ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಸ್ಟರ್ 360 ಡಿಗ್ರಿ’ ಆಟಕ್ಕೆ ಜಯ

ರಾಯಲ್ ಚಾಲೆಂಜರ್ಸ್‌ ಬೆಂಗಳೂರಿಗೆ ‘ಹ್ಯಾಟ್ರಿಕ್’ ಗೆಲುವು; ಕಿಂಗ್ಸ್‌ಗೆ ನಿರಾಸೆ
Last Updated 24 ಏಪ್ರಿಲ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಮಿಸ್ಟರ್ 360 ಡಿಗ್ರಿ’ ಎಂಬ ಖ್ಯಾತಿಗೆ ತಕ್ಕಂತೆ ಆಡಿದ ಎಬಿ ಡಿವಿಲಿಯರ್ಸ್‌ ಬುಧವಾರ ರಾತ್ರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಜಯದ ಸಿಹಿ ಉಣಿಸಿದರು.

ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಎಬಿಡಿ, ಫೀಲ್ಡಿಂಗ್‌ನಲ್ಲಿಯೂ ಮಿಂಚಿನ ಸಂಚಲನ ಮೂಡಿಸಿದರು. ಇದರಿಂದಾಗಿ ಆರ್‌ಸಿಬಿ ತಂಡವು 17 ರನ್‌ಗಳಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಜಯಿಸಿತು. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಇದು ನಾಲ್ಕನೇ ಜಯ. ಅದರಲ್ಲಿ ಸತತ ಮೂರನೇ ಗೆಲುವು.

ಎಬಿಡಿ ಹೊಡಿಬಡಿ ಆಟಕ್ಕೆ (ಔಟಾಗದೆ 82; 44ಎಸೆತ, 3ಬೌಂಡರಿ, 7ಸಿಕ್ಸರ್) ಆರ್‌ಸಿಬಿಯು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 202 ರನ್‌ ಗಳಿಸಿತು. ಅದಕ್ಕುತ್ತರವಾಗಿ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 185 ರನ್‌ ಗಳಿಸಿತು. ಕೆ.ಎಲ್. ರಾಹುಲ್ (42 ರನ್), ಮಯಂಕ್ ಅಗರವಾಲ್ (35 ರನ್) ಮತ್ತು ನಿಕೊಲಸ್ ಪೂರನ್ (46 ರನ್) ಅವರ ಆಟವು ವ್ಯರ್ಥವಾಯಿತು.

ಕಿಂಗ್ಸ್‌ ತಂಡವು 10.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 105 ರನ್ ಗಳಿಸಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಪೂರನ್ 14ನೇ ಓವರ್‌ನಲ್ಲಿ ಮೂರು ಸಿಕ್ಸರ್ ಹೊಡೆದರು. ಇದರಿಂದಾಗಿ ಗೆಲುವಿನ ಅವಕಾಶವು ಕಿಂಗ್ಸ್‌ನತ್ತ ವಾಲಿತು. ಡೇವಿಲ್ ಮಿಲ್ಲರ್ ಜೊತೆಗೆ ಅವರು ಇನಿಂಗ್ಸ್ ಕಟ್ಟಿದರು. 18ನೇ ಓವರ್‌ನಲ್ಲಿ ಪೂರನ್‌ ಅವರ ಕ್ಯಾಚ್‌ ಅನ್ನು ಮಾರ್ಕಸ್ ಸ್ಟೊಯಿನಿಸ್ ನೆಲಕ್ಕೆ ಚೆಲ್ಲಿದಾಗ, ಆರ್‌ಸಿಬಿಯಲ್ಲಿ ಆತಂಕ ಒಡಮೂಡಿತ್ತು. ಆದರೆ, 19ನೇ ಓವರ್‌ನಲ್ಲಿ ನವದೀಪ್ ಸೈನಿ ಅವರು ಮಿಲ್ಲರ್ ಮತ್ತು ಪೂರನ್ ಅವರಿಬ್ಬರ ವಿಕೆಟ್‌ ಅನ್ನೂ ಕಬಳಿಸಿದರು. ಅವರಿಬ್ಬರ ಕ್ಯಾಚ್ ಪಡೆದು ಮಿಂಚಿದವರು ಎಬಿಡಿ!

ಎಬಿಡಿ–ಮಾರ್ಕಸ್ ಜೊತೆಯಾಟ: ಎಬಿಡಿಗೆ ತಕ್ಕ ಸಾಥ್ ನೀಡಿದ ಮಾರ್ಕಸ್ ಸ್ಟೊಯಿನಿಸ್ (ಔಟಾಗದೆ 46; 34ಎಸೆತ, 2 ಬೌಂಡರಿ, 3 ಸಿಕ್ಸರ್) ಐದನೇ ವಿಕೆಟ್‌ ಜೊತೆಯಾಟದಲ್ಲಿ 121 ರನ್‌ಗಳನ್ನು ಗಳಿಸಿದರು. ಅದರಲ್ಲೂ ಇವರಿಬ್ಬರ ಆಟಕ್ಕೆ ಇನಿಂಗ್ಸ್‌ನ ಕೊನೆಯ ಎರಡು ಓವರ್‌ಗಳಲ್ಲಿ 48 ರನ್‌ಗಳು ಹರಿದುಬಂದವು. ಕೊನೆಯ ಓವರ್‌ನಲ್ಲಿಯಂತೂ ಮಾರ್ಕಸ್‌ ಇಪ್ಪತ್ತು ರನ್ ಹೊಡೆದರೆ, ಎಬಿಡಿ ಏಳು ರನ್‌ ಗಳಿಸಿದರು.

ಈ ಟೂರ್ನಿಯಲ್ಲಿ ಎಬಿಡಿ ಗಳಿಸಿದ ಐದನೇ ಅರ್ಧಶತಕ ಇದು. ಅದರಲ್ಲಿ ಮೂರು ಸಲ ಅವರು ಔಟಾಗದೇ ಉಳಿದಿರುವುದು ವಿಶೇಷ. ಅವರ ಖಾತೆಯಲ್ಲಿ ಈಗ ಒಟ್ಟು 471 ರನ್‌ಗಳು ಸೇರಿದವು.

ಇನಿಂಗ್ಸ್‌ನಲ್ಲಿ ಬರೋಬ್ಬರಿ ಒಂದು ಡಜನ್ ಸಿಕ್ಸರ್‌ಗಳು ದಾಖಲಾದವು. ಅದರಲ್ಲಿ ಎಬಿಡಿಯದ್ದು ಏಳು. ಕ್ರೀಡಾಂಗಣದ ಎಲ್ಲ ಮೂಲೆಗೂ ತಮ್ಮ ವಿಶಿಷ್ಟ ಶೈಲಿಯ ಮೂಲಕ ಚೆಂಡನ್ನು ಅಟ್ಟಿದ ಅವರ ಆಟದಿಂದಾಗಿ ಕಿಂಗ್ಸ್‌ ತಂಡದ ಫೀಲ್ಡರ್‌ಗಳಿಗೆ ಹೆಚ್ಚು ಕೆಲಸವೇ ಇರಲಿಲ್ಲ. ಈ ಒತ್ತಡವನ್ನು ನಿಭಾಯಿಸಲು ಕ್ರಿಸ್‌ ಗೇಲ್ ತಾವು ಫೀಲ್ಡಿಂಗ್ ಮಾಡುತ್ತಿದ್ದ ಜಾಗದಲ್ಲಿ ಡ್ಯಾನ್ಸ್‌ ಸ್ಟೆಪ್ಸ್‌ ಹಾಕುತ್ತಿದ್ದದ್ದು ಗಮನ ಸೆಳೆಯಿತು.

ಪಾರ್ಥಿವ್ ಪವರ್‌ ಪ್ಲೇ: ಹೋದ ಭಾನುವಾರ ಇದೇ ಅಂಗಳದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎದುರು ಆರ್‌ಸಿಬಿ ತಂಡದ ಜಯದ ರೂವಾರಿ ಪಾರ್ಥಿವ್ ಪಟೇಲ್ ಈ ಪಂದ್ಯದಲ್ಲಿಯೂ ತಮ್ಮ ಕಾಣಿಕೆ ನೀಡಿದರು. ಅವರು ಏಳು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆದರೆ, ಪವರ್‌ ಪ್ಲೇ ಅವಧಿಯಲ್ಲಿ ತಂಡಕ್ಕೆ 70 ರನ್‌ಗಳು ಹರಿದುಬರಲು ಕಾರಣರಾದರು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪವರ್‌ಪ್ಲೇ ಅವಧಿಯಲ್ಲಿ ಸೇರಿದ ಅತಿ ಹೆಚ್ಚು ರನ್‌ಗಳ ಪಟ್ಟಿಯಲ್ಲಿ ಈ ಮೊತ್ತವು ಎರಡನೇ ಸ್ಥಾನ ಪಡೆಯಿತು. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್‌ ತಂಡವು 72 ರನ್‌ ಗಳಿಸಿದ್ದು ಮೊದಲ ಸ್ಥಾನದಲ್ಲಿದೆ.

ಶಮಿ ಹಾಕಿದ ಇನಿಂಗ್ಸ್‌ನ ಆರನೇ ಓವರ್‌ನಲ್ಲಿಯೇ ಪಾರ್ಥಿವ್ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಇದ್ದ 18 ರನ್‌ಗಳನ್ನು ಸೂರೆ ಮಾಡಿದರು. ಆದರೆ ಪಾರ್ಥಿವ್ (43; 24ಎಸೆತ, 7ಬೌಂಡರಿ, 2ಸಿಕ್ಸರ್) ಏಳನೇ ಓವರ್‌ನಲ್ಲಿ ಸ್ಪಿನ್ನರ್ ಮುರುಗನ್ ಅಶ್ವಿನ್ ಎಸೆತವನ್ನು ಕ್ರಾಸ್ ಬ್ಯಾಟ್ ಆಡುವ ಭರದಲ್ಲಿ ಫೀಲ್ಡರ್ ಆರ್. ಅಶ್ವಿನ್‌ಗೆ ಕ್ಯಾಚಿತ್ತರು.

ಜೀವದಾನ ಬಳಸಿಕೊಳ್ಳದ ವಿರಾಟ್: ಸತತ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅವರೊಂದಿಗೆ ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ ಪಾರ್ಥಿವ್ ಪಟೇಲ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. ಆದರೆ, ಕೊಹ್ಲಿ ಲಯಕ್ಕೆ ಕುದುರಿಕೊಳ್ಳಲು ಕಷ್ಟಪಟ್ಟರು. ಮಧ್ಯಮವೇಗಿ ಮೊಹಮ್ಮದ್ ಶಮಿ ಹಾಕಿದ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಕಳಪೆ ಹೊಡೆತವಾಡಿದ್ದರು. ಆದರೆ, ಫೀಲ್ಡರ್ ಹಾರ್ಡಸ್ ಕ್ಯಾಚ್ ನೆಲಕ್ಕೆ ಚೆಲ್ಲಿದ್ದರು. ಆಗ ಕೊಹ್ಲಿ ಇನ್ನೂ ಮೂರು ರನ್‌ ಮಾತ್ರ ಗಳಿಸಿದ್ದರು. ತಂಡದ ಖಾತೆಯಲ್ಲಿ 12 ರನ್‌ಗಳಿದ್ದವು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಕೊಹ್ಲಿ ಸಫಲರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT