕದ ನಾಲ್ವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದರು. ಆದ್ದರಿಂದ ರಣಜಿ ಟೂರ್ನಿಯ ‘ಬಿ’ ಗುಂಪಿನ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಯಾರಿಗೆ ಎನ್ನುವ ಕುತೂಹಲ ಗರಿಗೆದರಿದೆ.

ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಮಂಗಳವಾರದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 232 ರನ್ ಗಳಿಸಿತ್ತು. ಒಟ್ಟು 281 ರನ್‌ ಗಳಿಸಿ ಆಲೌಟ್‌ ಆಯಿತು. ಕರ್ನಾಟಕ 59 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 168 ರನ್
ಕಲೆಹಾಕಿದೆ.

ಎರಡನೇ ದಿನದಾಟ ಆರಂಭವಾಗಿ ಒಂದು ತಾಸು 52 ನಿಮಿಷದಲ್ಲಿ ಉತ್ತರ ಪ್ರದೇಶದ ಬ್ಯಾಟ್ಸ್‌ಮನ್‌ಗಳು ಮಿಥುನ್ ವೇಗದ ಬಲೆಯಲ್ಲಿ ಬಂದಿಯಾದರು. ಈ ತಂಡ ಬುಧವಾರ 21.1 ಓವರ್‌ ಬ್ಯಾಟಿಂಗ್‌ ಮಾಡಿ 49 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಇದಕ್ಕೆ ಸಾಕ್ಷಿ. ಇದರಲ್ಲಿ ಮೂರು ವಿಕೆಟ್‌ಗಳು ಮಿಥುನ್ ಪಾಲಾದವು.

ಅನುಭವಿ ಬೌಲರ್‌ ಮಿಥುನ್‌, ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಟೂರ್ನಿಯ ಸೆಮಿಫೈ

ನಲ್‌ನಲ್ಲಿ ಆರು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಪಂದ್ಯದ ಬಳಿಕ ಸ್ನಾಯುಸೆಳೆತದ ಗಾಯಕ್ಕೆ ಒಳಗಾಗಿದ್ದರಿಂದ ಫೈನಲ್‌ ಮತ್ತು ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಈ ರಣಜಿ ಋತುವಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಐದು ವಿಕೆಟ್‌ಗಳ ಗುಚ್ಛ ಎತ್ತಿ ಹಿಡಿದರು. ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಈ ಸಾಧನೆ ಮಾಡಿದ್ದು ವಿಶೇಷ. ಮಿಥುನ್‌ ತಮ್ಮ ಕೊನೆಯ ಸ್ಪೆಲ್‌ನಲ್ಲಿ (9–4–14–3) ಕರಾರುವಾಕ್ಕಾಗಿ ಬೌಲಿಂಗ್ ಮಾಡಿದರು.

ಭೋಜನ ವಿರಾಮಕ್ಕೂ ಮೊದಲೇ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜ್ಯ ತಂಡ ಆರಂಭದಿಂದ ವೇಗವಾಗಿ ರನ್ ಹಾಕಿತು.

ಡೇಗಾ ನಿಶ್ಚಲ್‌ (36) ಮತ್ತು ಪಡಿಕ್ಕಲ್‌ (74, 108 ಎಸೆತ, 177 ನಿಮಿಷ, 10 ಬೌಂಡರಿ) ಮೊದಲ ವಿಕೆಟ್‌ಗೆ 91 ರನ್‌ ಕಲೆಹಾಕಿ ಉತ್ತಮ ಆರಂಭ ತಂದುಕೊಟ್ಟರು. ಪಡಿಕ್ಕಲ್‌ 84 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿಯೂ 78 ರನ್‌ ಗಳಿಸಿದ್ದರು.

ವೇಗವಾಗಿ ರನ್ ಗಳಿಸುತ್ತಿದ್ದ ಈ ಜೋಡಿಯ ಆಟಕ್ಕೆ ಸ್ಪಿನ್ನರ್‌ ಸೌರಭ್‌ ಕುಮಾರ್ ತಡೆಯೊಡ್ಡಿದರು. 30ನೇ ಓವರ್‌ನಲ್ಲಿ ನಿಶ್ಚಲ್‌ ಅವರನ್ನು ಬೌಲ್ಡ್‌ ಮಾಡಿ ‘ಬ್ರೇಕ್‌’ ನೀಡಿದರು.

ಮೊದಲ ವಿಕೆಟ್‌ ಪತನವಾದ ಬಳಿಕ ರಾಜ್ಯ ತಂಡದ ಕುಸಿತ ಆರಂಭವಾಯಿತು. ಆರ್‌. ಸಮರ್ಥ್‌ (11), ಸತತ ವೈಫಲ್ಯ ಅನುಭವಿಸುತ್ತಿರುವ ನಾಯಕ ಕರುಣ್‌ ನಾಯರ್‌ (13) ಮತ್ತು ದೇವದತ್ತ ಔಟಾದರು. 53 ರನ್ ಕಲೆಹಾಕುವಷ್ಟರಲ್ಲಿ ಈ ಮೂರು ವಿಕೆಟ್‌ಗಳು ಪತನವಾಗಿದ್ದು ಉತ್ತರ ಪ್ರದೇಶ ತಂಡದಲ್ಲಿ ಹುಮ್ಮಸ್ಸು ಮೂಡಿಸಿತು.

ಇನಿಂಗ್ಸ್‌ ಮುನ್ನಡೆಗೆ ಅಗತ್ಯವಿರುವ 114 ರನ್‌ ಗಳಿಸುವ ಹೊಣೆ ಉಪನಾಯಕ ಶ್ರೇಯಸ್ ಗೋಪಾಲ್‌, ಅಭಿಷೇಕ ರೆಡ್ಡಿ ಮತ್ತು ಉಳಿದ ನಾಲ್ವರು ಆಟಗಾರರ ಮೇಲಿದೆ. ಆದರೆ, ದಿನದಾಟದ ಮೊದಲ ಅವಧಿಯ ಪಿಚ್‌ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಆದ್ದರಿಂದ ಇನಿಂಗ್ಸ್‌ ಮುನ್ನಡೆಯ ಆಸೆ ಈಡೇರಬೇಕಾದರೆ ರಾಜ್ಯ ತಂಡ ಭೋಜನ ವಿರಾಮದ ತನಕ ರನ್ ಗಳಿಸುವ ಜೊತೆಗೆ ವಿಕೆಟ್‌ ಬೀಳದಂತೆಯೂ ಎಚ್ಚರಿಕೆ ವಹಿಸಬೇಕಿದೆ.

ಈ ಹೊಣೆಯನ್ನು ‘ಯುವ ಪಡೆ’ ಹೇಗೆ ನಿಭಾಯಿಸುತ್ತದೆ ಎನ್ನುವ ಕುತೂಹಲ ಮೂಡಿದೆ.

ಸಂಕ್ಷಿಪ್ತ ಸ್ಕೋರು: ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ 111.2 ಓವರ್‌ಗಳಲ್ಲಿ 281 (ಸೌರಭ್‌ ಕುಮಾರ್‌ 27; ಅಭಿಮನ್ಯು ಮಿಥುನ್‌ 60ಕ್ಕೆ6, ರೋನಿತ್‌ ಮೋರೆ 41ಕ್ಕೆ2, ಶ್ರೇಯಸ್ ಗೋಪಾಲ್ 51ಕ್ಕೆ2). ಕರ್ನಾಟಕ ಪ್ರಥಮ ಇನಿಂಗ್ಸ್‌ 59 ಓವರ್‌ಗಳಲ್ಲಿ 4 ವಿಕೆಟ್‌ಗೆ 168 (ಡೇಗಾ ನಿಶ್ಚಲ್‌ 36, ದೇವದತ್ತ ಪಡಿಕ್ಕಲ್‌ 74, ಆರ್‌. ಸಮರ್ಥ್‌ 11, ಕರುಣ್‌ ನಾಯರ್‌ 13, ಅಭಿಷೇಕ ರೆಡ್ಡಿ ಬ್ಯಾಟಿಂಗ್‌ 23, ಶ್ರೇಯಸ್ ಗೋಪಾಲ್‌ ಬ್ಯಾಟಿಂಗ್‌ 8; ಶುಭಮ್‌ ಮಾವಿ 38ಕ್ಕೆ1, ಮೋಹಿತ್ ಜಾಂಗ್ರಾ 56ಕ್ಕೆ2, ಸೌರಭ್ ಕುಮಾರ್ 50ಕ್ಕೆ1).

ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಎಚ್ಚರಿಕೆಯಿಂದ ಆಡಿ, ನಂತರ ದೊಡ್ಡ ಮೊತ್ತದ ಸವಾಲು ಗಳಿಸುವ ಗುರಿಯಿದೆ. ಉಳಿದ ಬ್ಯಾಟ್ಸ್‌ಮನ್‌ಗಳು ಇದನ್ನು ಮಾಡಲು ಸಮರ್ಥರು
ಅಭಿಮನ್ಯು ಮಿಥುನ್‌
ಕರ್ನಾಟಕದ ಬೌಲರ್‌

ಮಿಥುನ್ ಬೌಲಿಂಗ್‌ ವಿವರ

ಓವರ್‌ 25

ಮೇಡನ್‌ 5

ರನ್‌ 60

ವಿಕೆಟ್‌ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT