ಶುಕ್ರವಾರ, ಫೆಬ್ರವರಿ 26, 2021
19 °C
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಆಟ ವ್ಯರ್ಥ; ಕೋಲ್ಕತ್ತ ನೈಟ್ ರೈಸರ್ಸ್ ತಂಡಕ್ಕೆ ಯುಗಾದಿ ಹಬ್ಬದ ಸಿಹಿ

ಐಪಿಎಲ್‌ 2019: ಆರ್‌ಸಿಬಿಗೆ ಕಹಿ ಉಣಿಸಿದ ರಸೆಲ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಂಡ್ರೆ ರಸೆಲ್ ಹೊಡೆದ ಏಳು ಸಿಕ್ಸರ್‌ಗಳು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಗೆಲುವಿನ ಕನಸನ್ನು ಕ್ರೀಡಾಂಗಣದ ಹೊರಗೆ ಹೊತ್ತೊಯ್ದು ಎಸೆದವು. ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಮಡಿಲಿಗೆ ಗೆಲುವಿನ ಕಾಣಿಕೆ ತಂದಿತ್ತವು.

ಇನಿಂಗ್ಸ್‌ನ ಕೊನೆಯ 21 ಎಸೆತಗಳಲ್ಲಿ ದಾಖಲಾದ 53 ರನ್‌ಗಳು ಆರ್‌ಸಿಬಿಗೆ ಸತತ ಐದನೇ ಸೋಲಿನ ಕಹಿ ಉಣಿಸಿದವು. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರ ಅಮೋಘ ಜೊತೆಯಾಟದ ಬಲದಿಂದ  ಆರ್‌ಸಿಬಿಯು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 205 ರನ್‌ ಗಳಿಸಿತ್ತು. ಆದರೆ, ಕೆಕೆಆರ್ ತಂಡವು 19.1 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 206 ರನ್‌ ಗಳಿಸಿ ಗೆಲುವಿನ ‘ಸಿಹಿ’ ಸವಿಯಿತು.  ಯುಗಾದಿಯ ಸಂಭ್ರಮಕ್ಕೆ ಗೆಲುವಿನ ಸಿಹಿ ತಿನ್ನುವ ಆರ್‌ಸಿಬಿ ಅಭಿಮಾನಿಗಳಿಗೆ ಕಹಿ ಮಾತ್ರ ಉಳಿಯಿತು.

ಆರ್‌ಸಿಬಿ ತಂಡದ ಫೀಲ್ಡರ್‌ಗಳು ಕೈಚೆಲ್ಲಿದ ನಾಲ್ಕು ಕ್ಯಾಚ್‌ಗಳು ಕೂಡ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದವು. ಕಳಪೆ ಬೌಲಿಂಗ್ ಕೂಡ ಕಾರಣವಾಯಿತು. ಕೊನೆಯ ನಾಲ್ಲು ಓವರ್‌ಗಳಲ್ಲಿ ಕೆಕೆಆರ್‌ಗೆ 65 ರನ್‌ಗಳನ್ನು ಗಳಿಸುವ ಕಠಿಣ ಸವಾಲು ಇತ್ತು. ಆದರೆ ಅಪಾಯಕಾರಿ ಬ್ಯಾಟ್ಸ್‌ಮನ್ ರಸೆಲ್ ಅವರಿಗೆ ಆರ್‌ಸಿಬಿ ಬೌಲರ್‌ಗಳು ಸವಾಲು ಒಡ್ಡಲಿಲ್ಲ. ಇದರಿಂದಾಗಿ ಅವರ ಪ್ರಹಾರಕ್ಕೆ ಸಿ್ಕ್ಕ ಎಸೆತಗಳು ಪ್ರೇಕ್ಷಕರ ಗ್ಯಾಲರಿಗೆ ಹಾರಿದವು. ರಸೆಲ್ ಕೇವಲ 13 ಎಸೆತಗಳಲ್ಲಿ 48 ರನ್ ಬಾರಿಸಿದರು. ಅದರಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಂಗಲ್‌ಗಳಿದ್ದವು!

ವಿರಾಟ್–ಎಬಿಡಿ ಸೂಪರ್ ಜೋಡಿ: ವಿರಾಟ್ ಕೊಹ್ಲಿ ಶುಕ್ರವಾರ ರಾತ್ರಿ ಒಂದಲ್ಲ, ಎರಡು ಸಿಕ್ಸರ್ ಬಾರಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (84; 49ಎಸೆತ, 8ಬೌಂಡರಿ, 2 ಸಿಕ್ಸರ್) ಮತ್ತು ಎಬಿ ಡಿವಿಲಿಯರ್ಸ್‌ (63; 32ಎಸೆತ, 5ಬೌಂಡರಿ, 4 ಸಿಕ್ಸರ್) ಅವರಿಬ್ಬರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 108 ರನ್‌ ಗಳಿಸಿದರು. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಬೌಲಿಂಗ್ ಆರಂಭಿಸಿದರು.  ಆದರೆ, ವಿರಾಟ್ ಮತ್ತು ಪಾರ್ಥಿವ್‌ ಅವರಿಂದ ದಂಡಿಸಿಕೊಂಡರು. ಇದ ರಿಂದಾಗಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಎರಡನೇ ಓವರ್‌ನಿಂದಲೇ ಸ್ಪಿನ್ನರ್‌ಗಳನ್ನು ಕಣಕ್ಕಿಳಿ ಸಿದರು. ಇನಿಂಗ್ಸ್‌ನಲ್ಲಿ ಒಟ್ಟು  ಐವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮವೇಗಿಗಳು ಬೌಲಿಂಗ್ ಮಾಡಿದರು. 

ಆದರೆ, ಹಿಂದಿನ ನಾಲ್ಕು ಪಂದ್ಯಗಳಲ್ಲಿಯೂ ಸೋಲಿನ ಕಹಿಯುಂಡಿದ್ದ ಆರ್‌ಸಿಬಿಯ ನಾಯಕ ವಿರಾಟ್ ಅವರು ಪಾರ್ಥಿವ್ ಪಟೇಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದರು. 

ಅಕರ್ಷಕ ಕವರ್‌ ಡ್ರೈವ್‌, ಪುಲ್‌ಗಳ ಭರ್ಜರಿ ಆಟ ಅವರಿಂದ ಹೊರಹೊಮ್ಮಿತು.  ಇನ್ನೊಂದೆಡೆ ಎಡಗೈ ಬ್ಯಾಟ್ಸ್‌ಮನ್ ಪಾರ್ಥಿವ್ ಕೂಡ ಬೌಲರ್‌ಗಳನ್ನು ಕಾಡಿದರು. ಪವರ್‌ಪ್ಲೇನಲ್ಲಿ ಫೀಲ್ಡರ್‌ಗಳನ್ನು ವಂಚಿಸಿದ ಅವರು ಚೆಂಡನ್ನು ಬೌಂಡರಿಗೆರೆ ದಾಟಿಸುವಲ್ಲಿ ಸಫಲರಾದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿಸಿದರು. ಆದರೆ ಎಂಟನೇ ಓವರ್‌ನಲ್ಲಿ ನಿತೀಶ್ ರಾಣಾ ಬೀಸಿದ  ಎಲ್‌ಬಿಡಬ್ಲ್ಯು ಬಲೆಗೆ ಪಾರ್ಥಿವ್ ಬಿದ್ದರು.

ಆಗ, ಪ್ರೇಕ್ಷಕರ ಗ್ಯಾಲರಿಯಿಂದ ಹೊರಹೊಮ್ಮಿದ ಎಬಿಡಿ..ಎಬಿಡಿ..ಎಬಿಡಿ..ಹರ್ಷೋದ್ಘಾರಗಳು  ಬಹಳ ಹೊತ್ತು ಪ್ರತಿಧ್ವನಿಸಿ ದವು. ಕೊಹ್ಲಿಯೊಂದಿಗೆ ಎಬಿಡಿ ಸೇರಿಕೊಂಡಿದ್ದು ಬೆಂಕಿ ಮತ್ತು ಬಿರುಗಾಳಿ ಜೊತೆಗೂಡಿದಂತಾಯಿತು. ವಾತಾವರಣ ಬಿಸಿಯೇರಿತು. ಬೌಲರ್‌ ಗಳು ಮತ್ತು ಫೀಲ್ಡರ್‌ಗಳು ಬೆವರಿನಲ್ಲಿ ತೊಯ್ದು ತೊಪ್ಪೆಯಾದರು.

ಕೊಹ್ಲಿ ತಾವೆದುರಿಸಿದ 31ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಐಪಿಎಲ್‌ನಲ್ಲಿ ಇದು ಅವರ 36ನೇ ಶತಕ. ಅದರಲ್ಲಿ ಏಳು ಬೌಂಡರಿಗಳು ಇದ್ದವು.12ನೇ ಓವರ್‌ನಲ್ಲಿ ತಂಡವು ಒಂದು ವಿಕೆಟ್‌ಗೆ 90 ರನ್ ಗಳಿಸಿತ್ತು. ಆಗ ಚೈನಾಮೆನ್ ಬೌಲರ್‌ ಕುಲದೀಪ್ ಯಾದವ್ ಎಸೆತದಲ್ಲಿ ಎಬಿಡಿಯ ಕ್ಯಾಚ್ ಕೈಚೆಲ್ಲಿದ ಲಾಕಿ ಫರ್ಗ್ಯುಸನ್ ತಪ್ಪಿನಿಂದ ಕೆಕೆಆರ್ ಪರಿತಪಿಸುವಂತಾಯಿತು. 

14ನೇ ಓವರ್‌ನಲ್ಲಿ  ಆ್ಯಂಡ್ರೆ ರಸೆಲ್ ಎಸೆತವನ್ನು ಪುಲ್ ಮಾಡಿದ ಎಬಿಡಿ ಸಿಕ್ಸರ್‌ಗೆ ಎತ್ತಿದರು. ಅದೇ ಓವರ್‌ನ ಕೊನೆಯ ಎಸೆತವನ್ನೂ ಲಾಂಗ್‌ ಆಫ್‌ ಸಿಕ್ಸರ್‌ಗೆ ಎತ್ತಿದರು. ಅದೊಂದೇ ಓವರ್‌ನಲ್ಲಿ 16 ರನ್‌ಗಳು ಸೇರಿದವು. 

ಇದರಿಂದ ಉತ್ತೇಜಿತರಾದ ವಿರಾಟ್ ಕೂಡ ಆಟಕ್ಕೆ ವೇಗ ನೀಡಿದರು. 15ನೇ  ಓವರ್‌ನಲ್ಲಿ ವಿರಾಟ್ ಲಾಂಗ್‌ ಆನ್‌ಗೆ ಸಿಕ್ಸರ್ ಎತ್ತಿದರು. ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಹೋದ ನಾಲ್ಕು ಪಂದ್ಯಗಳಲ್ಲಿಯೂ ವಿರಾಟ್ ಸಿಕ್ಸರ್ ಹೊಡೆದಿರಲಿಲ್ಲ. 17ನೇ ಓವರ್‌ನಲ್ಲಿಯೂ ಫರ್ಗ್ಯುಸನ್ ಎಸೆತವನ್ನು ಗ್ಯಾಲರಿಗೆ ಎತ್ತಿದರು. 

ಸಿರಾಜ್‌ಗೆ ಓವರ್ ಕಡಿತ: ಆರ್‌ಸಿಬಿ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಅವರು ಎರಡು ಬಾರಿ ಓವರ್‌ದ ಶೋಲ್ಡರ್ (ಬ್ಯಾಟ್ಸ್‌ಮನ್‌ನ ಭುಜಮಟ್ಟ ದಾಟಿ) ಎಸೆತಗಳನ್ನು ಹಾಕಿದರು. ಆದ್ದರಿಂದ ಅವರ ಬೌಲಿಂಗ್‌ ಅನ್ನು ಮೊಟಕುಗೊಳಿಸಲಾಯಿತು. ಮೂರನೇ ಓವರ್‌ನ ಎರಡನೇ ಎಸೆತವನ್ನು ನೋಬಾಲ್ ಎಂದು ಘೋಷಿಸಿ ಅವರ ಬೌಲಿಂಗ್ ನಿಲ್ಲಿಸಲಾಯಿತು. ಉಳಿದ ನಾಲ್ಕು ಎಸೆತಗಳನ್ನು ಮಾರ್ಕಸ್ ಸ್ಟೊಯಿನಿಸ್ ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು