ಶುಕ್ರವಾರ, ಡಿಸೆಂಬರ್ 4, 2020
24 °C

ಐ‍‍ಪಿಎಲ್‌: ‘ಬ್ರ್ಯಾಂಡ್’ ವಿರಾಟ್ ಕೊಹ್ಲಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ವಿರಾಟ್‌ ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ನಾಯಕರಿವರು ಎಂಬ ಚರ್ಚೆ ಈಗ ನಡೆಯುತ್ತಿದೆ. ವಿರಾಟ್ ಗಿರುವ ಫಿಟ್‌ನೆಸ್‌ ಮತ್ತು ಉತ್ಸಾಹಗಳನ್ನು ನೋಡಿದರೆ ಕನಿಷ್ಠ ಇನ್ನೂ ಏಳೆಂಟು ವರ್ಷವಾದರೂ ಅವರು ಆಡಬಲ್ಲರು. ಸದ್ಯ ಅವರಿಗೆ ಇರುವ ವರ್ಚಸ್ಸಿನಿಂದಾಗಿ ನಾಯಕರಾಗಿಯೂ ಮುಂದುವರಿಯಬಹುದು.

ಇಂಡಿಯನ್ ಪ್ರೀಮಿಯರ್ ಲೀಗ್  ಕ್ರಿಕೆಟ್ ಟೂರ್ನಿಯಲ್ಲಿ ಸತತ ಹದಿಮೂರನೇ ಸಲವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ.

ಅದಕ್ಕಾಗಿ ನಾಯಕ ವಿರಾಟ್ ಕೊಹ್ಲಿಯನ್ನು ಬದಲಾಯಿಸಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಆದರೆ ಅವರಿಗೆ ದನಿಗೂಡಿಸಿದ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಅವರ ಹೇಳಿಕೆ ಪ್ರಕಟವಾದ ಸಾಮಾಜಿಕ ಜಾಲತಾಣದಲ್ಲಿ ನೋಡಿದರೆ, ಬಹುಪಾಲು ಪ್ರತಿಕ್ರಿಯೆಗಳು ಅಚ್ಚರಿ ಮೂಡಿಸುತ್ತವೆ.

’ಆರ್‌ಸಿಬಿ ತಂಡಕ್ಕೆ ವಿರಾಟ್ ನಾಯಕರಾಗಿ ಮುಂದುವರಿಯಲಿ. ನೀವು ಸಂಸದರಾಗಿದ್ದೀರಿ. ಆ ಕೆಲಸದತ್ತ ಗಮನ ಕೊಡಿ. ಆರ್‌ಸಿಬಿ ಯಾವಾಗಲಾದರೂ ಕಪ್ ಜಯಿಸಲಿ, ಬಿಡಲಿ ವಿರಾಟ್ ನಮ್ಮ ನಾಯಕ‘ ಎಂಬ ಸಂದೇಶಗಳು ದೊಡ್ಡ ಸಂಖ್ಯೆಯಲ್ಲಿ ಗಮನ ಸೆಳೆಯುತ್ತವೆ. ಅಲ್ಲೊಂದು ಇಲ್ಲೊಂದು ಕೊಹ್ಲಿ ಬದಲಾವಣೆಯ ಸಂದೇಶಗಳು ಕಾಣುತ್ತದೆ. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಅಭಿಮಾನದ ಬೆಂಬಲ ಸಿಕ್ಕ ನಾಯಕರೇ ಇಲ್ಲ ಎನ್ನಬಹುದೇನೋ?

ಏಕೆಂದರೆ;  ಕಪಿಲ್‌ ದೇವ್, ಸುನಿಲ್ ಗಾವಸ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರಸಿಂಗ್ ಧೋನಿ, ಅನಿಲ್ ಕುಂಬ್ಳೆ ಅಂಥ ದಿಗ್ಗಜರು ಕೂಡ ಕಠೋರ ಟೀಕೆಗಳನ್ನು ಎದುರಿಸಿದ್ದು ಇದೆ. ಆದರೆ ಕೊಹ್ಲಿ ಕಳೆದ ಎಂಟು ವರ್ಷಗಳಿಂದ ನಾಯಕರಾಗಿ ತಂಡವನ್ನು ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೆ ಏರಿಸಿಲ್ಲ.  ಐಪಿಎಲ್  ಆರಂಭವಾದಾಗಿನಿಂದಲೂ ಕೊಹ್ಲಿ ಆರ್‌ಸಿಬಿ ತಂಡದಲ್ಲಿದ್ದಾರೆ. ಶ್ರೇಷ್ಠ ಆಟಗಾರರೂ ತಂಡದಲ್ಲಿದ್ದಾರೆ. ಅತಿ ಹೆಚ್ಚು ಅಭಿಮಾನಿ ಬಳಗವೂ ಇದಕ್ಕಿದೆ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತಾಗ ಕೋಚ್ ಅನಿಲ್ ಕುಂಬ್ಳೆ ತಂಡದಿಂದ ಹೊರಬಂದರು. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಸೆಮಿಫೈನಲ್ ಸೋಲಿನಲ್ಲಿ ಧೋನಿಯ ರನ್‌ಔಟ್ ಚರ್ಚೆಗೆ ಗ್ರಾಸವಾಯಿತು. ಆದರೆ ಕೊಹ್ಲಿ ವಿರುದ್ಧ ಕೇಳಿಬಂದ ಟೀಕೆಗಳೆಷ್ಟು?

ಬದಲಿಗೆ; ವರ್ಷದಿಂದ ವರ್ಷಕ್ಕೆ ಅವರ ಬ್ರ್ಯಾಂಡ್ ಮೌಲ್ಯ ವರ್ಧಿಸುತ್ತಿದೆ. ಹೋದ ತಿಂಗಳು ಭಾರತೀಯ ಮಾನವ ಬ್ರ್ಯಾಂಡ್‌ ಸಂಸ್ಥೆ (ಐಐಎಚ್‌ಬಿ- The Indian Institute of Human Brands) ನಡೆಸಿದ ಸಮೀಕ್ಷಾ ವರದಿಯನ್ನೇ ನೋಡಿ. ಇವತ್ತು ಮಾರುಕಟ್ಟೆಯಲ್ಲಿ ಅತ್ಯಂತ ನಿರ್ಭೀತ ಮತ್ತು ಸ್ಪುರದ್ರೂಪಿ ಯುವನಾಯಕನೆಂದರೆ ವಿರಾಟ್ ಕೊಹ್ಲಿ. ದೇಶದ 23 ಪ್ರಮುಖ ನಗರಗಳಲ್ಲಿ 60 ಸಾವಿರ ಜನರಿಂದ ಸಂಗ್ರಹಿಸಿದ ಅಭಿಪ್ರಾಯಗಳ ಫಲಿತಾಂಶವಿದು.

ವಿರಾಟ್, ಪ್ರಮುಖ 17 ಕಂಪನಿಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿಗ (₹ 105 ಕೋಟಿ) ಎಂದು ಈಚೆಗಷ್ಟೇ ಫೋರ್ಬ್ಸ್‌ ನಿಯತಕಾಲಿಕೆಯೂ ಪ್ರಕಟಿಸಿತ್ತು. ಈ ವಿಷಯದಲ್ಲಿ ಕೊಹ್ಲಿ,  ಫುಟ್‌ಬಾಲ್ ತಾರೆಯರನ್ನೂ ಮೀರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಗೂ ಕೊಹ್ಲಿಯೇ ಕಣ್ಮಣಿ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಮೂರು ಪೋಸ್ಟ್‌ಗಳಿಂದ ಬಂದ ಹಣ ₹ 3.65 ಕೋಟಿ.


ಐಪಿಎಲ್‌ 2020ರಲ್ಲಿನ ಸಾಧನೆ

ಈ ಎಲ್ಲ ಅಂಶಗಳಿಂದಾಗಿ ವಿರಾಟ್ ಸ್ವತಃ ಬ್ರ್ಯಾಂಡ್ ಆಗಿ ಮಾರ್ಪಟ್ಟಿದ್ದಾರೆ.  ಆ ಪ್ರಭಾವಳಿಯು ಅವರ ನಾಯಕತ್ವವನ್ನೂ  ಆವರಿಸಿಕೊಂಡಿದೆ. ಅದಕ್ಕಾಗಿಯೇ ಅವರು ಟಿ.ವಿ. ಕ್ಯಾಮೆರಾ ಕಣ್ಣುಗಳಿಗೂ ಅಚ್ಚುಮೆಚ್ಚು. ಪಂದ್ಯದಲ್ಲಿ ಯಾರೇ ವಿಕೆಟ್ ‍ಪಡೆಯಲಿ, ಕ್ಯಾಚ್ ಮಾಡಲಿ ಕ್ಯಾಮೆರಾ ಹೊರಳುವುದು ಕೊಹ್ಲಿಯತ್ತಲೇ. ಬ್ಯಾಟ್ಸ್‌ಮನ್ ಶತಕ ಬಾರಿಸಿದಾಗಲೂ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಚಪ್ಪಾಳೆ ಹೊಡೆಯುವ ವಿರಾಟ್ ನಗುಮುಖವೇ ಟಿ.ವಿ. ಪರದೆ ಮೇಲೆ ರಾರಾಜಿಸುತ್ತದೆ. ಈ ವಿಷಯವನ್ನು ಹಿಂದೊಮ್ಮೆ ಸುನಿಲ್ ಗಾವಸ್ಕರ್ ತಮ್ಮ ಕಾಮೆಂಟ್ರಿಯಲ್ಲಿ ಪ್ರಸ್ತಾಪಿಸಿದ್ದರು.

ಇದೆಲ್ಲದರ ಹಿಂದೆ ಅವರ ಪರಿಶ್ರಮ, ಶ್ರದ್ಧೆ ಮತ್ತು ವೃತ್ತಿಪರತೆ ಇದೆ. ಫಿಟ್‌ನೆಸ್‌ಗೆ ಅವರು ಕೊಡುತ್ತಿರುವ ಮಹತ್ವ ಇವತ್ತು ದೇಶದ ಯುವಜನರಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರುವುದು ಸುಳ್ಳಲ್ಲ.ಇವೆಲ್ಲ ಕಾರಣಗಳು ಅವರನ್ನು ‘ಪ್ರಶ್ನಾತೀತ’ ನಾಯಕನನ್ನಾಗಿ ರೂಪುಗೊಳಿಸುತ್ತಿವೆ. ಬಿಸಿಸಿಐ ಕೂಡ ಅವರು ಹಾಕಿದ ಗೆರೆ ದಾಟುತ್ತಿಲ್ಲ ಎನ್ನುವುದು ಭಾರತ ತಂಡದ ಕೋಚ್ ಆಯ್ಕೆ ವಿಷಯದಲ್ಲಿ ಈಗಾಗಲೇ ಸಾಬೀತಾಗಿದೆ. ಇದೀಗ ತಂಡಗಳ ಆಯ್ಕೆ ವಿಷಯದಲ್ಲಿಯೂ ಅವರದ್ದೇ ಮೇಲುಗೈ  ಎಂದೂ ಹೇಳಲಾಗುತ್ತಿದೆ.  ಅವರು ಬ್ಯಾಟಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮುರಿಯುವತ್ತ ಸಾಗಿದ್ದಾರೆ. ಆದರೆ ನಾಯಕತ್ವದಲ್ಲಿ ಧೋನಿಯನ್ನು ಮೀರಿಸುವರೇ ಎಂಬ ಪ್ರಶ್ನೆಗೆ  ಉತ್ತರ ಸಿಗದು. ಸಚಿನ್ ತೆಂಡೂಲ್ಕರ್ ಮತ್ತು ಧೋನಿಯ ನಂತರ ‘ಕ್ರಿಕೆಟ್‌ ಮಾರುಕಟ್ಟೆ’ಗೆ ಅಚ್ಚುಮೆಚ್ಚಿನ ತಾರೆಯಾಗಿರುವ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಅಲುಗಾಡಿಸುವುದು ಸದ್ಯಕ್ಕಂತೂ ಸಾಧ್ಯವಾಗಲಿಕ್ಕಿಲ್ಲ. ಈ ಮಾತು ರಾಷ್ಟ್ರೀಯ ತಂಡಕ್ಕೂ ಅನ್ವಯಿಸುತ್ತದೆ. ಆದ್ದರಿಂದ ರೋಹಿತ್ ಶರ್ಮಾ ಅಥವಾ ಕೆ.ಎಲ್. ರಾಹುಲ್ ಇನ್ನಷ್ಟು ಕಾಲ ಕಾಯಲೇಬೇಕು!

ಆದರೆ, ವ್ಯಕ್ತಿತ್ವದಲ್ಲಿಯೂ ಅವರೆಲ್ಲರ ಸರಿಸಮಕ್ಕೆ ಬೆಳೆಯುವ ಮತ್ತು ಪರಿ‍ಪಕ್ವ ಮನಸ್ಥಿತಿ ಸಾಧಿಸುವ ಸವಾಲು ಕೊಹ್ಲಿ ಮುಂದಿದೆ. 1983ರ ಏಕದಿನ ವಿಶ್ವಕಪ್‌ ಆರಂಭದಲ್ಲಿ ’ಕಪ್ಪುಕುದುರೆ‘ಯಾಗಿದ್ದ ತಂಡವನ್ನು ಜಯದ ಅಶ್ವವನ್ನಾಗಿ ಬದಲಾಯಿಸಿದ ಕಪಿಲ್ ದೇವ್ ಈಚೆಗೆ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದರು. ಅವರ ಚೇತರಿಕೆಗಾಗಿ ಹಾರೈಕೆಗಳ ಮಹಾಪೂರವೇ ಹರಿಯಿತು. ಕ್ರಿಕೆಟ್‌ನಿಂದ ನಿವೃತ್ತಿಯಾಗಿ 25 ವರ್ಷಗಳಾದರೂ ಕಪಿಲ್ ಜನಪ್ರಿಯತೆ ಉಳಿಯಲು ಅವರ ವ್ಯಕ್ತಿತ್ವ ಕಾರಣ. ಆ ಮಟ್ಟಕ್ಕೆ ಕೊಹ್ಲಿ ಬೆಳೆಯುವರೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು