ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯರ್–ವಾರ್ನರ್ ನಡುವಣ ಹಣಾಹಣಿ

ಡೆಲ್ಲಿ ಕ್ಯಾಪಿಟಲ್ಸ್‌ – ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ಮುಖಾಮುಖಿ ಇಂದು
Last Updated 3 ಏಪ್ರಿಲ್ 2019, 20:28 IST
ಅಕ್ಷರ ಗಾತ್ರ

ನವದೆಹಲಿ: ಡೇವಿಡ್ ವಾರ್ನರ್‌ ಮತ್ತು ಜಾನಿ ಬೆಸ್ಟೊ ಅವರಿಬ್ಬರ ಹೆಸರು ಕೇಳಿದರೆ ಸಾಕು. ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿರುವ ಬೌಲರ್‌ಗಳಿಗೆ ಅತ್ಯಂತ ಕಠಿಣ ಸವಾಲು ಒಡ್ಡುತ್ತಿರುವ ಬ್ಯಾಟ್ಸ್‌ಮನ್‌ಗಳು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲರ್‌ಗಳು ಈ ಸವಾಲನ್ನು ಎದುರಿಸಬೇಕಿದೆ. ಗುರುವಾರ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎಲ್ಲ ವಿಭಾಗಗಳಲ್ಲಿಯೂ ಪಂದ್ಯ ಗೆಲ್ಲಿಸುವ ಆಟಗಾರರು ಇರುವ ಏಕೈಕ ತಂಡವೆಂಬ ಹೆಗ್ಗಳಿಕೆ ಇರುವ ಕೇನ್‌ ವಿಲಿಯಮ್ಸನ್‌ ಬಳಗವನ್ನು ಎದುರಿಸಲು ಶ್ರೇಯಸ್ ಅಯ್ಯರ್ ಬಳಗವು ವಿಭಿನ್ನ ರಣತಂತ್ರ ರೂಪಿಸಬೇಕಿದೆ.

ಡೆಲ್ಲಿ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಪಡೆ ಇದೆ. ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಭ್ ಪಂತ್, ಶಿಖರ್ ಧವನ್ ಅವರು ರನ್‌ಗಳ ರಾಶಿ ಪೇರಿಸಬಲ್ಲ ಸಮರ್ಥರು. ಪಂತ್ ನಾಲ್ಕು ಪಂದ್ಯಗಳಿಂದ ಒಟ್ಟು 153 ರನ್‌ ಸೇರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಇದೆ.

ಬೌಲಿಂಗ್‌ ವಿಭಾಗದಲ್ಲಿ ಕಗಿಸೊ ರಬಾಡ ಮತ್ತು ಹರ್ಷಲ್ ಪಟೇಲ್ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈಚೆಗೆ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಆ್ಯಂಡ್ರೆ ರಸೆಲ್ ಅವರನ್ನು ಔಟ್ ಮಾಡಿದ ರಬಾಡ ಮೇಲೆ ತಂಡಕ್ಕೆ ಹೆಚ್ಚು ವಿಶ್ವಾಸವಿದೆ.

ಸನ್‌ರೈಸರ್ಸ್‌ ತಂಡದ ವಾರ್ನರ್ ಅವರು ಮೂರು ಪಂದ್ಯಗಳಿಂದ ಒಟ್ಟು 254 ರನ್‌ ಗಳಿಸಿದ್ದಾರೆ.

ಅದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಇವೆ. ಜಾನಿ ಬೆಸ್ಟೊ, ಮನೀಷ್ ಪಾಂಡೆ, ಯುಸೂಫ್ ಪಠಾಣ್, ಆಲ್‌ರೌಂಡರ್ ವಿಜಯಶಂಕರ್‌ ಮತ್ತು ರಶೀದ್ ಖಾನ್ ಅವರು ರನ್‌ಗಳ ಕಾಣಿಕೆ ನೀಡಬಲ್ಲರು. ನಾಯಕ ಕೇನ್ ವಿಲಿಯಮ್ಸನ್ ಅವರು ಗಾಯದಿಂದ ಚೇತರಿಸಿಕೊಂಡರೆ, ಡೆಲ್ಲಿ ಬೌಲರ್‌ಗಳಿಗೆ ಒತ್ತಡ ಹೆಚ್ಚುವುದು ಖಚಿತ. ಸನ್‌ರೈಸರ್ಸ್‌ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸ್ಪಿನ್ನರ್ ರಶೀದ್ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲ ಸಮರ್ಥರು.

ತಂಡಗಳು ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್:
ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ರಿಷಭ್ ಪಂತ್ (ವಿಕೆಟ್‌ಕೀಪರ್), ಆವೇಶ್ ಖಾನ್, ಬಂಡಾರು ಅಯ್ಯಪ್ಪ, ಅಂಕುಶ್ ಬೇನ್ಸ್‌, ಟ್ರೆಂಟ್ ಬೌಲ್ಟ್, ಶಿಖರ್ ಧವನ್, ಕಾಲಿನ್ ಇಂಗ್ರಾಮ್, ಸಂದೀಪ್ ಲಮಿಚಾನೆ, ಮನ್ಜೋತ್ ಕಾಲ್ರಾ, ಅಮಿತ್ ಮಿಶ್ರಾ, ಕ್ರಿಸ್ ಮಾರಿಸ್, ಕಾಲಿನ್ ಮನ್ರೊ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಕೀಮೊ ಪಾಲ್, ಕಗಿಸೊ ರಬಾಡ, ಜಲಜ್ ಸಕ್ಸೆನಾ, ಇಶಾಂತ್ ಶರ್ಮಾ, ನಾಥು ಸಿಂಗ್, ರಾಹುಲ್ ತೆವಾಟಿಯಾ, ಹನುಮವಿಹಾರಿ.

ಸನ್‌ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಜಾನಿ ಬೆಸ್ಟೊ, ಮನೀಷ್ ಪಾಂಡೆ, ಯುಸೂಫ್ ಪಠಾಣ್, ರಶೀದ್ ಖಾನ್, ವೃದ್ಧಿಮಾನ್ ಸಹಾ, ಸಂದೀಪ್ ಶರ್ಮಾ, ವಿಜ ಯಶಂಕರ್, ಶಕೀಬ್ ಅಲ್ ಹಸನ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಟಿನ್ ಗಪ್ಟಿಲ್, ಬಾಸಿಲ್ ಥಂಪಿ, ರಿಕಿ ಭುಯ್, ಸಿದ್ಧಾರ್ಥ್ ಕೌಲ್, ಭುವನೇಶ್ವರ್ ಕುಮಾರ್, ಅಭಿಷೇಕ್ ಶರ್ಮಾ, ಖಲೀಲ್ ಅಹಮದ್, ಶಾಬಾಜ್ ನದೀಮ್, ಟಿ ನಟರಾಜನ್.

**
ನಮ್ಮ ತಂಡವೂ ಬಹಳಷ್ಟು ಕ್ರಿಕೆಟ್ ಆಡಿದೆ. ಉತ್ತಮ ಅನುಭವ ಇದೆ. ನಾವು ದುರ್ಬಲರಲ್ಲ. ಆದರೆ ಸರಿಯಾದ ಲೆಕ್ಕಾಚಾರ ಮತ್ತು ಯೋಜನೆಗಳೊಂದಿಗೆ ಕಣಕ್ಕಿಳಿಯಬೇಕು.
-ಶ್ರೇಯಸ್ ಅಯ್ಯರ್, ಡೆಲ್ಲಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT