ಶ್ರೇಯಸ್‌ಗೆ ವಿರಾಟ್-, ಎಬಿಡಿ ವಿಕೆಟ್‌ ಗಳಿಕೆ ಸಂಭ್ರಮ

ಮಂಗಳವಾರ, ಏಪ್ರಿಲ್ 23, 2019
29 °C

ಶ್ರೇಯಸ್‌ಗೆ ವಿರಾಟ್-, ಎಬಿಡಿ ವಿಕೆಟ್‌ ಗಳಿಕೆ ಸಂಭ್ರಮ

Published:
Updated:
Prajavani

ಜೈಪುರ: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರಿಬ್ಬರ ವಿಕೆಟ್‌ ಗಳಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಸಾಧನೆಗಳು ಎಂದು ರಾಜಸ್ಥಾನ್ ರಾಯಲ್ಸ್‌ ಡದಲ್ಲಿ ಆಡುತ್ತಿರುವ ಕನ್ನಡಿಗ ಶ್ರೇಯಸ್ ಗೋಪಾಲ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಸ್ (12ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದಾಗಿ  ಆರ್‌ಸಿಬಿಯು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 158 ರನ್‌ ಗಳಿಸಿತು. ರಾಜಸ್ಥಾನ್ ತಂಡವು 19.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 164 ರನ್ ಗಳಿಸಿ ಗೆದ್ದಿತು. ಶ್ರೇಯಸ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು.

‘ವಿಶ್ವದ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ ಮನ್‌ಗಳ ವಿಕೆಟ್ ಗಳಿಸುವುದು ಎಲ್ಲ ಯುವಬೌಲರ್‌ಗಳ ಕನಸಾಗಿರುತ್ತದೆ. ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಮಹತ್ವದ ಕ್ಷಣಗಳಿವು. ಈ ಸಾಧನೆಯನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿದರು.

‘ನನ್ನ ಪ್ರತಿಯೊಂದು ಓವರ್‌ ನಂತರ ನಾಯಕ  ಅಜ್ಜು ಭಾಯ್ (ರಹಾನೆ), ಜೋಸ್ (ಬಟ್ಲರ್) ಅಥವಾ ಸ್ಮಿತ್ ಅವ ರೊಂದಿಗೆ ಮಾತನಾಡುತ್ತಿದ್ದೆ. ಅವರಿಂದ ಉಪಯುಕ್ತ ಸಲಹೆಗಳು ಸಿಗು ತ್ತಿದ್ದವು. ಆದ್ದರಿಂದ ಚೆನ್ನಾಗಿ ಬೌಲಿಂಗ್ ಮಾಡಲು ಸಾಧ್ಯವಾಯಿತು’ ಎಂದರು.

‘ಕೊಹ್ಲಿ ಮತ್ತು ಡಿವಿಲಿಯರ್ಸ್‌ ಅವರನ್ನು ಔಟ್ ಮಾಡಲು ಯೋಜನೆ ರೂಪಿಸುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿ ಬಹಳಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.  ಪಿಚ್, ಮೈದಾನ ಎಲ್ಲವನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪವರ್‌ಪ್ಲೇ ಅವಧಿಯಲ್ಲಿಯೇ ಗೌತಮ್ ಮೂರು ಓವರ್‌ ಚೆನ್ನಾಗಿ ಬೌಲಿಂಗ್ ಮಾಡಿದ್ದು ಇದಕ್ಕೆ ಸಾಕ್ಷಿ’ ಎಂದರು.

‘ಟ್ವೆಂಟಿ 20 ಗೇಮ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಬೌಂಡರಿ ಬಾರಿಸುವುದು ಖಚಿತ. ಆದ್ದರಿಂದ ನಾವು ಬೌಲಿಂಗ್ ಮಾಡುವಾಗ ಪರಿಸ್ಥಿತಿ ಮತ್ತು ಬ್ಯಾಟ್ಸ್‌ ಮನ್‌ ಹಾವಭಾವ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಬೆಂಗಳೂರಿನ ಶ್ರೇಯಸ್ ಹೇಳಿದರು.

ಇನ್ನೂ ಹತ್ತು ಪಂದ್ಯಗಳು ಬಾಕಿಯಿವೆ: ಕೊಹ್ಲಿ
ನಮ್ಮ ಪಾಲಿನಲ್ಲಿ ಇನ್ನೂ ಹತ್ತು ಪಂದ್ಯಗಳು ಇವೆ. ಆದ್ದರಿಂದ ಪ್ಲೇ ಆಫ್‌ ಪ್ರವೇಶಕ್ಕೆ ಬೇಕಾದ ಗೆಲುವುಗಳನ್ನು ಸಾಧಿಸುವ ಅವಕಾಶವೂ ಇದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ  ರಾಜ್ಥಾನ್ ರಾಯಲ್ಸ್‌ ವಿರುದ್ಧ ಸೋತಿತ್ತು. ಇದರೊಂದಿಗೆ ತಂಡವು ಸತತ ನಾಲ್ಕು ಪಂದ್ಯಗಳನ್ನು ಸೋಲನುಭವಿಸಿದೆ. ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇವತ್ತಿನ ಪಂದ್ಯದಲ್ಲಿ ನಮ್ಮ ತಂಡವು ಚೆನ್ನಾಗಿಯೇ ಆಡಿದೆ. ಎದುರಾಳಿ ತಂಡಕ್ಕೆ ಸಾಧಾರಣ ಗುರಿ ನೀಡಿದ್ದರೂ ಬೌಲರ್‌ಗಳು ಉತ್ತಮವಾಗಿ ಆಡಿದರು. ಇದರಿಂದಾಗಿ ಕೊನೆಯ ಓವರ್‌ನಲ್ಲಿ ಫಲಿತಾಂಶ ಹೊರಹೊಮ್ಮಿತು. ನಾವು ಇನ್ನೂ 20–30 ರನ್‌ಗಳನ್ನು ಹೆಚ್ಚು ಸಂಪಾದಿಸಿದ್ದರೆ ಗೆಲುವು ಸಾಧ್ಯವಿತ್ತು’ ಎಂದರು.

‘ಮುಂಬೈ ಎದುರಿನ ಮತ್ತು ಈ ಪಂದ್ಯದಲ್ಲಿ  ನಾವು ಚೆನ್ನಾಗಿ ಆಡಿದ್ದೇವೆ. ಪಂದ್ಯದ ಮಹತ್ವದ ಹಂತಗಳಲ್ಲಿ ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳಲಿಲ್ಲ. ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಯಿತು. ಅಂತಹ ಲೋಪಗಳನ್ನು ಸರಿಪಡಿಸಿಕೊಂಡರೆ ಗೆಲುವು ಒಲಿಯುತ್ತದೆ’ ಎಂದರು.

‘ಮುಂದಿನ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಬೆಂಚ್‌ನಲ್ಲಿರುವವರಿಗೆ ಅವಕಾಶ ಕೊಡುವ ಚಿಂತನೆ ನಡೆದಿದೆ. ಒಟ್ಟಾರೆಯಾಗಿ ಉತ್ತಮ ಆಟ ಆಡಿ ಗೆಲ್ಲುವತ್ತ ಚಿತ್ತ ಇದೆ’ ಎಂದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪಿನ್ನರ್ ಯಜುವೇಂದ್ರ ಚಾಹಲ್, ‘ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವುದು ಸಂತಸದ ವಿಷಯ. ಪರ್ಪಲ್ ಕ್ಯಾಪ್ ಲಭಿಸಿದೆ. ಫ್ಲ್ಯಾಟ್‌ ಪಿಚ್‌ಗಳಲ್ಲಿಯೂ ಇನ್ನಷ್ಟು ಸ್ಪಿನ್‌ ಮಾಡುವಂತಾದರೆ ತಂಡಕ್ಕೆ ಹೆಚ್ಚಿನ ಕಾಣಿಕೆ ನೀಡಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !