ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy: ಮತ್ತೊಂದು ಜಯದ ಸನಿಹ ಕರ್ನಾಟಕ

ಕೃಷ್ಣಪ್ಪ ಗೌತಮ್‌ಗೆ ಐದು ವಿಕೆಟ್ ಗೊಂಚಲು; ಮನೀಷ್ ಬಳಗಕ್ಕೆ ಮೊದಲ ಇನಿಂಗ್ಸ್ ಮುನ್ನಡೆ: ಪುದುಚೇರಿಗೆ ಫಾಲೋ ಆನ್
Last Updated 6 ಮಾರ್ಚ್ 2022, 4:29 IST
ಅಕ್ಷರ ಗಾತ್ರ

ಚೆನ್ನೈ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಜಯದ ಹೊಸ್ತಿಲಲ್ಲಿ ಬಂದು ನಿಂತಿದೆ.

ಎಸ್‌ಎನ್‌ಎನ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿ ಗುಂಪಿನ ಮೂರನೇ ಪಂದ್ಯದ ಮೂರನೇ ದಿನವಾದ ಶನಿವಾರ ಕೃಷ್ಣಪ್ಪ ಗೌತಮ್ (86ಕ್ಕೆ5) ದಾಳಿಗೆ ಪುದುಚೇರಿ ತಂಡವು ಮೊದಲ ಇನಿಂಗ್ಸ್‌ನಲ್ಲಿ 212 ರನ್‌ಗಳ ಮುನ್ನಡೆ ಸಾಧಿಸಿತು. ಎದುರಾಳಿ ತಂಡದ ಮೇಲೆ ಫಾಲೋ ಆನ್ ಕೂಡ ಹೇರಿತು. ದಿನದಾಟದ ಮುಕ್ತಾಯಕ್ಕೆ ಪುದುಚೇರಿ ತಂಡವು 23 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 62 ರನ್ ಗಳಿಸಿದೆ. ಕೊನೆಯ ದಿನವಾದ ಭಾನುವಾರ ಬೇಗನೆ ಆರು ವಿಕೆಟ್‌ಗಳನ್ನು ಗಳಿಸಿದರೆ ಕರ್ನಾಟಕವು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಡಲಿದೆ.

ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 453 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಅದಕ್ಕುತ್ತರವಾಗಿ ಪುದುಚೇರಿ ತಂಡಕ್ಕೆ 77.4 ಓವರ್‌ಗಳಲ್ಲಿ 241 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ದಾಮೋದರನ್ ರೋಹಿತ್ ಶತಕ ಗಳಿಸಿದರು.

ಗೌತಮ್ ಮೋಡಿ:ಶುಕ್ರವಾರ ದಿನದಾಟದ ಕೊನೆಗೆಪುದುಚೇರಿ ತಂಡವು 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ನಯನ್ ಕಂಗಯನ್ (ಬ್ಯಾಟಿಂಗ್ 24) ಮತ್ತು ಗೊನ್ನಬಟ್ಟುಲಾ ಚಿರಂಜೀವಿ (ಬ್ಯಾಟಿಂಗ್ 12) ಮೂರನೇ ದಿನ ಬೆಳಿಗ್ಗೆ ಆಟ ಮುಂದುವರಿಸಿದರು.

ರಾಯಚೂರು ಹುಡುಗ ವಿದ್ಯಾಧರ್‌ ಪಾಟೀಲ ಬೇಗನೆ ಯಶಸ್ಸು ಗಳಿಸಿದರು. ಅವರು ಕಂಗಯನ್ ವಿಕೆಟ್ ಗಳಿಸಿದರು. ಇದರ ನಂತರ ಗೌತಮ್ ಮೋಡಿಯಾಟ ಶುರುವಾಯಿತು. ಚಿರಂಜೀವಿ, ಪವನ್ ದೇಶಪಾಂಡೆ ಅವರ ವಿಕೆಟ್‌ಗಳನ್ನು ಗಳಿಸಿ ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ಪದಾರ್ಪಣೆ ಪಂದ್ಯ ಆಡುತ್ತಿರುವ ವಿದ್ವತ್ ಕಾವೇರಪ್ಪ ಎಸೆತದಲ್ಲಿ ಪಾರಸ್ ಡೋಗ್ರಾ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದಾಗಿ ತಂಡವು ಬೇಗನೆ ಕುಸಿಯುವ ಆತಂಕ ಎದುರಿಸಿತ್ತು. 113 ರನ್‌ಗಳಿಗೆ ಆರು ವಿಕೆಟ್‌ಗಳು ಪತನವಾಗಿದ್ದವು.

ಆದರೆ ಈ ಹಂತದಲ್ಲಿ ದಿಟ್ಟೆದೆಯ ಬ್ಯಾಟಿಂಗ್ ಮಾಡಿದ ರೋಹಿತ್ (ಔಟಾಗದೆ 100; 133ಎ, 4X15, 6X2) ಮತ್ತು ಎಸ್‌ ಕಾರ್ತಿಕ್ (19; 43ಎ) ಏಳನೇ ವಿಕೆಟ್‌ ಜೊತೆಯಾಟದಲ್ಲಿ 40 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟವನ್ನೂ ಗೌತಮ್ ಮುರಿದರು. ಕಾರ್ತಿಕ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ಆಫ್‌ಸ್ಪಿನ್ನರ್ ಗೌತಮ್ ಸಂಭ್ರಮಿಸಿದರು.

ಆದರೂ ಛಲ ಬಿಡದ ರೋಹಿತ್ ಆಟ ರಂಗೇರಿತು. ಸಾಗರ್ ತ್ರಿವೇದಿ (29; 39ಎ) ಅವರೊಂದಿಗೆ ಎಂಟನೇ ವಿಕೆಟ್ ಜೊತೆಯಾಟದಲ್ಲಿ 77 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು ದ್ವಿಶತಕದ ಗಡಿ ದಾಟಿತು. ಆದರೆ ಈ ಜೊತೆಯಾಟಕ್ಕೂ ಗೌತಮ್ ಕಡಿವಾಣ ಹಾಕಿದರು. ಶ್ರೇಯಸ್ ಗೋಪಾಲ್ ಪಡೆದ ಕ್ಯಾಚ್‌ಗೆ ಸಾಗರ್ ತ್ರಿವೇದಿ ಪೆವಿಲಿಯನ್‌ಗೆ ಮರಳಿದರು.

ಸುಬೋಧ ಬಾಟಿ ವಿಕೆಟ್ ಕೂಡ ಗಳಿಸಿದ ಗೌತಮ್‌ ಇನಿಂಗ್ಸ್‌ಗೆ ತೆರೆಯೆಳೆದರು.

ಎರಡನೇ ಇನಿಂಗ್ಸ್ ಆರಂಭಿಸಿದ ಪುದುಚೇರಿಗೆ ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಪೆಟ್ಟು ಕೊಟ್ಟರು. ಇದರಿಂದಾಗಿ ಕೇವಲ 24 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡ ತಂಡದ ಗಾಯಕ್ಕೆ ಶ್ರೇಯಸ್ ಗೋಪಾಲ್ ಮತ್ತು ವಿದ್ಯಾಧರ್ ತಲಾ ಒಂದು ವಿಕೆಟ್ ಪಡೆದು ಬರೆ ಎಳೆದರು. ಟೂರ್ನಿಯ ಎರಡನೇ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಗೆದ್ದಿದ್ದ ತಂಡವು ಈಗ ಇನ್ನೊಂದು ಜಯದ ಕನಸು ಕಾಣುತ್ತಿದೆ.

ಸ್ಕೋರ್ ಕಾರ್ಡ್‌
ಕರ್ನಾಟಕ ಮೊದಲ ಇನಿಂಗ್ಸ್ 8ಕ್ಕೆ 453 ಡಿಕ್ಲೇರ್ಡ್‌ (132.2 ಓವರ್‌)
ಪುದುಚೇರಿ ಮೊದಲ ಇನಿಂಗ್ಸ್ 241 (77.4 ಓವರ್‌)

(ಶನಿವಾರ 18 ಓವರ್‌ಗಳಲ್ಲಿ 2ಕ್ಕೆ 52 )
ನೇಯನ್‌ ಸಿ ಗೌತಮ್‌ ಬಿ ವಿದ್ಯಾಧರ್‌ 25 (64ಎ, 4X4)
ಚಿರಂಜೀವಿಸಿ ದೇವದತ್ತ ಬಿ ಗೌತಮ್‌ 14 (52ಎ, 6X1)
ಪವನ್‌ ಸಿ ಶರತ್ ಬಿ ಗೌತಮ್‌ 29 (83ಎ, 4X1, 6X2)
ಪಾರಸ್‌ ಎಲ್‌ಬಿಡಬ್ಲ್ಯು ಬಿ ಕಾವೇರಪ್ಪ 5 (12ಎ, 4X1)
ದಾಮೋದರನ್‌ ಔಟಾಗದೆ 100 (133ಎ, 4X15, 6X2)
ಕಾರ್ತಿಕ್‌ ಎಲ್‌ಬಿಡಬ್ಲ್ಯು ಬಿ ಗೌತಮ್‌ 19 (43ಎ, 4X4)
ಸಾಗರ್ ತ್ರಿವೇದಿ ಸಿ ಗೋಪಾಲ್ ಬಿ ಗೌತಮ್‌ 29 (39ಎ, 4X5, 6X1)
ಆಶಿತ್ ಬಿ ಪ್ರಸಿದ್ಧ ಕೃಷ್ಣ 0 (3ಎ)
ಸುಬೋಧ್ ಎಲ್‌ಬಿಡಬ್ಲ್ಯು ಬಿ ಗೌತಮ್ 0 (7ಎ)

ಇತರೆ (ಬೈ 4, ಲೆಗ್‌ಬೈ 1) 5

ವಿಕೆಟ್ ಪತನ: 3-55 (ನೇಯನ್ ಶ್ಯಾಮ್ ಕಂಗಯನ್‌, 21.5), 4-60 (ಗೊನ್ನಬಟ್ಟುಲಾ ಚಿರಂಜೀವಿ, 29.1), 5-67 (ಪಾರಸ್‌ ಡೋಗ್ರಾ, 32.4), 6-113 (ಪವನ್ ದೇಶಪಾಂಡೆ, 45.2), 7-157 (ಎಸ್‌. ಕಾರ್ತಿಕ್‌, 59.6), 8-227 (ಸಾಗರ್ ತ್ರಿವೇದಿ, 73.6), 9-232 (ಆಶಿತ್ ರಾಜೀವ್‌, 74.5), 10-241 (ಸುಬೋಧ್ ಭಾಟಿ, 77.4)

ಬೌಲಿಂಗ್‌: ಪ್ರಸಿದ್ಧ ಕೃಷ್ಣ 18–6–42–2, ವಿದ್ಯಾಧರ್ ಪಾಟೀಲ 13–2–41–2, ವಿದ್ವತ್‌ ಕಾವೇರಪ್ಪ 12–3–39–1, ಶ್ರೇಯಸ್ ಗೋಪಾಲ್‌ 8–2–28–0, ಕೃಷ್ಣಪ್ಪ ಗೌತಮ್‌ 26.4–6–86–5

ಪುದುಚೇರಿ ಎರಡನೇ ಇನಿಂಗ್ಸ್ (ಫಾಲೋ ಆನ್) 4ಕ್ಕೆ 62 (23 ಓವರ್‌)
ನೇಯನ್‌ ಸಿ ಶರತ್ ಬಿ ಪ್ರಸಿದ್ಧ 16 (13ಎ, 4X3)
ಕೋದಂಡಪಾಣಿ ಸಿ ಗೋಪಾಲ್ ಬಿ ವಿದ್ಯಾಧರ್ 4 (9ಎ, 4X1)
ಕಾರ್ತಿಕ್‌ ಸಿ ಪಾಂಡೆ ಬಿ ಗೋಪಾಲ್‌ 8 (50ಎ)
ಪಾರಸ್‌ ಸಿ ಶರತ್ ಬಿ ಪ್ರಸಿದ್ಧ 14 (45ಎ, 4X2)
ಪವನ್‌ ಬ್ಯಾಟಿಂಗ್‌ 3 (9ಎ)
ದಾಮೋದರನ್‌ ಬ್ಯಾಟಿಂಗ್‌ 10 (12ಎ, 4X1, 6X1)

ಇತರೆ (ಬೈ 6, ವೈಡ್‌ 1) 7

ವಿಕೆಟ್ ಪತನ: 1-20 (ಕೋದಂಡಪಾಣಿ ಅರವಿಂದ್‌, 3.3), 2-24 (ನೇಯನ್ ಶ್ಯಾಮ್‌ ಕಂಗಯನ್, 4.1), 3-47 (ಪಾರಸ್‌ ಡೋಗ್ರಾ, 18.4), 4-47 (ಎಸ್‌. ಕಾರ್ತಿಕ್‌, 19.5)

ಬೌಲಿಂಗ್‌: ಪ್ರಸಿದ್ಧ ಕೃಷ್ಣ 6–1–31–2, ವಿದ್ಯಾಧರ್ ಪಾಟೀಲ 6–3–9–1, ವಿದ್ವತ್‌ ಕಾವೇರಪ್ಪ 6–3–6–0, ಕೆ.ವಿ ಸಿದ್ಧಾರ್ಥ್‌ 1–0–5–0, ಶ್ರೇಯಸ್‌ ಗೋಪಾಲ್‌ 4–1–5–1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT