ಆಟಗಾರರಿಗೆ ವಿಶ್ರಾಂತಿ ನೀಡುವಂತೆ ವಿನಂತಿಸುವುದು ನನ್ನ ಕೆಲಸವಲ್ಲ: ರವಿ ಶಾಸ್ತ್ರಿ

ನವದೆಹಲಿ: ಆಟಗಾರರಿಗೆ ವಿಶ್ರಾಂತಿ ನೀಡುವಂತೆ ಆಡಳಿತಗಾರರ ಬಳಿ ಮನವಿ ಮಾಡುವುದು ನನ್ನ ಕೆಲಸವಲ್ಲ ಎಂದು ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಇದಕ್ಕೂ ಮುನ್ನ, ಐಪಿಎಲ್ ಟೂರ್ನಿ ಮತ್ತು ವಿಶ್ವಕಪ್ ನಡುವೆ ಅಂತರ ಬೇಕಿತ್ತು. ಐಪಿಎಲ್ ಬಯೋಬಬಲ್ ಪರಿಣಾಮವಾಗಿ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದರು ಎಂದು ಶಾಸ್ತ್ರಿ ಹೇಳಿದ್ದರು.
ಓದಿ: ಆಟಗಾರರು ಮಾನಸಿಕ, ದೈಹಿಕವಾಗಿ ಬಳಲಿದ್ದರು, ಪ್ರಯತ್ನವೇ ಮಾಡಲಿಲ್ಲ: ರವಿ ಶಾಸ್ತ್ರಿ
ಸೋಮವಾರ ರಾತ್ರಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 9 ವಿಕೆಟ್ ಅಂತರದ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸ್ತ್ರಿ ಅವರು, ‘ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಆಡಳಿತಗಾರರೇ ನಿರ್ಧರಿಸಬೇಕು. ಅದು ನನ್ನ ಕೆಲಸವಲ್ಲ. ಇದು ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಯಾವುದೇ ದೇಶದಲ್ಲಾದರೂ ದೊಡ್ಡ ಟೂರ್ನಿಗಳ ಆರಂಭಕ್ಕೂ ಮುನ್ನ ಸಣ್ಣಮಟ್ಟಿನ ಬಿಡುವು ನೀಡಲು ಮುಂದಾಗುತ್ತಾರೆ. ಇದು ಟೂರ್ನಿಗೆ ಸಿದ್ಧವಾಗಲು ಆಟಗಾರರಿಗೆ ನೆರವಾಗುತ್ತದೆ’ ಎಂದು ಹೇಳಿದ್ದಾರೆ.
ತಂಡದ ಮುಖ್ಯ ಕೋಚ್ ಆಗಿ 5 ವರ್ಷಗಳ ಅವಧಿಯಲ್ಲಿ ಆಟಗಾರರ ಜತೆ ಪಾರದರ್ಶಕವಾಗಿ ಇರಲು ಪ್ರಯತ್ನಿಸಿದ್ದೇನೆ. ಆಟಗಾರರು ನಿಜವಾಗಿಯೂ ವಿಶ್ರಾಂತಿ ಬಯಸಿದ್ದರೆ ವಿರಾಮ ಪಡೆದು ಬಳಿಕ ಮರಳಿ ಅವರ ಸ್ಥಾನವನ್ನು ಹೊಂದಬಹುದಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
ಓದಿ: ಮತ್ತೆ ವೀಕ್ಷಕ ವಿವರಣೆಗಾರನಾಗುವ ಸುಳಿವು ನೀಡಿದ ರವಿ ಶಾಸ್ತ್ರಿ
‘ಸಂವಹನವು ಮುಕ್ತವಾಗಿದೆ. ತರಬೇತಿಯ ವಿಧಾನವೂ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಆಟಗಾರರನ್ನು ಚೆನ್ನಾಗಿ ನಿರ್ವಹಿಸಿದ್ದೇವೆ. ಸಂವಹನದ ವಿಚಾರದಲ್ಲಿ ನಮ್ಮ ನಡುವೆ ತಡಕು ಇರಲಿಲ್ಲ. ಎಲ್ಲರೂ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತರು. ಯಾರನ್ನೂ ಕಿರಿಯರಂತೆ ನೋಡಿಲ್ಲ. ಹಿರಿಯ–ಕಿರಿಯ ಎಂಬ ತಾರತಮ್ಯ ತಂಡದಲ್ಲಿರಲಿಲ್ಲ. ಎಲ್ಲರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿತ್ತು’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.