ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕಕ್ಕೆ 176 ರನ್‌ಗಳ ಭರ್ಜರಿ ಜಯ

ಗೌತಮ್‌ ಕೈಚಳಕಕ್ಕೆ ಉರುಳಿದ ರೈಲ್ವೇಸ್‌
Last Updated 25 ಡಿಸೆಂಬರ್ 2018, 17:41 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊನೆಯ ಅವಧಿಯಲ್ಲಿ ಕೆ.ಗೌತಮ್‌ (30ಕ್ಕೆ 6) ನಡೆಸಿದ ಕೈಚಳಕದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ 176 ರನ್‌ಗಳ ಭರ್ಜರಿ ಜಯ ಸಾಧಿಸಿತು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 362 ರನ್‌ಗಳ ಗುರಿ ಬೆನ್ನಟ್ಟಿದ ರೈಲ್ವೇಸ್‌, ಅಂತಿಮ ದಿನವಾದ ಮಂಗಳವಾರ 86 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟಾಯಿತು. ಈ ಜಯದ ಮೂಲಕ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ.

ಎದುರಾಳಿ ತಂಡ ಮೂರು ವಿಕೆಟ್‌ಗೆ 159 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದಾಗ, ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವುದು ಎಂದೇ ಭಾವಿಸಲಾಗಿತ್ತು. ಆದರೆ ಗೌತಮ್ ಅವರ ಕೊನೆಯ ಸ್ಪೆಲ್‌ (14–5–20–5) ಪಂದ್ಯದ ಗತಿಯನ್ನೇ ಬದಲಿಸಿತು. ಅವರಿಗೆ ಇನ್ನೊಂದು ಬದಿಯಲ್ಲಿ ತಕ್ಕ ಸಾಥ್‌ ನೀಡಿದ ಶ್ರೇಯಸ್‌ ಗೋಪಾಲ್ 39 ರನ್‌ಗಳಿಗೆ ಎರಡು ವಿಕೆಟ್‌ ಪಡೆದರು. ರೈಲ್ವೇಸ್‌ ತಂಡ 26 ರನ್‌ಗಳಿಗೆ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು.

ಉತ್ತಮ ಜತೆಯಾಟ: ಒಂದು ವಿಕೆಟ್‌ ನಷ್ಟಕ್ಕೆ 44 ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ ರೈಲ್ವೇಸ್‌, ದಿನದ ಎರಡು ಅವಧಿಗಳಲ್ಲಿ ಛಲದಿಂದ ಬ್ಯಾಟ್‌ ಮಾಡಿತು. ಆರಂಭದಲ್ಲೇ ವಿಕೆಟ್‌ ಪಡೆಯಬೇಕೆಂಬ ಕರ್ನಾಟಕದ ಕನಸಿಗೆ ಸೌರಭ್‌ ವಾಕಸ್ಕರ್‌ ಮತ್ತು ನಿತಿನ್‌ ಭಿಲ್ಲೆ ಅಡ್ಡಿಯಾದರು.

ರೋನಿತ್‌ ಮೋರೆ, ಅಭಿಮನ್ಯು ಮಿಥುನ್‌ ಹಾಗೂ ಪ್ರಸಿದ್ಧ ಕೃಷ್ಣ ಅವರ ದಾಳಿಯನ್ನು ಈ ಜೋಡಿ ಸಮರ್ಥವಾಗಿ ಎದುರಿಸಿತು. ಮಧ್ಯಮ ವೇಗಿಗಳಿಗೆ ಯಶಸ್ಸು ಲಭಿಸದಿದ್ದಾಗ ನಾಯಕ ಮನೀಷ್‌ ಪಾಂಡೆ ಅವರು 15ನೇ ಓವರ್‌ನಲ್ಲಿ ಗೌತಮ್‌ ಮೂಲಕ ಸ್ಪಿನ್‌ ದಾಳಿ ಆರಂಭಿಸಿದರು. ಅದೇ ಓವರ್‌ನಲ್ಲಿ ರನೌಟ್‌ ರೂಪದಲ್ಲಿ ಕರ್ನಾಟಕ ಮೊದಲ ವಿಕೆಟ್‌ ಪಡೆಯಿತು.

ಜೆ.ಸುಚಿತ್‌ ಅವರ ಚುರುಕಿನ ಫೀಲ್ಡಿಂಗ್‌ಗೆ ಸೌರಭ್‌ (43; 96 ಎಸೆತ) ರನೌಟಾದರು. ಎರಡನೇ ವಿಕೆಟ್‌ಗೆ 80 ರನ್‌ಗಳ ಜತೆಯಾಟ ಮೂಡಿಬಂತು. ಭಿಲ್ಲೆ ಅವರನ್ನು ಕೂಡಿಕೊಂಡ ಪ್ರಥಮ್‌ ಸಿಂಗ್‌ ಭೋಜನವಿರಾಮದವರೆಗೆ ಹೆಚ್ಚಿನ ವಿಕೆಟ್‌ ಬೀಳದಂತೆ ನೋಡಿಕೊಂಡರು.

ಎರಡನೇ ಅವಧಿಯ ಆರಂಭದಲ್ಲೇ ಕರ್ನಾಟಕಕ್ಕೆ ಯಶಸ್ಸು ದೊರೆಯಿತು. ಏಳನೇ ಓವರ್‌ನಲ್ಲಿ ಗೌತಮ್‌ ಅವರು ನಿತಿನ್‌ (39, 131 ಎಸೆತ) ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದರು. ಇದೇ ಅವಧಿಯ ಅಂತಿಮ ಓವರ್‌ನಲ್ಲಿ ಪ್ರಥಮ್‌ ಸಿಂಗ್ (48 ರನ್‌, 151 ಎಸೆತ) ಅವರನ್ನೂ ಗೌತಮ್‌ ಪೆವಿಲಿಯನ್‌ಗೆ ಅಟ್ಟಿದರು. ಚಹಾ ವಿರಾಮಕ್ಕೆ ತೆರಳುವಾಗ ಎದುರಾಳಿ ತಂಡ 4 ವಿಕೆಟ್‌ಗೆ 159 ರನ್‌ ಗಳಿಸಿತ್ತು.

ಹಠಾತ್‌ ಕುಸಿತ: ಕರ್ನಾಟಕದ ಗೆಲುವಿಗೆ ಅಂತಿಮ ಅವಧಿಯಲ್ಲಿ ಆರು ವಿಕೆಟ್‌ಗಳು ಬೇಕಿದ್ದವು. 10 ಓವರ್‌ಗಳಲ್ಲೇ ಈ ವಿಕೆಟ್‌ಗಳನ್ನು ಪಡೆದು ಜಯ ಒಲಿಸಿಕೊಂಡಿತು. ಗೌತಮ್‌ ಅವರ ಎಸೆತಗಳ ಮರ್ಮವನ್ನು ಅರಿಯಲು ವಿಫಲವಾದ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪೆರೇಡ್‌ ನಡೆಸಿದರು.

ಕೊನೆಯ ಬ್ಯಾಟ್ಸ್‌ಮನ್‌ ಕರಣ್‌ ಠಾಕೂರ್‌ ಕ್ಲೀನ್‌ಬೌಲ್ಡ್‌ ಆಗುತ್ತಿದ್ದಂತೆಯೇ ಕರ್ನಾಟಕ ಗೆಲುವಿನ ಕೇಕೆ ಹಾಕಿತು. ಗೌತಮ್‌ ಅಂಗಳದಲ್ಲಿ ಓಡಾಡಿ ಸಂಭ್ರಮಿಸಿದರು.

ಮೊದಲ ಎರಡು ಅವಧಿಗಳಲ್ಲಿ ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳು ಪ್ರಭುತ್ವ ಸಾಧಿಸಲು ಕರ್ನಾಟಕದ ಕಳಪೆ ಫೀಲ್ಡಿಂಗ್‌ ಕೂಡಾ ಕಾರಣವಾಗಿತ್ತು. ಎರಡು ಸುಲಭ ಕ್ಯಾಚ್‌ಗಳು ಒಳಗೊಂಡಂತೆ ನಾಲ್ಕೈದು ಅವಕಾಶಗಳನ್ನು ಕರ್ನಾಟಕ ಕೈಚೆಲ್ಲಿತು. ಆದರೆ ಗೆಲುವಿನ ಅಲೆಯಲ್ಲಿ ಈ ಲೋಪಗಳು ಕೊಚ್ಚಿಕೊಂಡು ಹೋದವು.

‘ಒಂದೆರಡು ಸುಲಭ ಅವಕಾಶಗಳನ್ನು ಕೈಚೆಲ್ಲಿದೆವು. ಆಟದಲ್ಲಿ ಅವು ಸಹಜ. ಆದರೆ ನಾವು ಮರುಹೋರಾಟ ನಡೆಸಲು ಯಶಸ್ವಿಯಾದೆವು’ ಎಂದು ಕೆ.ಗೌತಮ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

‘ಪೇಷನ್ಸ್ ಬೇಕು ಮಗಾ... ಒಂದು ವಿಕೆಟ್‌ ಬಂದರೆ ಎಲ್ಲ ಒಟ್ಟಾಗಿಬರುತ್ತವೆ’ ಎಂದು ಕರ್ನಾಟಕದ ವಿಕೆಟ್‌ಕೀಪರ್‌ ಶರತ್‌ ಶ್ರೀನಿವಾಸ್‌ ಅವರು ಬೌಲರ್‌ಗಳನ್ನು ಹುರಿದುಂಬಿಸಲು ಹೇಳುತ್ತಿದ್ದ ಮಾತುಗಳು ನಿಜವಾದವು.

ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

ಈ ರಣಜಿ ಋತುವಿನಲ್ಲಿ ಆರು ಪಂದ್ಯಗಳಲ್ಲಿ ಎರಡನೇ ಗೆಲುವು ಸಾಧಿಸಿದ ಕರ್ನಾಟಕ ತಂಡ ಪಾಯಿಂಟ್‌ಗಳನ್ನು 21ಕ್ಕೆ ಹೆಚ್ಚಿಸಿಕೊಂಡಿದ್ದು, ಎಲೀಟ್‌ ಗುಂಪಿನಲ್ಲಿ (‘ಎ’ ಮತ್ತು ‘ಬಿ’) ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯ ತಂಡ ಮೂರರಲ್ಲಿ ಡ್ರಾ ಸಾಧಿಸಿದ್ದು, ಒಂದು ಸೋಲು ಅನುಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT