ಗುರುವಾರ , ಸೆಪ್ಟೆಂಬರ್ 19, 2019
21 °C
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ–ಮಹೇಂದ್ರಸಿಂಗ್ ಧೋನಿ ಮುಖಾಮುಖಿ ಇಂದು: ಮೋಯಿನ್‌ ಅಲಿ ಆಕರ್ಷಣೆ

‘ಚಾಲೆಂಜರ್ಸ್‌’ಗೆ ವಿಂಟೇಜ್‌ ಚೆನ್ನೈ ಸವಾಲು

Published:
Updated:
Prajavani

ಬೆಂಗಳೂರು: ‘ಇಮ್ರಾನ್ ತಾಹೀರ್ ಮತ್ತು ಹರಭಜನ್ ಸಿಂಗ್ ಅವರು ವೈನ್ (ದ್ರಾಕ್ಷಾರಸ) ಇದ್ದಂತೆ. ಹಳೆಯದಾದಂತೆ ವೈನ್ ರುಚಿ ಹೆಚ್ಚುತ್ತದೆ. ಅನುಭವ ಹೆಚ್ಚಿದಂತೆ ಇವರಿಬ್ಬರೂ ಬಲಿಷ್ಠರಾಗುತ್ತಾರೆ’–

ಈಚೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ತಮ್ಮ ಸಹ ಆಟಗಾರರ ಕುರಿತು ವ್ಯಕ್ತಪಡಿಸಿದ್ದ ಮೆಚ್ಚುಗೆಯ ಮಾತುಗಳಿವು.

ಒಂದರ್ಥದಲ್ಲಿ ಇಡೀ ಸೂಪರ್ ಕಿಂಗ್ಸ್‌ ತಂಡವೇ ಒಂದು ವಿಂಟೇಜ್ ಬಳಗ. ಬಹುತೇಕರು ಮೂವತ್ತು ದಾಟಿದ ಅನುಭವಿ ಆಟಗಾರರೇ. ಹೋದ ವರ್ಷ ಘಟಾನುಘಟಿ ತಂಡಗಳನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈ ವರ್ಷವೂ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮೆರೆಯುತ್ತಿದೆ. ಈಗಾಗಲೇ ಪ್ಲೇ ಆಫ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಾಗಿದೆ.

ಈ ತಂಡ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ‘ವೈನ್’ ರುಚಿ ತೋರಿಸಲು ಬಂದಿದೆ. ಆಡಿದ ಒಂಬತ್ತು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿರುವ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆದ್ದರೂ ಸೋತರೂ ಕಳೆದುಕೊಳ್ಳಲು ಮತ್ತು ಗಳಿಸಲು ಏನೂ ಇಲ್ಲ. ಅದರಿಂದಾಗಿ ತಂಡವು ನಿರ್ಲಿಪ್ತವಾಗಿ ಆಡುವ ಸ್ಥಿತಿ ನಿರ್ಮಾಣವಾಗಿದೆ!

ಆದರೆ, ಟೂರ್ನಿಯ ಮೊದಲ ಪಂದ್ಯದಲ್ಲಿ ತನಗೆ ಸೋಲುಣಿಸಿದ್ದ ಚೆನ್ನೈ ತಂಡದ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ತವರಿನ ಅಂಗಳದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ತಂಡ ಗೆದ್ದಿಲ್ಲ.

ತವರಿನಿಂದ ಹೊರಗೆ ಆಡಿರುವ ಆರರಲ್ಲಿ ಎರಡು ಗೆದ್ದಿದೆ. ಶುಕ್ರವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ತಂಡವನ್ನು 10 ರನ್‌ಗಳ ಗೆಲುವಿನತ್ತ ಮುನ್ನಡೆಸಿದ್ದರು. ಹೋದ ವಾರ ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಗೆದ್ದಿತ್ತು. 

ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತ ತಂಡಕ್ಕೆ 213 ರನ್‌ಗಳ ಗುರಿ ನೀಡಿದ್ದ ಕೊಹ್ಲಿ ಬಳಗಕ್ಕೆ ಸುಲಭ ಜಯವೇನೂ ಒಲಿದಿರಲಿಲ್ಲ. ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಅವರ ಅಬ್ಬರದ ಮುಂದೆ ಒಂದು ಹಂತದಲ್ಲಿ ಸೋಲುವ ಭೀತಿ ಎದುರಾಗಿತ್ತು. ಕೆಕೆಆರ್ 203 ರನ್‌ ಗಳಿಸಿತ್ತು. ಇದು ಮತ್ತೊಮ್ಮೆ ಆರ್‌ಸಿಬಿಯ ಬೌಲಿಂಗ್ ವಿಭಾಗದ ವೈಫಲ್ಯವನ್ನು ಎತ್ತಿ ತೋರಿಸಿತ್ತು.

ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಕಣಕ್ಕಿಳಿದಿದ್ದರು. ಯಜುವೇಂದ್ರ ಚಾಹಲ್, ನವದೀಪ್ ಸೈನಿ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರಿಂದಲೂ ಕೆಕೆಆರ್ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್‌ನಲ್ಲಿಯೂ ಎಬಿ ಡಿವಿಲಿಯರ್ಸ್‌ ಅನುಪಸ್ಥಿತಿ ಕಾಡಿದ್ದು ನಿಜ. ಆದರೆ, ಅ ಕೊರತೆಯನ್ನು ನೀಗಿಸಿದ್ದು ಕೊಹ್ಲಿ ಮತ್ತು ಮೋಯಿನ್ ಅಲಿ ಅವರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಅದೇ ನಿರಾಶಾದಾಯಕ ಆಟವೇ ಮೂಡಿಬಂದಿದ್ದು ಕೂಡ ತಂಡದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಏಕೆಂದರೆ ಸಂಘಟಿತ ಹೋರಾಟ ಮಾಡಿ ಎದುರಾಳಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ಕಲೆ ಚೆನ್ನೈ ಬಳಗಕ್ಕೆ ಸಿದ್ಧಿಸಿದೆ.

ಅದರಲ್ಲೂ ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಧೋನಿ ಕೂಡ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದರಿಂದಾಗಿ ಆರ್‌ಸಿಬಿಗೆ ಸಂಕಷ್ಟ ಹೆಚ್ಚುವುದಂತೂ ಖಚಿತ.

ಅಲಿ ಪ್ರಶಂಸಿಸಿದ ಕೊಹ್ಲಿ
ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ದಾಖಲಿಸಿ, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ತಂಡದ ಆಟಗಾರ ಮೋಯಿನ್‌ ಅಲಿ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

‘ಮೋಯಿನ್‌ ಅವರು ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಿ ದರು’ ಎಂದು ವಿರಾಟ್‌ ಶ್ಲಾಘಿಸಿದ್ದಾರೆ.

ಶುಕ್ರವಾರ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್‌ (100;58 ಎಸೆತ, 9 ಬೌಂಡರಿ, 4 ಸಿಕ್ಸರ್‌)  ಶತಕ ದಾಖಲಿಸಿದ್ದರು. ಆಲ್‌ರೌಂಡರ್‌ ಮೋಯಿನ್‌ ಅಲಿ (66; 28ಎಸೆತ, 5 ಬೌಂಡರಿ, 6 ಸಿಕ್ಸರ್‌) ಅರ್ಧಶತಕ ಹೊಡೆದಿದ್ದರು. ಜೊತೆಗೆ ಅಂತಿಮ ಓವರ್‌ ಬೌಲ್‌ ಮಾಡಿದ್ದ ಅಲಿ, ಎದುರಾಳಿಗಳಿಗೆ ಕೇವಲ 13 ರನ್‌ ನೀಡಿದ್ದರು. ಆ್ಯಂಡ್ರೆ ರಸೆಲ್‌ ಮತ್ತು ನಿತೀಶ್‌ ರಾಣಾ ಅವರಿಗೆ ರಟ್ಟೆ ಅರಳಿಸಿ ಆಡಲು ಅವಕಾಶ ನೀಡಿರಲಿಲ್ಲ.

ಅನಾರೋಗ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಆಡಿರಲಿಲ್ಲ. ಒಂಬತ್ತನೇ ಓವರ್‌ನಲ್ಲಿ ಕೊಹ್ಲಿ ಜೊತೆಗೂಡಿದ ಎಡಗೈ ಬ್ಯಾಟ್ಸ್‌ಮನ್‌ ಮೋಯಿನ್‌ ಅಲಿ ಸ್ಫೋಟಕ ಆಟವಾಡಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.‌

ಒಂಬತ್ತು ಪಂದ್ಯಗಳ ಪೈಕಿ ಏಳರಲ್ಲಿ ಸೋತು ಕೇವಲ ಎರಡರಲ್ಲಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ತಂಡವು ನಾಲ್ಕು ಅಂಕಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

**
ಕೆಕೆಆರ್ ಎದುರಿನ ಪಂದ್ಯದಲ್ಲಿ ಎಬಿಡಿ ಇರಲಿಲ್ಲ. ಆದ್ದರಿಂದ ದೀರ್ಘ ಇನಿಂಗ್ಸ್ ಆಡುವ ಹೊಣೆ ನನ್ನ ಮೇಲಿತ್ತು. ಶತಕ ದಾಖಲಿಸಿದ್ದು ಖುಷಿ ನೀಡಿದೆ. ಅದಕ್ಕಿಂತಲೂ ಹೆಚ್ಚು ತಂಡದ ಗೆಲುವು ಸಮಾಧಾನ ಮೂಡಿಸಿದೆ.
-ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್‌ ಬೆಂಗಳೂರು:
ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮೋಯಿನ್ ಅಲಿ, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಟಿಮ್ ಸೌಥಿ, ಗುರುಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸನ್, ಅಕ್ಷದೀಪ್ ನಾಥ್, ಕುಲವಂತ ಖೆಜ್ರೋಲಿಯಾ.

ಚೆನ್ನೈ ಸೂಪರ್ ಕಿಂಗ್ಸ್‌: ಮಹೇಂದ್ರಸಿಂಗ್ ಧೋನಿ (ನಾಯಕ–ವಿಕೆಟ್‌ಕೀಪರ್), ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಮುರಳಿ ವಿಜಯ್, ಕೇದಾರ್ ಜಾಧವ್, ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜ, ಧ್ರುವ ಶೋರೆ, ಚೈತನ್ಯ ಬಿಷ್ಣೊಯಿ, ೃತುರಾಜ್ ಗಾಯಕವಾಡ, ಡ್ವೆನ್ ಬ್ರಾವೊ, ಕರಣ್ ಶರ್ಮಾ, ಇಮ್ರಾನ್ ತಾಹೀರ್, ಹರಭಜನ್ ಸಿಂಗ್, ಮಿಚೆಲ್ ಸ್ಯಾಂಟನರ್, ಶಾರ್ದೂಲ್ ಠಾಕೂರ್, ಮೋಹಿತ್ ಶರ್ಮಾ, ಕೆ. ಎಂ. ಆಸಿಫ್, ದೀಪಕ್ ಚಾಹರ್.

ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

Post Comments (+)