ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ 

ಬೆಳಗಾವಿಯ ರೋನಿತ್‌ಗೆ 5 ವಿಕೆಟ್‌
Last Updated 22 ನವೆಂಬರ್ 2018, 9:13 IST
ಅಕ್ಷರ ಗಾತ್ರ

ಬೆಳಗಾವಿ: ಕುಂದಾನಗರಿಯ ಪ್ರತಿಭೆ ರೋನಿತ್ ಮೋರೆ ಹಾಗೂ ಉಳಿದ ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 400 ರನ್‌ ಗಳಿಸಿತ್ತು. ಮುಂಬೈ ತಂಡ ಮೊದಲ ಇನಿಂಗ್ಸ್‌ನಲ್ಲಿ ಬುಧವಾರದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 99 ರನ್‌ ಕಲೆಹಾಕಿತ್ತು. ಮೂರನೇ ದಿನವಾದ ಗುರುವಾರ ಒಟ್ಟು 205 ರನ್‌ ಗಳಿಸಿ ಆಲೌಟ್‌ ಆಯಿತು. ಇದರಿಂದ ಕರ್ನಾಟಕ ತಂಡಕ್ಕೆ 195 ರನ್‌ಗಳ ಮುನ್ನಡೆ ಲಭಿಸಿತು.

ದಿನದಾಟದ ಎರಡನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್‌ ಅವರು ರೋನಿತ್ ಮೋರೆ ಬೌಲಿಂಗ್ ನಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿ ಅಬ್ಬರಿಸುವ ಸೂಚನೆ ನೀಡಿದ್ದರು. ಆದರೆ, ವೇಗಿಗಳಾದ ರೋನಿತ್‌ ಮತ್ತು ಪ್ರಸಿದ್ಧ ಕೃಷ್ಣ ಇದಕ್ಕೆ ಅವಕಾಶ ನೀಡಲಿಲ್ಲ. 117ರಿಂದ ಮೂರು ರನ್‌ ಗಳಿಸುವ ಅಂತರದಲ್ಲಿ ಜಯ್‌ ಬಿಸ್ತಾ, ಸೂರ್ಯಕುಮಾರ್‌ ಯಾದವ್‌ ಮತ್ತು ಆದಿತ್ಯ ತಾರೆ ಅವರನ್ನು ಔಟ್‌ ಮಾಡಿದರು.

ಬೆಳಗಾವಿಯಲ್ಲಿ ಚೊಚ್ಚಲ ರಣಜಿ ಪಂದ್ಯ ಆಡುತ್ತಿರುವ ತವರಿನ ಹುಡುಗ ರೋನಿತ್‌ ಮೋರೆ ನಾಲ್ಕು ವಿಕೆಟ್‌ ಪಡೆದು ಮುಂಬೈ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. 21.5 ಓವರ್ ಬೌಲಿಂಗ್ ಮಾಡಿ ಆರು ಮೇಡನ್‌ ಮಾಡಿ ಐದು ವಿಕೆಟ್‌ ಕಬಳಿಸಿದರು.

ವೇಗಿಗಳಾದ ಪ್ರಸಿದ್ಧ ಎಂ. ಕೃಷ್ಣ ಎರಡು ಮತ್ತು ಅಭಿಮನ್ಯು ಮಿಥುನ್ ಒಂದು ವಿಕೆಟ್‌ ಪಡೆದರು. ವೇಗಿಗಳು ಒಟ್ಟು ಎಂಟು ವಿಕೆಟ್‌ ಉರುಳಿಸಿದರೆ, ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್ ಎರಡು ವಿಕೆಟ್‌ ಕಬಳಿಸಿ ಮುಂಬೈ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.

ರೋನಿತ್‌ ಮೋರೆ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದು ಇದು ಎರಡನೇ ಬಾರಿ. ಹಿಂದೆ 22 ರನ್‌ಗೆ ಐದು ವಿಕೆಟ್‌ಗೆ ಉರುಳಿಸಿದ್ದರು.

ಪೋಷಕರ ಸಂಭ್ರಮ

ರೋನಿತ್ ಮೋರೆ ಅವರ ತಂದೆ ಗಜಾನನ ಮೋರೆ ಮತ್ತು ತಾಯಿ ಸರಿತಾ ಮೋರೆ ಅವರ ಮಗನ ಆಟ ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಬಂದಿದ್ದಾರೆ. ಪ್ರೆಸ್‌ ಬಾಕ್ಸ್‌ನಲ್ಲಿ ಕುಳಿತಿದ್ದ ಅವರು ರೋನಿತ್‌ ಪ್ರತಿ ವಿಕೆಟ್‌ ಪಡೆದಾಗಲೂ ಸಂಭ್ರಮಿಸಿದರು. ಐದನೇ ವಿಕೆಟ್ ಪಡೆದಾಗ ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT