ಅಮ್ಮನಿಗೆ ಶತಕದ ಕಾಣಿಕೆ ಕೊಟ್ಟ ರಿಷಭ್

7
ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್: ಅರ್ಧಶತಕ ಬಾರಿಸಿದ ರವೀಂದ್ರ ಜಡೇಜ; ಬೃಹತ್ ಮೊತ್ತ ಗಳಿಸಿದ ಭಾರತ

ಅಮ್ಮನಿಗೆ ಶತಕದ ಕಾಣಿಕೆ ಕೊಟ್ಟ ರಿಷಭ್

Published:
Updated:

ಸಿಡ್ನಿ: ‘ಹ್ಯಾಪಿ ಬರ್ತಡೇ ಮಾಮ್. ಸದಾ ನನ್ನ ಬೆಂಬಲಕ್ಕೆ ನೀನು ಇರುವೆ. ನನ್ನೇಲ್ಲ ಒತ್ತಡ, ಕಷ್ಟ, ನಿರಾಸೆಗಳನ್ನೆಲ್ಲ ನೀನು ತೆಗೆದುಕೊಂಡೆ. ನನಗೆ ಸಂತಸವನ್ನೇ ನೀಡಿದೆ. ನಿನ್ನ ಕುರಿತು ಹೇಳಲು ನನಗೆ ಪದಗಳೇ ಸಿಗುತ್ತಿಲ್ಲ. ಲವ್‌ ಯೂ. ಮತ್ತೊಮ್ಮೆ ನಿನಗೆ ಜನ್ಮದಿನದ ಶುಭಾಷಯಗಳು’–

ಭಾರತದ ರಿಷಭ್ ಪಂತ್ ಅವರು ಶುಕ್ರವಾರ ಆಸ್ಟ್ರೇಲಿಯಾದ ಎದುರು ಗಳಿಸಿದ ಶತಕವನ್ನು ತಮ್ಮ ತಾಯಿ ಸರೋಜ ಪಂತ್ ಅವರಿಗೆ ಜನ್ಮದಿನದ ಕಾಣಿಕೆಯಾಗಿ ನೀಡಿದ್ದಾರೆ. ಅದಕ್ಕಾಗಿ ರಿಷಭ್ ಅವರು  ಟ್ವಿಟರ್‌ನಲ್ಲಿ ಹಾಕಿರುವ ಸಂದೇಶ  ಇದು.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಎದೆಯತ್ತರಕ್ಕೆ ಎಗರಿ ಬರುತ್ತಿದ್ದ ಎಸೆತಗಳನ್ನು ಲೀಲಾಜಾಲವಾಗಿ ಆಡಿದ ದೆಹಲಿಯ ರಿಷಭ್ ಅಜೇಯ ಶತಕ (ಔಟಾಗದೆ 159; 189ಎಸೆತ; 15ಬೌಂಡರಿ, 1ಸಿಕ್ಸರ್) ದಾಖಲಿಸಿದರು. ರವೀಂದ್ರ ಜಡೇಜ (81; 114ಎಸೆತ, 7ಬೌಂಡರಿ, 1ಸಿಕ್ಸರ್) ಅವರೊಂದಿಗೆ ಏಳನೇ ವಿಕೆಟ್ ಜೊತೆಯಾಟದಲ್ಲಿ 204 ರನ್‌ ಸೇರಿಸಿದರು. ಇದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಭಾರತವು 167.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 622 ರನ್‌ ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿತು.

ಆಸ್ಟ್ರೇಲಿಯಾ ತಂಡವು ದಿನದಾಟದ ಅಂತ್ಯಕ್ಕೆ 10 ಓವರ್‌ಗಳಲ್ಲಿ  ವಿಕೆಟ್ ನಷ್ಟವಿಲ್ಲದೇ 24 ರನ್‌ ಗಳಿಸಿದೆ.

21 ವರ್ಷದ ರಿಷಭ್‌ಗೆ ಇದು ಒಂಬತ್ತನೇ ಟೆಸ್ಟ್ ಪಂದ್ಯ ಮತ್ತು ಎರಡನೇ ಶತಕ. ಹೋದ ಆಗಸ್ಟ್‌ನಲ್ಲಿ  ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಿಷಭ್ ತಮ್ಮ ಮೂರನೇ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಹೋದ ವಾರ ಮೆಲ್ಬರ್ನ್‌ನಲ್ಲಿ ನಡೆದಿದ್ದ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಮತ್ತು ರಿಷಭ್ ನಡುವಣ ‘ಬೇಬಿಸಿಟ್ಟರ್’ ಸ್ವಾರಸ್ಯವು ಸಖತ್ ಸುದ್ದಿ ಮಾಡಿತ್ತು.

ಇದೀಗ ತಮ್ಮ ಆಕರ್ಷಕ ಶತಕದಿಂದ ಸುದ್ದಿಯಾಗಿದ್ದಾರೆ. ಈ ಹಾದಿಯಲ್ಲಿ ದೆಹಲಿಯ ಎಡಗೈ ಬ್ಯಾಟ್ಸ್‌ಮನ್‌ ರಿಷಭ್ ಅವರು ಫರೂಕ್ ಎಂಜಿನಿಯರ್ ಅವರ ಹಳೆಯ ದಾಖಲೆಯನ್ನು ಮೀರಿ ನಿಂತಿದ್ದಾರೆ. 1967ರಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಫರೂಕ್ 89 ರನ್‌ ಹೊಡೆದಿದ್ದರು. ಇಲ್ಲಿಯವರಿಗೆ ಇದು ಕಾಂಗರೂ ನೆಲದಲ್ಲಿ ಭಾರತದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್‌ ಮಾಡಿದ್ದ ಶ್ರೇಷ್ಠ ಸಾಧನೆಯಾಗಿತ್ತು.

ಪೂಜಾರ–ರಿಷಭ್ ಜೊತೆಯಾಟ: ಪಂದ್ಯದ ಮೊದಲ ದಿನವಾದ ಗುರುವಾರ ಭಾರತವು 3 ವಿಕೆಟ್‌ಗಳಿಗೆ 303 ರನ್‌ ಗಳಿಸಿತ್ತು. 130 ರನ್‌ ಗಳಿಸಿದ್ದ ಪೂಜಾರ ಮತ್ತು 39 ರನ್‌ ಗಳಿಸಿದ್ದ ಹನುಮವಿಹಾರಿ ಕ್ರೀಸ್‌ನಲ್ಲಿದ್ದರು. ಶುಕ್ರವಾರ ದಿನದಾಟದ 12ನೇ ಓವರ್‌ನಲ್ಲಿ ಸ್ಪಿನ್ನರ್ ನೇಥನ್ ಲಯನ್ ಎಸೆತದಲ್ಲಿ ತಪ್ಪು ಹೊಡೆತ ಪ್ರಯೋಗಿಸಿದ ಹನುಮವಿಹಾರಿ ಔಟಾದರು. ಆಗ ಪೂಜಾರ ಜೊತೆಗೂಡಿದ ರಿಷಭ್ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಇಬ್ಬರ ಹೊಂದಾಣಿಕೆಯೂ ಉತ್ತಮವಾಗಿತ್ತು. ಒಂದು, ಎರಡು ರನ್‌ಗಳನ್ನು ಹೆಕ್ಕುತ್ತ, ಅವಕಾಶ ಸಿಕ್ಕಾಗ ಬೌಂಡರಿ ಚಚ್ಚುತ್ತಿದ್ದ ಅವರ ಆಟಕ್ಕೆ ಬೌಲರ್‌ಗಳು ಸುಸ್ತಾದರು. ಪೂಜಾರ ದ್ವಿಶತಕದತ್ತ ಮುಖ ಮಾಡಿದ್ದರು. ಆದರೆ 191 ರನ್ ಗಳಿಸಿದ್ದ ಅವರು ಬೌಲರ್‌ ನೇಥನ್ ಲಯನ್‌ಗೆ ಸುಲಭ ಕ್ಯಾಚಿತ್ತರು. ಅವರು ಮತ್ತು ರಿಷಭ್ ಆರನೇ ವಿಕೆಟ್‌ ಜೊತೆಯಾಟದಲ್ಲಿ 89 ರನ್‌ ಸೇರಿಸಿದರು.

ಕ್ರೀಸ್‌ ಗೆ ಜಡೇಜ ಬಂದ ಮೇಲೆ ಪಟಾಕಿ ಸಿಡಿಯಲಾರಂಭಿಸಿದವು. ಪ್ರೇಕ್ಷಕರ ಗ್ಯಾಲರಿಯಲ್ಲಿ ಭಾರತದ ಅಭಿಮಾನಿಗಳ ದಂಡಿಗೆ ಸಖತ್ ಮನರಂಜನೆ ಸಿಕ್ಕಿತು. 150ನೇ ಓವರ್‌ನಲ್ಲಿ ಶತಕ ಪೂರೈಸಿದ ಪಂತ್ ತಮ್ಮ ಹೆಲ್ಮೆಟ್‌ಗೆ ಮುತ್ತಿಟ್ಟು ಸಂಭ್ರಮಿಸಿದರು. 160ನೇ ಓವರ್‌ನಲ್ಲಿ ಜಡೇಜ ಅರ್ಧಶತಕದ ಗಡಿ ತಲುಪಿ, ತಮ್ಮ ಬ್ಯಾಟ್‌ ಅನ್ನು ಖಡ್ಗದಂತೆ ತಿರುಗಿಸಿ ಸಂಭ್ರಮಿಸಿದರು. ಅವರು ಕೂಡ ಶತಕ ಹೊಡೆಯುವ ನಿರೀಕ್ಷೆ ಮೂಡಿತ್ತು. ಆದರೆ, 81 ರನ್‌ ಗಳಿಸಿ ಔಟಾದರು. ವಿರಾಟ್ ಇನಿಂಗ್ಸ್‌ ಡಿಕ್ಲೆರ್ ಮಾಡಿಕೊಂಡರು.

ಆಸ್ಟ್ರೇಲಿಯಾದ ಇನಿಂಗ್ಸ್‌ ಆರಂಭದಲ್ಲಿಯೇ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಉಸ್ಮಾನ್ ಖ್ವಾಜಾ ಅವರ ಕ್ಯಾಚ್‌ ಅನ್ನು ಪಂತ್ ನೆಲಕ್ಕೆ ಚೆಲ್ಲಿದರು.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !