ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಸೆಮಿಫೈನಲ್: ಸಾಧಾರಣ ಮೊತ್ತಕ್ಕೆ ಕುಸಿದ ಕರ್ನಾಟಕ; ಸೌರಾಷ್ಟ್ರಕ್ಕೆ 115 ರನ್

Last Updated 12 ಫೆಬ್ರುವರಿ 2023, 6:46 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡವು ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದ್ದು, ಸೌರಾಷ್ಟ್ರಕ್ಕೆ 115 ರನ್‌ಗಳ ಸುಲಭ ಗುರಿ ನೀಡಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕರ್ನಾಟಕ ತಂಡ, ನಾಯಕ ಮಯಂಕ್‌ ಅಗರವಾಲ್ ಸಿಡಿಸಿದ ದ್ವಿಶತಕದ (249 ರನ್‌) ಬಲದಿಂದ 407 ರನ್‌ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ ನಾಯಕ ಅರ್ಪಿತ್‌ (202 ರನ್‌), ಅನುಭವಿ ಶೆಲ್ಡನ್‌ ಜಾಕ್ಸನ್‌ (160 ರನ್‌) ಹಾಗೂ ಚಿರಾಗ್‌ ಜಾನಿ (72 ರನ್‌) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ 527 ರನ್‌ ಕಲೆಹಾಕಿತ್ತು.

120 ರನ್‌ ಅಂತರದ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ 224 ರನ್‌ ಗಳಿಸಿ ಸರ್ವಪತನ ಕಂಡಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್‌ ನಷ್ಟಕ್ಕೆ 123 ರನ್‌ ಗಳಿಸಿದ್ದ ಕರ್ನಾಟಕ, ಅಂತಿಮ ದಿನ 6 ವಿಕೆಟ್‌ ಕಳೆದುಕೊಂಡು 101 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಈ ಇನಿಂಗ್ಸ್‌ನಲ್ಲಿ ನಿಕಿನ್‌ ಜೋಶ್‌ ಶತಕ (109) ಹಾಗೂ ನಾಯಕ ಮಯಂಕ್‌ ಅಗರವಾಲ್‌ ಅರ್ಧಶತಕ (55 ರನ್‌) ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿ‌ಬರಲಿಲ್ಲ. ಇದು ಆತಿಥೇಯ ಪಡೆಯ ಕುಸಿತಕ್ಕೆ ಕಾರಣವಾಯಿತು.

ಇನ್ನೂ ಎರಡು ಅವಧಿಯ ಆಟ ಬಾಕಿ ಇದೆ. ಫೈನಲ್‌ ಪ್ರವೇಶಿಸಲು ಕರ್ನಾಟಕ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಅದಕ್ಕಾಗಿ ಸೌರಾಷ್ಟ್ರ ಪಡೆಯನ್ನು ಆಲೌಟ್‌ ಮಾಡಲೇಬೇಕಿದೆ. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿರುವ ಸೌರಾಷ್ಟ್ರ, ಪಂದ್ಯವನ್ನು ಡ್ರಾ ಮಾಡಿಕೊಂಡರೂ ಟೂರ್ನಿಯ ಅಂತಿಮ ಹಂತಕ್ಕೆ ಲಗ್ಗೆ ಇಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT