ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಸೆಮಿಫೈನಲ್: ಯಶಸ್ವಿ ಶತಕದ ಹ್ಯಾಟ್ರಿಕ್

ಬಂಗಾಳ ತಂಡಕ್ಕೆ ಅಭಿಮನ್ಯು ಆಸರೆ
Last Updated 17 ಜೂನ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಮೂರನೇ ಶತಕ ಗಳಿಸಿದ ದಾಖಲೆ ಮಾಡಿದರು.

ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ಉತ್ತರಪ್ರದೇಶ ಎದುರು ನಡೆಯುತ್ತಿರುವ ಸೆಮಿಫೈನಲ್‌ನಲ್ಲಿ ಯಶಸ್ವಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಹೊಡೆದರು. ಮೊದಲ ಇನಿಂಗ್ಸ್‌ನಲ್ಲಿ 100 ರನ್‌ ಗಳಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ 181 (372ಎ; 4X23, 6X1) ಗಳಿಸಿದರು. ಅಲ್ಲದೇ ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಅರ್ಮಾನ್ ಜಾಫರ್ (127; 259ಎ, 4X15, 6X2) ಅವರೊಂದಿಗೆ 286 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಮುಂಬೈ ತಂಡವು ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 140 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 449 ರನ್‌ ಗಳಿಸಿದೆ. ಒಟ್ಟು 662 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ತಂಡವು 393 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಉತ್ತರಪ್ರದೇಶವು 180 ರನ್‌ ಮಾತ್ರ ಗಳಿಸಿ ಆಲೌಟ್ ಆಗಿತ್ತು. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿಯಿದ್ದು, ಉತ್ತರಪ್ರದೇಶಕ್ಕೆ ಜಯಿಸುವ ಯಾವುದೇ ಅವಕಾಶವನ್ನೂ ಮುಂಬೈ ಬಿಟ್ಟಿಲ್ಲ. ಪಂದ್ಯ ಡ್ರಾ ಆದರೂ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬೈ ಫೈನಲ್ ತಲುಪುವುದು.

ಜೈಸ್ವಾಲ್ ದಾಖಲೆ: ರಣಜಿ ಟೂರ್ನಿಯ ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿಯೂ ಶತಕ ಬಾರಿಸಿದ ಮುಂಬೈನ ಹತ್ತನೇ ಆಟಗಾರನೆಂಬ ಹೆಗ್ಗಳಿಕೆಗೆ ಯಶಸ್ವಿ ಪಾತ್ರರಾಗಿದ್ದಾರೆ.

ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ವಾಸೀಂ ಜಾಫರ್, ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಅವರ ಸಾಲಿಗೆ ಸೇರಿದ್ದಾರೆ.

ಹೋದ ವಾರ ಕ್ವಾರ್ಟರ್‌ಫೈನಲ್‌ನಲ್ಲಿಯೂ ಅವರು ಶತಕ ಗಳಿಸಿದ್ದರು. 21 ವರ್ಷದ ಯಶಸ್ವಿಗೆ ಇದು ಮೂರನೇ ಪ್ರಥಮ ದರ್ಜೆ ಪಂದ್ಯ. ಅವರು ಈಇನಿಂಗ್ಸ್‌ನಲ್ಲಿ 54ನೇ ಎಸೆತದಲ್ಲಿ ತಮ್ಮ ಖಾತೆ ತೆರೆದಿದ್ದರು.

ಅರ್ಮಾನ್ ಮಿಂಚು: ತಮ್ಮ ವೃತ್ತಿಜೀವನದ ಎಂಟನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ ಅರ್ಮಾನ್ ಜಾಫರ್‌ ಅವರು ಎರಡನೇ ಶತಕ ದಾಖಲಿಸಿದರು. ದೇಶಿ ಕ್ರಿಕೆಟ್ ದಂತಕಥೆ ವಾಸೀಂ ಜಾಫರ್ ಅವರ ಸಹೋದರ ಸಂಬಂಧಿಯಾಗಿರುವ ಅರ್ಮಾನ್ ಚೆಂದದ ಬ್ಯಾಟಿಂಗ್ ಮಾಡಿದರು. ಸ್ವೀಪ್, ಡ್ರೈವ್ ಮತ್ತು ಲೇಟ್ ಕಟ್‌ಗಳಿಂದ ರನ್‌ಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಜಸ್ಟ್ ಕ್ರಿಕೆಟ್ ಮೈದಾನ: ಮೊದಲ ಇನಿಂಗ್ಸ್: ಮುಂಬೈ–393, ಉತ್ತರಪ್ರದೇಶ: 180, ಎರಡನೇ ಇನಿಂಗ್ಸ್– ಮುಂಬೈ:140 ಓವರ್‌ಗಳಲ್ಲಿ 4ಕ್ಕೆ 449 (ಯಶಸ್ವಿ ಜೈಸ್ವಾಲ್ 181, ಅರ್ಮಾನ್ ಜಾಫರ್‌ 127, ಸರ್ಫರಾಜ್ ಖಾನ್ ಬ್ಯಾಟಿಂಗ್ 23, ಶಮ್ಸ್ ಮುಲಾನಿ ಬ್ಯಾಟಿಂಗ್ 10, ಪ್ರಿನ್ಸ್ ಯಾದವ್ 69ಕ್ಕೆ2).

ಬಂಗಾಳಕ್ಕೆಅಭಿಮನ್ಯು ಆಸರೆ

ಆಲೂರಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ಬೌಲಿಂಗ್‌ ದಾಳಿಗೆ ಆರಂಭಿಕ ಆಘಾತ ಅನುಭವಿಸಿರುವ ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ (ಬ್ಯಾಟಿಂಗ್ 52; 104ಎ) ಮತ್ತು ಅನುಸ್ಟುಪ್ ಮಜುಂದಾರ್ (ಬ್ಯಾಟಿಂಗ್ 8, 25ಎ) ಆಸರೆಯಾಗಿದ್ದಾರೆ.

351 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿರುವ ಬಂಗಾಳ ತಂಡವು ಶುಕ್ರವಾರ ದಿನದಾಟದ ಮುಕ್ತಾಯಕ್ಕೆ 37 ಓವರ್‌ಗಳಲ್ಲಿ 4ಕ್ಕೆ96 ರನ್ ಗಳಿಸಿದೆ. ಪಂದ್ಯದ ಕೊನೆಯ ದಿನವಾದ ಶನಿವಾರ ಗೆಲುವಿಗಾಗಿ ಬಂಗಾಳ ತಂಡವು 255 ರನ್‌ಗಳನ್ನು ಗಳಿಸಬೇಕಿದೆ.

ಮಧ್ಯಪ್ರದೇಶ ತಂಡದ ಕುಮಾರ ಕಾರ್ತಿಕೇಯ (35ಕ್ಕೆ3) ದಾಳಿಯ ಮುಂದೆ ಬಂಗಾಳದ ಪ್ರಮುಖ ಬ್ಯಾಟರ್‌ಗಳು ಕುಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ‘ಕ್ರೀಡಾ ಸಚಿವ’ ಮನೋಜ್ ತಿವಾರಿ ಸೇರಿದಂತೆ ನಾಲ್ವರು ಬ್ಯಾಟರ್‌ಗಳೂ ಬೇಗನೆ ಔಟಾದರು. ಇದರಿಂದಾಗಿ ಬಂಗಾಳ ತಂಡವು ಆತಂಕದಲ್ಲಿದೆ.

ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 341, ಬಂಗಾಳ; 273, ಎರಡನೇ ಇನಿಂಗ್ಸ್: ಮಧ್ಯಪ್ರದೇಶ:114.2 ಓವರ್‌ಗಳಲ್ಲಿ 281 (ರಜತ್ ಪಾಟೀದಾರ್ 79, ಆದಿತ್ಯ ಶ್ರೀವಾಸ್ತವ 82, ಶಾಬಾಜ್ ಅಹಮದ್ 79ಕ್ಕೆ5, ಪ್ರದೀಪ್ತ ಪ್ರಾಮಾಣಿಕ್ 65ಕ್ಕೆ4) ಬಂಗಾಳ: 37 ಓವರ್‌ಗಳಲ್ಲಿ 4ಕ್ಕೆ96 (ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 52, ಅನುಸ್ಟುಪ್ ಮಜುಂದಾರ್ ಬ್ಯಾಟಿಂಗ್ 8, ಕುಮಾರ್ ಕಾರ್ತಿಕೇಯ 35ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT