ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಯಶಸ್ವಿ ಶತಕದ ಆಸರೆ

Last Updated 14 ಜೂನ್ 2022, 17:22 IST
ಅಕ್ಷರ ಗಾತ್ರ

ಬೆಂಗಳೂರು: ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್ ಅಮೋಘ ಶತಕ ದಾಖಲಿಸಿ ಮುಂಬೈ ತಂಡದ ಕುಸಿತವನ್ನು ತಡೆದರು.

ಮಂಗಳವಾರ ಆರಂಭವಾದ ಉತ್ತರಪ್ರದೇಶ ಎದುರಿನ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಮುಂಬೈ ತಂಡವು 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 260 ರನ್‌ ಗಳಿಸಿತು.

ಟಾಸ್ ಗೆದ್ದ ಉತ್ತರಪ್ರದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಮೂರನೇ ಎಸೆತದಲ್ಲಿಯೇ ಮುಂಬೈ ತಂಡದ ನಾಯಕ ಪೃಥ್ವಿ ಶಾ ವಿಕೆಟ್ ಗಳಿಸಿದ ಯಶ್ ದಯಾಳ್ ಸಂಭ್ರಮಿಸಿದರು. ಇದರಿಂದಾಗಿ ಇನಿಂಗ್ಸ್‌ ಕಟ್ಟುವ ಹೊಣೆ ಯುವಬ್ಯಾಟರ್ ಯಶಸ್ವಿ ಮೇಲೆ ಬಿತ್ತು. ಅದನ್ನು ಅವರು ನಿಭಾಯಿಸಿದರು. ಅವರಿಗೆ ಅದೃಷ್ಟವೂ ಜೊತೆ ನೀಡಿತು. 30 ರನ್‌ಗಳಿಸಿದ್ದ ಸಂದರ್ಭದಲ್ಲಿ ಅವರು ಎರಡು ಬಾರಿ ಜೀವದಾನ ಪಡೆದರು.

227 ಎಸೆತಗಳನ್ನು ಎದುರಿಸಿದ ಎಡಗೈ ಬ್ಯಾಟರ್ ಯಶಸ್ವಿ ಶತಕ ಪೂರೈಸಿದರು. ಹೋದವಾರ ಆಲೂರು ಕ್ರೀಡಾಂಗಣದಲ್ಲಿ ಉತ್ತರಾಖಂಡದ ಎದುರಿನ ಕ್ವಾರ್ಟರ್‌ಫೈನಲ್‌ನಲ್ಲಿಯೂ ಯಶಸ್ವಿ ಶತಕ ಗಳಿಸಿದ್ದರು. ಇದು ಅವರಿಗೆ ಮೂರನೇ ಪ್ರಥಮ ದರ್ಜೆ ಪಂದ್ಯವಾಗಿದೆ. ಇಲ್ಲಿ 20 ವರ್ಷದ ಯಶಸ್ವಿ ಮೂರು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾದರು.

3ನೇ ವಿಕೆಟ್ ಜೊತೆಯಾಟದಲ್ಲಿ ಸುವೇದ್ ಪಾರ್ಕರ್ (32; 98ಎ) ಅವರೊಂದಿಗೆ 63 ರನ್ ಗಳಿಸಿದರು. ನಾಲ್ಕನೇ ವಿಕೆಟ್‌ಗೆ ಸರ್ಫರಾಜ್ ಖಾನ್ (40; 52ಎ) ಜೊತೆಗೆ 83 ರನ್‌ಗಳನ್ನು ಸೇರಿಸಿದರು. 5ನೇ ವಿಕೆಟ್ ಪಾಲು ದಾರಿಕೆಯಲ್ಲಿ ಯಶಸ್ವಿ ಮತ್ತು ಹಾರ್ದಿಕ್ ತಮೊರೆ (34; 56ಎ) 63 ರನ್‌ಗಳನ್ನು ಪೇರಿಸಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಲು ಸಾಧ್ಯವಾಯಿತು. ದಿನದಾಟಕ್ಕೆ ಇನ್ನೂ ಕೆಲವೇ ನಿಮಿಷಗಳು ಬಾಕಿಯಿದ್ದಾಗ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಬೌಲಿಂಗ್‌ನಲ್ಲಿ ಧ್ರುವಚಂದ್ ಜುರೇಲ್‌ಗೆ ಕ್ಯಾಚಿತ್ತ ಯಶಸ್ವಿ ಆಟಕ್ಕೆ ತೆರೆಬಿತ್ತು. ಅವರು ಒಟ್ಟು 15 ಬೌಂಡರಿಗಳನ್ನು ಗಳಿಸಿದರು.

ಅರ್ಧಶತಕ ಗಳಿಸಿರುವ ಹಾರ್ದಿಕ್ (ಬ್ಯಾಟಿಂಗ್ 51; 74ಎ 4X6, 6X1) ಮತ್ತು ಶಮ್ಸ್‌ ಮುಲಾನಿ (ಬ್ಯಾಟಿಂಗ್ 10) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರು: ಜಸ್ಟ್ ಕ್ರಿಕೆಟ್ ಮೈದಾನ; ಮೊದಲ ಇನಿಂಗ್ಸ್– ಮುಂಬೈ: 87 ಓವರ್‌ಗಳಲ್ಲಿ 5ಕ್ಕೆ260 (ಯಶಸ್ವಿ ಜೈಸ್ವಾಲ್ 100, ಸುವೇದ್ ಪಾರ್ಕರ್ 32, ಸರ್ಫರಾಜ್ ಖಾನ್ 40, ಹಾರ್ದಿಕ್ ತಮೊರೆ ಬ್ಯಾಟಿಂಗ್ 51, ಶಮ್ಸ್ ಮುಲಾನಿ ಬ್ಯಾಟಿಂಗ್ 10, ಯಶ್ದಯಾಳ್ 35ಕ್ಕೆ2, ಶಿವಂ ಮಾವಿ 29ಕ್ಕೆ1, ಕರಣ್ ಶರ್ಮಾ
39ಕ್ಕೆ2).

ಹಿಮಾಂಶು ಮಂತ್ರಿ ಶತಕದ ಸೊಬಗು

ಬೆಂಗಳೂರು: ಹಿಮಾಂಶು ಮಂತ್ರಿ ಶತಕದ ನೆರವಿನಿಂದ ಮಧ್ಯಪ್ರದೇಶ ತಂಡವು ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಸೆಮಿಫೈನಲ್‌ನಲ್ಲಿ ಬಂಗಾಳ ಎದುರು ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ.

ಟಾಸ್ ಗೆದ್ದ ಮಧ್ಯಪ್ರದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಿನದಾಟದ ಮುಕ್ತಾಯಕ್ಕೆ 86 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 271 ರನ್ ಗಳಿಸಿತು.

ಬಂಗಾಳ ತಂಡದ ಮುಖೇಶ್ ಕುಮಾರ್ ಮಧ್ಯಪ್ರದೇಶಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಇದರಿಂದಾಗಿ ತಂಡವು 97 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಆದರೆ ಕ್ರೀಸ್‌ನಲ್ಲಿದ್ದ ಆರಂಭಿಕ ಬ್ಯಾಟರ್ ಹಿಮಾಂಶು (ಬ್ಯಾಟಿಂಗ್ 134; 280ಎಸೆತ, 4X15, 6X1) ಅವರು ಅಕ್ಷತ್ ರಘುವಂಶಿ (63; 81ಎ, 4X8, 6X2) ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 123 ರನ್‌ ಸೇರಿಸಿ ತಂಡಕ್ಕೆ ಉತ್ತಮ ಮೊತ್ತ ಗಳಿಸುವ ಭರವಸೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಆಲೂರು ಕ್ರಿಕೆಟ್ ಮೈದಾನ: ಮಧ್ಯಪ್ರದೇಶ(ಮೊದಲ ಇನಿಂಗ್ಸ್)86 ಓವರ್‌ಗಳಲ್ಲಿ 6ಕ್ಕೆ271(ಹಿಮಾಂಶು ಮಂತ್ರಿ ಬ್ಯಾಟಿಂಗ್ 134, ಅಕ್ಷತ್ ರಘುವಂಶಿ 63, ಮುಖೇಶ್ ಕುಮಾರ್ 45ಕ್ಕೆ2, ಆಕಾಶ್ ದೀಪ್ 55ಕ್ಕೆ2, ಶಾಬಾಜ್ 70ಕ್ಕೆ1, ಪ್ರದೀಪ್ತ್ ಪ್ರಾಮಾಣಿಕ್ 50ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT