ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಭಾರಿ ಜಯ

Last Updated 20 ಜೂನ್ 2018, 18:35 IST
ಅಕ್ಷರ ಗಾತ್ರ

ನಾಟಿಂಗ್‌ಹ್ಯಾಂ, ಇಂಗ್ಲೆಂಡ್‌:ವಿಶ್ವದಾಖಲೆಯ 481 ರನ್‌ ಕಲೆ ಹಾಕಿದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರಿ ಜಯ ಗಳಿಸಿದೆ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯರು ಎದುರಾಳಿ ತಂಡವನ್ನು 242 ರನ್‌ಗಳಿಂದ ಮಣಿಸಿದರು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಸಾಧಿಸಿತು.

ಅಲೆಕ್ಸ್ ಹೇಲ್ಸ್ ಮತ್ತು ಜಾನಿ ಬೇಸ್ಟೊ ಅವರ ಶತಕಗಳ ನೆರವಿನಿಂದ ಇಂಗ್ಲೆಂಡ್ ಕಲೆ ಹಾಕಿದ ಭಾರಿ ಮೊತ್ತವನ್ನು ಬೆನ್ನತ್ತಿದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 239 ರನ್‌ಗಳಿಗೆ ಆಲೌಟಾಯಿತು. ಇದು ಈ ತಂಡಕ್ಕೆ ಕಳೆದ 16 ಪಂದ್ಯಗಳಲ್ಲಿ 14ನೇ ಸೋಲು.

ಇದು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿ ಯಾದ ಅತಿದೊಡ್ಡ ಸೋಲಾಗಿದೆ. 1986ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇ ಲಿಯಾ 206 ರನ್‌ಗಳಿಗೆ ಸೋತಿತ್ತು. ಇಂಗ್ಲೆಂಡ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಇದು ಅತಿ ದೊಡ್ಡ ಗೆಲುವಾಗಿದೆ.

2015ರಲ್ಲಿ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಈ ತಂಡ 210 ರನ್‌ಗಳಿಂದ ಗೆದ್ದಿತ್ತು.

ಮಂಗಳವಾರ ಅತಿ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 27 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಾರ್ಟ್‌ ಅವರನ್ನು ಕಳೆದುಕೊಂಡಿತು. ಟ್ರಾವಿಸ್ ಹೆಡ್‌ (51; 39 ಎ, 7 ಬೌಂ) ಮತ್ತು ಶಾನ್ ಮಾರ್ಷ್‌ ಎರಡನೇ ವಿಕೆಟ್‌ಗೆ 68 ರನ್‌ ಸೇರಿಸಿ ಭರವಸೆ ಮೂಡಿಸಿದರು. ಆದರೆ ಐದು ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದ್ದರಿಂದ ತಂಡದ ಮೇಲಿನ ಒತ್ತಡ ಹೆಚ್ಚಾಯಿತು. ಮಾರ್ಕಸ್ ಸ್ಟೊಯಿನಿಸ್‌ ಮತ್ತು ಆ್ಯರನ್ ಫಿಂಚ್‌ ನಾಲ್ಕನೇ ವಿಕೆಟ್‌ಗೆ 52 ರನ್‌ ಸೇರಿಸಿದರು. ನಂತರ ಯಾವ ಹಂತದಲ್ಲೂ ಉತ್ತಮ ಜೊತೆಯಾಟ ಕಂಡುಬರಲಿಲ್ಲ.

ಸಂಕ್ಷಿ‍ಪ್ತ ಸ್ಕೋರು: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 481; ಆಸ್ಟ್ರೇಲಿಯಾ: 37 ಓವರ್‌ಗಳಲ್ಲಿ 239ಕ್ಕೆ ಆಲೌಟ್‌ (ಟ್ರಾವಿಸ್ ಹೆಡ್‌ 51, ಮಾರ್ಕಸ್ ಸ್ಟೊಯಿನಿಸ್‌ 44, ಆ್ಯಷ್ಟನ್ ಅಗರ್‌ 25; ಡೇವಿಡ್ ವಿಲ್ಲಿ 56ಕ್ಕೆ2, ಮೊಯಿನ್‌ ಅಲಿ 28ಕ್ಕೆ3, ಆದಿಲ್ ರಶೀದ್‌ 47ಕ್ಕೆ4). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 242 ರನ್‌ಗಳ ಜಯ; ಐದು ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ. ಪಂದ್ಯಶ್ರೇಷ್ಠ: ಅಲೆಕ್ಸ್ ಹೇಲ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT