ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರುಣ್‌ ಬಳಗದಲ್ಲಿ ಅರಳಿದ ಸೆಮಿ ಕನಸು

ರಣಜಿ ಕ್ವಾರ್ಟರ್‌ಫೈನಲ್: ಪ್ರಸಿದ್ಧ ಕೃಷ್ಣ ಮೋಡಿ; ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ; ಎಡವಿದ ಆತಿಥೇಯರು
Last Updated 23 ಫೆಬ್ರುವರಿ 2020, 19:52 IST
ಅಕ್ಷರ ಗಾತ್ರ

ಜಮ್ಮು: ಭಾನುವಾರ ಮಧ್ಯಾಹ್ನದ ಸೂರ್ಯನ ಕಿರಣಗಳು ಪ್ರಖರಗೊಳ್ಳುವ ಹೊತ್ತಿನಲ್ಲಿ ಕರ್ನಾಟಕದ ಬಳಗದಲ್ಲಿದ್ದ ಆತಂಕವು ಮಂಜಿನಂತೆ ಕರಗಿತು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಯಲ್ಲಿ ಸೆಮಿಫೈನಲ್ ಪ್ರವೇಶಿಸುವ ವಿಶ್ವಾಸ ಗರಿಗೆದರಿತು.

ಮಧ್ಯಮವೇಗಿ ಪ್ರಸಿದ್ಧ ಕೃಷ್ಣನ ಕೈಚಳಕದ ಬಲದಿಂದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ವಿರುದ್ಧ 14 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತು.

ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಆರ್. ಸಮರ್ಥ್ ಮತ್ತು ಮಧ್ಯಮ ಕ್ರಮಾಂಕದ ಕೆ.ವಿ.ಸಿದ್ಧಾರ್ಥ್ ಅವರ ಅರ್ಧಶತಕಗಳ ಬಲದಿಂದ ನಾಲ್ಕನೇ ದಿನದಾಟದ ಅಂತ್ಯಕ್ಕೆ 67 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 245 ರನ್‌ ಗಳಿಸಿದೆ. ಒಟ್ಟು 259 ರನ್‌ಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಪಂದ್ಯದಲ್ಲಿ ಇನ್ನೊಂದು ದಿನ ಬಾಕಿ ಯಿದ್ದು, ಸೋಲು–ಗೆಲುವಿನ ಫಲಿತಾಂಶ ಹೊರಹೊಮ್ಮುವುದು ಅನುಮಾನ. ಡ್ರಾ ಆಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಈ ಇನಿಂಗ್ಸ್‌ ಮುನ್ನಡೆಯು ಕರ್ನಾಟಕಕ್ಕೆ ವರದಾನವಾಗಿದೆ.

ಪಂದ್ಯದ ಮೊದಲ ಎರಡು ದಿನ ಗಳು ಮಳೆಗೆ ಆಹುತಿಯಾಗಿದ್ದವು. ಮೂರನೇ ದಿನ ಕರುಣ್ ನಾಯರ್ ಬಳ ಗವು ಕೇವಲ 206 ರನ್‌ ಗಳಿಗೆ ಆಲೌಟ್‌ ಆಗಿತ್ತು. ಇದಕ್ಕೆ ದಿಟ್ಟ ಪ್ರತಿಕ್ರಿಯೆ ನೀಡಿದ್ದ ಆತಿಥೇಯ ತಂಡವು 34 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 88 ರನ್‌ ಗಳಿಸಿತ್ತು. ಅದರಿಂದಾಗಿ ಭಾನುವಾರ ದಿನದಾಟದ ಮೊದಲ ಅವಧಿಯು ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಆದರೆ, ಇದರಲ್ಲಿ ಮೇಲುಗೈ ಸಾಧಿಸಿದ್ದು ಮಾತ್ರ ಕರ್ನಾಟಕದ ಬೌಲರ್‌ಗಳು.

ದಿನದ ಏಳನೇ ಓವರ್‌ನಲ್ಲಿ ಶುಭಂಸಿಂಗ್ ಪಂಡೀರ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಪ್ರಸಿದ್ಧ ವಿಕೆಟ್ ಬೇಟೆ ಆರಂಭಿಸಿದರು.

ತಮ್ಮ ನಂತರದ ಓವರ್‌ನಲ್ಲಿ ನಾಯಕ ಪರ್ವೇಜ್ ರಸೂಲ್‌ ವಿಕೆಟ್ ಕಬಳಿಸುವಲ್ಲಿ ಪ್ರಸಿದ್ಧ ಸಫಲರಾದರು. ಆದರೆ ಈ ನಡುವೆ ತಾಳ್ಮೆಯಿಂದ ಆಡುತ್ತಿದ್ದ ಆರಂಭಿಕ ಬ್ಯಾಟ್ಸ್‌ಮನ್ ಶುಭಂ ಖಜುರಿಯಾ (62; 155ಎ, 10ಬೌಂ) ಬೌಲರ್‌ಗಳಿಗೆ ಆತಂಕವೊಡ್ಡಿದ್ದರು. ಇನಿಂಗ್ಸ್‌ನ 49ನೇ ಓವರ್‌ನಲ್ಲಿ ಈ ಆತಂಕವನ್ನು ‘ಬೆಳಗಾವಿ ಪೋರ’ ರೋನಿತ್ ಮೋರೆ ನಿವಾರಿಸಿದರು. ಅವರ ಎಸೆತದಲ್ಲಿ ಕಟ್ ಮಾಡುವ ಯತ್ನದಲ್ಲಿ ಶುಭಂ ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್‌ಗೆ ಕ್ಯಾಚಿತ್ತರು. ಫಾಜಿಲ್ ರಶೀದ್ ವಿಕೆಟ್‌ ಅನ್ನೂ ರೋನಿತ್ ಕಿತ್ತರು. ಶರತ್ ಚುರುಕಿನ ಫೀಲ್ಡಿಂಗ್‌ ನಿಂದ ಅಬಿದ್ ಮುಷ್ತಾಕ್ ರನ್‌ಔಟ್ ಆದರು.

ಆದರೆ ಇನ್ನೊಂದು ಬದಿಯಲ್ಲಿ ಅಬ್ದುಲ್ ಸಮದ್ (43; 50ಎಸೆತ) ಆತಂಕ ಮೂಡಿಸಿದ್ದರು. ತಂಡದ ಮೊತ್ತವು 192 ರನ್‌ಗಳವರೆಗೆ ಬಂದು ತಲುಪಿತ್ತು. ಈ ಹಂತದಲ್ಲಿ ಎಡಗೈ ಸ್ಪಿನ್ನರ್ ಜೆ. ಸುಚಿತ್ ತಮ್ಮದೇ ಎಸೆತದಲ್ಲಿ ಪಡೆದ ಅಮೋಘ ಕ್ಯಾಚ್‌ಗೆ ಸಮದ್ ಔಟಾ ದರು. 63ನೇ ಓವರ್‌ನಲ್ಲಿ ಉಳಿದಿಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೆಡೆಮುರಿ ಕಟ್ಟಿದ ಪ್ರಸಿದ್ಧ ಕೇಕೆ ಹಾಕಿದರು.

ಸಿದ್ಧಾರ್ಥ್ ಎರಡನೇ ಅರ್ಧಶತಕ: ಮೊದಲ ಇನಿಂಗ್ಸ್‌ನಲ್ಲಿ 76 ರನ್‌ ಗಳಿಸಿದ್ದ ಸಿದ್ಧಾರ್ಥ್ ಎರಡನೇ ಇನಿಂಗ್ಸ್‌ನಲ್ಲಿಯೂ ಅಬ್ಬರಿಸಿದರು. 75 (135ಎಸೆತ) ರನ್‌ ಗಳಿಸಿರುವ ಅವರು ಕ್ರೀಸ್‌ನಲ್ಲಿದ್ದಾರೆ. ಅವರೊಂದಿಗೆ ಶರತ್ (ಬ್ಯಾಟಿಂಗ್ 9 ರನ್) ಕೂಡ ಇದ್ದಾರೆ.

ಈ ಇನಿಂಗ್ಸ್‌ನಲ್ಲಿ ಲಯ ಕಂಡು ಕೊಂಡ ಸಮರ್ಥ್ (74; 133ಎ)ಮತ್ತು ದೇವದತ್ತ (34 ರನ್) ಮೊದಲ ವಿಕೆಟ್‌ಗೆ 53 ರನ್ ಸೇರಿಸಿದರು.

ದೇವದತ್ತ ಔಟಾದ ನಂತರ ಬಂದ ಕರುಣ್ ನಾಯರ್ ಕೇವಲ 15 ರನ್‌ ಗಳಿಸಿ ನಿರ್ಗಮಿಸಿದರು. ಸಮರ್ಥ್ ಜೊತೆಗೂಡಿದ ಸಿದ್ಧಾರ್ಥ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 98 ರನ್‌ ಸೇರಿಸಿದರು. ಸಮರ್ಥ್ ಔಟಾದಾಗ ಬಂದ ಮನೀಷ್ 35 ಎಸೆತಗಳಲ್ಲಿ 35 ರನ್‌ ಗಳಿಸಿದರು. ಆದರೆ ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ.

ಸ್ಕೋರುಮೊದಲ ಇನಿಂಗ್ಸ್

ಕರ್ನಾಟಕ 206 (69.1 ಓವರ್‌ಗಳಲ್ಲಿ)

ಜಮ್ಮು–ಕಾಶ್ಮೀರ

192 (62.4 ಓವರ್‌ಗಳಲ್ಲಿ)

(ಶನಿವಾರ: 34 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 88)

ಶುಭಂ ಖಜುರಿಯಾ ಸಿ ಶರತ್ ಶ್ರೀನಿವಾಸ್ ಬಿ ರೋನಿತ್‌ ಮೋರೆ 62

ಶುಭಂ ಸಿಂಗ್ ಪಂಡೀರ ಎಲ್‌ಬಿಡಬ್ಲ್ಯು ಪ್ರಸಿದ್ಧಕೃಷ್ಣ 25

ಪರ್ವೇಜ್ ರಸೂಲ್ ಸಿ ಸಿದ್ಧಾರ್ಥ್ ಬಿ ಪ್ರಸಿದ್ಧ ಕೃಷ್ಣ 01

ಅಬ್ದುಲ್ ಸಮದ್ ಸಿ ಮತ್ತು ಬಿ ಸುಚಿತ್ 43

ಫಾಜಿಲ್ ರಶೀದ್ ಬಿ ರೋನಿತ್ ಮೋರೆ 09

ಅಬಿದ್ ಮುಷ್ತಾಕ್ ರನ್‌ಔಟ್ ಸಮರ್ಥ್ 04

ಅಕೀಬ್ ನಬಿ ಎಲ್‌ಬಿಡಬ್ಲ್ಯು ಪ್ರಸಿದ್ಧ ಕೃಷ್ಣ 14

ಮುಜ್ತಾಬಾ ಯೂಸುಫ್ ಔಟಾಗದೆ 00

ಉಮರ್ ನಜೀರ್ ಬಿ ಪ್ರಸಿದ್ಧ ಕೃಷ್ಣ 00

ಇತರೆ: 10 (ವೈಡ್ 1, ಬೈ 8, ಲೆಗ್‌ಬೈ 1)

ವಿಕೆಟ್ ಪತನ: 3–107 (ಶುಭಂ ಸಿಂಗ್; 40.6), 4–109 (ರಸೂಲ್;42.2), 5–144 (ಖಜುರಿಯಾ;48.1), 6–164 (ರಶೀದ್;54.3), 7–168 (ಅಬಿದ್;55.1), 8–192 (ಸಮದ್;61.5), 9–192 (ನಬಿ;62.2), 10–192 (ಉಮರ್; 62.4)

ಬೌಲಿಂಗ್

ಅಭಿಮನ್ಯು ಮಿಥುನ್ 11–5–25–0, ಪ್ರಸಿದ್ಧ ಕೃಷ್ಣ 11.4–1–42–4, ಕೃಷ್ಣಪ್ಪ ಗೌತಮ್ 12–1–30–1, ರೋನಿತ್ ಮೋರೆ 10–1–40–2, ಜೆ. ಸುಚಿತ್ 18–4–46–2

ಎರಡನೇ ಇನಿಂಗ್ಸ್ಕರ್ನಾಟಕ

4ಕ್ಕೆ245 (67 ಓವರ್‌ಗಳಲ್ಲಿ)

ಆರ್. ಸಮರ್ಥ್ ಸಿ ಫಾಜಿಲ್ ರಶೀದ್ ಬಿ ಮಜ್ತಾಬಾ ಯೂಸುಫ್ 74

ದೇವದತ್ತ ಪಡಿಕ್ಕಲ್ ಸಿ ಶುಭಂ ಸಿಂಗ್ ಪಂಡಿರ್ ಬಿ ಪರ್ವೇಜ್ ರಸೂಲ್ 34

ಕರುಣ್ ನಾಯರ್ ಬಿ ಅಬಿದ್ ಮುಷ್ತಾಕ್ 15

ಕೆ.ವಿ. ಸಿದ್ಧಾರ್ಥ್ ಬ್ಯಾಟಿಂಗ್ 75

ಮನೀಷ್ ಪಾಂಡೆ ಸಿ ಹೆನನ್ ನಜೀರ್ ಬಿ ಪರ್ವೇಜ್ ರಸೂಲ್ 35

ಶರತ್ ಶ್ರೀನಿವಾಸ್ ಔಟಾಗದೆ 09

ಇತರೆ: 3 (ಬೈ 1, ಲೆಗ್‌ಬೈ 1, ನೋಬಾಲ್ 1)

ವಿಕೆಟ್ ಪತನ: 1–53 (ದೇವದತ್ತ; 11.2), 2–79 (ಕರುಣ್;19.5), 3–177 (ಸಮರ್ಥ್;46.5), 4–223 (ಮನೀಷ್;56.2)

ಬೌಲಿಂಗ್

ಅಕೀಬ್ ನಬಿ 9–1–25–0, ಮುಜ್ತಾಬಾ ಯೂಸುಫ್ 9–0–42–1, ಉಮರ್ ನಜೀರ್ 8–0–47–0, ಪರ್ವೇಜ್ ರಸೂಲ್ 17–1–53–2, ಅಬಿದ್ ಮುಷ್ತಾಕ್ 20–6–59–1, ಅಬ್ದುಲ್ ಸಮದ್ 3–0–17–0, ಹೆನನ್ ನಜೀರ್ 1–1–0–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT