ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್‌ಗೆ ಏಳು; ಕಾಶ್ಮೀರಕ್ಕೆ ಸೋಲು

ರಣಜಿ ಕ್ರಿಕೆಟ್: 167 ರನ್‌ಗಳಿಂದ ಗೆದ್ದ ಕರುಣ್ ಪಡೆ; ಸೆಮಿಯಲ್ಲಿ ಕರ್ನಾಟಕಕ್ಕೆ ಬಂಗಾಳ ಸವಾಲು
Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಜಮ್ಮು: ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಕೈಚಳಕದ ಮುಂದೆ ಜಮ್ಮು–ಕಾಶ್ಮೀರ ತಂಡದ ಆಟ ನಡೆಯಲಿಲ್ಲ. ಇನಿಂಗ್ಸ್‌ ಹಿನ್ನಡೆಯಿಂದ ಬಳಲಿದ್ದ ಆತಿಥೇಯರ ಗಾಯಕ್ಕೆ ಗೌತಮ್ ಉಪ್ಪು ಉಜ್ಜಿದರು!

ಇದರ ಫಲವಾಗಿ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ 167 ರನ್‌ಗಳಿಂದ ಜಯ ಭೇರಿ ಬಾರಿಸಿತು. ಸೆಮಿಫೈನಲ್‌ನಲ್ಲಿ ಬಂಗಾಳ ತಂಡವನ್ನು ಎದುರಿಸಲು ಸಿದ್ಧವಾಯಿತು.

ಈ ಪಂದ್ಯದ ಮೊದಲ ಎರಡು ದಿನಗಳ ಆಟವು ಮಳೆಯಿಂದಾಗಿ ನಷ್ಟವಾಗಿತ್ತು. ಆದರೂ ಮೂರು ದಿನಗಳಲ್ಲಿಯೇ ಭರ್ಜರಿ ಗೆಲುವು ಸಾಧಿಸುವಲ್ಲಿ ಕರುಣ್ ನಾಯರ್ ಬಳಗವು ಯಶಸ್ವಿಯಾಯಿತು.

ಎರಡು ರನ್‌ಗಳಿಂದ ಶತಕ ಸಾಧನೆ ತಪ್ಪಿಸಿಕೊಂಡ ಕೆ.ವಿ. ಸಿದ್ಧಾರ್ಥ್ (98; 177ಎ, 10ಬೌಂ, 2ಸಿ) ಅವರ ಬ್ಯಾಟಿಂಗ್ ಬಲದಿಂದ ಸೋಮವಾರ ಬೆಳಿಗ್ಗೆ 330 ರನ್‌ಗಳ ಬೃಹತ್ ಗುರಿ ಯನ್ನು ಒಡ್ಡಿದ ಕರ್ನಾಟಕ ತಂಡವು ನಿರಾಳವಾಗಲಿಲ್ಲ. ಇನಿಂಗ್ಸ್ ಮುನ್ನಡೆ ಸಾಧಿಸಿದ್ದರಿಂದ ನಾಲ್ಕರ ಘಟ್ಟದ ಅರ್ಹತೆ ಖಚಿತವಾಗಿದ್ದರೂ ನಿರ್ಲಿಪ್ತವಾಗಲಿಲ್ಲ.

ಊಟದ ವಿರಾಮದ ನಂತರ ಆರಂಭವಾದ ಜಮ್ಮು–ಕಾಶ್ಮೀರ ಇನಿಂಗ್ಸ್‌ ಅನ್ನು ಚಹಾ ವಿರಾಮದ ಹೊತ್ತಿಗೆ ದೂಳೀಪಟ ಮಾಡಿತು. ಏಳು ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿ ಕೊಂಡ ಗೌತಮ್ ಪಾರಮ್ಯ ಮೆರೆದರು. ಲೀಗ್ ಹಂತದ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಅವರು ಒಟ್ಟು 14 ವಿಕೆಟ್ ಕಬಳಿಸಿದ್ದರು.

ಕರ್ನಾಟಕವು ಮೊದಲ ಇನಿಂಗ್ಸ್‌ನಲ್ಲಿ 206 ರನ್‌ಗಳ ಸಾಧಾರಣ ಮೊತ್ತ ಗಳಿಸಿದ್ದ ಸಂದರ್ಭದಲ್ಲಿ ಆತಿಥೇಯ ಬಳಗಕ್ಕೆ ಮುನ್ನಡೆ ಗಳಿಸುವ ಅವಕಾಶ ಇತ್ತು. ಆದರೆ ಪ್ರಸಿದ್ಧ ಕೃಷ್ಣ ಅವರ ಶಿಸ್ತಿನ ದಾಳಿಯಿಂದಾಗಿ 192 ರನ್‌ಗಳಿಗೆ ಆಲೌಟ್ ಆಗಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕವು ಸಮರ್ಥ್ ಮತ್ತು ಸಿದ್ಧಾರ್ಥ್ ಅವರ ಅಮೋಘ ಆಟದ ಫಲವಾಗಿ 106.5 ಓವರ್‌ಗಳಲ್ಲಿ 316 ರನ್‌ ಗಳಿಸಿ ದೊಡ್ಡ ಗುರಿ ಒಡ್ಡುವಲ್ಲಿ ಸಫಲವಾಯಿತು. ಆದರೆ ರಸೂಲ್ ಬಳಗವು 163 ರನ್‌ ಗಳಿಸಿ ಶರಣಾಯಿತು. ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿಯೇ ಸೂರ್ಯಾಂಶ್ ರೈನಾ (12; 15ಎ, 2ಬೌಂ) ವಿಕೆಟ್ ಕಬಳಿಸಿದ ಪ್ರಸಿದ್ಧ ಕೃಷ್ಣ ಮುನ್ನುಡಿ ಬರೆದರು. ಇದರ ನಂತರ ಗೌತಮ್ ತಮ್ಮ ಕೈಚಳಕ ಆರಂಭಿಸಿದರು. ಗೌತಮ್, 11ನೇ ಓವರ್‌ನಲ್ಲಿ ಶುಭಂ ಖಜುರಿಯಾ (30; 34ಎ, 5ಬೌಂ) ಮತ್ತು ಅಬ್ದುಲ್ ಸಮದ್ ವಿಕೆಟ್‌ಗಳನ್ನು ಕಬಳಿಸಿದರು.

ಸ್ವಲ್ಪಮಟ್ಟಿನ ಹೋರಾಟ ಮಾಡಿದ ಶುಭಂ ಪಂಡೀರ (31; 59ಎ,5ಬೌಂ), ಅಕೀಬ್ ನಬಿ (26; 43ಎ, 4ಬೌಂ, 1ಸಿ) ಮತ್ತು ಹನ್ನೊಂದನೇ ಆಟಗಾರ ಉಮರ್ ನಜೀರ್ ಮೀರ್ (24; 19ಎ, 2ಬೌಂ, 2ಸಿ) ಅವರಿಗೂ ಪೆವಿಲಿಯನ್ ದಾರಿ ತೋರುವಲ್ಲಿ ಗೌತಮ್ ಮೇಲುಗೈ ಸಾಧಿಸಿದರು. ನಾಯಕ ಪರ್ವೇಜ್ ರಸೂಲ್ ಮತ್ತು ಫಾಜಿಲ್ ರಶೀದ್ ವಿಕೆಟ್‌ಗಳನ್ನು ಕ್ರಮವಾಗಿ ರೋನಿತ್ ಮತ್ತು ಸ್ಪಿನ್ನರ್ ಸುಚಿತ್ ಗಳಿಸಿದರು.

ಸಿದ್ಧಾರ್ಥ್ ಮಿಂಚು: ಸಿದ್ಧಾರ್ಥ್‌ ಗಂಭೀರವಾದ ಗಾಯದಿಂದ ಚೇತರಿಸಿ ಕೊಂಡು ಈ ಬಾರಿಯ ಋತುವಿನಲ್ಲಿ ಆಡಿದ ಐದನೇ ಪಂದ್ಯ ಇದು.

ಇಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಅವರ 76 ರನ್‌ಗಳ ಬಲದಿಂದ ಕರ್ನಾಟಕವು ಇನ್ನೂರರ ಗಡಿ ದಾಟಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಸಮರ್ಥ್ ಒಬ್ಬರನ್ನು ಬಿಟ್ಟರೆ ಉಳಿದ ಅಗ್ರಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದರು. ಆಗಲೂ ಸಿದ್ಧಾರ್ಥ್ ವೇಗವಾಗಿ ಬ್ಯಾಟಿಂಗ್ ಮಾಡಿದರು.

ಆದರೆ 98 ರನ್‌ ಗಳಿಸಿದ್ದ ಸಂದರ್ಭದಲ್ಲಿ ತಪ್ಪು ಹೊಡೆತಕ್ಕೆ ದಂಡ ತೆತ್ತರು.

ಸ್ಕೋರ್

ಮೊದಲ ಇನಿಂಗ್ಸ್

ಕರ್ನಾಟಕ 206

ಜಮ್ಮು–ಕಾಶ್ಮೀರ 192

ಎರಡನೇ ಇನಿಂಗ್ಸ್

ಕರ್ನಾಟಕ

316 (106.5 ಓವರ್‌ಗಳಲ್ಲಿ)

ಕೆ.ವಿ. ಸಿದ್ಧಾರ್ಥ್ ಸಿ ಉಮರ್ ನಜೀರ್ ಬಿ ಅಬಿದ್ ಮುಷ್ತಾಕ್ 98

ಶರತ್ ಶ್ರೀನಿವಾಸ್ ಎಲ್‌ಬಿಡಬ್ಲ್ಯು ಅಬಿದ್ ಮುಷ್ತಾಕ್ 34

ಕೆ. ಗೌತಮ್ ಸ್ಟಂಪ್ಡ್‌ ಫಾಜಿಲ್‌ ರಶೀದ್ ಬಿ ಪರ್ವೇಜ್ ರಸೂಲ್ 04

ಜೆ. ಸುಚಿತ್ ಸಿ ಸೂರ್ಯಾಂಶ್ ರೈನಾ ಬಿ ಪರ್ವೇಜ್ ರಸೂರ್ 04

ಅಭಿಮನ್ಯು ಮಿಥುನ್ ಸಿ ಫಾಜಿಲ್ ರಶೀದ್ ಬಿ ಅಬಿದ್ ಮುಷ್ತಾಕ್ 10

ರೋನಿತ್ ಮೋರೆ ಔಟಾಗದೆ 01

ಎಂ. ಪ್ರಸಿದ್ಧ ಕೃಷ್ಣ ಬಿ ಅಬಿದ್ ಮುಷ್ತಾಕ್ 00

ಇತರೆ: (ನೋಬಾಲ್ 1, ಬೈ 4, ಲೆಗ್‌ಬೈ 2) 7

ವಿಕೆಟ್‌ ಪತನ: 5–275 (ಸಿದ್ಧಾರ್ಥ್; 79.2), 6–283 (ಗೌತಮ್; 83.1), 7–295 (ಸುಚಿತ್; 93.2), 8–313 (ಶರತ್; 104.3), 9–316 (ಮಿಥುನ್; 106.2), 10–316 (ಪ್ರಸಿದ್ಧ;106.5)

ಬೌಲಿಂಗ್

ಅಕಿಬ್ ನಬಿ 11–3–25–0, ಮುಜ್ತಾಬಾ ಯೂಸುಫ್ 12–1–44–1, ಉಮರ್ ನಜೀರ್ 10–0–52–0, ಪರ್ವೇಜ್ ರಸೂಲ್ 34–5–88–3, ಅಬಿದ್ ಮುಷ್ತಾಕ್ 34.5–10–83–6, ಅಬ್ದುಲ್ ಸಮದ್ 3–0–17–0, ಹೆನನ್ ನಜೀರ್ 2–1–1–0

ಜಮ್ಮು–ಕಾಶ್ಮೀರ

163 (44.4 ಓವರ್‌ಗಳಲ್ಲಿ)

ಶುಭಂ ಖಜುರಿಯಾ ಸಿ ಶರತ್ ಬಿ ಗೌತಮ್ 30

ಸೂರ್ಯಾಂಶ್ ರೈನಾ ಬಿ ಪ್ರಸಿದ್ಧ ಕೃಷ್ಣ 12

ಹೆನನ್ ನಜೀರ್ ಎಲ್‌ಬಿಡಬ್ಲ್ಯು ಗೌತಮ್ 07

ಅಬ್ದುಲ್ ಸಮದ್ ಸಿ ಸುಚಿತ್ ಬಿ ಗೌತಮ್ 02

ಪರ್ವೇಜ್ ರಸೂಲ್ ಬಿ ರೋನಿತ್ ಮೋರೆ 02

ಶುಭಂ ಸಿಂಗ್ ಪಂಡೀರ ಸಿ ಕರುಣ್ ನಾಯರ್ ಬಿ ಗೌತಮ್ 31

ಫಾಜಿಲ್ ರಶೀದ್ ಸಿ ಕರುಣ್ ನಾಯರ್ ಬಿ ಸುಚಿತ್ 11

ಅಬಿದ್ ಮುಷ್ತಾಕ್ ಸಿ ಮಿಥುನ್ ಬಿ ಗೌತಮ್ 05

ಅಕೀಬ್ ನಬಿ ಎಲ್‌ಬಿಡಬ್ಲ್ಯು 26

ಮುಜ್ತಾಬಾ ಯೂಸುಫ್ ಔಟಾಗದೆ 11

ಉಮರ್ ನಜೀರ್ ಸಿ ಶರತ್ ಬಿ ಗೌತಮ್ 24

ಇತರೆ: 2 (ಬೈ 1, ಲೆಗ್‌ಬೈ1)

ವಿಕೆಟ್ ಪತನ: 1–20 (ರೈನಾ;3.5), 2–46 (ಶುಭಂ; 10.2), 3–48 (ಸಮದ್;10.5), 4–53 (ನಜೀರ್;12.2), 5–53 (ರಸೂಲ್;13.2), 6–93 (ರಶೀದ್; 21.2), 7–98 (ಅಬಿದ್;22.5), 8–106 (ಪಂಡೀರ;28.6), 9–131 (ನಬಿ;38.2), 10–163 (ಉಮರ್; 44.4)

ಬೌಲಿಂಗ್

ಅಭಿಮನ್ಯು ಮಿಥುನ್ 4–0–18–0, ಎಂ. ಪ್ರಸಿದ್ಧಕೃಷ್ಣ 5–0–21–1, ಕೃಷ್ಣಪ್ಪ ಗೌತಮ್ 18.4–6–54–7, ರೋನಿತ್ ಮೋರೆ 5–1–30–1, ಜೆ. ಸುಚಿತ್ 12–1–38–1

ಫಲಿತಾಂಶ: ಕರ್ನಾಟಕ ತಂಡಕ್ಕೆ 167 ರನ್‌ಗಳ ಜಯ ಮತ್ತು ಸೆಮಿಫೈನಲ್‌ಗೆ ಪ್ರವೇಶ

ಪಂದ್ಯಶ್ರೇಷ್ಠ: ಕೃಷ್ಣಮೂರ್ತಿ ಸಿದ್ಧಾರ್ಥ್

ಸೆಮಿಫೈನಲ್: ಕರ್ನಾಟಕ–ಬಂಗಾಳ (ಫೆಬ್ರುವರಿ 29ರಿಂದ)

ಸ್ಥಳ: ಕೋಲ್ಕತ್ತ

ಒಂದೇ ರಾಜ್ಯದ ಎರಡು ತಂಡಗಳು ಮುಖಾಮುಖಿ!

ಈ ಸಲದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಒಂದೇ ರಾಜ್ಯದ ಎರಡು ತಂಡಗಳು ಮುಖಾಮುಖಿಯಾಗಲಿವೆ.

ಇದೇ 29ರಿಂದ ಆರಂಭವಾಗಲಿರುವ ಪಂದ್ಯದಲ್ಲಿ ಗುಜರಾತ್ ಮತ್ತು ಸೌರಾಷ್ಟ್ರ ತಂಡಗಳು ಹಣಾಹಣಿ ನಡೆಸಲಿವೆ.

ಎಂಟರ ಘಟ್ಟದ ಪಂದ್ಯದಲ್ಲಿ ಗುಜರಾತ್ ತಂಡವು ಭಾನುವಾರ 464 ರನ್‌ಗಳಿಂದ ಗೋವಾ ವಿರುದ್ಧ ಗೆದ್ದಿತ್ತು. ಒಂಗೋಲ್‌ನಲ್ಲಿ ಸೋಮವಾರ ಮುಕ್ತಾಯವಾದ ಇನ್ನೊಂದುಪಂದ್ಯದಲ್ಲಿ ಸೌರಾಷ್ಟ್ರ ತಂಡವು ಆಂಧ್ರದ ಎದುರು ಡ್ರಾ ಮಾಡಿಕೊಂಡಿದತು. ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ್ದ ಕಾರಣ ಸೆಮಿಫೈನಲ್‌ ಅರ್ಹತೆ ಪಡೆಯಿತು.

ಕಟಕ್‌ನಲ್ಲಿ ನಡೆದ ಬಂಗಾಳ ಮತ್ತು ಒಡಿಶಾ ನಡುವಣ ಪಂದ್ಯವು ಡ್ರಾ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಿದ್ದ ಬಂಗಾಳ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಸೌರಾಷ್ಟ್ರ: 419, ಆಂಧ್ರ: 136, ಎರಡನೇ ಇನಿಂಗ್ಸ್: ಸೌರಾಷ್ಟ್ರ: 426, ಆಂಧ್ರ: 51 ಓವರ್‌ಗಳಲ್ಲಿ 4ಕ್ಕೆ149 (ಸಿ.ಆರ್. ಜ್ಞಾನೇಶ್ವರ್ 29, ಕೆ.ಎಸ್. ಭರತ್ ಔಟಾಗದೆ 55, ಕರಣ್ ಶಿಂಧೆ ಔಟಾಗದೆ 27, ಧರ್ಮೇಂದ್ರಸಿಂಹ ಜಡೇಜ 39ಕ್ಕೆ2, ಪ್ರೇರಕ್ ಮಂಕಡ್ 8ಕ್ಕೆ2) ಫಲಿತಾಂಶ: ಪಂದ್ಯ ಡ್ರಾ. ಸೌರಾಷ್ಟ್ರಕ್ಕೆ ಇನಿಂಗ್ಸ್ ಮುನ್ನಡೆ. ಕಟಕ್: ಮೊದಲ ಇನಿಂಗ್ಸ್: ಬಂಗಾಳ: 332, ಒಡಿಶಾ: 250, ಎರಡನೇ ಇನಿಂಗ್ಸ್: ಬಂಗಾಳ: 373, ಒಡಿಶಾ: 10 ಓವರ್‌ಗಳಲ್ಲಿ 39 (ಅನುರಾಗ್ ಸಾರಂಗಿ ಔಟಾಗದೆ 34), ಫಲಿತಾಂಶ: ಪಂದ್ಯ ಡ್ರಾ, ಬಂಗಾಳಕ್ಕೆ ಇನಿಂಗ್ಸ್ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT