ರಾಬಿನ್ ಮೇನಿಯಾ; ಬ್ಲಾಸ್ಟರ್ಸ್‌ಗೆ ಜಯ

7
ಕರ್ನಾಟಕ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿ: ವಿಶ್ವನಾಥ್, ಪವನ್ ಮಿಂಚು

ರಾಬಿನ್ ಮೇನಿಯಾ; ಬ್ಲಾಸ್ಟರ್ಸ್‌ಗೆ ಜಯ

Published:
Updated:

ಬೆಂಗಳೂರು: ಬುಧವಾರ ಸಂಜೆ ‘ಕೊಡಗಿನ ಹುಡುಗ’ ರಾಬಿನ್ ಉತ್ತಪ್ಪ ಅವರ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಧಾವಿಸಿದ್ದ ಅಭಿಮಾನಿಗಳಿಗೆ ನಿರಾಶೆಯಾಗ ಲಿಲ್ಲ. ಮಳೆ ನೀರು ಬಸಿದು ಹೋದ ಅಂಗಳದಲ್ಲಿ  ರಾಬಿನ್ ರನ್‌ಗಳ ಹೊಳೆ ಹರಿಸಿದರು. 

ರಾಬಿನ್ (81; 38ಎಸೆತ, 8 ಬೌಂಡರಿ, 6 ಸಿಕ್ಸರ್) ಅರ್ಧಶತಕದ ಬಲದಿಂದ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟೂರ್ನಿಯ ಏಳನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವು 67 ರನ್‌ಗಳಿಂದ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ವಿರುದ್ಧ  ಜಯಿಸಿತು.

ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅದಕ್ಕೆ ತಕ್ಕಂತೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಲಿಲ್ಲ. ತಂಡದ ಅನುಭವಿ ಬೌಲರ್‌ಗಳು ದುಬಾರಿ ಯಾದರು. ಅದರಿಂದಾಗಿ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ಗಳಿಗೆ 228 ರನ್‌ ಗಳಿಸಿತು. ಅದಕ್ಕುತ್ತರವಾಗಿ ಸ್ಟುವರ್ಟ್‌ ಬಿನ್ನಿ ನಾಯಕತ್ವದ ಪ್ಯಾಂಥರ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 161 ರನ್‌ಗಳನ್ನು ಗಳಿಸಿತು.

ರಾಬಿನ್– ವಿಶ್ವನಾಥ್ ಜೊತೆಯಾಟ: ರಾಬಿನ್ ಅವರು ಹೋದ ವರ್ಷದ ಕೆಪಿಎಲ್ ಟೂರ್ನಿಯಲ್ಲಿ ಆಡಿರಲಿಲ್ಲ. ಈ ಬಾರಿ ಅವರು ಬೆಂಗಳೂರು ತಂಡದ ನಾಯಕತ್ವ ವಹಿಸಿದ್ದಾರೆ. ಪಂದ್ಯ ಮೂರನೇ ಓವರ್‌ನಲ್ಲಿ ಆರಂಭಿಕ ಆಟಗಾರ ಕೆ.ಬಿ. ಪವನ್ (7ರನ್) ಔಟಾದ ನಂತರ ರಾಬಿನ್ ಕ್ರೀಸ್‌ಗೆ ಬಂದರು.  ಇನ್ನೊಂದು ಬದಿಯಲ್ಲಿದ್ದ ಎಂ. ವಿಶ್ವನಾಥ್ (46; 26 ಎಸೆತ; 6ಬೌಂಡರಿ, 2ಸಿಕ್ಸರ್) ಅವರೊಂದಿಗೆ ಸೇರಿಕೊಂಡರು. ಇಬ್ಬರು ಎರಡನೇ ವಿಕೆಟ್‌ಗೆ 75 ರನ್‌ಗಳನ್ನುಸೇರಿಸಿದರು.   

ರಾಬಿನ್ ಕೇವಲ 26  ಓವರ್‌ಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಅದರಲ್ಲಿ ಮೂರು ಸಿಕ್ಸರ್‌ಗಳು ಇದ್ದವು. ಇದರಿಂದಾಗಿ ರನ್‌ಗಳು ವೇಗವಾಗಿ ತಂಡದ ಖಾತೆ ಸೇರಿದವು. 10ನೇ ಓವರ್‌ನಲ್ಲಿ  ದಿಕ್ಷಾಂಕ್ಷು ಎಸೆತದಲ್ಲಿ ವಿಶ್ವನಾಥ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಇದರೊಂದಿಗೆ ಜೊತೆಯಾಟ ಮುರಿದುಬಿತ್ತು. ಈ ಹಂತದಲ್ಲಿ ಬಿನ್ನಿ ಬಳಗವು ಪಂದ್ಯದ ಮೇಲೆ ಹಿಡಿತ ಸಾಧಿಸಲಿಲ್ಲ. ರಾಬಿನ್ ಜೊತೆಗೂಡಿದ ಧಾರವಾಡದ ಹುಡುಗ ಪವನ್ ದೇಶಪಾಂಡೆ ಮಿಂಚಿದರು. ಇಬ್ಬರೂ ಸೇರಿ ಮೂರನೇ ವಿಕೆಟ್‌ಗೆ 65 ರನ್‌ ಪೇರಿಸಿದರು.  15ನೇ ಓವರ್ ಬೌಲಿಂಗ್ ಮಾಡಿದ ಸ್ಟುವರ್ಟ್‌ ಎಸೆತದಲ್ಲಿ ರಾಬಿನ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಸ್ಟಾಲಿನ್ ಹೂವರ್‌ಗೆ ಕ್ಯಾಚಿತ್ತರು. 19ನೇ ಓವರ್‌ನಲ್ಲಿ ಪವನ್ ವಿಕೆ ಟ್‌ ಅನ್ನೂ ಬಿನ್ನಿ ಕಬಳಿಸಿದರು.

ಕಠಿಣ ಗುರಿ ಬೆನ್ನತ್ತಿದ ಬೆಳಗಾವಿ ತಂಡದ ಎಚ್‌.ಎಸ್. ಶರತ್ (49; 25ಎ, 2ಬೌಂ, 5ಸಿ) ಅವರು ದಿಟ್ಟ ಹೋರಾಟ ಮಾಡಿದರು. ಆದರೆ ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ವಿಫಲವಾಯಿತು.

ಬೆಂಗಳೂರು ತಂಡದ ಮನೋಜ್ ಭಾಂಡಗೆ ಮತ್ತು ಆನಂದ್ ದೊಡ್ಡಮನಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳಿಸಿದರು.

ಸಬ್‌ ಏರ್ ಶಕ್ತಿ

ಬುಧವಾರ ಸಂಜೆ  ಜೋರಾಗಿ ಮಳೆ ಸುರಿದರೂ ಕೆಪಿಎಲ್ ಟೂರ್ನಿಯ ಪಂದ್ಯದಲ್ಲಿ ಒಂದು ಓವರ್‌ ಆಟಕ್ಕೂ ವ್ಯತ್ಯಯವಾಗಲಿಲ್ಲ. ಸಬ್‌ ಏರ್ ಸಿಸ್ಟಮ್‌ ಬಳಕೆಯಿಂದಾಗಿ ಕೇವಲ 15 ನಿಮಿಷಗಳಲ್ಲಿ ಮೈದಾನವು ಒಣಗಿತು. ಇದರಿಂದಾಗಿ ಆಟ ಆರಂಭವಾಯಿತು. 6.45ಕ್ಕೆ ಶುರುವಾಗಬೇಕಾಗಿದ್ದ ಪಂದ್ಯವನ್ನು 7ಕ್ಕೆ ಆರಂಭಿಸಲಾಯಿತು.

‘ಸಬ್‌ ಏರ್ ವ್ಯವಸ್ಥೆಯಿಂದಾಗಿ ಮೈದಾನವು ಶೀಘ್ರವಾಗಿ ಒಣಗಿತು. ಇದರಿಂದಾಗಿ ಪಂದ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಪ್ರೇಕ್ಷಕರಿಗೂ ಮನರಂಜನೆಯ ಕೊರತೆಯಾಗಲಿಲ್ಲ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದರು.

**


ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮ ನೀಡಿದರು (ಎಡ) ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರಗಳು/ಸತೀಶ್ ಬಡಿಗೇರ್

**ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡದ ನಡುವಿನ ಪಂದ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾವಿದರು ನೃತ್ಯ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

 

 

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !