ಸೋಮವಾರ, ಜೂನ್ 21, 2021
30 °C

ಯುವ ಕರ್ನಾಟಕವೇ ‘ಪ್ರಸಿದ್ಧ’

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಕರ್ನಾಟಕ ತಂಡದಲ್ಲಿ ಅನುಭವಿ ಆಟಗಾರರು ಅಲಭ್ಯರಾದಾಗ ಯುವಪ್ರತಿಭೆಗಳು ಮಿಂಚುತ್ತಿದ್ದಾರೆ. ಇದರಿಂದಾಗಿ ಅನುಭವಿ ಮತ್ತು ನವಪ್ರತಿಭೆಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ತಂಡಕ್ಕೆ ಲಾಭವಾಗಿದೆ. ಯುವ ಆಟಗಾರರ ದಂಡು ಬೆಳೆಯುತ್ತಿದೆ.

ಹೋದ ಮಂಗಳವಾರ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸುದ್ದಿ ತಾಣಗಳಲ್ಲಿ ಕರ್ನಾಟಕದ ಕ್ರಿಕೆಟಿಗ ಪ್ರಸಿದ್ಧ ಕೃಷ್ಣ ಅವರ ಹೆಸರು ಓಡಾಡತೊಡಗಿತು.

ಗಾಯದಿಂದ ಚೇತರಿಸಿಕೊಂಡು ಫಿಟ್‌ನೆಸ್‌ ಮರಳಿ ಗಳಿಸುವ ಕಸರತ್ತು ನಡೆಸುತ್ತಿರುವ ಪ್ರಸಿದ್ಧ ಈ ಬಾರಿ ರಣಜಿ ಟ್ರೋಫಿಯಲ್ಲಿ ಇದುವರೆಗೆ ಒಂದೂ ಪಂದ್ಯ ಆಡಿಲ್ಲ. ಆದರೆ, ಅವರು ಸೀಮಿತ ಓವರ್‌ಗಳ ಮಾದರಿಯಲ್ಲಿ ಮಾಡಿರುವ ಸಾಧನೆಯು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರನ್ನು ಸೆಳೆದಿರುವುದು ಸಹಜವೇ ಆಗಿದೆ.

ದಶಕಗಳಿಂದ ಪ್ರತಿಭಾವಂತ ಮಧ್ಯಮವೇಗದ ಬೌಲರ್‌ಗಳನ್ನು ಸಿದ್ಧಗೊಳಿಸುವ ಕಾರ್ಖಾನೆಯಂತಿರುವ ಕರ್ನಾಟಕದ ಭರವಸೆಯ ಪ್ರತಿಭೆ ಪ್ರಸಿದ್ಧ. ಇದೀಗ ಅವರನ್ನು ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆ ಮಾಡುವ ಇಂಗಿತವನ್ನು ಸ್ವತಃ ವಿರಾಟ್ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕದ ಕ್ರಿಕೆಟ್‌ನ ಯುವಶಕ್ತಿಗೆ ಒಂದು ನಿದರ್ಶನ.

ಪ್ರಸಿದ್ಧ ಕೃಷ್ಣ ಸುದ್ದಿಯಾಗುವ ಎರಡು ದಿನಗಳ ಮುನ್ನವಷ್ಟೇ ಕರ್ನಾಟಕ ತಂಡವು ತನ್ನ ಬದ್ಧ ಎದುರಾಳಿ ಮುಂಬೈ ಎದುರು ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಅಮೋಘ ಜಯ ದಾಖಲಿಸಿತ್ತು. ಈ ಸಾಧನೆಯಲ್ಲಿಯೂ ರಾಜ್ಯದ ನವಪ್ರತಿಭೆಗಳ ಜೋಶ್ ಇದ್ದಿದ್ದು ಗಮನಾರ್ಹ. ದೇವದತ್ತ ಪಡಿಕ್ಕಲ್, ಪ್ರತೀಕ್ ಜೈನ್, ವಿ. ಕೌಶಿಕ್ ಮತ್ತು ರೋಹನ್ ಕದಂ ಅವರಂತಹ ಎಳೆಯರು ಗೆಲುವಿನ ರಥ ಎಳೆದಿದ್ದು ವಿಶೇಷ.

ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್,  ಕೃಷ್ಣಪ್ಪ ಗೌತಮ್, ಮನೀಷ್ ಪಾಂಡೆ ಅವರಂತಹ ‘ಮ್ಯಾಚ್ ವಿನ್ನಿಂಗ್’ ಆಟಗಾರರು ಇಲ್ಲದ ಹೊತ್ತಿನಲ್ಲಿ ರಾಜ್ಯ ತಂಡದ ಸನಿಹ ಸೋಲು ಸುಳಿಯದಂತೆ ತಡೆದ ಶ್ರೇಯ ಈ ಯುವ ಆಟಗಾರರಿಗೆ ಸಲ್ಲಬೇಕು. ಅಭಿಮನ್ಯು ಮಿಥುನ್, ರೋಹನ್ ಕದಂ, ಕರುಣ್ ನಾಯರ್, ಆರ್. ಸಮರ್ಥ್ ಅವರ ಅನುಭವ ಮತ್ತು ಯುವಪ್ರತಿಭೆಗಳ ಉತ್ಸಾಹದ ಮಿಶ್ರಣದಿಂದಾಗಿ ನಾಲ್ಕು ಪಂದ್ಯಗಳಲ್ಲಿ ಎರಡು ಜಯ ಮತ್ತು ಎರಡು ಡ್ರಾ ಸಾಧಿಸಿದೆ.  ಎ ಮತ್ತು ಬಿ ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. 

ಹೋದ ವರ್ಷವೂ ಇಂತಹ ಪ್ರಯೋಗಗಳು ಆಗಿದ್ದವು. 208–19ರ ಋತುವಿನ ರಣಜಿ ಟೂರ್ನಿಯಲ್ಲಿ ಏಳು ಆಟಗಾರರು ಪದಾರ್ಪಣೆ ಮಾಡಿದ್ದರು. ಹಿರಿಯ ಆಟಗಾರರು ಗಾಯಗೊಂಡರೆ, ಫಾರ್ಮ್ ಕಳೆದುಕೊಂಡರೆ ಅಥವಾ ಭಾರತ ತಂಡಕ್ಕೆ ಆಯ್ಕೆಯಾಗಿ ತೆರಳಿದರೆ ಅವಕಾಶ ಪಡೆಯುವ ಯುವ ಆಟಗಾರರು ಮಿಂಚುತ್ತಿದ್ದಾರೆ.  ಅನುಭವಿ ಮತ್ತು ನವಪ್ರತಿಭೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಯಾರೇ ಸ್ಥಾನ ಉಳಿಸಿಕೊಳ್ಳಬೇಕಾದರೂ ಚೆನ್ನಾಗಿ ಆಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಫಲ ತಂಡಕ್ಕೆ ಸಿಗುತ್ತಿದೆ. ದೇಶಿ ಕ್ರಿಕೆಟ್‌ನಲ್ಲಿ ಹೋದ ವರ್ಷದಿಂದ ಜಾರಿಯಾಗಿರುವ ಅರ್ಹತಾ ಮಟ್ಟ ಬಂದ ಮೇಲೆ ನಾಕೌಟ್ ಹಂತ ತಲುಪುವುದು ಕಷ್ಟವಾಗಿದೆ. ಅದರಲ್ಲೂ ಎ–ಬಿ ಜಂಟಿ ಗುಂಪಿನಿಂದ ಕ್ವಾರ್ಟರ್‌ಫೈನಲ್ ಪ್ರವೇಶಿಸುವುದು ಇನ್ನೂ ಕಠಿಣ. 18 ತಂಡಗಳಿರುವ ಈ ಗುಂಪಿನಿಂದ ಕೇವಲ ಐದು ತಂಡಗಳು ನಾಕೌಟ್ ಪ್ರವೇಶಿಸುತ್ತವೆ.

ದೇಶದ ಎಲ್ಲ ಘಟಾನುಘಟಿ ತಂಡಗಳೂ ಇದರಲ್ಲಿ ಇರುವುದರಿಂದ ಟಾಪ್ ಫೈವ್ ಸ್ಥಾನ ಪಡೆಯುವುದು ಸುಲಭವಲ್ಲ. ಆದರೂ ಕರ್ನಾಟಕ ತಂಡವು ಹೋದ ವರ್ಷ ರಣಜಿಯಲ್ಲಿ ಸೆಮಿಫೈನಲ್‌ನವರೆಗೂ ಸಾಗಿತ್ತು. ಈ ವರ್ಷವೂ ಎಂಟರ ಘಟ್ಟಪ್ರವೇಶಿಸುವ ಭರವಸೆ ಮೂಡಿಸಿದೆ.

ಇದೇ ಹೊತ್ತಿಗೆ ಅತ್ತ ದಕ್ಚಿಣ ಆಫ್ರಿಕಾದ ಅಂಗಳದಲ್ಲಿ ಭಾರತದ 19 ವರ್ಷದೊಳಗಿನವರ ತಂಡವು ಚತುಷ್ಕೋನ ಸರಣಿಯನ್ನು ಗೆದ್ದುಕೊಂಡಿದೆ. ಅದರಲ್ಲಿಯೂ ಕನ್ನಡಿಗ ಶುಭಾಂಗ್ ಹೆಗ್ಡೆ ಮಿಂಚಿದ್ದಾರೆ. ರಾಯಚೂರಿನ ಪ್ರತಿಭೆ ವಿದ್ಯಾಧರ್ ಪಾಟೀಲ ಕೂಡ ಆ ತಂಡದಲ್ಲಿದ್ದಾರೆ. ಇದೇ ವಾರ ಆರಂಭವಾಗಲಿರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿಯೂ ಇವರಿಬ್ಬರು ಆಡಲಿದ್ದಾರೆ. ಸ್ಪಿನ್ನರ್ ಶುಭಾಂಗ್ ಹೋದ ವರ್ಷ ಕರ್ನಾಟಕ ರಣಜಿ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. ಎಲ್ಲ ವಯೋಮಿತಿಗಳ ತಂಡದಲ್ಲಿಯೂ ಸ್ಪರ್ಧೆ ಹೆಚ್ಚಿದ್ದು ಉತ್ತಮ ಆಟಗಾರರು ಹೊರಹೊಮ್ಮುತ್ತಿದ್ದಾರೆ. ಅದೇ ಕಾರಣಕ್ಕೆ ರಾಜ್ಯ ತಂಡದ ಬೆಂಚ್ ಶಕ್ತಿ ಪ್ರಬಲವಾಗಿದೆ. ರಘುರಾಮ್ ಭಟ್ ನೇತೃತ್ವದ ರಾಜ್ಯ ಆಯ್ಕೆ ಸಮಿತಿಯ ಮುಂದೆ ಹೆಚ್ಚು ಆಯ್ಕೆ ಆವಕಾಶಗಳಿವೆ.


ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥ ರಘುರಾಮ್ ಭಟ್ ಅವರೊಂದಿಗೆ ದೇವದತ್ತ ಪಡಿಕ್ಕಲ್

ಹೊಸ ರನ್ ಯಂತ್ರ ದೇವದತ್ತ
ಕಳೆದ ಏಳೆಂಟು ವರ್ಷಗಳ ಕಾಲ ಕರ್ನಾಟಕ ತಂಡದ ಪಾಲಿಗೆ ‘ರನ್‌ ಯಂತ್ರ’ವಾಗಿದ್ದ ಮಯಂಕ್ ಅಗರವಾಲ್ ಈಗ ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ. ಭಾರತ ಎ ತಂಡಕ್ಕಂತೂ ಅವರು ಬೇಕೆ ಬೇಕು. ಆದರೆ, ಅವರ ಬದಲಿಗೆ ಸ್ಥಾನ ಪಡೆದ 19 ವರ್ಷದ ದೇವದತ್ತ ಪಡಿಕ್ಕಲ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಬಹಳ ವರ್ಷಗಳ ನಂತರ ಕರ್ನಾಟಕ ತಂಡದ ಆರಂಭಿಕರಾಗಿ ಲಭಿಸಿದ ಎಡಗೈ ಬ್ಯಾಟ್ಸ್‌ಮನ್ ದೇವದತ್ತ. ಹೋದ ವರ್ಷ ರಣಜಿಗೆ ಪದಾರ್ಪಣೆ ಮಾಡಿದ್ದ ಈ ಆಟಗಾರ ರನ್‌ಗಳ ರಾಶಿ ಪೇರಿಸುತ್ತಿದ್ದಾರೆ. ಈ ಸಲದ ನಾಲ್ಕೂ ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿರುವ ಶ್ರೇಯ ಅವರದ್ದು. ಉತ್ತರ ಪ್ರದೇಶೆದ ಎದುರಿನ ಪಂದ್ಯದಲ್ಲಿ 99 ರನ್‌ಗಳಿಗೆ ಅವರು ಔಟಾಗಿದ್ದರು. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಅವರು ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದರು.


ಕೌಶಿಕ್ ವಾಸುಕಿ (ಎಡ)

ಬೌಲಿಂಗ್ ‘ಎಂಜಿನಿಯರ್’ ಕೌಶಿಕ್
ಮಾಹಿತಿ ತಂತ್ರಜ್ಞಾನ ಕಂಪೆನಿಯ ಉದ್ಯೋಗ ಬಿಟ್ಟು ಕ್ರಿಕೆಟ್ ನೆಚ್ಚಿಕೊಂಡ ಹುಡುಗ ಕೌಶಿಕ್ ವಾಸುಕಿ. ಈ ಬಾರಿ ಆರ್. ವಿನಯಕುಮಾರ್ ಇಲ್ಲದ ಕರ್ನಾಟಕದ ಮಧ್ಯಮವೇಗದ ಬೌಲಿಂಗ್ ಪಡೆಗೆ ಕೌಶಿಕ್ ಭರವಸೆ ತುಂಬಿದ್ದಾರೆ. ಸೀಮಿತ ಓವರ್‌ಗಳಲ್ಲಿ ಟೂರ್ನಿಯಲ್ಲಿ ಕೌಶಿಕ್ ಆಟಕ್ಕೆ ಆಯ್ಕೆ ಸಮಿತಿಯು ತಲೆದೂಗಿತ್ತು. ಇದರಿಂದಾಗಿ ರಣಜಿ ಟೂರ್ನಿಗೂ ಅವಕಾಶ ಲಭಿಸಿತು. ಪ್ರಸಿದ್ಧ ಕೃಷ್ಣ ಅನುಪಸ್ಥಿತಿಯಲ್ಲಿ ಕೌಶಿಕ್ ಆಡಿರುವ ಮೂರು ಪಂದ್ಯಗಳಲ್ಲಿ 13 ವಿಕೆಟ್‌ ಕಿತ್ತು ತಮ್ಮ ಸಾಮರ್ಥ್ಯ ಸಾಬೀತುಮಾಡಿದ್ದಾರೆ. ಜೊತೆಯಾಟಗಳನ್ನು ಮುರಿಯುವುದರಲ್ಲಿ ಇವರ ಲೆಗ್‌ ಕಟರ್, ಸ್ಲೋವರ್‌ ಎಸೆತ ಮತ್ತು ರಿವರ್ಸ್‌ ಸ್ವಿಂಗ್‌ಗಳು ಪ್ರಭಾವಿಯಾಗಿವೆ. ಮುಂಬೈ ಎದುರಿನ ಪಂದ್ಯದಲ್ಲಿ ಒಟ್ಟು ಐದು ವಿಕೆಟ್‌ಗಳು ಇವರ ಖಾತೆ ಸೇರಿದ್ದು ವಿಶೇಷ. ಪದಾರ್ಪಣೆ ಋತುವಿನಲ್ಲಿಯೇ ಕೈಚಳಕ ಮೆರೆಯುತ್ತಿದ್ದಾರೆ.

ಎಡಗೈ ಮಧ್ಯಮವೇಗಿ ಪ್ರತೀಕ್
ಮುಂಬೈ ಎದುರಿನ ಪಂದ್ಯದ ಎರಡನೇ ದಿನ ಸಂಜೆ ಆರು ವಿಕೆಟ್‌ ಕಳೆದುಕೊಂಡಿದ್ದ ಮುಂಬೈಗೆ ಸೂರ್ಯಕುಮಾರ್ ಯಾದವ್ ಆಸರೆಯಾಗಿದ್ದರು. ಮರುದಿನವೂ ಇವರು ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೊಂದಿಗೆ ಸೇರಿ ಕರ್ನಾಟಕವನ್ನು ಕಾಡುವ ಸಾಧ್ಯತೆ ಇತ್ತು. ಆದರೆ ಮೂರನೇ ದಿನ ಬೆಳಿಗ್ಗೆ ಇನ್ನೊಂದು ಬದಿಯ ಮೂರು ವಿಕೆಟ್‌ಗಳನ್ನು ಬೇಗನೆ ಕಬಳಿಸಿದ ಎಡಗೈ ಮಧ್ಯಮವೇಗಿ ಪ್ರತೀಕ್ ಜೈನ್ ತಂಡದ ಗೆಲುವನ್ನು ಸುಲಭಗೊಳಿಸಿದರು. ಶ್ರೀನಾಥ್ ಅರವಿಂದ್ ನಂತರ ಕರ್ನಾಟಕ ತಂಡಕ್ಕೆ ಒಬ್ಬ ಎಡಗೈ ಮಧ್ಯಮವೇಗಿಯ ಅವಶ್ಯಕತೆ ಇದೆ.

ವಿನಯ್, ಮಿಥುನ್ ಮತ್ತು ಅರವಿಂದ್ ಅವರಿದ್ದ ತಂಡವು ಎರಡು ಬಾರಿ ರಣಜಿ ಚಾಂಪಿಯನ್ ಆಗಿದ್ದು ಇತಿಹಾಸ. ಸದ್ಯ ಮಿಥುನ್  ಅಮೋಘ ಫಾರ್ಮ್‌ನಲ್ಲಿದ್ದಾರೆ.ರೋನಿತ್ ಮೋರೆ ಮತ್ತು  ಕೌಶಿಕ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಆರಂಭಿಕ ಓವರ್‌ಗಳಲ್ಲಿಲಭಿಸಿದ ಸಫಲತೆಯನ್ನು ಉಪಯೋಗಿಸಿಕೊಂಡು ಫಿನಿಷಿಂಗ್ ಮಾಡುವ ಬೌಲರ್‌ಗಳ ಅಗತ್ಯ ತಂಡಕ್ಕೆ ಇದೆ. ಅದನ್ನು ನಿಭಾಯಿಸುವ ಪ್ರತಿಭೆ ಪ್ರತೀಕ್ ಅವರಲ್ಲಿ ಕಾಣುತ್ತಿದೆ. ಅವರು ತಮ್ಮ ಸಹ ಆಟಗಾರರ ಪೈಪೋಟಿಯನ್ನು ಗೆದ್ದು ಬರಲು ಇನ್ನೂ ಸಾಕಷ್ಟು ಶ್ರಮಿಸಲೇಬೇಕು. ಸದ್ಯ ಬೌಲಿಂಗ್  ಕೋಚ್ ಆಗಿರುವ ಅರವಿಂದ್ ಅವರ ಗರಡಿಯಲ್ಲಿ ಪಳಗಿದರೆ ಅದು ಸಾಧ್ಯವಾಗಬಹುದು. 

ಹೋದ ವರ್ಷದ ಪದಾರ್ಪಣೆ
ಕೆ.ವಿ. ಸಿದ್ಧಾರ್ಥ್, ದೇವದತ್ತ ಪಡಿಕ್ಕಲ್, ಶುಭಾಂಗ್ ಹೆಗ್ಡೆ, ಬಿ.ಆರ್. ಶರತ್, ಶರತ್ ಶ್ರೀನಿವಾಸ್, ಪ್ರತೀಕ್ ಜೈನ್, ಲಿಯಾನ್ ಖಾನ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು