ಮಂಗಳವಾರ, ಅಕ್ಟೋಬರ್ 20, 2020
23 °C

‘ಚಾಲೊಕೇಟ್’‌ ಎಂದು ಬರೆದು ಇನ್ನೊಮ್ಮೆ ಓದಿ ಎಂದ ರೋಹನ್ ಗಾವಸ್ಕರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ವಿರುದ್ಧದ ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದ ವಿರಾಟ್‌ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅವರು ಟೀಕೆ ಮಾಡಿದ್ದರು. ಟೀಕಿಸುವ ಭರದಲ್ಲಿ ವಿರಾಟ್‌ ಪತ್ನಿ ಅನುಶ್ಕಾ ಶರ್ಮಾ ಅವರ ಹೆಸರನ್ನೂ ಎಳೆದು ತಂದಿದ್ದರಿಂದ ಗಾವಸ್ಕರ್ ವಿವಾದ ಸೃಷ್ಟಿಸಿದ್ದರು. ಹೀಗಾಗಿ ಗರಂ ಆಗಿರುವ ಕೊಹ್ಲಿ ಮತ್ತು ಅನುಷ್ಕಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಾವಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸುನೀಲ್‌ ಗಾವಸ್ಕರ್ ಅವರ ಪುತ್ರ ರೋಹನ್‌ ಗಾವಸ್ಕರ್ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ರೋಹನ್‌ ತಮ್ಮ ಟ್ವೀಟ್‌ನಲ್ಲಿ, ‘ಐ ಲವ್‌ ಚಾಲೊಕೇಟ್‌. ಇದನ್ನು ಮತ್ತೊಮ್ಮೆ ಓದಿ. ನೀವು ಪರೀಕ್ಷೆಯಲ್ಲಿ ಫೇಲ್‌ ಆಗುವುದೂ ಹೀಗೆಯೇ’ ಎಂದು ತಿಳಿಸಿದ್ದಾರೆ. ಈ ಟ್ವೀಟ್‌ ಮೂಲಕ ಅವರು ತಮ್ಮ ತಂದೆಯ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ರೋಹನ್‌ ಟ್ವೀಟ್‌ ನೋಡಿದರೆ ಅವರು ‘ಚಾಕೊಲೇಟ್’ ಎಂದು ಬರೆದಿದ್ದಾರೆ ಎನಿಸುತ್ತದೆ. ಆದರೆ ಅವರು ಬರೆದಿರುವುದು ‘ಚಾಲೊಕೇಟ್’ ಎಂದು.

ಪಂಜಾಬ್‌ ಹಾಗೂ ಬೆಂಗಳೂರು ತಂಡಗಳು ಗುರುವಾರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್ 90 ರನ್‌ ಆಸುಪಾಸಿನಲ್ಲಿದ್ದಾಗ ನೀಡಿದ ಎರಡು ಕ್ಯಾಚ್‌ಗಳನ್ನು ವಿರಾಟ್‌ ನೆಲಕ್ಕೆ ಹಾಕಿದ್ದರು. ಬಳಿಕ ಅವರು ಅಜೇಯ 132ರನ್‌ ಸಿಡಿಸಿದ್ದರು. ಇದರ ಪರಿಣಾಮವಾಗಿ ಪಂಜಾಬ್‌ ತಂಡ 206 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 107 ರನ್‌ಗಳ ಸೋಲು ಒಪ್ಪಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್‌ನಲ್ಲಿಯೂ ವಿಫಲರಾಗಿದ್ದರು.

ಪಂದ್ಯದ ವೀಕ್ಷಕ ವಿವರಣೆ ನೀಡುವ ವೇಳೆ ಸುನೀಲ್‌ ಗಾವಸ್ಕರ್ ಅವರು‌, ‘ಲಾಕ್‌ಡೌನ್‌ ವೇಳೆ ಕೊಹ್ಲಿ ಕೇವಲ ಅನುಷ್ಕಾ ಅವರ ಬೌಲಿಂಗ್‌ನಲ್ಲಿ ಅಭ್ಯಾಸ ಮಾಡಿದ್ದಾರೆ’ ಎಂದಿದ್ದರು. ವಿವಾದ ಸೃಷ್ಟಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಅವರು ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು